
ಪಾಪ ಪಾಂಡು ಧಾರವಾಹಿಯ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ನಟಿ ಶಾಲಿನಿ ಮತ್ತು ‘ಹಂಬಲ್ ಪೊಲಿಟಿಷಿಯನ್ ನೋಗ್ರಾಜ್’ ಚಿತ್ರದ ನಿರ್ದೇಶಕ ಸಾದ್ ಖಾನ್ ಇವರಿಬ್ಬರೂ ತಮ್ಮದೇ ರೀತಿಯಲ್ಲಿ ಅದ್ಭುತ ಪ್ರತಿಭೆಗಳು ಎನ್ನುವುದರಲ್ಲಿ ಅನುಮಾನವೇ ಇಲ್ಲ. ತಮ್ಮ ಚೊಚ್ಚಲ ನಿರ್ದೇಶನದಲ್ಲೇ ಭರವಸೆ ಮೂಡಿಸಿರುವ ಸಾದ್ ಖಾನ್ ಮೂರರಿಂದ ಐದು ನಿಮಿಷದ ಸ್ಕೆಚ್ ಕಾಮೆಡಿಗಳನ್ನು ಬರೆಯುವುದರ ಜೊತೆಗೆ ಸ್ವತಃ ಪಾತ್ರ ನಿರ್ವಹಿಸುವುದರಲ್ಲೂ ಪರಿಣತರು. ಅಂದಹಾಗೆ ಇವರಿಬ್ಬರೂ ಸೇರಿ ಹುಟ್ಟುಹಾಕಿದ ‘ಲೋಕಲ್ ಅಮ್ಮ ಮತ್ತು ಫಾರಿನ್ ಮಗ ಶೇಖರ’ ಎಂಬ ಸ್ಕೆಚ್ ಕಾಮೆಡಿ ಆಧಾರಿತ ಪಾತ್ರಗಳು ಈಗಾಗಲೇ ಸಮಾಜಿಕ ಜಾಲತಾಣದಲ್ಲಿ ಜುಲೈ ಇಂದ ಈಚೆಗೆ ಸದ್ದು ಮಾಡುತ್ತಿದ್ದು ಮುಂದಿನ ವಿಡಿಯೋಗೆ ಜನರು ಕಾತರದಿಂದ ಕಾಯುವಂತೆ ಮಾಡಿದೆ.

ಸಾದ್ ಖಾನ್ ಮತ್ತು ಶಾಲಿನಿ ಭೇಟಿಯಾಗಿದ್ದು….
ಸಾದ್ ಖಾನ್ ಅವರು ನಿರ್ದೇಶಿಸಿದ ‘ಹಂಬಲ್ ಪೊಲಿಟಿಷಿಯನ್ ನೋಗ್ರಾಜ್’ ಚಿತ್ರ ಅವರಿಗೆ ತಕ್ಕ ಮಟ್ಟಿಗೆ ಯಶಸ್ಸು ತಂದುಕೊಟ್ಟಿದ್ದಂತೂ ನಿಜ, ಈಗ ಅದೇ ಹೆಸರಿನಲ್ಲಿ ವೆಬ್ ಸೀರೀಸ್ ಹೊರಬರುತ್ತಿದ್ದು ಅದಕ್ಕೆ ಆಡಿಷನ್ ಕೊಡುವ ಸಲುವಾಗಿ ಶಾಲಿನಿ ಅವರು ಹೋಗಿರುತ್ತಾರೆ. ಅಲ್ಲಿ ಶಾಲಿನಿ ಅವರ ಪಾಪ ಪಾಂಡು ಧಾರಾವಾಹಿಯ ಬಗ್ಗೆಯಾಗಲೀ ಅಥವಾ ಅವರ ಜನಪ್ರಿಯತೆಯ ಬಗ್ಗೆಯಾಗಲೀ ಯಾವುದೇ ಅರಿವಿಲ್ಲದ ಸಾದ್ ಖಾನ್ ಗೆ ಈಕೆ ಒಬ್ಬರು ನಿರ್ದೇಶಕರ ನಟಿ ಎಂಬುದು ಅವರು ಕೊಟ್ಟ ಆಡಿಷನ್ನಿಂದ ಮನವರಿಕೆಯಾಗಿ ವೆಬ್ ಸೀರೀಸ್ ನ ಮುಖ್ಯ ಪಾತ್ರ ಒಂದಕ್ಕೆ ಆಯ್ಕೆ ಮಾಡುತ್ತಾರೆ. “ಶೂಟಿಂಗ್ ಶುರುವಾದ ಎರಡನೇ ದಿನಕ್ಕೆ ಶಾಲಿನಿಯವರ ಬಳಿ ಫೋಟೋ ತೆಗೆಸಿಕೊಳ್ಳಲು ಮುಗಿಬೀಳುತ್ತಿದ್ದ ಜನರನ್ನು ಗಮನಿಸಿದೆ, ನಂತರ ಸೆಟ್ ಹುಡುಗರಿಂದ ಶಾಲಿನಿ ಅವರ ಹಿನ್ನೆಲೆ ತಿಳಿದು ಶಾಕ್ ಆಗಿತ್ತು. ಅಷ್ಟು ದೊಡ್ಡ ಹೆಸರು ಮಾಡಿರುವ ನಟಿಯಾಗಿದ್ದರೂ ಯಾವುದೇ ಹಮ್ಮು ಬಿಮ್ಮು ತೋರದೇ ಆಡಿಷನ್ ಕೊಟ್ಟು ಸರಳತೆ ಮೆರೆದಿದ್ದ ಶಾಲಿನಿ ಅವರ ಬಗ್ಗೆ ಗೌರವವೂ ಮೂಡಿತು” ಎಂದು ಸಾದ್ ಖಾನ್ ಹೇಳಿದರು.

ಲೋಕಲ್ ಅಮ್ಮ ಫಾರಿನ್ ಮಗ ಕಾಮೆಡಿ ಸ್ಕೆಚ್ ಹುಟ್ಟಿದ ಬಗೆ..
ಶೂಟಿಂಗ್ ಮುಂದುವರೆದಂತೆ ಶಾಲಿನಿ ಅವರ ಕಾಮಿಕ್ ಟೈಮಿಂಗ್ ಬಗ್ಗೆ ತಿಳಿದುಕೊಂಡಿದ್ದ ಸಾದ್ ಖಾನ್ ಗೆ ಶಾಲಿನಿ ಅವರು ಕನ್ನಡ ಹೇಳಿಕೊಡುವ ಟೀಚರ್ ಆಗಿ ಹಾಗೆ ತಾನೊಬ್ಬ ಸ್ಟೂಡೆಂಟ್ ಆಗಿ ಒಂದು ಸ್ಕೆಚ್ ಕಾಮೆಡಿ ಮಾಡುವ ಐಡಿಯಾ ಹೊಳೆಯುತ್ತದೆ, ಅದೇ ಪರಿಕಲ್ಪನೆ ಇಟ್ಟುಕೊಂಡು ಫೇಸ್ಬುಕ್ ಲೈವ್ ನಲ್ಲಿ ಮಾಡಿದ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತ ನಂತರ ಅಂತಹುದೇ ಎರಡು ಮೂರು ಕನ್ನಡ ಪಾಠ ಹೇಳುವ ಸ್ಕೆಚ್ ಕಾಮೆಡಿ ವಿಡಿಯೋಗಳನ್ನೂ ಫೇಸ್ಬುಕ್ ಲೈವ್ ಮೂಲಕ ಮುಂದುವರೆಸಲಾಗುತ್ತದೆ. ಮೂರನೇ ಲೈವ್ ವಿಡಿಯೋದ ಕೊನೆಯಲ್ಲಿ ಪ್ರೇಕ್ಷಕರ ಸಲಹೆಯಂತೆ ಸಾದ್ ಖಾನ್ ಫಾರಿನ್ನಲ್ಲಿರುವ ಅರ್ಧಂಬರ್ಧ ಕನ್ನಡ ಬರುವ ಮಗ ಶೇಖರ ನಂತೆಯೂ ಹಾಗೆ ಶಾಲಿನಿ ಅವರು ಲೋಕಲ್ ಅಮ್ಮ ನಂತೆಯೂ ನಾಲ್ಕು ಐದು ನಿಮಿಷಗಳ ಕಾಲ ಸಂಭಾಷಣೆ ಮುಂದುವರೆಸುತ್ತಾರೆ. ಲೈವ್ ವಿಡಿಯೋ ಮುಗಿದ ನಂತರ ಆ ಸಂಭಾಷಣೆಯ ವಿಡಿಯೋ ತುಣುಕನ್ನು ಫೇಸ್ಬುಕ್ನಲ್ಲಿ ಹಾಕಿದ್ದೇ ಅದಕ್ಕೆ ಸುಮಾರು 1.2 ಮಿಲಿಯನ್ ವೀಕ್ಷಣೆ ಪಡೆಯುತ್ತದೆ. ತತಕ್ಷಣ ಯಾವುದೇ ಪೂರ್ವ ಸಿದ್ಧತೆ ಇಲ್ಲದೇ ಮಾಡಿದ ಸ್ಕೆಚ್ ಕಾಮೆಡಿಗೆ ದೊರೆತ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಕ್ಕಿದ ನಂತರ ಅದೇ ಎರಡು ಪಾತ್ರಗಳಿಟ್ಟುಕೊಂಡು ಇದುವರೆಗೂ ಸುಮಾರು ಹದಿಮೂರಕ್ಕೂ ಹೆಚ್ಚು ಕಾಮೆಡಿ ಸ್ಕೆಚ್ ಕಾಮೆಡಿ ವಿಡಿಯೋ ಗಳನ್ನೂ ಮಾಡಲಾಗಿದ್ದು ಎಲ್ಲ ವಿಡಿಯೋಗಳಿಗೂ ಒಳ್ಳೆ ಪ್ರತಿಕ್ರಿಯೆ ಸಿಗುತ್ತಿದೆ.

ಅಂದಹಾಗೆ ಶಾಲಿನಿ ಅವರು ‘ಲೋಕಲ್ ಅಮ್ಮ ಮತ್ತು ಫಾರಿನ್ ಮಗ ಶೇಖರ’ ದ ಕಂಟೆಂಟ್ ನ ಬಹುಪಾಲು ಕ್ರೆಡಿಟ್ ಸಾದ್ ಖಾನ್ ಅವರಿಗೆ ಸಲ್ಲಬೇಕು ಎನ್ನುತ್ತಾರೆ.
“ಪಾಪ ಪಾಂಡು ಧಾರಾವಾಹಿಯಲ್ಲಿ ಕಾಮೆಡಿ ಪಾತ್ರ ನಿರ್ವಹಿಸಿದ್ದ ನನಗೆ ಸಾದ್ ಅವರು ಸೃಷ್ಟಿಸಿದ ಪಾತ್ರಕ್ಕೆ ಒಗ್ಗಕೊಳ್ಳುವುದು ಕಷ್ಟವಾಗಲಿಲ್ಲ, ಅದೂ ಅಲ್ಲದೆ ಈ ರೀತಿಯಾದ ಸ್ಕೆಚ್ ಕಾಮೆಡಿ ಮಾಡುವುದರಲ್ಲಿ ನನಗಿದು ಹೊಸ ಅನುಭವ ಅಲ್ಲದೇ ಇಂತಹ ಸ್ಕೆಚ್ ಕಾಮೆಡಿ ಪರಿಕಲ್ಪನೆಯಲ್ಲಿ ಸಾದ್ ಅವರು ಒಂದು ರೀತಿ ಮಾಸ್ಟರ್ ಇದ್ದ ಹಾಗೆ, ನಾನು ಅವರ ವಿಧೇಯ ವಿಧ್ಯಾರ್ಥಿನಿ ಎಂದಷ್ಟೇ ಹೇಳಬಹುದು, ಜೊತೆಗೆ ಹೊಸ ಬಗೆಯಲ್ಲಿ ನನ್ನೊಳಗಿರುವ ಕಲೆಯನ್ನು ಪ್ರಸ್ತುತಪಡಿಸುವ ಅವಕಾಶ ಸಿಕ್ಕಿರುವುದು ಹಾಗೆ ಹೊಸದನ್ನು ಕಲಿಯುತ್ತಿರುವುದು ನನಗೆ ತುಂಬಾನೇ ಖುಷಿ ಕೊಟ್ಟಿದೆ” ಎಂದರು.

ಸಾದ್ ಖಾನ್ ಮಾತನಾಡುತ್ತಾ “ಶಾಲಿನಿ ಅವರ ಸ್ಪೀಡ್ ನನಗೆ ತುಂಬಾ ಹಿಡಿಸುತ್ತದೆ, ಪಾತ್ರದ ವಿವರಣೆ ನೀಡಿದ ಕೂಡಲೇ ಅದನ್ನು ಕೂಡಲೇ ಗ್ರಹಿಸಿ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಕೊಡುವುದು ಅವರಿಗೆ ಸಿದ್ಧಿಸಿದೆ, ಇದೆ ಅವರ ಶಕ್ತಿ, ಅದೂ ಅಲ್ಲದೆ ಚಿತ್ರರಂಗದಲ್ಲಿ ಇಷ್ಟು ಅನುಭವ ಇದ್ದರೂ ಸಹ ಹೊಸ ವಿಷಯಗಳನ್ನು ಯಾವುದೇ ಅಹಂ ಇಲ್ಲದೇ ನನ್ನಂತಹ ಹೊಸಬರ ಜೊತೆ ಬೆರೆತು ಕಲಿಯುವ ಗುಣ ನಿಜಕ್ಕೂ ಶ್ಲಾಘನೀಯ. ಅಂದಹಾಗೆ ಈ ಎರಡು ಪಾತ್ರದ ಜೊತೆ ಜೊತೆಗೆ ಇನ್ನೂ ಕೆಲವು ಪಾತ್ರಗಳನ್ನು ಸೃಷ್ಟಿಸುವ ಇರಾದೆ ಇದ್ದು ಜನ ಇಷ್ಟಪಟ್ಟರೆ ಇದನ್ನೇ ಮುಂದೆ ವೆಬ್ ಸೀರೀಸ್ ಮೂಲಕ ಹೊರತರುವ ಯೋಜನೆ ಸಹ ನನ್ನ ತಲೆಯಲ್ಲಿದೆ” ಎಂದರು. ಈ ಮೊದಲು ಸಾದ್ ಖಾನ್ ಮಾತು ಡ್ಯಾನಿಶ್ ಸೇಠ್ ಇಬ್ಬರೂ ಸ್ಕೆಚ್ ಕಾಮೆಡಿ ಮೂಲಕ ಸೃಷ್ಟಿಸಿದ್ದ ‘ ನೋಗ್ರಜ್ ‘ ಪಾತ್ರ ಮುಂದೆ ಸಿನಿಮಾ ಆಗಿ ಈಗ ವೆಬ್ ಸೀರೀಸ್ ರೂಪದಲ್ಲಿ ಹೊರಬರುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.
ಕೇವಲ ಹಾಸ್ಯ ಮಿಶ್ರಿತ ಪಾತ್ರದಿಂದಲೇ ಗುರುತಿಸಿಕೊಂಡಿರುವ ಶಾಲಿನಿ ಅವರು ಸಾದ್ ಖಾನ್ ನಿರ್ದೇಶನವಿರುವ ‘ಹಂಬಲ್ ಪೊಲಿಟಿಷಿಯನ್ ನೋಗ್ರಾಜ್’ ವೆಬ್ ಸೀರೀಸ್ ನಲ್ಲಿ ಪ್ರೇಕ್ಷಕರು ಇದುವರೆಗೂ ಊಹಿಸದ ತದ್ವಿರುದ್ಧ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಇಬ್ಬರಿಗೂ ಒಳ್ಳೆಯದಾಗಲಿ ಎಂಬುದು ನಮ್ಮ ಆಶಯ.

ಲೇಖಕರು : ಸುಜಯ್ ಬೆದ್ರ