ಎಸ್ಪಿಬಿ ಆರೈಕೆಗೆ ಚಂದನವನದ ಹಾರೈಕೆ

ಪದ್ಮಶ್ರೀ, ಪದ್ಮಭೂಷಣ ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಕೊರೊನಾ ಪೀಡಿತರಾಗಿ ಚಿಕಿತ್ಸೆಯಲ್ಲಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ದೇಶದೆಲ್ಲೆಡೆ ಅವರ ಆರೋಗ್ಯಕ್ಕಾಗಿ ಸಂಗೀತಾಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಮುಂದಿನ ಜನ್ಮ ಇದ್ದರೆ ಕರ್ನಾಟಕದಲ್ಲೇ ಹುಟ್ಟುತ್ತೇನೆ ಎಂದು ಹೇಳುವ ಬಾಲಸುಬ್ರಹ್ಮಣ್ಯಂ ಅವರನ್ನು ಇದೇ ಜನ್ಮದಲ್ಲಿ ಕನ್ನಡಿಗನಾಗಿ ಸ್ವೀಕರಿಸಿರುವ ಕನ್ನಡದ ಜನತೆಯ ಪ್ರಾರ್ಥನೆಗೂ ಮೇರೆ ಇಲ್ಲ. ಈ ಸಂದರ್ಭದಲ್ಲಿ ಜನಪ್ರಿಯ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮತ್ತು ಸಂಗೀತ ದಿಗ್ಗಜ ಹಂಸಲೇಖ ಅವರ ನೇತೃತ್ವದಲ್ಲಿ ಕಲಾವಿದರ ಸಂಘದ ರಾಜ್ ಕುಮಾರ್ ಭವನದಲ್ಲಿ ಎಸ್ಪಿಬಿಯವರ ಆರೋಗ್ಯಕ್ಕಾಗಿ ಪ್ರಾರ್ಥಿಸಲಾಯಿತು.

ವೇದಿಕೆಯಲ್ಲಿದ್ದ ನಾದಬ್ರಹ್ಮ ಹಂಸಲೇಖ ಅವರು ಮಾತನಾಡಿ “ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ ಎರಡೂ ಕೂಡ ಸಿನಿಮಾ ಸಂಗೀತದ ತಾಯಂದಿರು. ಇತರ ಭಾಷೆಗಳಲ್ಲಿ ಇಲ್ಲದಿರುವ ರೀತಿಯಲ್ಲಿ ಪ್ರಪಂಚದ ಸಿನಿಮಾಗಳಲ್ಲಿ ಸಂಗೀತವೇ ಪ್ರಧಾನ. ಹಾಡಿನ ಕೇಂದ್ರವಾದ ಚಲನ ಚಿತ್ರರಂಗದಲ್ಲಿ ಅಭೂತಪೂರ್ವ ಗಾನ ಪ್ರತಿಭೆ ಎಸ್‌ ಪಿ ಬಾಲಸುಬ್ರಹ್ಮಣ್ಯಂ. ಅವರಿಗೆ ಭಾಷೆಗಳ ಮೇಲಿರುವ ಪ್ರೀತಿಗೆ ಇಂದಿಗೂ ಅವರು ತಾವು ಹಾಡಿರುವ ಎಲ್ಲ ಭಾಷೆಯ ಹಾಡಿನ ಸಾಹಿತ್ಯವನ್ನು ಸಂಗ್ರಹಿಸಿ ಇರಿಸಿರುವುದೇ ದ್ಯೋತಕ. “ಸಂಗೀತ ಶಾಸ್ತ್ರೀಯವಾಗಿದ್ದರೆ ನಾದ ಸಾಕು, ಆದರೆ ಸಿನಿಮಾಗೆ ಭಾಷೆ ಮುಖ್ಯ. ಭಾರತದಲ್ಲಿ ಒಂದು ಪ್ರಾದೇಶಿಕ ಭಾಷೆಯನ್ನು ರಕ್ಷಿಸಿದರೆ ಪ್ರಜಾಪ್ರಭುತ್ವ ಇದೆ ಎಂದು ಅರ್ಥ” ಎನ್ನುವುದು ಅವರ ಮಾತು. ಸಾಮಾನ್ಯವಾಗಿ ಯಾವುದೇ ಆತ್ಮೀಯರಿಗೆ ಅಸೌಖ್ಯವಾದರೂ ಅವರನ್ನು ನೋಡಲು ಹೋಗಬೇಕೆಂದು ನನ್ನ ಪತ್ನಿ ಒತ್ತಾಯಿಸುವುದುಂಟು. ಎಸ್ಪಬಿಯವರನ್ನು ನೋಡಲಿಕ್ಕೂ ನನ್ನ ಪತ್ನಿ ಕರೆದುಕೊಂಡು ಹೋಗಿ ಎಂದು ಹೇಳಿದಳು. ಆದರೆ ಅದೆಷ್ಟು ಕಷ್ಟ ಎಂದು ಆಕೆಗೆ ವಿವರಿಸಿದ ನಾನು, ನಿಸರ್ಗತಾಣದಲ್ಲಿ ಹೋಗಿ ಮನಸ್ಫೂರ್ತಿಯಾಗಿ ಪ್ರಾರ್ಥಿಸೋಣ ಎಂದೆ. ಹಾಗೆ ಶಿಂಷಾದಲ್ಲಿ ಹೋಗಿ ಪ್ರಾರ್ಥಿಸಿದೆವು. ಈ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ರತ್ನಜ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮೊದಲಾದವರು ಫೋನ್ ಮಾಡಿದ್ದರು. ಹಾಗೆ ಇಲ್ಲಿಯೂ ಕೂಡ ಯಾರೂ ಅಂದುಕೊಳ್ಳದೆ ಆಗಿರುವ ಒಂದು ಪ್ರಾರ್ಥನಾ ಸಂಗಮ ಆಗಿದೆ ಎಂದರು. ಈ ಸಂದರ್ಭದಲ್ಲಿ ಪರದೆಯ ಮೇಲೆ ಹಂಸಲೇಖಾ ದಂಪತಿ ಶಿಂಷಾದಲ್ಲಿ ಹಾಡಿನ ಮೂಲಕ ಪ್ರಾರ್ಥಿಸಿದ ವಿಡಿಯೋ ಪ್ರದರ್ಶಿಸಲಾಯಿತು.

ರಾಕಿಂಗ್ ಸ್ಟಾರ್ ಯಶ್ ಮತನಾಡಿ ” ಎಸ್ಪಿಬಿ ಸರ್ ಬಗ್ಗೆ ಮಾತನಾಡೋಕೆ ನಾನು ತುಂಬ ಚಿಕ್ಕವನು. ಅವರು `ರಾಕಿ’ ಚಿತ್ರದಲ್ಲಿ ಒಂದು ಹಾಡು ನನಗೆ ಹಾಡಿದ್ದಾರೆ. ಅದನ್ನು ಕೇಳಿ ಥ್ರಿಲ್ ಆಗಿದ್ದೆ. ಇಂದಿನ ಈ ಕಾರ್ಯಕ್ರಮ ತುಂಬ ಒಳ್ಳೆಯ ಸಂಸ್ಕೃತಿ. ಚಿತ್ರರಂಗವನ್ನು ಏನೇ ಉದ್ಯಮ ಎಂದು ಹೇಳಿದರೂ ಭಾವನೆಗಳಿಗೆ ಬಹಳ ಅವಕಾಶ ಇದೆ. ಹಂಸಲೇಖ ಮತ್ತು ಎಸ್‌ಪಿಬಿಯವರ ಕಾಂಬಿನೇಶನ್ ಹಾಡುಗಳಲ್ಲಿ ಶಾಲಾ ಪಠ್ಯಕ್ಕಿಂತ ಹೆಚ್ಚಿನ ನೀತಿಗಳನ್ನು ಕಲಿತಿದ್ದೇವೆ. ಹಾಗಾಗಿ ಅವರಿಬ್ಬರು ಎಷ್ಟೋ ಜನರೇಶನ್‌ಗಳಿಗೆ ಪಾಠ ಹೇಳುವ ಗುರುಗಳ ಹಾಗೆ. ಇದೀಗ ಅವರಲ್ಲೊಬ್ಬರು ಅನಾರೋಗ್ಯದಲ್ಲಿದ್ದಾರೆ. ನಾವೆಲ್ಲರೂ ಎಸ್ಪಿಬಿಯವರಿಗಾಗಿ ಪ್ರಾರ್ಥಿಸೋಣ” ಎಂದರು.

ಸಂಸದೆ ಸುಮಲತಾ ಅವರು “ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ 40,000 ಹಾಡುಗಳಲ್ಲಿ 19,000 ಹಾಡುಗಳನ್ನು ಕನ್ನಡದಲ್ಲೇ ಹಾಡಿದ್ದಾರೆ ಎನ್ನುವುದು ಗಮನಾರ್ಹ. ಅವರ ಗಾಯನದ ಬಗ್ಗೆ ಹೇಳುವ ಯೋಗ್ಯತೆ ನನಗಿಲ್ಲ. ಆದರೆ ಅವರ ಸರಳ ಸ್ವಭಾವ ಖಂಡಿತವಾಗಿಯೂ ಆದರ್ಶದಾಯಕ. ಬಹುಶಃ ಸಿನಿಮಾರಂಗದಲ್ಲಿ ಅವರನ್ನು ಮೆಚ್ಚದವರು ಯಾರೂ ಇಲ್ಲ ಎಂದೇ ಹೇಳಬಹುದು. ಅಂಬರೀಷ್ ಅವರ ಮೇಲೆಯಂತೂ ಎಸ್ಪಿಯವರಿಗೆ ತುಂಬ ಪ್ರೀತಿ ಇತ್ತು. ಅವರು ನಟಿಸಿರುವ ಎಲ್ಲ ಚಿತ್ರಗಳಲ್ಲಿಯೂ ಎಸ್ಪಿಬಿಯವರೇ ಹಾಡಿದ್ದಾರೆ. ಅಂಬಿ ಸಂಭ್ರಮ ಎನ್ನುವ 60ನೇ ವರ್ಷದ ಕಾರ್ಯಕ್ರಮದಲ್ಲಿ ಬಾಲಸುಬ್ರಹ್ಮಣ್ಯಂ ಅವರು ಇರಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಆದರೆ ಅವರನ್ನು ಸಂಪರ್ಕಿಸಿದಾಗ ಅವರು ಅದಾಗಲೇ ಆ ದಿನಾಂಕದಂದು ಅವರು ಅಮೆರಿಕಾದಲ್ಲಿ ಕಾರ್ಯಕ್ರಮ ನೀಡಲು ಒಪ್ಪಿಕೊಂಡಾಗಿತ್ತು. ಹಾಗಾಗಿ ಬರಲು ಸಾಧ್ಯವಾಗುತ್ತಿಲ್ಲ ಕ್ಷಮಿಸಿ ಎಂದು ಹೇಳಿದ್ದರು. ಆದರೆ ಲಾಸ್ಟ್ ಮಿನಿಟಲ್ಲಿ ಅವರ ಅಮೆರಿಕದ ಕಾರ್ಯಕ್ರಮದ ದಿನಾಂಕ ಬದಲಾಗಿತ್ತು. ತಕ್ಷಣ ಅವರೇ ನನಗೆ ಫೋನ್ ಮಾಡಿ ಬರುವುದಾಗಿ ತಿಳಿಸಿದ್ದರು. ಆದರೆ ಆಗ ನಮ್ಮಲ್ಲೊಂದು ಸಮಸ್ಯೆಯಾಗಿತ್ತು. ಅವರು ಯಾವತ್ತೂ ಟ್ರ್ಯಾಕ್ ಗೆ ಹಾಡುವುದಿಲ್ಲ. ಆದರೆ ನಾವು ಅದಾಗಲೇ ಆ ಸ್ಟೇಜ್ ಸೆಟಪ್ ಗೆ ತಕ್ಕಂತೆ ಟ್ರ್ಯಾಕ್ ಸೆಟಪ್ ಮಾಡಿಯಾಗಿತ್ತು. ಇದನ್ನು ಹೇಳಿದಾಗ, “ನಾನು ಯಾವತ್ತೂ ಟ್ರ್ಯಾಕ್ ಗೆ ಹಾಡಿಲ್ಲ. ಆದರೆ ಪರ್ವಾಗಿಲ್ಲ ಟ್ರ್ಯಾಕಲ್ಲಾದರೂ ಹಾಡ್ತೀನಿ” ಎಂದು ಬಂದಿದ್ದರು. ಅದನ್ನೆಲ್ಲ ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ. ಅವರು ಆದಷ್ಟು ಬೇಗ ಗುಣಮುಖರಾಗಿ ಮರಳಲಿ” ಎಂದು ಸುಮಲತಾ ಶುಭ ಕೋರಿದರು.

ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರು “ಮೋದಿಯವರು ಖುದ್ದಾಗಿ ಎಸ್ಪಿಬಿ ಇರುವ ಆಸ್ಪತ್ರೆಗೆ ಫೋನ್ ಮಾಡಿ ಆ ಎರಡು ಫ್ಲೋರ್‌ಗಳಲ್ಲಿ ಅನಗತ್ಯವಾಗಿ ಯಾರನ್ನು ಕೂಡ ಪ್ರವೇಶಿಸಲು ಬಿಡಬಾರದು; ದೇಶದ ಬೆಸ್ಟ್ ಟ್ರೀಟ್ಮೆಂಟ್ ಅವರಿಗೆ ಸಿಗುವಂತಾಗಬೇಕು” ಎಂದು ತಿಳಿಸಿರುವುದಾಗಿ ತಿಳಿದು ಬಂತು. ಇದು ಅವರು ಪಡೆದಿರುವ ಮಹನೀಯತೆ. ಎಸ್ಪಿಬಿ ಒಬ್ಬ ಅಜಾತ ಶತ್ರು. ನಾನು 1972ರಿಂದಲೂ ಅವರಿಂದ ಹಾಡಿಸುತ್ತಿದ್ದೇನೆ. ನನ್ನ ಎರಡು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ ಕೂಡ” ಎಂದರು.

“ಗಾಯಕನಾಗಿ ನನಗೆ ಇದು ತುಂಬ ಮುಖ್ಯವಾದ ಸಂದರ್ಭ. ಯಾಕೆಂದರೆ ಗಾಯನದ ವಿಚಾರಕ್ಕೆ ಬಂದರೆ ನಾವೆಲ್ಲರೂ ಅವರ ಶಿಷ್ಯಂದಿರೇ” ಎಂದು ಮಾತು ಶುರು ಮಾಡಿದರು ಖ್ಯಾತ ಗಾಯಕ ವಿಜಯ ಪ್ರಕಾಶ್. ಅವರು ದಶಕಗಳ ಹಿಂದೆ ಹಾಡಿದ ಗೀತೆಯನ್ನು ವೇದಿಕೆಯ ಮೇಲೆ ಹಾಡುವಾಗ ಅದರ ತಂತ್ರಜ್ಞರನ್ನು ನೆನಪಿಸುವ ಮನೋಭಾವ ಅವರಲ್ಲಿತ್ತು. ತಿಂಗಳ ಹಿಂದೆ ನಾನು ವಾಹಿನಿಯೊಂದಕ್ಕಾಗಿ ಹಾಡಿದ ಭಾವಗೀತೆಯನ್ನು ಆಲಿಸಿದ ಅವರು ಅದನ್ನು ಮೆಚ್ಚಿ ನಾಲ್ಕೈದು ನಿಮಿಷಗಳ ವಾಯ್ಸ್ ನೋಟ್ ನನಗೆ ಕಳಿಸಿದ್ದರು. ವಾಸ್ತವದಲ್ಲಿ ಹಾಗೆ ಮಾಡಬೇಕಾದ ಯಾವ ಆವಶ್ಯಕತೆಯೂ ಅವರಿಗೆ ಇರಲಿಲ್ಲ. ಪ್ರತಿಯೊಬ್ಬರನ್ನು ಪ್ರೋತ್ಸಾಹಿಸುವ ಗುಣ ಅವರದು” ಎಂದು ಭಾವಪರಶರಾಗಿ ನುಡಿದು ವೇದಿಕೆಯಲ್ಲೇ ಮೂತು ಬಾರಿ ಮೃತ್ಯುಂಜಯ ಮಂತ್ರವನ್ನು ಪಠಿಸಿದರು.

ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು “ರಾಜ್ ಕುಮಾರ್ ಅವರಲ್ಲಿ ಹೇಗೆ ಮನುಷ್ಯಗುಣ ವಿಪರೀತವಾಗಿತ್ತೋ, ಅದೇ ರೀತಿ ಎಸ್ಪಿಬಿಯೂ ಹಾಗೆಯೇ ಇದ್ದರು. ಎಲ್ಲರಿಗೂ ಗೌರವ ನೀಡುವುದು, ನಕಾರಾತ್ಮಕವಾದ ವಿಚಾರವನ್ನು ಯಾವತ್ತೂ ಮಾತನಾಡದಿರುವುದು ಅವರ ಶ್ರೇಷ್ಠತೆಗೆ ಉದಾಹರಣೆ. ಅವರು ಚಿತ್ರರಂಗಕ್ಕೆ ಮಾತ್ರವಲ್ಲ ಮನುಕುಲಕ್ಕೆ ದೊಡ್ಡ ಆಸ್ತಿ” ಎಂದರು. ನಿರ್ಮಾಪಕ ಸೂರಪ್ಪ ಬಾಬು, ಹಿರಿಯ ನಟ ಶ್ರೀನಿವಾಸ ಮೂರ್ತಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆಯೋಜಿಸಿದ್ದ ಜನಪ್ರಿಯ ನಿರ್ಮಾಪಕ, ನಟ ರಾಕ್ಲೈನ್ ವೆಂಕಟೇಶ್ ಎಲ್ಲರಿಗೂ ವಂದನೆ ಸಲ್ಲಿಸಿದರು.

ಕೇಳ್ ಕನ್ನಡ ದನಿ
ಬಾ ಪದ್ಮ ಶ್ರೀ ದನಿ
ತಮ್ಮ ಆರೈಕೆಗಾಗಿ
ಚಂದನವನದ ಹಾರೈಕೆ

ಎನ್ನುವ ಹಂಸಲೇಖಾ ವಿರಚಿತ ಸಾಲುಗಳು ಪರದೆಯ ಮೇಲೆ ದಪ್ಪ ಅಕ್ಷರಗಳಲ್ಲಿ ಎದ್ದು ಕಾಣುತ್ತಿತ್ತು. ಸಂದರ್ಭಕ್ಕೆ ತಕ್ಕಂತೆ ಎಸ್ಪಿಬಿಯವರ ಆರೋಗ್ಯವು ದಿನೇ ದಿನೇ ಸುಧಾರಿಸುತ್ತಿರುವುದಾಗಿ ಆಸ್ಪತ್ರೆಯಿಂದ ಸುದ್ದಿ ಬಂದಿರುವುದು ಖುಷಿಯ ವಿಚಾರವಾಗಿದೆ.

Recommended For You

Leave a Reply

error: Content is protected !!
%d bloggers like this: