
ಸಿನಿಮಾರಂಗ ಆನ್ಲೈನ್ ಮಾಧ್ಯಮಗಳತ್ತ ಹೆಚ್ಚು ಹೆಚ್ಚು ವಿಸ್ತರಿಸುತ್ತಿದೆ. ಸಿನಿಮಾ ಚಿತ್ರಮಂದಿರಗಳಲ್ಲೇ ಬಿಡುಗಡೆಯಾದರೂ ಅದರ ಮುಕ್ಕಾಲು ಪಾಲು ಪ್ರಮೋಶನ್ ವಿಚಾರಗಳು ಆನ್ಲೈನ್ ಮೂಲಕವೇ ನಡೆಯುತ್ತಿದೆ. ಹಾಗಾಗಿ ಜನಪ್ರಿಯ ನಿರ್ದೇಶಕ ಆರ್ ಚಂದ್ರು ಅವರು ಕೂಡ ತಮ್ಮ ಕಬ್ಜ ಚಿತ್ರದ ಅಧಿಕೃತ ಮಾಹಿತಿಗಾಗಿ ಸ್ವತಃ ಒಂದು ವಬ್ಸೈಟ್ ತೆರೆಯುವ ಯೋಜನೆ ಹಾಕಿದ್ದು, ಅದನ್ನು ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅವರ ಮೂಲಕ ಲೋಕಾರ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
“ಏಳು ಭಾಷೆಗಳಲ್ಲಿ ತೆರೆಕಾಣಲಿರುವ `ಕಬ್ಜ’ ಚಿತ್ರವು ಪ್ರಸ್ತುತ ದೇಶದಾದ್ಯಂತ ನಿರೀಕ್ಷೆಯಲ್ಲಿರುವ ಹತ್ತು ಸಿನಿಮಾಗಳ ಸಿನಿಮಾಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ಚಂದ್ರುವಿನ ವೃತ್ತಿಪರತೆಯ ಬಗ್ಗೆ ನನಗೆ ಗೊತ್ತು. ಜತೆಗೆ ಉಪೇಂದ್ರ ಅವರ ನಾಯಕತ್ವ ಮತ್ತು ಚಿತ್ರದ ಅದ್ಧೂರಿತನ ಎಲ್ಲವೂ ಸೇರಿ ಖಂಡಿತವಾಗಿ ಆಕರ್ಷಕ ಸಿನಿಮಾವಾಗಿ ಮೂಡಿ ಬರುವ ನಿರೀಕ್ಷೆ ಇದೆ. ಅದೇ ರೀತಿ ಮುಂದೆ ಉಪೇಂದ್ರ ಮತ್ತು ನನ್ನ ಕಾಂಬಿನೇಶನ್ ಚಿತ್ರವನ್ನು ಆರ್ ಚಂದ್ರು ನಿರ್ದೇಶಿಸುವ ಸಮಯ ಬರಲಿ” ಎಂದು ಡಾ.ಶಿವರಾಜ್ ಕುಮಾರ್ ಈ ಸಂದರ್ಭದಲ್ಲಿ ಹಾರೈಸಿದರು.

“ಚಂದ್ರು ಎಲ್ಲವನ್ನು ಪ್ಲ್ಯಾನ್ ಸಮೇತ ಮಾಡುತ್ತಿದ್ದಾರೆ. ಚಿತ್ರದ ಕಾಸ್ಟ್ಯೂಮ್ ಆಯ್ಕೆಗಾಗಿಯೇ ಆರು ತಿಂಗಳು ಕಾಲಾವಕಾಶ ತೆಗೆದುಕೊಂಡಿದ್ದರು” ಎಂದು ಉಪೇಂದ್ರ ಚಂದ್ರು ಅವರ ಕಾರ್ಯಯೋಜನೆಗಳನ್ನು ಪ್ರಶಂಸಿಸಿದರು. `ಕಬ್ಜ’ ಚಿತ್ರದ ನಿರ್ದೇಶಕ ಆರ್ ಚಂದ್ರು ಮಾತನಾಡಿ, “ಸಿನಿಮಾವನ್ನು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನೇರವಾಗಿ ನಿರ್ಮಾಣ ಮಾಡಲಾಗುತ್ತದೆ. ಒಟ್ಟು ಏಳು ಭಾಷೆಗಳಲ್ಲಿ ಚಿತ್ರ ತೆರೆಕಾಣುತ್ತದೆ. ಇದು ನನ್ನ ಹನ್ನೆರಡನೇ ಚಿತ್ರ. ಮೇಕಿಂಗ್ ವಿಚಾರದಲ್ಲಿ ಹಿಂದಿನ ಎಲ್ಲ ಚಿತ್ರಗಳಿಗಿಂತ ವಿಭಿನ್ನವಾಗಿರಲಿದೆ. ಈಗಾಗಲೇ ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರಿನ ಮಿನರ್ವ ಮಿಲ್ ನಲ್ಲಿ ಹಾಕಿದ ಸೆಟ್ ಕೋವಿಡ್ ಕಾರಣದಿಂದಾಗಿ ಬಳಸಲು ಸಾಧ್ಯವಾಗಿಲ್ಲ! ಇನ್ನು ಅದೇ ಜಾಗದಲ್ಲಿ ಬೇರೆ ಸೆಟ್ ಹಾಕಬೇಕಾಗಿದೆ. ಸದ್ಯದಲ್ಲೇ ಚಿತ್ರೀಕರಣ ಶುರುವಾಗಲಿದೆ. ಚಿತ್ರ ಕುರಿತಾದ ಹೆಚ್ಚಿನ ಮಾಹಿತಿ ಮತ್ತು ವಿಶೇಷತೆಗಳನ್ನು ಇನ್ನು ಮುಂದೆ ಕಬ್ಜ ವೆಬ್ಸೈಟ್ ಮೂಲಕ ತಿಳಿದುಕೊಳ್ಳಬಹುದು” ಎಂದರು.
ಸಮಾರಂಭದಲ್ಲಿ ಶಾಸಕ ಎಂಟಿಬಿ ನಾಗರಾಜು, ವೈದ್ಯೆ ಸೌಜನ್ಯಾ ವಸಿಷ್ಠ, ನಿರ್ಮಾಪಕ ಕೆಪಿ ಶ್ರೀಕಾಂತ್, ವಿತರಕ ಮೋಹನ್ ಮೊದಲಾದ ಗಣ್ಯರು ಅತಿಥಿಗಳಾಗಿ ಆಗಮಿಸಿದ್ದರು.
