ನಿನ್ನೆ ಸೋಮವಾರ 60ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡ ಸಿದ್ದರಾಜು ಕಲ್ಯಾಣ್ಕರ್ ರಾತ್ರಿ ಹೊತ್ತಿಗೆ ನಿಧನರಾಗಿದ್ದಾರೆ! ಬಹುಶಃ ವಿಧಿ ವಿಪರ್ಯಾಸ ಎನ್ನುವುದು ಇದಕ್ಕೇ ಇರಬಹುದು. ಅವರ ಸಾವಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿರುವುದೇ ಕಾರಣ ಎಂದು ತಿಳಿದು ಬಂದಿದೆ.
ಸ್ಟಾರ್ ಸುವರ್ಣ ವಾಹಿನಿಯ `ಪ್ರೇಮಲೋಕ’ ಧಾರಾವಾಹಿಯಲ್ಲಿ ನಿನ್ನೆಯೂ ನಟಿಸಿದ್ದ ಸಿದ್ದರಾಜು ಅವರು, ಸೆಟ್‌ನಲ್ಲಿಯೇ ಜನ್ಮದಿನದ ಸಂಭ್ರಮವನ್ನು ಆಚರಿಸಿದ್ದರು. ಘಟನೆಯ ಬಗ್ಗೆ ಸಿನಿ ಕನ್ನಡ.ಕಾಮ್ ಜತೆ ಮಾತನಾಡಿದ ಸಿದ್ದರಾಜು ಅವರ ಪುತ್ರ ಪ್ರಜ್ವಲ್ ಅವರು, “ನಮ್ಮ ಮನೆ ಇರುವುದು ಚಂದ್ರಾ ಲೇಔಟ್ ನಲ್ಲಿ. ಅವರು ಶೂಟಿಂಗ್ ನಿಂದ ಮನೆಗೆ ಬಂದವರು ಖುಷಿಯಲ್ಲೇ ಇದ್ದರು. ಆದರೆ ರಾತ್ರಿ ಹತ್ತು ಗಂಟೆ ಸುಮಾರಿಗೆ ವಾಂತಿ ಮಾಡಿಕೊಂಡರು. ವಾಂತಿಯಲ್ಲಿ ರಕ್ತ ಹೋಯಿತು ಎನ್ನುವ ಕಾರಣಕ್ಕೆ ನಾನು ನಮ್ಮನೆ ಪಕ್ಕದಲ್ಲೇ ಇರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ರಾತ್ರಿ ಹನ್ನೊಂದು ಕಾಲು ಆಗುವಷ್ಟರಲ್ಲೇ ತಂದೆ ನಿಧನರಾಗಿರುವುದಾಗಿ ಡಾಕ್ಟರ್ ತಿಳಿಸಿದ್ದಾರೆ. ನಾವು ಈಗ ತಂದೆಯ ಪಾರ್ಥಿವ ಶರೀರದ ಜತೆಗೆ ನಮ್ಮೂರು ಹುಬ್ಬಳ್ಳಿಗೆ ಬಂದಿದ್ದೇವೆ. ಇಲ್ಲೇ ಅಂತ್ಯಕ್ರಿಯೆಗಳನ್ನು ನಡೆಸಲಿದ್ದೇವೆ” ಎಂದರು.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ `ಪ್ರೇಮಲೋಕ’ ಧಾರಾವಾಹಿಯ ನಾಯಕ ವಿಜಯಸೂರ್ಯ, “ಇದು ನನಗೆ ದೊಡ್ಡಶಾಕ್” ಎಂದರು. ನಿನ್ನೆ ಅವರೊಂದಿಗೆ ನನ್ನ ಜನ್ಮದಿನವೂ ಇತ್ತು. ಇಬ್ಬರೂ ಸೇರಿ ಒಟ್ಟಿಗೇ ಬರ್ತ್ ಡೇ ಮಾಡಿಕೊಂಡಿದ್ದೆವು. ಸಂಜೆ ಶೂಟಿಂಗ್ ಮುಗಿಸಿ ಬರುವಾಗ ಬಾಯ್ ಅಂಕಲ್ ಎಂದು ಹೇಳಿ ಬಂದಿದ್ದೆ. ಇಂದು ಅವರನ್ನು ಕರೆದುಕೊಂಡು ಬರಲು ಪ್ರೊಡಕ್ಷನ್ ಗಾಡಿ ಹೋದಾಗಲೇ ಈ ವಿಚಾರ ಗೊತ್ತಾಗಿದ್ದು. ನನಗೆ ಈಗಲೂ ನಂಬುವುದು ಕಷ್ಟವಾಗುತ್ತಿದೆ” ಎಂದರು. ಇದರ ನಡುವೆ ನಿನ್ನೆ ಆಚರಿಸಿದ ಜನ್ಮದಿನದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಧಾರಾವಾಹಿಯಲ್ಲಿ ಸಿದ್ದರಾಜು ಅವರು ವಿಜಯ್ ಸೂರ್ಯನ ತಾತನ ಪಾತ್ರ ಮಾಡುತ್ತಿದ್ದರು. ಈಗಾಗಲೇ ಅದರಲ್ಲಿ ಮತ್ತೋರ್ವ ತಾತನ ಪಾತ್ರ ಮಾಡುತ್ತಿದ್ದ ಹುಲಿವಾನ್ ಗಂಗಾಧರಯ್ಯ ಅವರು ಕೊರೊನ ಕಾರಣದಿಂದ ನಿಧನರಾಗಿದ್ದು ಪ್ರೇಮಲೋಕ ತಂಡ ಶೋಕಲೋಕದಲ್ಲಿ ಮುಳುಗಿದೆ.
1993ರಲ್ಲಿ ಬಿ ಸುರೇಶ್ ಅವರ ನಿರ್ದೇಶನದ ಪ್ರಥಮ ಧಾರಾವಾಹಿ ‘ಹೊಸ ಹೆಜ್ಜೆ' ಮೂಲಕ ಕಿರುತೆರೆ ಪ್ರವೇಶಿಸಿದ್ದರು. ರಂಗಭೂಮಿಯಲ್ಲಿನ ಸಿದ್ದರಾಜು ಅವರ ನಟನೆಯನ್ನು ನೋಡಿಯೇ ಧಾರಾವಾಹಿಗೆ ಆರಿಸಿಕೊಂಡಿರುವುದಾಗಿ ಬಿ ಸುರೇಶ್ ಹೇಳಿಕೊಂಡಿದ್ದರು. ಅಲ್ಲಿಂದ ಇದುವರೆಗೆ ಮೂರು ದಶಕಗಳ ಕಾಲ ಸಾಕಷ್ಟು ಪಾತ್ರಗಳನ್ನು ಮಾಡಿ ಗುರುತಿಸಿಕೊಂಡಿದ್ದರು. ಅದರಲ್ಲಿ ಟಿ.ಎನ್ ಸೀತಾರಾಮ್ ನಿರ್ದೇಶನದ '
ಮುಕ್ತ’ ಧಾರಾವಾಹಿ ಪ್ರಮುಖವಾದದ್ದು. ಅದರಲ್ಲಿ ಹಿರಿಯ ನಟಿ ಭಾರ್ಗವಿ ನಾರಾಯಣ್ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು ಸಿದ್ದರಾಜು. ಭಾರ್ಗವಿಯವರ ಮಗನ ವಯಸ್ಸಿನ ಯುವಕನನ್ನು ಜೋಡಿಯಾಗಿ ಆಯ್ಕೆ ಮಾಡಿ ನಂಬಿಸುವಲ್ಲಿ ನಿರ್ದೇಶಕರ ಜಾಣ್ಮೆ ಇತ್ತು. ಈ ಬಗ್ಗೆ ಸಿನಿಕನ್ನಡ.ಕಾಮ್ ಜತೆ ಮಾತನಾಡಿದ ನಿರ್ದೇಶಕ ಟಿಎನ್ ಸೀತಾರಾಮ್ ಅವರು, “ನನಗೆ ಸಿದ್ದರಾಜು ಅವರ ಗಂಭೀರವಾದ ಕಂಠದಲ್ಲಿ, ಕರುಣೆ ತುಂಬಿದ ಮುಖದಲ್ಲಿ ಹಿರಿತನ ಕಂಡಿತ್ತು. ಹಾಗಾಗಿ ಆ ಪಾತ್ರಕ್ಕೆ ಆಯ್ಕೆ ಮಾಡಿದ್ದೆ. ಅದರಲ್ಲಿ ಅವರು ನಟಿಸಿದ ರೀತಿ ಸಾಕಷ್ಟು ಹೆಸರು ತಂದು ಕೊಟ್ಟಿತ್ತು. ಇದೀಗ ನಾನು ಹೊಸ ಪ್ರಾಜೆಕ್ಟ್ ತಯಾರಿಯಲ್ಲಿದ್ದೀನಿ. ಅದರಲ್ಲಿ ಕೂಡ ಅವರಿಗೊಂದು ತುಂಬ ಪ್ರಮುಖ ಪಾತ್ರವನ್ನೇ ತಯಾರು ಮಾಡಿದ್ದೆ. ನಮ್ಮ ಟೀಮ್ ಅವರೊಂದಿಗೆ ಮಾತನಾಡಿ ಪಾತ್ರಕ್ಕೆ ಫಿಕ್ಸ್ ಮಾಡಿಯೂ ಆಗಿತ್ತು. ಇಷ್ಟು ಬೇಗ ನಮ್ಮನ್ನು ಅಗಲಿ ಹೋಗುತ್ತಾರೆಂದು ಖಂಡಿತವಾಗಿ ನಿರೀಕ್ಷೆ ಮಾಡಿರಲಿಲ್ಲ” ಎಂದು ದುಃಖ ವ್ಯಕ್ತಪಡಿಸಿದರು.
ಧಾರಾವಾಹಿ ಮಾತ್ರವಲ್ಲದೆ ಸಾಕಷ್ಟು ಸಿನಿಮಾಗಳಲ್ಲಿಯೂ ನಟಿಸಿದ್ದ ಸಿದ್ದರಾಜು ಅವರ ನಟನೆಯನ್ನು ‘ಹೃದಯಾ ಹೃದಯಾ’ ಸಿನಿಮಾ ನೋಡಿದವರು ಮರೆಯಲಾರರು.
ಮೃತರು ಪತ್ನಿ ಮೀನಾಕ್ಷಿ ಕಲ್ಯಾಣ್ಕರ್ ಮತ್ತು ಪ್ರಜ್ವಲ್ ಮತ್ತು ಶ್ರೇಯಾಂಕ್ ಎನ್ನುವ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.