ತೆಲುಗಿನ ಹಿರಿಯ ನಟ ಜಯಪ್ರಕಾಶ್ ರೆಡ್ಡಿ ನಿಧನರಾಗಿದ್ದಾರೆ. ಎಪ್ಪತ್ತನಾಲ್ಕು ವರ್ಷ ವಯಸ್ಸಿನವರಾಗಿದ್ದ ಜಯಪ್ರಕಾಶ್ ರೆಡ್ಡಿಯವರು ಇಂದು ಮುಂಜಾನೆ ಟಾಯ್ಲೆಟ್‌ಗೆಂದು ಹೋದವರು ಅಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
‘ಬ್ರಹ್ಮಪುತ್ರುಡು' ಎನ್ನುವ ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದ ಜಯಪ್ರಕಾಶ್ ರೆಡ್ಡಿಯವರನ್ನು ವೆಂಕಟೇಶ್ ನಾಯಕರಾಗಿ ನಟಿಸಿದ '
ಪ್ರೇಮಿಂಚಿಕೊಂದಾಂ ರಾ’ ಹೆಚ್ಚು ಗುರುತಿಸುವಂತೆ ಮಾಡಿತು. `ರಾಯಲ ಸೀಮ ಮಾಂಡಲಿಕಂ’ ಸೇರಿದಂತೆ ಅವರ ಚಿತ್ರಗಳ ಸಂಭಾಷಣೆಯ ಶೈಲಿಯೇ ವಿಶೇಷ ಆಕರ್ಷಣೆಯಾಗಿತ್ತು. ಪೋಷಕ ನಟ, ಹಾಸ್ಯನಟ, ಖಳನಟರಾಗಿರಾಗಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ ಖ್ಯಾತಿ ಅವರದು. ಎಲ್ಲ ಪಾತ್ರಗಳಲ್ಲಿಯೂ ರಾಯಲ ಸೀಮ ಭಾಷೆಯ ಮೂಲಕವೇ ಜನಪ್ರಿಯರಾಗಿದ್ದು ಅವರ ವಿಶೇಷತೆ. ಹಾಸ್ಯವಾದರೂ, ಖಳನ ಪಾತ್ರಗಳಾದರೂ ತಮ್ಮದೇ ಶೈಲಿಯ ಸಂಭಾಷಣೆ, ನೋಟಗಳಿಂದ ಗುರುತಿಸಲ್ಪಟ್ಟಿದ್ದ ನಟ ಜಯಪ್ರಕಾಶ ರೆಡ್ಡಿಯವರ ನಿಧನಕ್ಕೆ ನಿರ್ದೇಶಕ ರಾಜಮೌಳಿ, ನಟ ಜ್ಯೂನಿಯರ್ ಎನ್ ಟಿ ಆರ್, ಪ್ರಕಾಶ್ ರೈ ಸೇರಿದಂತೆ ಚಿತ್ರರಂಗದ ಗಣ್ಯರೆಲ್ಲ ವಿಷಾದ ವ್ಯಕ್ತಪಡಿಸಿದ್ದಾರೆ.
ಕನ್ನಡದಲ್ಲಿ ಡಾ. ಶಿವರಾಜ್ ಕುಮಾರ್ ನಟನೆಯ ‘ಸತ್ಯ ಇನ್ ಲವ್' ಸೇರಿದಂತೆ
ಶ್ವೇತ ನಾಗರ’ ಮತ್ತು ಸಿಟಿಜನ್' ಮೊದಲಾದ ಚಿತ್ರಗಳಲ್ಲಿ ನಟಿಸಿರುವ ಜಯಪ್ರಕಾಶ್ ರೆಡ್ಡಿಯವರು ಮೂಲತಃ ಗಣಿತ ಮತ್ತು ಇಂಗ್ಲಿಷ್ ಭಾಷೆಯ ಶಿಕ್ಷಕರಾಗಿ, ಶಾಲೆಯ ಪ್ರಧಾನ ಶಿಕ್ಷಕರಾಗಿ ಕೆಲಸ ಮಾಡಿದ್ದರು. ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದ ಅವರು ಬಳಿಕ ಸಿನಿಮಾದಲ್ಲಿ ಅವಕಾಶ ಪಡೆದುಕೊಂಡರು.
ಸಮರ ಸಿಂಹ ರೆಡ್ಡಿ’, ‘ನರಸಿಂಹ ನಾಯ್ಡು’ `ಗಬ್ಬರ್ ಸಿಂಗ್’ ಸೇರಿದಂತೆ ಅಸಂಖ್ಯಾತ ಚಿತ್ರಗಳಲ್ಲಿ ಅವಿಭಾಜ್ಯ ಅಂಗವಾಗಿದ್ದ ಜಯಪ್ರಕಾಶ್ ರೆಡ್ಡಿಯವರು ಈ ವರ್ಷ ತೆರೆಕಂಡ ಮಹೇಶ್ ಬಾಬು ನಟನೆಯ ‘ಸರಿಲೇರು ನೀಕೆವರು’ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.
ಲಾಕ್ಡೌನ್ ಸಂದರ್ಭದಲ್ಲಿ ಗುಂಟೂರಿನ ತಮ್ಮ ತವರಿಗೆ ಮರಳಿದ್ದ ಅವರು ಪತ್ನಿ ರಾಜಲಕ್ಷ್ಮಿ ಮತ್ತು ಪುತ್ರ ವಿಫುಲ್ ಚಂದ್ರಪ್ರಕಾಶ್ ರೆಡ್ಡಿ ಜತೆಗೆ ವಾಸವಾಗಿದ್ದರು. ಈ ನಡುವೆ ಮಗ ಮತ್ತು ಸೊಸೆಗೆ ಕೊರೊನ ಪಾಸಿಟಿವ್ ಬಂದಾಗ ತಾವು ಕೂಡ ಕೊರೊನ ಟೆಸ್ಟ್‌ಗೆ ವಿಧೇಯರಾಗಿದ್ದರು. ಆದರೆ ಜಯಪ್ರಕಾಶ್ ರೆಡ್ಡಿಯವರಿಗೆ ನೆಗೆಟಿವ್ ಬಂದಿತ್ತು. ಹಾಗಿದ್ದರೂ ಅಂತರ ಕಾಯ್ದುಕೊಂಡು ಎಚ್ಚರಿಕೆ ಪಾಲಿಸಿದ್ದರು. ರೆಡ್ಡಿಯವರ ಅಣ್ಣತಮ್ಮಂದಿರು ಮತ್ತು ಸಹೋದರಿಯರು ವಿದೇಶದಲ್ಲಿದ್ದಾರೆ. ಇಂದು ಅಪರಾಹ್ನ ಮೃತರ ಅಂತ್ಯ ಕ್ರಿಯೆಯು ಗುಂಟೂರಿನಲ್ಲೇ ನಡೆಯಲಿರುವುದಾಗಿ ತಿಳಿದು ಬಂದಿದೆ.