
ಲಾಕ್ ಡೌನ್ ಸಂದರ್ಭದಲ್ಲಿ ಚಿತ್ರೀಕರಣ ಗೊಂಡಿರುವ ರಿಷಬ್ ಶೆಟ್ಟಿ ಹಾಗೂ ಗಾನವಿ ಲಕ್ಷ್ಮಣ್ ಮುಖ್ಯ ಭೂಮಿಕೆಯಲ್ಲಿರುವ ‘ಹೀರೋ’ ಚಿತ್ರದ
ಫಸ್ಟ್ ಲುಕ್ ಪೋಸ್ಟರ್ ಇಂದು ಬಿಡುಗಡೆಯಾಗಿದೆ.
ಅದನ್ನು ಕಂಡೊಡನೆ ಕಥೆಯ ಬಗ್ಗೆ ಕುತೂಹಲ ಮೂಡಿಸುವಂತಿದೆ. ಪ್ರಸ್ತುತ ಸದಭಿರುಚಿಯ ಚಿತ್ರಗಳನ್ನು ತೆರೆಗೆ ತರುವಲ್ಲಿ ಮುಂಚೂಣಿಯಲ್ಲಿರುವ ರಿಷಬ್ ಶೆಟ್ಟಿ ಅವರೇ ಈ ಚಿತ್ರಕ್ಕೆ ಹಣ ಹೂಡುತ್ತಿರುವುದು ವಿಶೇಷ. ಚಿತ್ರದ ನಿರ್ದೇಶಕ ಭರತ್ ರಾಜ್ ಅವರೊಂದಿಗೆ ಸಿನಿ ಕನ್ನಡ. ಕಾಮ್ ನಡೆಸಿರುವ ವಿಶೇಷ ಸಂದರ್ಶನ ಇದು.

ಹೀರೋ ಚಿತ್ರ ರೂಪುಗೊಂಡ ಬಗೆ ಹೇಗೆ?
ಹೀರೋ ಚಿತ್ರದ ಸ್ಕ್ರಿಪ್ಟ್ ಅನ್ನು ಬಹಳ ಹಿಂದೆಯೇ ಸಿದ್ಧ ಮಾಡಿ ಇಟ್ಟುಕೊಂಡಿದ್ದೆ. ಸಂದರ್ಭ ಬಂದಾಗ ಕೈಗೆತ್ತಿಕೊಳ್ಳೋಣ ಎಂದುಕೊಂಡು ಸುಮ್ಮನಿದ್ದೆ. ಮಾರ್ಚ್ ನಲ್ಲಿ ಲಾಕ್ಡೌನ್ ಜಾರಿಯಾದ ಕಾರಣ ಬೇರೆ ಯಾವುದೇ ಚಿತ್ರದ ಕೆಲಸ ಶುರುವಾಗುವಂತಿರಲಿಲ್ಲ, ಲಭ್ಯವಿರುವ ಪರಿಕರಗಳನ್ನು ಗಮನದಲ್ಲಿಟ್ಟುಕೊಂಡು ಅಲ್ಪ
ಸಮಯದಲ್ಲಿ ಈ ಕಥೆಯನ್ನು ಮಾಡಬಹುದು ಎಂದೆಣಿಸಿ ರಿಷಬ್ ಶೆಟ್ಟಿ ಅವರೊಂದಿಗೆ ಚರ್ಚಿಸಿ ಚಿತ್ರೀಕರಣ ಶುರುಮಾಡಿದೆವು. ಸುಮಾರು ನಲವತ್ತರಿಂದ ನಲವತ್ತೈದು ದಿನದಲ್ಲಿ ಮುಗಿಸಿದ ಚಿತ್ರವಿದು.

ಚಿತ್ರದ ಕಥೆ ಮತ್ತು ತಾರಾಗಣದ ಬಗ್ಗೆ ಹೇಳಿ!
ಈ ಚಿತ್ರದಲ್ಲಿ ಕಾಮಿಡಿ, ಥ್ರಿಲ್ಲರ್ ಹಾಗೂ ಆಕ್ಷನ್ ಎಲ್ಲವೂ ಇದೆ, ಹಾಗಾಗಿ ಸಂಪೂರ್ಣ ಮನೋರಂಜನಾತ್ಮಕ ಚಿತ್ರ ಎನ್ನಬಹುದು. ಈ ಚಿತ್ರದ ಮುಖ್ಯ ಪಾತ್ರಧಾರಿ ರಿಷಬ್ ಶೆಟ್ಟಿ
ತೀರಾ ದುರ್ಬಲ ಹಿನ್ನೆಲೆಯಿಂದ ಬಂದಿರುವ ಉಡಾಫೆ ವ್ಯಕ್ತಿತ್ವದ ಮನುಷ್ಯನಾಗಿ ಕಾಣಿಸಿಕೊಂಡಿದ್ದು ಹೇಗೆ ಪರಿಸ್ಥಿತಿಗಳ ಪ್ರಭಾವಕ್ಕೆ ಒಳಗಾಗಿ ಹೀರೋ ಆಗುತ್ತಾನೆ ಎಂಬುವುದೇ ಚಿತ್ರದ ಕಥೆ ಮತ್ತು ಜೀವಾಳ. ಚಿತ್ರದುದ್ದಕ್ಕೂ ನಾಯಕನಿಗೆ ಸವಾಲಾಗಬಲ್ಲಂತಹ ಸಂದರ್ಭಗಳು ಎದುರಾಗಿ ಪೋಸ್ಟರ್ನಲ್ಲಿ ಕಾಣುವಂತೆ ಅಡ್ಡಕತ್ತರಿಯಲ್ಲಿ ಸಿಕ್ಕಿಹಾಕಿಕೊಳ್ಳುವ ಪರಿಸ್ಥಿತಿಯನ್ನು ಹಾಗೆ ಕಥಾನಾಯಕ ಅದನ್ನು ಹೇಗೆ ನಿಭಾಯಿಸುತ್ತಾನೆ ಎಂಬುವುದನ್ನು ತುಂಬಾ ಮಜವಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ. ‘ಮಗಳು ಜಾನಕಿ’ ಧಾರಾವಾಹಿಯ ಗಾನವಿ ಲಕ್ಷ್ಮಣ್ ಚಿತ್ರದ ನಾಯಕಿ. ಚಿತ್ರದ ಕಥೆ ನಾಯಕಿಯ ಸುತ್ತಲೇ ಗಿರಕಿ ಹೊಡೆಯುವ ಕಾರಣ ಅವರ ಪಾತ್ರಕ್ಕೆ ಬಹಳ ಮಹತ್ವವಿದೆ. ಉಳಿದಂತೆ ಪ್ರಮೋದ್ ಶೆಟ್ಟಿ ಒಂದು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ, ಚಿತ್ರದ ಉಳಿದ ಪಾತ್ರಗಳ ಬಗ್ಗೆ ಮುಂದಿನ ದಿನಗಳಲ್ಲಿ ನಿಮಗೇ ತಿಳಿಯುತ್ತದೆ.
ಚಿತ್ರದ ಹಾಡುಗಳು ಮತ್ತು ಆಕ್ಷನ್ ಬಗ್ಗೆ ಹೇಳಿ!
ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದಾರೆ. ಎಲ್ಲಾ ಹಾಡುಗಳು ಸಂದರ್ಭಕ್ಕೆ ತಕ್ಕಂತೆ ಇರಲಿದ್ದು ಸುಮ್ಮನೆ ಒಂದು ಹಾಡು ಎಂದು ತೂರಿಸುವ ಪ್ರಯತ್ನ ಮಾಡಿಲ್ಲ. ಚಿತ್ರದ ಅಕ್ಷ್ಯನ್ ಒಂದು ಕಮರ್ಶಿಯಲ್ ಚಿತ್ರದ ಶೈಲಿಯಲ್ಲಿರದೆ ಕಥೆಗೆ ಪೂರಕವಾಗಿ ನೈಜವಾಗಿ ಇರಲಿವೆ. ‘ಅವನೇ ಶ್ರೀಮನ್ನಾರಾಯಣ’ ಚಿತ್ರಕ್ಕೆ ಕೆಲಸ ಮಾಡಿದ್ದ ವಿಕ್ರಂ ಮೋರ್ ಈ ಚಿತ್ರದ ಆಕ್ಷನ್ ದೃಶ್ಯಗಳನ್ನು ಸಂಯೋಜಿಸಿದ್ದಾರೆ.

ನಿಮ್ಮ ಹಾಗೂ ರಿಷಬ್ ಶೆಟ್ಟಿಯವರ ಪರಿಚಯ ಹೇಗಾಯಿತು!?
ಒಂದೊಮ್ಮೆ ‘ರಿಕ್ಕಿ’ ಚಿತ್ರದ ನಿರ್ದೇಶನ ತಂಡದ ಆಡಿಷನ್ ಗಾಗಿ ಬಳ್ಳಾರಿಯಿಂದ ಬೆಂಗಳೂರಿಗೆ ಬಂದಿದ್ದೆ. ಆದರೆ ಅಲ್ಲಿ ಆಡಿಶನ್ ನಡೆಯುತ್ತಿದ್ದುದು ಚಿತ್ರದ ಪೋಷಕ ಪಾತ್ರಗಳಿಗಾಗಿ. ಆ ಸಮಯದಲ್ಲಿ ರಿಷಬ್ ಅವರು ತುಂಬಾ ದೂರದಿಂದ ಬಂದಿದ್ದೆ ಎಂಬ ಕಾರಣಕ್ಕೆ ನನ್ನನ್ನು ಮಾತಾಡಿಸಿ ಕಳಿಸಿದ್ದರು. ಎಂಜಿನಿಯರಿಂಗ್ ಮುಗಿದ ನಂತರ ನಾಲ್ಕು ವರ್ಷ ಕೆಲಸ ಮಾಡಿದೆ. ಕೆಲಸ ಬಿಟ್ಟ ನಂತರ ಬೆಂಗಳೂರಿನಲ್ಲಿ ನಡೆಯುವ ಫಿಲ್ಮ್ ಫೆಸ್ಟಿವಲ್ಗಳ ಆಯೋಜಕರ ತಂಡದಲ್ಲಿ ಕೆಲಸ ಮಾಡುತ್ತಿದ್ದೆ, ಹಾಗೆ ‘ಉಳಿದವರು ಕಂಡಂತೆ’ ಚಿತ್ರಕ್ಕೆ ಕೆಲಸ ಮಾಡಿದ್ದ ರಾಹುಲ್ ಎಂಬ ಸ್ನೇಹಿತರ ಮೂಲಕ ರಿಷಬ್ ಶೆಟ್ಟಿ ಅವರ ಪರಿಚಯವಾಯಿತು. ಒಡನಾಟ ಮುಂದುವರಿದು ‘ಸ. ಹಿ. ಪ್ರಾ. ಶಾಲೆ ಕಾಸರಗೋಡು’ ಚಿತ್ರಕ್ಕೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಅವರದೇ ನಿರ್ಮಾಣದ ‘ಕಥಾಸಂಗಮ’ ಚಿತ್ರದಲ್ಲಿ ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯಾ ಅಭಿನಯಿಸಿದ್ದ ಕಿರುಚಿತ್ರಕ್ಕೆ ಅಸೋಸಿಯೇಟ್ ಡೈರೆಕ್ಟರ್ ಆಗಿದ್ದೆ ಈಗ ‘ಹೀರೋ’ಗೆ ನಿರ್ದೇಶಕನಾಗುವ ತನಕ ಬಂದು ನಿಂತಿದೆ.

ನಿಮ್ಮ ಮುಂದಿನ ಯೋಜನೆಗಳ ಬಗ್ಗೆ ಹೇಳಿ!
ಪ್ರಮೋದ್ ಶೆಟ್ಟಿ ಅಭಿನಯದ ರಿಷಬ್ ಶೆಟ್ಟಿ ನಿರ್ಮಾಣವಿರುವ ‘ಲಾಫಿಂಗ್ ಬುದ್ಧ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದೀನಿ. ಅಂದಹಾಗೆ ನಿರ್ದೇಶಕನಾಗಿ ಇದೇ ನನ್ನ ಮೊದಲ ಚಿತ್ರವಾಗಿರಬೇಕಿತ್ತು ಆದರೆ ಲಾಕ್ ಡೌನ್ ಆದ ಕಾರಣ ಹೀರೋ ಕಥೆಯನ್ನು ಮೊದಲು ಕೈಗೆತ್ತಿಕೊಂಡೆವು.
ಅದು ಬಿಟ್ಟರೆ ಹೀರೋ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಬೇಕಾಗಿದೆ. ದಿನಗಳೆದಂತೆ ಟೀಸರ್ ಟ್ರೇಲರ್ ಮತ್ತು ಹಾಡುಗಳನ್ನು ಒಂದೊಂದಾಗಿ ಬಿಡುಗಡೆ ಮಾಡುವ ಚಿಂತನೆ ಇದೆ. ಚಿತ್ರದ ಬಿಡುಗಡೆ ಬಗ್ಗೆ ಇನ್ನಷ್ಟೇ ತೀರ್ಮಾನ ಆಗಬೇಕಿದೆ.
ಸಂದರ್ಶಕರು – ಸುಜಯ್ ಬೆದ್ರ