ರಘು ದೀಕ್ಷಿತ್ ಅವರಿಗೆ ಸಂಗೀತ ಲೋಕದಲ್ಲಿ ಎಷ್ಟೇ ದೊಡ್ಡ ಹೆಸರಿರಬಹುದು. ಆದರೆ ಸಿನಿಮಾ ಸಂಗೀತ ಲೋಕದಲ್ಲಿ ಒಂದು ನೆಗೆಟಿವ್ ಟಾಕ್ ಇತ್ತು. “ಅವರ ಹಾಡುಗಳೇನೋ ಹಿಟ್ ಆಗುತ್ತವೆ; ಆದರೆ ಚಿತ್ರ ಫ್ಲಾಪ್” ಅಂತ! ಇದೊಂದು ಹೇಳಿಕೆಯಲ್ಲೇ ಅವರ ತಪ್ಪೇನೂ ಇಲ್ಲ ಎನ್ನುವುದು ಅರ್ಥವಾಗುತ್ತದೆ. ಯಾಕೆಂದರೆ, ಸಂಗೀತ ನಿರ್ದೇಶಕನ ಕೆಲಸದಲ್ಲಿ ಅವರು ಗೆದ್ದಿದ್ದಾರೆ ಎಂದಮೇಲೆ ಬೇರಿನ್ನೇನು ಬೇಕು?! ಆದರೆ ಅಗತ್ಯಕ್ಕೆ, ಅನಗತ್ಯಕ್ಕೆಲ್ಲ ಸೆಂಟಿಮೆಂಟ್ಸ್ ಇಟ್ಕೊಳ್ಳುವ ಚಿತ್ರರಂಗ ಅದನ್ನು ಕೂಡ ರಘು ವೈಫಲ್ಯವೆಂದು ಬೋರ್ಡ್ ಹಾಕುವ ಸಂದರ್ಭ ಇದ್ದೇ ಇತ್ತು. ಅಂಥದೊಂದು ಸಂದರ್ಭದಿಂದ ಪಾರು ಮಾಡಿದ ಚಿತ್ರವೇ ಲವ್ ಮಾಕ್ಟೇಲ್. ಹಾಡುಗಳೂ ಹಿಟ್, ಆ ಸಿನಿಮಾ ಕೂಡ ಹಿಟ್. ಇನ್ನೇನು ಹೊಸ ದಾಖಲೆ ಶುರುವಾಯಿತು ಎನ್ನುವಷ್ಟರಲ್ಲಿ ಕೊರೊನಾದಿಂದಾಗ ಚಿತ್ರರಂಗ ಸೇರಿದಂತೆ ಎಲ್ಲವೂ ಸ್ಥಗಿತ. ಸಿನಿಮಾದಲ್ಲಿ ಮತ್ತೆ ಫೀಲ್ಡ್‌ಗಿಳಿದಿರುವ ರಘು ದೀಕ್ಷಿತ್ ತಮ್ಮ ಲಕ್ಕಿ ಚಾರ್ಮ್, ಫಾರ್ಮ್ ಹಾಗೆಯೇ ಮುಂದುವರಿಸಿದ್ದಾರೆ. ಲಾಕ್ಡೌನ್ ತುಂಬ ‘ಲವ್ ಮಾಕ್ಟೇಲ್' ನೋಡಿದವರ ಕಣ್ಣಲ್ಲಿ ರಘು ಸಂಗೀತ ಇನ್ನೂ ಹಾಗೆಯೇ ಇದೆ. '
ಲವ್ ಯೂ ಚಿನ್ನಾ..’ ಎನ್ನುವ ಅದರ ಹಾಡಿನ ಸಾಲೇ ಮತ್ತೊಂದು ಚಿತ್ರಕ್ಕೆ ಶೀರ್ಷಿಕೆಯಾಗಿದೆ. ರಘು ದೀಕ್ಷಿತ್ ಕೈಯ್ಯಲ್ಲಿಯೂ ಸಾಕಷ್ಟು ಹೊಸ ಪ್ರಾಜೆಕ್ಟ್ಸ್ ಇವೆ. ಈ ಬಗ್ಗೆ ಸಿನಿಕನ್ನಡ.ಕಾಮ್ ನಡೆಸಿರುವ ವಿಶೇಷ ಸಂದರ್ಶನ ಇದು.
‘ಲವ್ ಯೂ ಚಿನ್ನಾ..' ಬಳಿಕ '
ಮಳೆ ಮಳೆ ಮಳೆಯೇ’ ಕೂಡ ಟ್ರೆಂಡಿಂಗ್ ಆಗಿರುವ ಬಗ್ಗೆ ಏನಂತೀರಿ?
ಖಂಡಿತವಾಗಿ ಖುಷಿಯಾಗಿದೆ. ‘ಮಳೆ ಮಳೆ ಮಳೆಯೇ' ಹಾಡಿನ ಟ್ಯೂನ್ ಹುಟ್ಟಿದ ಹಿಂದೆ ಒಂದು ಕತೆ ಇದೆ. ಅದು '
ನಿನ್ನ ಸನಿಹಕೆ’ ಚಿತ್ರಕ್ಕಾಗಿ ಹುಟ್ಟಿದ ಟ್ಯೂನಲ್ಲ.!
ಸುಮಾರು ಐದು ವರ್ಷದ ಹಿಂದೆ ಇದೇ ನಾಯಕ, ನಿರ್ದೇಶಕ ಸೂರಜ್ ಗೌಡ ಅವರದೇ ಬೇರೊಂದು ಸಿನಿಮಾಕ್ಕಾಗಿ ಈ ಟ್ಯೂನ್ ಮಾಡಿದ್ದೆ. ಕಾರಣಾಂತರಗಳಿಂದ ಆ ಸಿನಿಮಾ ಸೆಟ್ಟೇರಲಿಲ್ಲ. ಆ ಸಮಯದಲ್ಲಿ ಟ್ಯೂನ್ ಕೇಳಿದ್ದ ಸೂರಜ್ ಅವರಿಗೆ ತುಂಬಾ ಹಿಡಿಸಿತ್ತಂತೆ. ಈಗ ಅವರೇ ನಿರ್ದೇಶನ ಕೈಗೆತ್ತಿಕೊಂಡಿದ್ದರಿಂದಲೋ ಏನೋ ನೀವೇ ಸಂಗೀತ ಮಾಡಿಕೊಡಬೇಕೆಂದು ನನ್ನಲ್ಲಿ ಕೇಳಿದರು. ಮಾತ್ರವಲ್ಲ, ಭೇಟಿಯಾದ ತಕ್ಷಣ ಕೇಳಿದ ಮೊದಲ ಪ್ರಶ್ನೆಯೇ “ಆ ಟ್ಯೂನ್ ನಿಮ್ಮಲ್ಲೇ ಉಳಿದಿದೆ ತಾನೇ?” ಎಂಬುದಾಗಿತ್ತು! ನಾನು ಹೌದು ಎಂದೆ. ಅಂದಹಾಗೆ ಈ ಹಾಡು ಚಿತ್ರದ ಪ್ರಮುಖ ಘಟ್ಟದಲ್ಲಿ ಅಂದರೆ ಪ್ರೀ ಕ್ಲೈಮ್ಯಾಕ್ಸ್ ನಲ್ಲಿ ಬರುತ್ತದೆ, ನೀವು ಸೂಕ್ಷ್ಮವಾಗಿ ಗಮನಿಸಿದರೆ ಹಾಡಿನ ಮೊದಲ ಭಾಗದಲ್ಲಿ ಒಂದು ಉತ್ಸಾಹದ ಎಳೆ ಇದ್ದರೆ, ಎರಡನೇ ಭಾಗದಲ್ಲಿ ಅದಕ್ಕೆ ವ್ಯತಿರಿಕ್ತವಾದಂತಹ ನಿರುತ್ಸಾಹದ ಛಾಯೆ ಇದೆ. ಕಥೆಗೆ ಅನುಗುಣವಾಗಿ ವಾಸುಕಿ ವೈಭವ್ ಅವರು ಬಹಳ ಜಾಣ್ಮೆಯಿಂದ ಸಾಹಿತ್ಯ ಬರೆದಿದ್ದಾರೆ. ನಾನೇ ಹಾಡಿದ್ದೇನೆ. ನಿರ್ದೇಶಕರ ಪರಿಕಲ್ಪನೆಯೂ ಹೊಸದಾಗಿರುವುದರಿಂದ ಎಲ್ಲವೂ ಮಿಳಿತವಾಗಿ ಒಂದು ಸುಂದರ ಗೀತೆಯಾಗಿ ಹೊರಬಂದಿದೆ. ಜನ ಇಷ್ಟ ಪಡುತ್ತಿದ್ದಾರೆ. ಖುಷಿ ಇದೆ.
`’ನಿನ್ನ ಸನಿಹಕೆ’ ಚಿತ್ರದ ಒಟ್ಟು ಹಾಡುಗಳ ಬಗ್ಗೆ ಹೇಳಿ
ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿವೆ. ಒಬ್ಬ ಸಂಗೀತ ನಿರ್ದೇಶಕನಿಗೆ ಚಿತ್ರದ ಕಥೆ ಮತ್ತು ಒಟ್ಟು ವಿಷಯ ಹಾಡುಗಳ ಸಂಯೋಜನೆಗೆ ಮುಖ್ಯ ಬಂಡವಾಳ ಎಂದೇ ಹೇಳಬಹುದು. ಹಾಗೆ ಈ ಚಿತ್ರದಲ್ಲಿ ಸಹ ಒಂದು ಗಟ್ಟಿ ಕಥೆ ಇದೆ. ಇಂದಿನ ಯುವ ಪೀಳಿಗೆಯಲ್ಲಿ ಸಹಜ ಆಕರ್ಷಣೆಯಿಂದ ಶುರುವಾಗುವ ಪ್ರೀತಿ, ಪ್ರೇಮ ಹಾಗೆ ಮುಂದುವರಿದು ಮುಂದೊಂದು ದಿನ ದೀರ್ಘಾವಧಿಯ ಬದ್ಧತೆಯಾಗಿ ಉಳಿಯಬಲ್ಲುದೆ ಎಂಬ ಗೊಂದಲ ಅಧಿಕವಾಗಿದೆ. ಪ್ರಾಯಶಃ ಯುವಕರಲ್ಲಿ ಅವರಿಗೆ ಎದುರಾಗುವ ಜೀವನದ ಆದ್ಯತೆಗಳು ಈ ರೀತಿಯ ಗೊಂದಲ ಸೃಷ್ಟಿಗೆ ಕಾರಣವೂ ಆಗಿರಬಹುದು. ಇದನ್ನೇ ಕಥಾವಸ್ತುವನ್ನಾಗಿ ಇಟ್ಟುಕೊಂಡು ಸೂರಜ್ ಒಂದು ಪ್ರಗತಿಪರ ಪ್ರೇಮಕಥೆಯನ್ನು ಹೆಣೆದಿದ್ದಾರೆ. ಈ ನಿಟ್ಟಿನಲ್ಲಿ ಯೋಚಿಸಿದರೆ ಈ ಕಥಾವಸ್ತು ಸಮಕಾಲಿನ ಸ್ಥಿತಿಗತಿಗಳಿಗಿಂತಲೂ ಸ್ವಲ್ಪ ಮುಂದಿದೆ ಎಂದೇ ಹೇಳಬಹುದು. ಅದಕ್ಕೆ ತಕ್ಕಂತೆ ತಾರಾಗಣವನ್ನು ಒಟ್ಟುಗೂಡಿಸುವಲ್ಲಿ ಸೂರಜ್ ಅವರು ಯಶಸ್ವಿಯಾಗಿದ್ದಾರೆ. ಚಿತ್ರದ ಹಾಡುಗಳು ಪ್ರೀತಿಯ ವಿವಿಧ ಮಜಲುಗಳ ಕುರಿತೇ ಗಿರಕಿ ಹೊಡೆಯುತ್ತವೆ. ಒಂದು ಪ್ರೇಮ ಹುಟ್ಟುವ ಸಂದರ್ಭವನ್ನು ವಿವರಿಸುವ ಹಾಡು, ಎರಡು ಪ್ಯಾಥೋಗಳು, ಒಂದು ಹೊಸ ಜೀವನೋತ್ಸಾಹ ತುಂಬುವ ಹಾಡು ಹೀಗೆ ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಒಂದು ಹಾಡಂತೂ ಇದು ರಘು ದೀಕ್ಷಿತ್ ಸಂಯೋಜಿಸಿರುವ ಹಾಡೇ ಎಂದು ನೀವೇ ಪ್ರಶ್ನಿಸುವ ಮಟ್ಟಕ್ಕೆ ಹೊಸತನದಿಂದ ಕೂಡಿರಲಿದೆ! ಜೊತೆಗೆ ಹಿನ್ನೆಲೆ ಸಂಗೀತ ಸಹ ನನಗೆ ತುಂಬಾ ಸವಾಲಿನದ್ದಾಗಿದೆ.
ಇದರೊಂದಿಗೆ ಬೇರೆ ಯಾವೆಲ್ಲ ಪ್ರಾಜೆಕ್ಟ್‌ಗಳಿಗೆ ಸಹಿ ಮಾಡಿದ್ದೀರಿ?
ಸದ್ಯ ಐದು ಸಿನಿಮಾಗಳ ಸಂಗೀತ ಹಾಗೂ ಹಿನ್ನೆಲೆ ಸಂಗೀತದ ಕೆಲಸ ನನ್ನ ಮುಂದಿದೆ. ಬಹುತೇಕ ಹೊಸಬರ ತಂಡದ ಜೊತೆಗೆ ಕೆಲಸ ಮಾಡುತ್ತಿದ್ದೇನೆ. ‘ಲವ್ ಮಾಕ್ಲ್ಟೇಲ್ 2’ ಸಿನಿಮಾದ ಕೆಲಸ ಶುರು ಆಗಿದೆ. ಜತೆಗೆ ಸಿದ್ಧಾರ್ಥ ಮಹೇಶ್, ಶ್ರೀನಗರ ಕಿಟ್ಟಿ, ಆಶಿಕಾ ರಂಗನಾಥ್ ಅಭಿನಯದ ‘ಗರುಡ’ ಸಿನಿಮಾ ಇದೆ. ಆನಂತರ ‘ಆರ್ಕೆಸ್ಟ್ರಾ’ ಎಂಬ ಸಿನಿಮಾ, ‘ವಿನಾಕಾರಣ’ ಬಳಿಕ ರಾಜೇಶ್ ನಟರಂಗ ಅಭಿನಯದ ‘ಓಬಿರಾಯನ ಕಥೆ’ ಹೀಗೆ ಕೈ ತುಂಬ ಪ್ರಾಜೆಕ್ಟ್ ಇವೆ ಎಂದೇ ಹೇಳಬಹುದು. ಇವೆಲ್ಲದರ ಜತೆಗೆ ಓಬಿರಾಯನ ಕಥೆ ಸಿನಿಮಾದಲ್ಲಿ ಸಂಗೀತದ ಜೊತೆಗೆ ನಾನು ಒಂದು ಮುಖ್ಯ ಪಾತ್ರವನ್ನೂ ನಿರ್ವಹಿಸುತ್ತಿದ್ದೇನೆ! ಮಾತ್ರವಲ್ಲ, ಸಕ್ಕತ್ ಸ್ಟುಡಿಯೊಸ್ ನಿರ್ಮಾಣದ ವೆಬ್ ಸೀರೀಸ್ ಒಂದಕ್ಕೆ ಸಂಗೀತ ನೀಡುತ್ತಿದ್ದೇನೆ. ಅದರಲ್ಲಿ ಕೂಡ ನಾನು ಒಂದು ಪಾತ್ರ ಮಾಡಿದ್ದೇನೆ. ಆದರೆ ನಾನು ರಘು ದೀಕ್ಷಿತ್ ಆಗಿಯೇ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ಸಂದರ್ಶಕರು : ಸುಜಯ್ ಬೆದ್ರ