ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಲಿಟಲ್ ಚಾಂಪ್ಸ್ ನೋಡಿದವರಿಗೆ ಅದರ ಜ್ಯೂರಿ ತಂಡದಲ್ಲಿರುವ ‘ಸಂಗೀತ ರಾಜೀವ್’ ಅವರ ಪರಿಚಯ ಇಲ್ಲದೇ ಇರಲಿಕ್ಕಿಲ್ಲ. ಸಂಗೀತ ಸಂಯೋಜಕರೂ ಆಗಿರುವ ಸಂಗೀತ ರಾಜೀವ್ ಯೂಟ್ಯೂಬ್ ಮಾಧ್ಯಮದಲ್ಲಿ ಮ್ಯೂಸಿಕ್ ವಿಡಿಯೋಗಳಿಂದ ತಮ್ಮದೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಅವರ ಹೊಸ ಮ್ಯೂಸಿಕ್ ವಿಡಿಯೋ ‘ನೀ ಹಿಂಗ ನೋಡಬ್ಯಾಡ’ ಎಂಬ ಉತ್ತರ ಕರ್ನಾಟಕ ಹಾಗೂ ರೆಗ್ಗೆಟೋನ್ ಪ್ರಕಾರಕ್ಕೆ ಸೇರಿದ ಈ ಹಾಡು ಸಧ್ಯ ಸಂಗೀತ ಪ್ರೇಮಿಗಳ ಮನಸೂರೆಗೊಂಡಿದೆ. ಎರಡು ದಿನಗಳ ಹಿಂದೆ ಬಿಡುಗಡೆಯಾದ ಈ ಹಾಡು ಈಗಾಗಲೇ ಒಂದೂವರೆ ಲಕ್ಷ ವೀಕ್ಷಣೆ ಕಂಡಿರುವ ಈ ಸಂದರ್ಭದಲ್ಲಿ ಸಿನಿಕನ್ನಡ.ಕಾಮ್ ಗೆ ವಿಶೇಷ ಸಂದರ್ಶನ ನೀಡಿದ್ದಾರೆ.
‘ನೀ ಹಿಂಗ ನೋಡಬ್ಯಾಡ’ ಹಾಡನ್ನು ಉತ್ತರ ಕರ್ನಾಟಕ ಶೈಲಿಯ ಸಾಹಿತ್ಯದಲ್ಲಿ ಹೊರತರುವ ಕಾರಣವೇನು?
ಸಾಮಾನ್ಯವಾಗಿ ನಾನು ನನ್ನ ಸಂಗೀತ ಕಛೇರಿಯ ಸಲುವಾಗಿ ಕರ್ನಾಟಕದ ವಿವಿಧ ಭಾಗಗಳಿಗೆ ಭೇಟಿ ಕೊಟ್ಟಿದ್ದೇನೆ. ನಾನು ಎಲ್ಲೇ ಹೋದರು ಉತ್ತರ ಕರ್ನಾಟಕದ ಜನರು ತಮ್ಮ ಭಾಷೆಯ ಹಾಡುಗಳನ್ನು ಹಾಡುವಂತೆ ಬೇಡಿಕೆ ಇಡುತ್ತಿದ್ದರು, ಆಗೆಲ್ಲ ಈ ಉತ್ತರ ಕರ್ನಾಟಕದವರಿಗೆ ಇಷ್ಟವಾಗುವಂತೆ ಅವರದೇ ಶೈಲಿಯ ಹಾಡೊಂದನ್ನು ಮಾಡಬೇಕು ಎಂದು ಎಷ್ಟೋ ಬಾರಿ ಅಂದುಕೊಳ್ಳುತ್ತಿದ್ದೆ. ಸಮಯ ಕೂಡಿ ಬಂದಿರಲಿಲ್ಲ. ಲಾಕ್ ಡೌನ್ ಸಡಿಲಗೊಳ್ಳುವ ಕೆಲವು ದಿನಗಳ ಹಿಂದೆ ಹಾಗೆ ಒಂದು ಟ್ಯೂನ್ ಮನಸ್ಸಿನಲ್ಲಿ ಹಾದುಹೋಯಿತು, ಅದನ್ನೇ ಇನ್ನೂ ಸ್ವಲ್ಪ ಅಭಿವೃದ್ಧಿಪಡಿಸಿ ನಮ್ಮ ತಂಡದ ಖಾಯಂ ಸಾಹಿತ್ಯಕಾರ ಪ್ರದ್ಯುಮ್ನ ನರಹಳ್ಳಿ ಅವರ ಬಳಿ ಉತ್ತರ ಕರ್ನಾಟಕ ಶೈಲಿಯಲ್ಲೇ ಸಾಹಿತ್ಯ ಬರೆಸಿ ಕೇವಲ ಒಂದೇ ದಿನದಲ್ಲಿ ಸಂಯೋಜನೆ ಸಹ ಮಾಡಿ ಮುಗಿಸಿದ ಹಾಡು ಇದು. ಒಂದು ಹುಡುಗಿ ತಾನು ಮದುವೆಯಾಗಲು ಬಯಸುವ ಹುಡುಗನ ಕುರಿತಾಗಿ ಹೇಳುವ ಸಾದ ಸೀದಾ ಹಾಡು ಇದಾಗಿದ್ದು ಕೇಳುಗರ ಮನಸ್ಸಿಗೆ ಒಳ್ಳೆಯ ಮುದ ನೀಡುತ್ತದೆ ಹಾಗೆ ಈ ಹಾಡು ಯಾವುದೇ ಕವಿಯ ರಚನೆಯಿಂದ ಸ್ಪೂರ್ತಿ ಪಡೆದಿಲ್ಲ ಎಂಬುದು ಈಗಾಗಲೇ ಈ ಹಾಡನ್ನು ಕೇಳಿರುವವರ ಗಮನಕ್ಕೆ ಬಂದಿರುತ್ತದೆ. ಅಂದಹಾಗೆ ಈ ಹಾಡನ್ನು ನನ್ನ ಜೊತೆ ರೋಷನ್ ಡಿಸೋಜ ಎಂಬುವವರು ಸಹ ನಿರ್ಮಾಣ ಮಾಡಿದ್ದಾರೆ.
ಹಾಡಿಗೆ ಸಿಗುತ್ತಿರುವ ಪ್ರತಿಕ್ರಿಯೆ ಹೇಗಿದೆ!?
ಬಿಡುಗಡೆಯಾದ ಎರಡು ದಿನಗಳಲ್ಲೇ ಒಂದು ಲಕ್ಷದ ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ, ಇದನ್ನು ಹೊರತುಪಡಿಸಿ ನನ್ನ ಸಂಪರ್ಕದಲ್ಲಿರುವ ಚಿತ್ರರಂಗದ ಸ್ನೇಹಿತರು, ಪರಿಚಯದವರು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾ ದಲ್ಲೂ ಜನರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ, ಇನ್ನೂ ಹೆಚ್ಚೆಚ್ಚು ಜನರನ್ನು ತಲುಪಲಿದೆ ಎಂಬ ವಿಶ್ವಾಸವಿದೆ.
ಹಾಡಿನ ಹಿಂದಿರುವ ತಂಡದ ಶ್ರಮ ಮತ್ತು ವಿಡಿಯೋ ರೂಪುಗೊಂಡ ಪ್ರಕ್ರಿಯೆಯ ಬಗ್ಗೆ ಹೇಳಿ!
ಮೊದಲೇ ಹೇಳಿದಂತೆ ಹಾಡಿನ ಸಾಹಿತ್ಯ ಮತ್ತು ಸಂಯೋಜನೆಯ ಕೆಲಸ ಒಂದೇ ದಿನದಲ್ಲಿ ಮುಗಿಯಿತು, ನನ್ನ ಹಳೆಯ ಮ್ಯೂಸಿಕ್ ವಿಡಿಯೋಗೆ ಸಿಕ್ಕ ಅಧ್ಭುತ ಪ್ರತಿಕ್ರಿಯೆ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿತ್ತು. ಹಾಗಾಗಿ ಹಾಡಿನ ವಿಡಿಯೋ ಹೇಗೆ ರೂಪುಗೊಳ್ಳಬೇಕು ಎಂಬುದರ ಬಗ್ಗೆ ನಮ್ಮ ತಂಡದಲ್ಲಿ ಗಂಭೀರವಾಗಿ ಚರ್ಚೆಯಾಯಿತು. ಹಾಡನ್ನು ಸಂಯೋಜಿಸುವ ಸಮಯದಲ್ಲಿ ಹಾಡು ಹೇಗೆ ಬರಬೇಕು ಎಂಬ ಪರಿಕಲ್ಪನೆ ನನ್ನಲ್ಲಿ ಮೂಡಿತ್ತು ಅದನ್ನು ತಂಡದ ಜೊತೆ ಹಂಚಿಕೊಂಡೆ ನಂತರ ಎಲ್ಲವೂ ಸರಾಗವಾಯಿತು, ನನ್ನ ಜವಾಬ್ದಾರಿಯನ್ನು ನನ್ನ ತಂಡದವರು ಹಂಚಿಕೊಂಡರು, ಒಂದು ಉತ್ತಮ ತಂಡ ಜೊತೆಗಿದ್ದರೆ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಈ ಹಾಡೇ ಸಾಕ್ಷಿ, ನಾನು ಈ ಹಾಡಿನ ಮುಖವಷ್ಟೆ, ಈ ಯಶಸ್ಸಿನ ಸಂಪೂರ್ಣ ಶ್ರೇಯಾ ನನ್ನ ತಂಡವರಿಗೆ ಸಲ್ಲಬೇಕು. ಈ ಹಾಡಿನ ನಿರ್ದೇಶನ, ಛಾಯಾಗ್ರಹಣ ಮತ್ತು ಸಂಕಲನ ಮೂರು ವಿಭಾಗದಲ್ಲಿ ಆಕಾಶ್ ಜೋಶಿ ಅವರು ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಪೋಸ್ಟರ್ ವಿನ್ಯಾಸ, ವಿಷುಯಲ್ ಎಫೆಕ್ಟ್ಸ್ ಮತ್ತು ಕಲರ್ ಗ್ರೇಡಿಂಗ್ ರೋಷನ್ ಡಿಸೋಜ ಅವರದು. ಹಾಗೆ ವಿನೋದ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಉಳಿದಂತೆ ಕಸ್ಟಮ್ ಮೇಡ್ ಫ್ಯಾಶನ್ಸ್ ನ ಶಿಲ್ಪ ಹೆಗ್ಡೆ ಹಾಗೂ ರೋಷನ್ ಅಯ್ಯಪ್ಪ ನನ್ನ ಕಾಸ್ಟ್ಯೂಮ್ ವಿನ್ಯಾಸ ಮಾಡಿದ್ದಾರೆ.
ಸಂಗೀತ ಸಂಯೋಜನೆ ಸಹ ಮಾಡುತ್ತಿದ್ದೀರಿ, ಸಂಗೀತದ ಬಗೆಗಿನ ಒಲವು ಹೇಗೆ ಶುರುವಾಯಿತು!?
ಚಿಕ್ಕಂದನಿಂದಲೂ ಹಾಡುಗಳನ್ನು ಕೇಳುವುದು, ನನ್ನಷ್ಟಕ್ಕೆ ಹಾಡಿಕೊಳ್ಳುವುದು ಇದೆಲ್ಲ ಚಾಲ್ತಿಯಲ್ಲಿತ್ತು, ಅದೂ ಅಲ್ಲದೆ ನನ್ನ ತಾಯಿ ಕರ್ನಾಟಿಕ್ ಶಾಸ್ತ್ರೀಯ ಸಂಗೀತದ ಟೀಚರ್ ಹಾಗಾಗಿ ಅವರೇ ನನ್ನ ಸಂಗೀತದ ಮೊದಲ ಗುರು, ಅವರ ಬಳಿ ಕಾರ್ನಾಟಿಕ್ ಶಾಸ್ತ್ರೀಯ ಸಂಗೀತ ಕಲಿತೆ, ಬಹುಶಃ ಅವರಿಂದಲೇ ಸಂಗೀತದ ಕುರಿತಾದ ವ್ಯಾಮೋಹ ನನ್ನಲ್ಲಿ ಬೆಳೆದು ಬಂತು ಎನ್ನಬಹುದು. ನಂತರ ಶ್ರೀ ಅನಂತ ಭಾಗ್ವತ್ ಅವರ ಬಳಿ ಹಿಂದೂಸ್ತಾನಿ ಸಂಗೀತದಲ್ಲಿ ತರಬೇತಿ
ಪಡೆದುಕೊಂಡೆ. ಅದಲ್ಲದೇ ಮಂಜುಳಾ ಗುರುರಾಜ್ ಅವರ ಬಳಿ ಸಿನಿಮಾ ಹಾಡುಗಳನ್ನ ಹಾಡುವ ಸಲುವಾಗಿ ವೋಕಲ್ ಟ್ರೈನಿಂಗ್ ಸಹ ಪಡೆದುಕೊಂಡೆ. ನಂತರ ಧರ್ಮವಿಶ್ ಸಂಗೀತ ನಿರ್ದೇಶನವಿರುವ ಆನೆ ಪಟಾಕಿ ಚಿತ್ರದ ‘ಎಂಟನೇ ತರಗತಿ’ ಹಾಡಿನ ಮೂಲಕ ಕನ್ನಡ ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕಿಯಾಗಿ ಪಾದಾರ್ಪಣೆ ಮಾಡಿದೆ. ತೆಲುಗು ಹಾಗೂ ಹಿಂದಿಯಲ್ಲೂ ಹಾಡುವ ಅವಕಾಶ ಸಿಕ್ಕಿತು. ನಂತರದ ದಿನಗಳಲ್ಲಿ ನನಗೆ ಯಾವಾಗಲೂ ಕಾಡುತ್ತಿದ್ದ ವಿಷಯ ಏನಂದರೆ ತೊಂಬತ್ತರ ಆಸುಪಾಸಿನಲ್ಲಿ ಜನಪ್ರಿಯವಾಗಿದ್ದ ಪಾಪ್ ಸಂಸ್ಕೃತಿ ಕ್ರಮೇಣ ಕಡಿಮೆಯಾಗಿದ್ದು. ಸೋನು ನಿಗಮ್ ರಂತಹ ಗಾಯಕರು ಕೂಡ ಸಿನಿಮಾ ಹಾಡುಗಳನ್ನು ಹಾಡುವ ಮೊದಲು ಪಾಪ್ ಗಾಯಕರಾಗಿದ್ದವರು. ಹಾಗಾಗಿ ಕನ್ನಡ ಭಾಷೆಯಲ್ಲಿ ಅದೇ ರೀತಿಯ ಪಾಪ್ ಸಂಸ್ಕೃತಿಯನ್ನು ನೆನಪಿಸುವ ನಿಟ್ಟಿನಲ್ಲಿ ‘ಕ’ ಪಾಪ್ ಪ್ರಕಾರವನ್ನು ಶುರು ಮಾಡಿದೆ. ‘ಯುವರ್ ಮೈ ಲವ್’ ಎಂಬ ಮೊದಲ ‘ಕ’ ಪಾಪ್ ಪ್ರಕಾರದ ಹಾಡನ್ನು ಪುನೀತ್ ರಾಜಕುಮಾರ್ ಅವರಿಂದ ಬಿಡುಗಡೆಗೊಳಿಸಿದೆ, ಅದಕ್ಕೆ ಸಿಕ್ಕ ಪ್ರತಿಕ್ರಿಯೆ ನನ್ನ ಪ್ರಯತ್ನಕ್ಕೆ ಹೊಸ ಹುರುಪು ತಂದುಕೊಟ್ಟಿತು. ಇದೆಲ್ಲದರ ಜೊತೆಗೆ ಭಾರತ ಮತ್ತು ವಿದೇಶದಲ್ಲಿ ಇದುವರೆಗೂ ಒಂದು ಸಾವಿರಕ್ಕೂ ಹೆಚ್ಚು ಲೈವ್ ಸಂಗೀತ ಕಚೇರಿಗಳಲ್ಲಿ ಭಾಗಿಯಾದ ಖುಷಿ ಇದೆ.
ನಿಮ್ಮ ಮುಂದಿನ ಯೋಜನೆಗಳ ಬಗ್ಗೆ ಹೇಳಿ!
ಇನ್ನು ಹೆಸರಿಡದ ಹೊಸ ತಂಡದ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದೇನೆ. ಅಭಿಮಾನ್ ರಾಯ್ ಸಂಗೀತವಿರುವ ಮತ್ತೊಂದು ಚಿತ್ರದಲ್ಲಿ ಒಂದು ಹಾಡು ಹಾಡಿದ್ದೇನೆ. ಅದು ಬಿಟ್ಟರೆ ನನ್ನದೇ ಮತ್ತೊಂದು ಮ್ಯೂಸಿಕ್ ವಿಡಿಯೋ ಕೆಲಸ ಶುರುವಾಗುವ ಹಂತದಲ್ಲಿದೆ, ಇದು ನನ್ನ ವೃತ್ತಿಜೀವನದ ಬಹುದೊಡ್ಡ ಪ್ರೊಜೆಕ್ಟ್, ಕಾರಣಾಂತರಗಳಿಂದ
ಸಧ್ಯಕ್ಕೆ ಗೌಪ್ಯವಾಗಿ ಇಡಲು ಬಯಸುತ್ತೇನೆ. ಎಲ್ಲ ಅಂತಿಮಗೊಂಡ ಬಳಿಗೆ ಸ್ವತಃ ನಾನೇ ಅದರ ಬಗ್ಗೆ ತಿಳಿಸುತ್ತೇನೆ.
ಸಂದರ್ಶಕರು – ಸುಜಯ್ ಬೆದ್ರ