ನಾನು ಹೆದರಿ ಅಡಗಿಲ್ಲ ಎಂದ ಸಂಜನಾ!

ಇದೀಗ ಸುದ್ದಿಯಲ್ಲಿರುವ ಡ್ರಗ್ ವಿಚಾರಕ್ಕೆ ಸಂಬಂಧಿಸಿದಂತೆ ಸಂಜನಾ ಗಲ್ರಾನಿ ಹೆಸರು ಕೂಡ ಊಹಾಪೋಹಗಳಲ್ಲಿ ಸೇರಿಕೊಂಡಿದೆ. ಹಾಗಾಗಿ ಮಾಧ್ಯಮದ ಕಡೆಯಿಂದ ಸಾಕಷ್ಟು ಫೋನ್ ಕಾಲ್ಸ್ ಸಂಜನಾ ಎದುರಿಸಬೇಕಾಗಿ ಬಂದಿದೆ. ಆದರೆ ಅಂಥ ಯಾವುದೇ ಕರೆಗಳನ್ನು ಸ್ವೀಕರಿಸದೆ ಸಮಜಾಯಿಷಿಯ ರೂಪದಲ್ಲಿ ಒಂದು ಸಂದೇಶ ಕಳಿಸಿಕೊಟ್ಟಿದ್ದಾರೆ. ಆಂಗ್ಲದಲ್ಲಿರುವ ಆ ಮೆಸೇಜ್ ನ ಕನ್ನಡದ ಸಾರಾಂಶ ಹೀಗಿದೆ.

ನಾನು ಮಾಧ್ಯಮದ ಮಂದಿಯ ಕರೆಗಳನ್ನು ಸ್ವೀಕರಿಸಿಲ್ಲ ಎಂದರೆ, ಅದಕ್ಕೆ ಕಾರಣ ನಾನು ಹೆದರ ಕುಳಿತುಕೊಂಡಿದ್ದೇನೆ ಎಂದು ಅಲ್ಲ; ಆದರೆ ನನಗೆ ಈ ವಿಚಾರದಲ್ಲಿ ಚೀಪ್ ಪಬ್ಲಿಸಿಟಿ ಬೇಕಾಗಿಲ್ಲ. ಹಾಗಾಗಿಯೇ ನಾನು ಡ್ರಗ್ಸ್ ವಿಚಾರದಲ್ಲಿ ರೆಸ್ಪಾನ್ಸ್ ಮಾಡುತ್ತಿಲ್ಲ. ಪ್ರಶಾಂತ್ ಸಂಬರಗಿ ಎನ್ನುವ ವ್ಯಕ್ತಿ, ಅವರು ಯಾರೆಂದು ಕೂಡ ನನಗೆ ಗೊತ್ತಿಲ್ಲ. ಕೆಲವರನ್ನು ಕೇಳಿದ್ದಕ್ಕೆ, ಆತ ಒಬ್ಬ ಬ್ರೋಕರ್, ರಾಜಕಾರಣಿಗಳಿಗೆ ಕೆಲಸ ಮಾಡುವ ಸೇವಕ ಅಂತ ಹೇಳಿದರು. ನಾನು ಮಾಧ್ಯಮದಲ್ಲಿ ಮಾತಾಡುವುದನ್ನು ಕೇಳಿದೆ, ಪರೋಕ್ಷವಾಗಿ ನನ್ನ ಬಗ್ಗೆ `ಗಂಡ ಹೆಂಡತಿ’ ಚಿತ್ರದಲ್ಲಿ ನಟಿಸಿರುವ, ಕೇವಲ ಒಂದು ಸಿನಿಮಾ ಮಾಡಿರುವ ನಟಿ ಎಂದು ಉಲ್ಲೇಖಿಸಿ, ಆಕೆಯನ್ನು ವಿಚಾರಣೆ ಮಾಡಿ ಎಂದು ಹೇಳಿದ್ದಾರೆ. ನಾನು ಎಷ್ಟೆಲ್ಲ ಸಿನಿಮಾ ಮಾಡಿದ್ದೇನೆ, ನಾನು ಒಬ್ಬಳು ಪಂಚಭಾಷಾ ತಾರೆ ಎನ್ನುವುದನ್ನು ವಿಕಿಪಿಡಿಯಾ ನೋಡಿದರೆ ಅರಿತುಕೊಳ್ಳಬಹುದು.

ಬೀದಿ ನಾಯಿಗಳಿಗೆ ಉತ್ತರಿಸುವುದಿಲ್ಲ!

ಪ್ರಶಾಂತ್ ಸಂಬರ್ಗಿಯಂಥವರ ಮೇಲೆ ನಮ್ಮ ಗೌರವಾನ್ವಿತ ಫಿಲ್ಮ್ ಚೇಂಬರ್ ನಿರ್ಮಾಪಕ ವರ್ಗ ಕ್ರಮ ಕೈಗೊಳ್ಳಬೇಕು. ಯಾಕೆಂದರೆ, ಅವರು ಸಿನಿಮಾರಂಗದ ಜತೆಗೆ ಯಾವುದೇ ಸಂಬಂಧ ಇರದಿದ್ದರೂ 200 ರೂಪಾಯಿ ಖರ್ಚು ಮಾಡಿಕೊಂಡು ಟಿವಿ ವಾಹಿನಿಗಳಿಗೆ ಬರುತ್ತಾರೆ. ಬಿಟ್ಟಿ ಪ್ರಚಾರಕ್ಕಾಗಿ ನಾಯಕಿಯರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾರೆ. ಯಾಕೆಂದರೆ ನಾವು ಹೀರೋಯಿನ್‌ಗಳು ಮೂಕಿಯರು, ಕಿವುಡಿಯರು ಎಂದು ಅವರ ಭಾವನೆ ಇರಬೇಕು. ನನಗೆ ಚಿಕ್ಕಂದಿನಿಂದಲೇ ಮನೆಯಲ್ಲಿ ಹೇಳಿಕೊಟ್ಟಿರುವ ಪ್ರಕಾರ ಬೊಗಳುವ ಬೀದಿ ನಾಯಿಗಳಿಗೆಲ್ಲ ಉತ್ತರಿಸುತ್ತಾ ನಿಲ್ಲುವ ಅಗತ್ಯ ಇಲ್ಲ. ಹಾಗಾಗಿಯೇ ಅವರ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ.

ಪ್ರಸ್ತುತ ಡ್ರಗ್ ವಿಚಾರಕ್ಕೆ ಬಂದರೆ ಪಾರ್ಟಿಗಳಲ್ಲಿ ಆಲ್ಕೋಹಾಲ್ ಕುಡಿದು ಸಂಭ್ರಮಾಚರಣೆ ಮಾಡುವುದನ್ನು ನಾನು ಕೂಡ ಕಂಡಿದ್ದೇನೆ. ಆದರೆ ಡ್ರಗ್ಸ್ ಬಗ್ಗೆ ನನಗೆ ಅರಿವಿಲ್ಲ. ಹಾಗಾಗಿ ನನಗೆ ಗೊತ್ತಿಲ್ಲದ ವಿಚಾರದ ಬಗ್ಗೆ ಮಾತನಾಡಲು ಆಸಕ್ತಿ ಇಲ್ಲ. ಇದರ ಜತೆ ಡ್ರಗ್ಸ್ ವಿಚಾರದಲ್ಲಿ ಮಾಧ್ಯಮಗಳಲ್ಲಿ ಚಿರಂಜೀವಿಯ ಹೆಸರನ್ನು ತೆಗೆಯಬಾರದೆಂದು ನಾನು ವಿನಂತಿಸುತ್ತೇನೆ. ಯಾಕೆಂದರೆ ಅವರನ್ನು ನಾವು ಇತ್ತೀಚೆಗಷ್ಟೇ ಕಳೆದುಕೊಂಡಿದ್ದೇವೆ. ಅವರ ಕುಟುಂಬ ಇನ್ನೂ ಆ ದುಃಖದಲ್ಲೇ ಇದೆ. ಇನ್ನು ರಾಹುಲ್ ಬಗ್ಗೆ ಹೇಳುವುದಾದರೆ ಆತ ನನ್ನ ರಾಖಿ ಬ್ರದರ್. ಅವನು ಒಳ್ಳೆಯ ಹುಡುಗ. ನನ್ನನ್ನು`ಅಕ್ಕಾ’ ಎಂದೇ ಕರೆಯುತ್ತಿದ್ದ. ಆತ ರಿಯಲ್ ಎಸ್ಟೇಟ್ ನಿಂದ ಬಂದವನು. ಆತ ಪಾರ್ಟಿಗಳನ್ನು ಇಷ್ಟಪಡುತ್ತಿದ್ದ. ಒಂದು ರುಪಾಯಿ ಸಿಕ್ಕರೆ ಅದನ್ನು ಒಂದು ಕೋಟಿ ಗಳಿಸಿದಂತೆ ಸಂಭ್ರಮಿಸುವ ಗುಣ ಅವನದು. ಆತ ಡ್ರಗ್ಸ್ ಜತೆಗೆ ಸಂಬಂಧ ಇರಿಸಿದ್ದಾನೆ ಎಂದು ನನಗೆ ಅನಿಸುವುದಿಲ್ಲ. ಹಾಗಾಗಿ ಡ್ರಗ್ಸ್ ವಿಚಾರದಲ್ಲಿ ದಯವಿಟ್ಟು ಯಾರೂ ನನ್ನ ಹೆಸರನ್ನು ಎಳೆದು ತರಬೇಡಿ. ನಾನು ಮುಂಬರುವ ಹಿಂದಿ ಪ್ರಾಜೆಕ್ಟ್ ಒಂದಕ್ಕಾಗಿ ತಯಾರಿ ನಡೆಸಿದ್ದೇನೆ, ವಂದನೆಗಳು.

Recommended For You

Leave a Reply

error: Content is protected !!