ಕನ್ನಡದ ದೇಸಿ ಪ್ರತಿಭೆ ‘ಪುಷ್ಪಾ’ ಜೊತೆ ಜೊತೆಯಲಿ!

ಅಪೂರ್ವ ಶ್ರೀ ಅವರು ಕನ್ನಡದ ಅಪರೂಪದ ಪ್ರತಿಭೆ. ಅಪೂರ್ವ ಅವರಿಗೆ ಪ್ರಸ್ತುತ ಹೆಚ್ಚಿನ ಜನಪ್ರಿಯತೆ ಮತ್ತು ಅಭಿಮಾನಿ ಬಳಗವನ್ನು ಗಳಿಸಿಕೊಟ್ಟಿರುವುದು ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿಯ ‘ಪುಷ್ಪ’ ಪಾತ್ರ. ಜಾಕಿ, ಅಣ್ಣಾಬಾಂಡ್, ಕಾಶಿ ಫ್ರಮ್ ವಿಲೇಜ್, ಸುಂಟರಗಾಳಿ, ಸುಂದರಿ ಗಂಡ ಸದಾನಂದ, ವಿಕ್ಟರಿ, ದಾಸ, ಏಕದಂತ ಹಾಗೂ ಇತ್ತೀಚಿನ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರವೂ ಸೇರಿದಂತೆ ಸುಮಾರು ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಡಾ. ರಾಜಕುಮಾರ್ ಹೊರತುಪಡಿಸಿ ಬಹುತೇಕ ಎಲ್ಲ ಪ್ರಮುಖ ನಟರೊಡನೆ ನಟಿಸಿದ ಹೆಗ್ಗಳಿಕೆ ಕೂಡ ಇವರಿಗಿದೆ. ಕೊರೊನ ಭಯದ ನಡುವೆಯೂ ಜರುಗುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿಯ ಬಿಡುವಿಲ್ಲದ ಚಿತ್ರೀಕರಣದ ಸಮಯದಲ್ಲಿ ಅವರು ಸಿನಿಕನ್ನಡ.ಕಾಮ್ ಗೆ ವಿಶೇಷ ಸಂದರ್ಶನ ನೀಡಿದ್ದಾರೆ.

ನಿಮ್ಮ ಚಿತ್ರಜೀವನದ ಆರಂಭದ ದಿನಗಳ ಬಗ್ಗೆ ಹೇಳುವುದಾದರೆ?

ನನ್ನ ಹುಟ್ಟೂರು ಮೈಸೂರು, ತಂದೆ ಊರು ಮಂಡ್ಯ, ಚಿಕ್ಕ ವಯಸ್ಸಲ್ಲಿ ದೂರದರ್ಶನದಲ್ಲಿ ಬರುತ್ತಿದ್ದ ಚಿತ್ರಗೀತೆಗಳನ್ನು ಕೇಳುತ್ತಾ ಟಿವಿ ಮುಂದೆ ಕುಣಿಯುವುದು ನನಗೆ ಬಹಳ ಖುಷಿ ಕೊಡುವ ವಿಷಯವಾಗಿತ್ತು. ಅಪ್ಪ, ಅಮ್ಮ, ಅಕ್ಕ, ಅಣ್ಣ ಮತ್ತು ನಾನು ಇದ್ದ ಒಂದು ಮಧ್ಯಮ ವರ್ಗದ ಕುಟುಂಬ ನಮ್ಮದು. ನಮ್ಮ ಇಡೀ ಕುಟುಂಬಕ್ಕೇ ಚಿತ್ರರಂಗದ ಮತ್ತು ನಟನೆಯ ಯಾವುದೇ ನಂಟಿಲ್ಲ. ಅದು ಯಾವ ಮಾಯೆಯೋ ಏನೋ ಚಿತ್ರರಂಗ ನನ್ನನ್ನು ಎಲ್ಲಿಲ್ಲದಂತೆ ಸೆಳೆಯಿತು. ಅಮ್ಮ ಹಾಗೂ ಅಕ್ಕನ ಸಹಕಾರ ಇತ್ತಾದರೂ ಅಣ್ಣ ಹಾಗೂ ಸಂಬಂಧಿಕರು ವಿರೋಧಿಸಿದರು. ನಾನು ರಚ್ಚೆ ಹಿಡಿದಿದ್ದಕ್ಕೋ ಏನೋ ಬೇರೆ ವಿಧಿ ಇಲ್ಲದೇ ಒಪ್ಪಿದರು. ಮುಂದೆ ಪರಿಚಯದವರೊಬ್ಬರ ಮೂಲಕ 1992 ರಲ್ಲಿ ಬಿಡುಗಡೆಯಾದ ಅಂಬರೀಷ್ ಅಭಿನಯದ ಮಲ್ಲಿಗೆ ಹೂವೆ ಎಂಬ ಚಿತ್ರದಲ್ಲಿ ಒಂದು ಸಣ್ಣ ಪಾತ್ರದ ಮೂಲಕ ಬಣ್ಣ ಹಚ್ಚಿದೆ.

ನಿಮ್ಮ ಇಲ್ಲಿಯವರೆಗಿನ ವೃತ್ತಿಜೀವನವನ್ನು ಯಾವ ರೀತಿ ವಿಶ್ಲೇಷಿಸುತ್ತೀರಿ!?

ನಾನು ಯಾವುದೇ ನಾಟಕ ತಂಡ ಅಥವಾ ನಟನಾ ಶಾಲೆಯಲ್ಲಿ ನಟನೆಯ ತರಬೇತಿ ಪಡೆದುಕೊಂಡವಳಲ್ಲ. ದೇವರ ಆಶೀರ್ವಾದವೋ ಏನೋ ನಟನೆ ನನಗೆ ತಾನಾಗೇ ಒಲಿದು ಬಂದಿದೆ. ನನ್ನ ಈವರೆಗಿನ ವೃತ್ತಿಜೀವನ ಹಣ್ಣೂ ಅಲ್ಲ, ಕಾಯೂ ಅಲ್ಲ, ಎರಡರ ಮಿಶ್ರಣ ಎನ್ನಬಹುದು. ಕಳೆದುಕೊಂಡ ವಿಷಯಗಳು ತುಂಬಾ ಇವೆಯಾದರೂ ಜನರ ಪ್ರೀತಿ, ವಿಶ್ವಾಸ, ಅಂದುಕೊಂಡ ಜೀವನಶೈಲಿ ನನಗೆ ಸಿಕ್ಕಿದೆ ಎಂಬುದು ಖುಷಿಯ ವಿಚಾರ. ಬೆಳ್ಳಿತೆರೆಯಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ಪೋಷಕ ಪಾತ್ರಗಳು ಹುಡುಕಿ ಬಂದವಾದರೂ ನನಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟದ್ದು ಮಿಲನ ಚಿತ್ರ. ರಂಗಾಯಣ ರಘು ಅವರ ಪತ್ನಿಯಾಗಿ ನಿರ್ವಹಿಸಿದ ಭಿಕ್ಷುಕಿ ಪಾತ್ರವನ್ನು ಜನ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಅದು ಬಿಟ್ಟರೆ ಶರಣ್ ಅವರು ನಾಯಕನಾಗಿ ಅಭಿನಯಿಸಿದ ಮೊದಲ ಚಿತ್ರ ಸುಂದರಿ ಗಂಡ ಸದಾನಂದ ಚಿತ್ರದಲ್ಲಿ ನಾಯಕಿ ಪಾತ್ರ ಮಾಡಿದ್ದೆ. ಅದಲ್ಲದೇ ಕಳೆದ ವರ್ಷ ಬಿಡುಗಡೆಯಾದ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದಲ್ಲೂ ನನಗೆ ಒಳ್ಳೆ ಪಾತ್ರ ಸಿಕ್ಕಿತ್ತು, ಹಾಗೆ ನಾನು ಬಹಳ ಇಷ್ಟ ಪಟ್ಟ ಪಾತ್ರ ಅದು ಎಂಬುದು ಹೌದು. ಹಾಗೆ ಹಿರಿಯ ನಟರಾದ ವಿಷ್ಣುವರ್ಧನ್, ಅಂಬರೀಷ್ ಜೊತೆಗೆ ಇಂದಿನ ಸ್ಟಾರ್ ಗಳಾದ ಅಪ್ಪು, ಸುದೀಪ್, ದರ್ಶನ್, ಉಪೇಂದ್ರ, ಶರಣ್ ಅವರೊಂದಿಗೆ ತೆರೆ ಹಂಚಿಕೊಂಡ ಹೆಮ್ಮೆ ನನಗಿದೆ. ಆದರೆ ಅಣ್ಣಾವ್ರ ಜೊತೆ ನಟಿಸಲಿಲ್ಲವಲ್ಲ ಎಂಬ ಕೊರಗು ಈಗಲೂ ಇದೆ.

ಸಿನಿಮಾದಿಂದ ಧಾರಾವಾಹಿಗೆ ಹೇಗೆ ಬಂದಿರಿ?

ಸಿನಿಮಾಗಳಲ್ಲಿ ಪೋಷಕ ಪಾತ್ರ ಮಾಡುತ್ತಿದ್ದ ನನಗೆ ಒಂದು ಸಂದರ್ಭದಲ್ಲಿ ಕೆಲವು ವೈಯಕ್ತಿಕ ಕಾರಣಕ್ಕಾಗಿ ಒಂಬತ್ತು ವರ್ಷ ಚಿತ್ರರಂಗದಿಂದ ದೂರ ಉಳಿಯಬೇಕಾಯಿತು. ಅದಾಗಿ ಸುಮಾರು ಹದಿನೈದು ವರ್ಷದ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ ಸಮಾಗಮ ‘ ಎಂಬ ಧಾರಾವಾಹಿಯಲ್ಲಿ ಮೊದಲ ಬಾರಿ ಪಾತ್ರ ಮಾಡಿದೆ, ನಂತರ ಪಿ. ಶೇಷಾದ್ರಿ ಅವರ ನಿಕ್ಷೇಪ, ಪಾಪ ಪಾಂಡು, ಸಿಲ್ಲಿ ಲಲ್ಲಿ, ಸತ್ಯಂ ಶಿವಂ ಸುಂದರಂ ಧಾರಾವಾಹಿಗಳಲ್ಲಿ ನಟಿಸಿದೆ. ಮಿಲನ ಪ್ರಕಾಶ್ ಅವರ ಲಕುಮಿ ಧಾರಾವಾಹಿಯ ಪಾತ್ರ ನನ್ನ ಜನಪ್ರಿಯತೆ ಹೆಚ್ಚಾಗ್ಲಿಕ್ಕೆ ಪ್ರಮುಖ ಕಾರಣ. ನಂತರ ಈಗ ಸದ್ಯಕ್ಕೆ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮಾಡ್ತಾ ಇದ್ದೇನೆ.

‘ಜೊತೆ ಜೊತೆಯಲಿ’ ಧಾರಾವಾಹಿ ಹಾಗೂ ಪುಷ್ಪ ಪಾತ್ರದ ಬಗ್ಗೆ ಹೇಳಿ!

‘ಪುಷ್ಪ’ ನನ್ನ ಹೃದಯಕ್ಕೆ ಬಹಳ ಹತ್ತಿರವಾದ ಪಾತ್ರ, ಅದರಂತೆಯೇ ಪ್ರೇಕ್ಷಕರಿಗೂ ಅಷ್ಟೇ ಇಷ್ಟ ಆಗಿರುವುದು ನನ್ನ ಪುಣ್ಯ ಎಂದೇ ಹೇಳಬಹುದು. ಜೊತೆ ಜೊತೆಯಲಿ ಧಾರಾವಾಹಿ ಮಾಡುವ ಮೊದಲು ಜನ ನನ್ನ ಗುರುತಿಸುತ್ತಿದ್ದ ರೀತಿಗೂ ಈಗ ಗುರುತಿಸುವ ರೀತಿಗೂ ತುಂಬಾ ವ್ಯತ್ಯಾಸವಿದೆ. ನನ್ನ ಇಲ್ಲಿವರೆಗಿನ ವೃತ್ತಿ ಜೀವನದಲ್ಲಿ ಜನರ ಮನಸಿನಲ್ಲಿ ಇಷ್ಟರ ಮಟ್ಟಿಗೆ ಗಟ್ಟಿಯಾಗಿ ಬೇರೂರುವಂತೆ ಮಾಡಿದ ಪಾತ್ರವಿದು. ಇದರ ಸಂಪೂರ್ಣ ಶ್ರೇಯಸ್ಸು ನಿರ್ದೇಶಕರು ಹಾಗೂ ಇಡೀ ತಂಡಕ್ಕೆ ಸೇರಬೇಕು. ಝೀ ಕನ್ನಡ ವಾಹಿನಿಗೆ ನಾನು ಆಭಾರಿ. ಈ ಧಾರಾವಾಹಿಯ ಐವತ್ತನೇ ಸಂಚಿಕೆಯ ಸಂಭ್ರಮ ಆಚರಿಸಲು ಚಿತ್ರದುರ್ಗಕ್ಕೆ ಇಡೀ ತಂಡ ಹೋಗಿದ್ದೆವು, ಅಲ್ಲಿ ಜನ ನಮಗೆ ತೋರಿದ ಆದರಣೆ ಅನನ್ಯ. ಅದಲ್ಲದೇ ಆ ಪ್ರವಾಸದ ಕ್ಷಣಗಳು ನನಗೆ ನನ್ನ ಬಾಲ್ಯದ ನೆನಪು ಮಾಡಿತು. ಉಳಿದಂತೆ ಧಾರಾವಾಹಿಯ ಪ್ರಮುಖ ಕೇಂದ್ರ ಬಿಂದು ಅನಿರುದ್ಧ್ ಅವರು. ಏಕದಂತ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರೊಂದಿಗೆ ನಲವತ್ತು ದಿನಗಳ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಅವಕಾಶ ಕೂಡಿ ಬಂದಿತ್ತು. ವಿಷ್ಣು ಸರ್ ಇಲ್ಲದ ಈಗಿನ ಸಂದರ್ಭದಲ್ಲಿ ಅನಿರುದ್ಧ್ ಅವರಲ್ಲಿ ವಿಷ್ಣು ಸರ್ ಅವರನ್ನು ಕಾಣುತ್ತಿದ್ದೇನೆ ಎಂಬುದು ಅಷ್ಟೇ ಸತ್ಯ.

ನಿಮ್ಮ ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ಹೇಳಿ!

ದುನಿಯಾ ವಿಜಯ್ ಮೊದಲ ಬಾರಿ ನಿರ್ದೇಶಿಸುತ್ತಿರುವ ‘ಸಲಗ’ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದೇನೆ. ಅದು ಬಿಟ್ಟರೆ ಬೇರೆ ಕೆಲವು ಸಿನಿಮಾಗಳು ಹಾಗೂ ಧಾರಾವಾಹಿಯ ಬಗ್ಗೆ ಮಾತುಕತೆಗಳು ನಡೆಯುತ್ತಿವೆ, ಕೊರೊನ ಕಾರಣ ಕೆಲವು ನಿಂತಿವೆ.

ಸಂದರ್ಶನ – ಸುಜಯ್ ಬೆದ್ರ

Recommended For You

Leave a Reply

error: Content is protected !!
%d bloggers like this: