ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಆಸ್ಪತ್ರೆಗೆ ದಾಖಲಾದ ಮೇಲೆ ಅವರ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ಸ್ವತಃ ಅವರ ಪುತ್ರ ಚರಣ್ ಅವರು ತಮ್ಮ ತಂದೆಯದೇ ಯೂಟ್ಯೂಬ್ ವಾಹಿನಿಯ ಮೂಲಕ ತಿಳಿಸುತ್ತಿದ್ದಾರೆ. ಆದರೆ ನಿನ್ನೆ ರಾತ್ರಿಯಿಂದ ಅವರು ನೀಡದೇ ಇದ್ದಂಥ ಹೊಸ ಸಂಗತಿಯೊಂದು ಹರಡಿತ್ತು. ಅದರ ಪ್ರಕಾರ ಎಸ್ಪಿಬಿಯವರಿಗೆ ನಿನ್ನೆ ಕೋವಿಡ್ ರಿಪೋರ್ಟ್ ನೆಗೆಟಿವ್ ಬಂದಿದೆ ಎಂದು ಸುದ್ದಿಯಾಗಿತ್ತು. ಆದರೆ ತಮ್ಮ ಗಮನಕ್ಕೆ ಬಾರದೇ ಹರಡಿರುವಂಥ ಸುದ್ದಿ ಎನ್ನುವುದನ್ನು ಇಂದು ಬೆಳಿಗ್ಗೆಯೇ ಚರಣ್ ಅವರು ಸ್ಪಷ್ಟ ಪಡಿಸಿದ್ದರು. ಇದೀಗ ಇಂದು 24ರಂದು ಸೋಮವಾರ ಸಂಜೆ 8 ಗಂಟೆಯ ಸುಮಾರಿಗೆ ಚರಣ್ ಅವರು” ಇನ್ಸ್ಟಾಗ್ರಾಂ ಮೂಲಕ ನೀಡಿರುವ ಹೊಸ ಸುದ್ದಿಯ ವಿವರ ಇಲ್ಲಿದೆ.
ಇನ್ಸ್ಟಗ್ರಾಂನಲ್ಲಿನ ಚರಣ್ ಮಾತಿಗಾಗಿ ಈ ವಾಕ್ಯ ಕ್ಲಿಕ್ಕಿಸಿ
” ನನ್ನ ತಂದೆಯ ವಿಚಾರದಲ್ಲಿ ಯಾವುದೇ ಅಧಿಕೃತ ಮಾಹಿತಿಗಳು ನನಗೆ ತಿಳಿದ ಬಳಿಕವೇ ಹೊರಗೆ ಬರುತ್ತದೆ. ಕೋವಿಡ್ ನೆಗೆಟಿವ್ ಎನ್ನುವ ಸುದ್ದಿ ಹೇಗೆ ಹರಡಿತು ಗೊತ್ತಿಲ್ಲ. ನಾನು ವೈದ್ಯರೊಂದಿಗೆ ಮಾತನಾಡಿದ್ದೇನೆ. ಕೋವಿಡ್ ನೆಗೆಟಿವ್ ಅಥವಾ ಪಾಸಿಟಿವ್ ಎನ್ನುವುದು ನನ್ನ ತಂದೆಯ ಸದ್ಯದ ಪರಿಸ್ಥಿತಿಯನ್ನು ಬದಲಾಯಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಇಂದು ಸಂಜೆ ಹಾಸ್ಪಿಟಲ್ ಪ್ರೆಸ್ ರಿಲೀಸ್ ಮಾಡಿದೆ. ಅದರ ಪ್ರಕಾರ ಅವರು ಈಗಲೂ ವೆಂಟಿಲೇಟರ್ ಮತ್ತು ಎಕ್ಮೊದಲ್ಲಿಯೇ ಮುಂದುವರಿದಿದ್ದಾರೆ. ವೈದ್ಯರ ತಂಡ ಅವರನ್ನು ಗಮನಿಸುತ್ತಿದೆ.”
“ನಾನು ಕಳೆದ ಎರಡು ವಾರಗಳಿಂದ ಅವರನ್ನು ಭೇಟಿಯಾಗುತ್ತಿದ್ದೇನೆ. ಅವರ ಎಚ್ಚರದಲ್ಲಿದ್ದಾರೆ. ನನ್ನನ್ನು ನೋಡಿ ಗುರುತು ಹಿಡಿದಿದ್ದಾರೆ. ನಾನು ಅವರು ಹೇಗಿದ್ದಾರೆ ಎಂದು ವಿಚಾರಿಸುವುದರ ಜತೆಗೆ ನಿಮ್ಮೆಲ್ಲರ ಪ್ರಾರ್ಥನೆಯನ್ನು ಸಂಜ್ಞೆಯ ಮೂಲಕವೇ ಅವರಿಗೆ ತಿಳಿಸಿದ್ದೇನೆ. ಅವರು ಕೂಡ ಥಮ್ಸಪ್ ಮಾಡುವುದರ ಜತೆಗೆ ನೀನು ಹೇಗಿದ್ದೀಯ ? ಅಮ್ಮ ಹೇಗಿದ್ದಾರೆ ಎನ್ನುವುದನ್ನು ಸಂಜ್ಞೆಯಿಂದಲೇ ವಿಚಾರಿಸಿದ್ದಾರೆ. ಕೋಣೆಯೊಳಗೆ ಪ್ರಸಾರ ಮಾಡಲಾದ ಸಂಗೀತಕ್ಕೆ ಅವರು ಸಕಾರಾತ್ಮಕವಾದ ಪ್ರತಿಕ್ರಿಯೆ ನೀಡಿದ್ದಾರೆ. ಅಭಿಮಾನಿಗಳು ಕಳಿಸಿಕೊಟ್ಟಂಥ ಪ್ರಸಾದ, ದೇವರ ಚಿತ್ರಗಳನ್ನು ಅವರಿಗೆ ತೋರಿಸಲಾಗಿದೆ. ಅವರು ನನ್ನನ್ನು ನೋಡಿ ಖುಷಿ ವ್ಯಕ್ತಪಡಿಸಿದ್ದಾರೆ. ನಾನು ನಿತ್ಯವೂ ಭೇಟಿಯಾಗುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿ, ಪ್ರಾರ್ಥನೆಗೆ ಕುಟುಂಬದ ಪರವಾಗಿ ವಂದನೆಗಳು. ಎಂಜಿಎಂಹೆಲ್ತ್ ಸೆಂಟರ್ಗೂ ವಂದನೆಗಳು ಎಂದಿದ್ದಾರೆ. ವೈದ್ಯರುಗಳಾದ ಸಬಾ, ಸ್ವಾಮಿ ಕಣ್ಣನ್, ಕಿಶೋರ್, ದೀಪಾ ಸುಬ್ರಹ್ಮಣ್ಯಮ್ ಸೇರಿದಂತೆ ತಂದೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವ ಒಟ್ಟು ವೈದ್ಯಕೀಯ ತಂಡಕ್ಕೆ ಕೃತಜ್ಞನಾಗಿದ್ದೇನೆ” ಎಂದಿದ್ದಾರೆ ಎಸ್ಪಿಬಿ ಚರಣ್.