ಗುರು ಈಗ ಕಮಿಷನರು..!

ಗುರು ಅಂದರೆ ಗುರುದೇವ ನಾಗರಾಜ್. ಅವರು ಹಾಗೆ ಎಲ್ಲೆಡೆ ಕಾಣಿಸಿಕೊಳ್ಳುವ ವ್ಯಕ್ತಿಯಲ್ಲ! ಸುಮನ್ ನಗರ್ಕರ್ ಅವರ ಪತಿಯಾಗಿ, ಪರದೆಯ ಹಿಂದಿನ ಶಕ್ತಿಯಾಗಿ ಮಾತ್ರ ಇದ್ದವರು. ಇತ್ತೀಚೆಗೆ ನಿರ್ಮಾಣ ರಂಗಕ್ಕೂ ಬಂದವರು. ಆದರೆ ಇದೀಗ ಗುರು ಪರದೆ ಮೇಲೆ ಪೊಲೀಸ್‌ ಕಮಿಷನರು! ಹೊಸ ತಲೆಮಾರಿನ ಹೊಸ ಅಲೆಯ ಕನ್ನಡ ಚಿತ್ರಗಳ ನಡುವೆ ಹೊಸ ಮುಖದ ಕಲಾವಿದರಿಗೆ ಬೇಡಿಕೆ ಹೆಚ್ಚುತ್ತಿದೆ. ಅದೇ ಸಂದರ್ಭದಲ್ಲಿ ಸದ್ಯಕ್ಕಂತೂ ಪೊಲೀಸ್‌ ಕಮಿಷನರ್ ಪಾತ್ರಗಳಿಗೆ ಹೇಳಿ ಮಾಡಿಸಿದಂತೆ ಕಾಣುವ ಗುರುದೇವ್ ಮುಂದೆ ಇನ್ನಷ್ಟು ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಲಿದ್ದಾರ? ಇಷ್ಟಕ್ಕೂ ಅವರು ಪೊಲೀಸ್ ಮಾತ್ರ ಮಾಡಿದ್ದು ಹೇಗೆ? ಮತ್ತು ಕಲಾಸಕ್ತಿ ಬಂದಿದ್ದು ಎಲ್ಲಿಂದ ಎನ್ನುವ ಚಿಕ್ಕಪುಟ್ಟ ಪ್ರಶ್ನೆಗಳಿಗೆ ಅವರು ಸಿನಿಕನ್ನಡದ ಮೂಲಕ ಉತ್ತರ ನೀಡಿದ್ದಾರೆ.

ನೀವು ಕಮಿಷನರ್ ಆಗಿದ್ದು ಹೇಗೆ?

ಕಲೆಗೆ ಆ ಶಕ್ತಿ ಇದೆ! ಇದು ತ್ರಿಲೋಕ್ ರೆಡ್ಡಿ ನಿರ್ದೇಶನದ `ಎಲ್ಲೋ ಬೋರ್ಡ್’ ಎನ್ನುವ ಚಿತ್ರದಲ್ಲಿನ ಪಾತ್ರ. ಈ ತಂಡದಲ್ಲಿ ನನ್ನ ಸ್ನೇಹಿತರೊಬ್ಬರು ನಟಿಸುತ್ತಿದ್ದು, ಅವರ ಮೂಲಕ ನನಗೆ ಕಮಿಷನರ್ ಪಾತ್ರ ಮಾಡುವಂತೆ ಆಫರ್ ಬಂತು. ಅತಿಥಿ ಪಾತ್ರದಂತಿರುವ ಸಣ್ಣ ಕ್ಯಾರೆಕ್ಟರ್ ಆದರೂ ಕತೆಯಲ್ಲಿ ಕಮಿಷನರ್‌ಗೆ ಪ್ರಾಧಾನ್ಯತೆ ಇದೆ. ಹಾಗಾಗಿ ಒಪ್ಪಿಕೊಂಡೆ. ಚಿತ್ರದಲ್ಲಿ ಪ್ರದೀಪ್ ಬೊಗಾಡಿ ನಾಯಕರು. ಅವರು ಇದುವರೆಗೆ ಒಂಬತ್ತು ಸಿನಿಮಾ ಮಾಡಿದ್ದಾರೆ. ಜಾರ್ಖಂಡ್ ಹುಡುಗಿ ಸ್ನೇಹಾ ಖುಷಿ ನಾಯಕಿಯಾಗಿದ್ದು, ಈ ಹಿಂದೆ ಎರಡು ಕನ್ನಡ ಸಿನಿಮಾ ಮಾಡಿದ್ದಾರೆ. ನಂದನ್ ಜಾಂಟಿ ನೆಗೆಟಿವ್ ಲೀಡ್ ನಲ್ಲಿದ್ದಾರೆ. ಅವರು ರಂಗಭೂಮಿ ಹಿನ್ನೆಲೆ ಮತ್ತು ಸಿನಿಮಾ ಅನುಭವ ಇರುವ ನಟ. ಅಹಲ್ಯಾ ಸುರೇಶ್, ಉಗ್ರಂ ಮಂಜು, ಸಾಧು ಕೋಕಿಲ, ಚಂದನಾ ರಾಘವೇಂದ್ರ, ತುಮಕೂರು ಮೋಹನ್ ಮೊದಲಾದವರ ತಾರಾಗಣ ಇದೆ. ಇನ್ನು ಹತ್ತು ದಿನದ ಶೂಟಿಂಗ್ ಮಾತ್ರ ಬಾಕಿ ಇದೆ.

ಕೋವಿಡ್ ಸಮಯದಲ್ಲಿ ಶೂಟಿಂಗ್ ರಿಸ್ಕಿ ಅನಿಸಿಲ್ಲವೇ?

ಚಿತ್ರೀಕರಣ ಶುರು ಮಾಡದಿರುವುದು ತುಂಬ ಮಂದಿಗೆ ರಿಸ್ಕ್ ಇರುವುದರಿಂದ ಒಂದಷ್ಟು ಜನರಾದರೂ ಮುಂಜಾಗ್ರತೆ ವಹಿಸಿ ಈ ರಿಸ್ಕ್ ತೆಗೆದುಕೊಳ್ಳಲೇಬೇಕಾಗಿತ್ತು. ಹಾಗಾಗಿ ಆ ಸಾಹಸದಲ್ಲಿ ಭಾಗಿಯಾಗಿರುವುದಕ್ಕೆ ಖುಷಿಯಿದೆ. ನಾನು ಹೊರಗಡೆ ಹೋಗುತ್ತಿರುವುದನ್ನು ನೋಡಿ ಸುಮನ್ ಕಡೆಯಿಂದ `ಮನೆಗೆ ಬಂದು ಕ್ವಾರಂಟೈನ್ ಆಗಬೇಕು’ ಎನ್ನುವ ಸೂಚನೆ ದೊರಕಿದೆ. ಮುಖ್ಯವಾಗಿ ಮನೆಯಲ್ಲಿ ಅಪ್ಪ ಅಮ್ಮ, ಅತ್ತೆ ಮಾವ ಇದ್ದಾರೆ. ಅವರಿಂದ ನಾನು ದೂರ ಇರಬೇಕಾಗಿದೆ. ಆಕ್ಚುಯಲಿ ನಾನು, ಸುಮನ್ ಮಾರ್ಚ್ ನಲ್ಲೇ ಯುಎಸ್ ಗೆ ಹೋಗಬೇಕಿತ್ತು. ಅಲ್ಲಿದ್ದಿದ್ದರೆ ಅತ್ತೆ ಮಾವನ ಬಗ್ಗೆ ಆತಂಕ ಇರುತ್ತಿತ್ತು. ಪದೇಪದೆ ಫೋನ್ ಮಾಡಬೇಕಾಗಿರುತ್ತಿತ್ತು. ಈಗ ಎಲ್ಲ ಜತೆಗೆ ಇದ್ದೇವೆ. ಅವರು ಹೊರಗಡೆ ತಿರುಗಾಡದಂತೆ ನೋಡಿಕೊಳ್ಳಲು ಸಾಧ್ಯವಾಗಿದೆ. ಆ ಸಮಾಧಾನ ಇದೆ. ಚಿತ್ರದಲ್ಲಿನ ನನ್ನ ಪಾತ್ರ ಕೂಡ ಯಾವ ಪಾತ್ರದ ಜತೆಯಲ್ಲಿಯೂ ಕ್ಲೋಸ್ ಆಗಿ ಬೆರೆಯುವ ದೃಶ್ಯಗಳಿರದ ಕಾರಣ ಸೆಟ್‌ನಲ್ಲಿಯೂ ಸೋಶಿಯಲ್ ಡಿಸ್ಟೆನ್ಸ್ ಕಾಯ್ದುಕೊಳ್ಳಲು ಸಾಧ್ಯವಾಗಿದೆ. ತಿಂಡಿ ಎಲ್ಲ ಮನೆಯಲ್ಲೇ ಮಾಡಿಕೊಂಡು ಹೋಗುತ್ತೇನೆ. ವಾಪಾಸು ಮನೆಗೆ ಬಂದು ಸ್ನಾನ ಮಾಡಿ ಊಟ ಮಾಡುತ್ತೇನೆ. ಈಗ ಮನೆಯಲ್ಲಿಯೂ ಮಾಸ್ಕ್ ಹಾಕಿಕೊಂಡು ಓಡಾಡಬೇಕಾಗಿದೆ. ಇವತ್ತಿನಿಂದ ಸುಮನ್ ಕೂಡ ಚಿತ್ರವೊಂದರ ಶೂಟಿಂಗ್‌ಗಾಗಿ ಹೋಗಬೇಕಿದೆ. ಆಕೆಯ ಸಿನಿಮಾದ ವಿವರವನ್ನು ಚಿತ್ರತಂಡ ಅಧಿಕೃತವಾಗಿ ಅನೌನ್ಸ್ ಮಾಡಿಲ್ಲ. ಹಾಗಾಗಿ ಆ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾರೆ.

ಸುಮನ್ ನಗರ್ಕರ್ ಅವರನ್ನು ಕಂಡು ನಟಿಸುವಾಸೆ ಬಂತೇ?

ಸುಮನ್ ಕಂಡು ವರಿಸುವಾಸೆ ಬಂತು. ಹಾಗೆ ಮದುವೆಯಾದೆ. ಅದರಲ್ಲಿ ಕಲೆ, ಕಲಾವಿದರ ಮೇಲೆ ನನಗಿರುವ ಪ್ರೀತಿ ಆದರವೂ ಇತ್ತು. ಯಾಕೆಂದರೆ ನಾನು ಶಾಲಾದಿನಗಳಿಂದಲೇ ಬಾಲನಟನಾಗಿದ್ದವನು. ಆದರೆ ಸಿನಿಮಾದಲ್ಲಿ ನಟಿಸಿರಲಿಲ್ಲ ಅಷ್ಟೇ. ದೆಹಲಿಯ ಕನ್ನಡ ಶಾಲೆಯಲ್ಲಿದ್ದಾಗ ನಾನು ಬಾಂಗ್ರ ಡ್ಯಾನ್ಸ್ ಮಾಡಿ ಪ್ರಥಮ ಪ್ರಶಸ್ತಿ ಪಡೆದಿದ್ದೆ. ಆಗ ನಾನು ಒಂದನೇ ತರಗತಿ ವಿದ್ಯಾರ್ಥಿ. ನಾನು ನಾಲ್ಕನೇ ಕ್ಲಾಸ್‌ನಲ್ಲಿದ್ದಾಗ ತಂದೆಯ ನೌಕರಿಗೆ ವರ್ಗವಾಗಿ ಮತ್ತೆ ಕರ್ನಾಟಕಕ್ಕೆ ಮರಳಿದೆವು. ಶಿಕ್ಷಕರಾದ ರಾಮಕೃಷ್ಣ ಎನ್ನುವವರು ನನ್ನಲ್ಲಿನ ಪ್ರತಿಭೆ ಗುರುತಿಸಿ ನನ್ನಿಂದ ಏಕಪಾತ್ರಾಭಿನಯ ಮಾಡಿಸಿದ್ದರು. ಅದಕ್ಕೂ ಪ್ರಶಸ್ತಿ ಬರುವುದರೊಂದಿಗೆ ನನಗೆ ರಂಗಭೂಮಿಯಲ್ಲಿ ಆಸಕ್ತಿ ಮೂಡಿತು. ಬಿವಿಕಾರಂತ್ ಪ್ರೇಮಾ ಕಾರಂತ್ ಅವರ ಬೆನಕ ತಂಡದಲ್ಲಿ ಬಾಲ ನಟನಾಗಿ ರಂಗಭೂಮಿ ಪ್ರವೇಶಿಸಿದೆ. ಪಂಜರ ಶಾಲೆ, ಆಲಿಬಾಬ ಮತ್ತು ನಲವತ್ತು ಮಂದಿ ಕಳ್ಳರು, ಜೈಂಟ್ ಮಾಮ ಮುಂತಾದ ನಾಟಕಗಳು ಸೇರಿದಂತೆ ಟಿಪಿ ಕೈಲಾಸಂ ಅವರ ನಾಟಕಗಳಲ್ಲಿಯೂ ಅಭಿನಯಿಸಿದೆ. ನಂತರ ಓದು, ವೃತ್ತಿ ಎನ್ನುವ ವಿಚಾರಕ್ಕೆ ಬಂದಾಗ ಈ ಆಸಕ್ತಿಯನ್ನು ಬದಿಗೆ ಸರಿಸಿದ್ದೆ. ಇದೀಗ ಕಿರುಚಿತ್ರಗಳ ಮೂಲಕ ಮರು ಪ್ರವೇಶ ಮಾಡಿ ಎರಡು ಸಣ್ಣ ಪಾತ್ರಗಳನ್ನು ನಿಭಾಯಿಸಿದ್ದೇನೆ. ಇನ್ನೊಂದಷ್ಟು ಚಿತ್ರಗಳ ಬಗ್ಗೆ ಚರ್ಚೆ ನಡೆಯುತ್ತಿದೆ.

ಸಿನಿಮಾ ವಿಚಾರಕ್ಕೆ ಬಂದರೆ ಇದೇ ಪ್ರಥಮ ಪಾತ್ರವೇ?

ದಯಾಳ್ ಪದ್ಮನಾಭನ್ ನಿರ್ದೇಶನದ ಯೋಗಿಯವರ `ಒಂಬತ್ತನೇ ದಿಕ್ಕು’ ಚಿತ್ರದಲ್ಲಿ ಸಣ್ಣದೊಂದು ಪಾತ್ರ ಮಾಡಿದ್ದೆ. ಅದು ಒಂದು ದೃಶ್ಯದಲ್ಲಿ ಬಂದು ಹೋಗುವ ಮ್ಯಾನೇಜರ್ ಪಾತ್ರ. ಚಿತ್ರ ಬಿಡುಗಡೆಯಾಗಬೇಕಿದೆ. ಇದೀಗ ಕನ್ನಡ, ಇಂಗ್ಲಿಷ್ ಮತ್ತು ತಮಿಳು ಶಾರ್ಟ್ ಫಿಲ್ಮ್ಸ್ ಮಾಡುತ್ತಿದ್ದೇನೆ. ತಮಿಳು ಕಿರುಚಿತ್ರದಲ್ಲಿ ಐವತ್ತು ವರ್ಷದ ಗಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಅದು ಪ್ರಮುಖ ಪಾತ್ರವಾಗಿದ್ದು ಅದರಲ್ಲಿ ನನಗೆ ಕ್ಯಾನ್ಸರ್ ಬಂದಿರುತ್ತದೆ. ಇವಲ್ಲದೆ ಎರಡು ಹಿಂದಿ ಕಿರುಚಿತ್ರಗಳು ಕೂಡ ಫೈನಲ್ ಆಗಿವೆ. ಬಹುಶಃ ಬಿಡುಗಡೆಯ ಬಳಿಕ ಇನ್ನೊಂದಷ್ಟು ಅವಕಾಶಗಳು ಬರುವ ಸಾಧ್ಯತೆ ಇದೆ.

Recommended For You

Leave a Reply

error: Content is protected !!
%d bloggers like this: