
ಕೆ.ಜಿ.ಎಫ್ ಚಿತ್ರದ ಎರಡನೇ ಭಾಗದಲ್ಲಿ ಪ್ರಕಾಶ್ ರೈ ಇದ್ದಾರೆ ಎನ್ನುವ ಕಾರಣಕ್ಕೆ ಕೆಲವರು ಸಿನಿಮಾ ನೋಡುವುದಿಲ್ಲ ಎಂದು ತೀರ್ಮಾನ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸ್ವತಃ ಪ್ರಕಾಶ್ ರೈ ಅವರಿಗೆ ಏನು ಅನಿಸುತ್ತದೆ? `ರಾಜಕೀಯದಲ್ಲಿ ಒಬ್ಬ ಅಭ್ಯರ್ಥಿಯನ್ನು ಆರಿಸಬೇಕಾದಾಗ ಆತನ ಸಿದ್ಧಾಂತಗಳ ಬಗ್ಗೆ ಯೋಚಿಸಬೇಕಾದ ಅಗತ್ಯ ಇದೆ. ಸಿನಿಮಾ ನೋಡುವಾಗ ಚಿತ್ರ ಹೇಗಿದೆ ಎನ್ನುವುದಷ್ಟೇ ನಿಜವಾದ ಪ್ರೇಕ್ಷಕನಿಗೆ ಅಗತ್ಯವಾಗುವ ವಿಚಾರ. ನಮ್ಮ ಕರ್ನಾಟಕದಲ್ಲಿ ಒಬ್ಬ ಸಿನಿಮಾ ನಟ ಚುನಾವಣೆಗೆ ನಿಂತಾಗ ಆತನ ಅಭಿಮಾನಿಗಳೆಲ್ಲರೂ ಕಣ್ಮುಚ್ಚಿ ವೋಟ್ ಮಾಡುವುದಿಲ್ಲ. ಆತ ಸಮಾಜ ಸೇವೆ ಮಾಡಬಲ್ಲನಾ? ಆತ ನಿಂತ ಪಕ್ಷದ ನಿಲುವು ನಮಗೆ ಒಪ್ಪಿಗೆ ಇದೆಯಾ ಎನ್ನುವುದನ್ನೆಲ್ಲ ಗಮನಿಸುತ್ತಾರೆ. ತಾರೆಯ ಮೇಲಿನ ಅಭಿಮಾನ ಸಿನಿಮಾದ ನಟನೆಗಷ್ಟೇ ಸೀಮಿತ ಎಂದು ತೋರಿಸಬಲ್ಲ ಬುದ್ಧಿವಂತಿಕೆ ಮತದಾರರಿಗೆ ಇದೆ. ಹಾಗಿರಬೇಕಾದರೆ ಸಿನಿಮಾ ನೋಡುವಾಗ ಕೂಡ ಆತನನ್ನು ಕಲಾವಿದನಾಗಿ ಮಾತ್ರ ನೋಡಬೇಕಾಗುತ್ತದೆ ಎನ್ನುವ ಸತ್ಯ ಕೆಲವರಿಗೆ ಏಕೆ ಇರುವುದಿಲ್ಲ? ಸಿದ್ಧಾಂತಗಳ ಕಾರಣಕ್ಕಾಗಿ ಯಾರ ಸಿನಿಮಾಗಳನ್ನು ನೋಡಬೇಕು ಎನ್ನುವ ಭಾವನಾತ್ಮಕ ಆಟ ಆಡುವ ಮಂದಿಗೆ ರಾಜಕಾರಣಿಗಳನ್ನು ಆರಿಸುವಾಗ ಈ ಸ್ಪಷ್ಟತೆ ಇದ್ದಿದ್ದರೆ ಚೆನ್ನಾಗಿತ್ತು.’ ಇಂಥದೊಂದು ನಿಲುವು ಬೇರೆ ಯಾರದ್ದೋ ಅಲ್ಲ; ಸ್ವತಃ ಪ್ರಕಾಶ್ ರೈ ಅವರದ್ದು. ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ವಿಶೇಷ ಸಂದರ್ಶನ ಇದು ಸಿನಿಕನ್ನಡದ ವಿಶೇಷ.
ನೀವು `ಕೆಜಿಎಫ್ 2′ ಚಿತ್ರದಲ್ಲಿದ್ದೀರಿ ಎನ್ನುವ ಕಾರಣಕ್ಕೆ ಸಿನಿಮಾ ನೋಡಲ್ಲ ಎನ್ನುವವರಿಗೆ ಏನಂತೀರಿ?
ಸಿನಿಮಾ ಬಗ್ಗೆ ಸಿನಿಮಾ ಹೇಳಬೇಕೇ ಹೊರತು ನಾನಲ್ಲ. ಒಂದು ದೊಡ್ಡ ಸಿನಿಮಾ ಬರುವ ಮೊದಲು ಎಷ್ಟೇ ಮಾತುಗಳಿದ್ದರೂ, ಅದು ಬಂದ ಬಳಿಕ ಸಿನಿಮಾ ಹೇಗಿದೆ ಎಂದು ನೋಡಲು ಮನಸು ಮಾಡುವವರೇ ನಿಜವಾದ ಸಿನಿಮಾ ಪ್ರೇಮಿ. ಸಿನಿಮಾದಲ್ಲದ ಯಾವುದೋ ಒಂದು ಕಾರಣ ಇಟ್ಟುಕೊಂಡು ಒಂದು ಇಡೀ ಚಿತ್ರವನ್ನು ವಿರೋಧಿಸುವವರು ಬೇಸಿಕಲಿ ಸಿನಿಮಾ ಪ್ರಿಯರಂತೂ ಖಂಡಿತವಾಗಿ ಆಗಿರಲಿಕ್ಕಿಲ್ಲ. ಸಿನಿಮಾ ನೋಡಿ ಕಾರಣ ಸಮೇತ ನನ್ನ ಪಾತ್ರ ಇಷ್ಟವಾಗಿಲ್ಲ ಎಂದರೆ ಒಪ್ಪಬಹುದು. ಆದರೆ ಸಿನಿಮಾನೇ ನೋಡದೆ ವಿರೋಧಿಸುತ್ತೇನೆ ಎನ್ನುವವರ ಬಗ್ಗೆ ನನಗೆ ಅನುಕಂಪ ಇದೆ. ಇನ್ನು ನಾನು `ಕೆಜಿಎಫ್ -2′ ಚಿತ್ರಕ್ಕೆ ಯಾಕೆ ಬೇಕು ಎನ್ನುವುದನ್ನು ನಿರ್ದೇಶಕರು ನಿರ್ಧರಿಸಿದ್ದಾರೆ.
ಚಾಪ್ಟರ್ ಒಂದರಲ್ಲಿ ಅನಂತನಾಗ್ ಮಾಡಿದ ಪಾತ್ರ ಈಗ ನೀವು ಮಾಡುತ್ತೀರಿ ಎಂದು ಸುದ್ದಿಯಾಗಿತ್ತಲ್ಲ?
ಬೇರೆಯವರು ಮಾಡಿದ ಪಾತ್ರದ ಮುಂದುವರಿದ ಭಾಗವನ್ನು ನಾನು ಯಾಕೆ ಮಾಡಲಿ? ನನ್ನದು ಬೇರೆಯೇ ಪಾತ್ರ. ಸಿನಿಮಾ ಬರುವ ತನಕ ಇಂಥ ಗೊಂದಲಗಳೆಲ್ಲ ಸಾಮಾನ್ಯವೇ. ಆದರೆ ಅದನ್ನೇ ನಿಜ ಎಂದು ಸಾಬೀತು ಮಾಡಲು ಹೊರಡುವುದು ಮೂರ್ಖತನ. ಒಬ್ಬ ಡೈರೆಕ್ಟರ್ ತನಗೆ ಬೇಕಾದ ರೀತಿಯಲ್ಲಿ ಕತೆ, ಪಾತ್ರಗಳನ್ನು ಮಾಡಿಕೊಂಡಿರುತ್ತಾನೆ. ಆ ಸ್ವಾತಂತ್ರ್ಯ ಕೂಡ ನಿರ್ದೇಶಕರಿಗೆ ಇಲ್ಲವಾದರೆ ಆತ ನಿರ್ದೇಶಕ ಹೇಗೆ ಆಗಲು ಸಾಧ್ಯ? ಮುಖ್ಯವಾಗಿ ಪಾತ್ರದ ಬಗ್ಗೆ ನಿರ್ದೇಶಕರಿಗೆ ಸ್ಪಷ್ಟತೆ ಇರಬೇಕು. ಅದು ಅವರಲ್ಲಿ ಚೆನ್ನಾಗಿಯೇ ಇದೆ.
ನಿಮ್ಮ ನಿಲುವು, ಹೇಳಿಕೆಗಳು ಸಿನಿಮಾದ ಅವಕಾಶ ಕಳೆದುಕೊಳ್ಳುವಂತೆ ಮಾಡಿಲ್ಲವೇ? ಆ ಬಗ್ಗೆ ಆತಂಕವಿಲ್ಲವೇ?
ಇರಬಹುದು. ಆ ಕುರಿತಾದ ಪಿಸುಮಾತುಗಳು ನನ್ನ ಕಿವಿಗೂ ಬಿದ್ದಿವೆ. ಆದರೆ ಆ ಬಗ್ಗೆ ನನಗೆ ಆತಂಕವೇನೂ ಇಲ್ಲ. ಅದರಿಂದ ನಾನು ಅವಕಾಶ `ಕಳೆದುಕೊಳ್ಳುವುದು’ ಎನ್ನುವುದು ಎಂದರೆ ಅರ್ಥವೇನು? ನನ್ನಲ್ಲಿ ಇದೆ; ಆದರೆ ಬೇಕಿದ್ದವರು ಅದನ್ನು ಬಳಸಿಕೊಳ್ಳದ ಕಾರಣ ಕಳೆದುಕೊಳ್ಳುತ್ತಿದ್ದೇನೆ. ಹಾಗಾದರೆ ಇಲ್ಲಿಆವಶ್ಯಕತೆ ಯಾರದು? ಕಳೆದುಕೊಳ್ಳುವಷ್ಟು ಶ್ರೀಮಂತಿಕೆ ನನ್ನಲ್ಲಿ ಇದೆ ಎನ್ನುವುದು ನಿಮ್ಮ ನಂಬಿಕೆಯಾದರೆ ನಾನೇಕೆ ಆ ಬಗ್ಗೆ ಚಿಂತಿಸಬೇಕು. ಸದ್ಯದ ಮಟ್ಟಿಗೆ ನನ್ನ ಬಗ್ಗೆ ನನಗೆ ತೃಪ್ತಿ ಇದೆ. ನನ್ನ ಆತಂಕವೆಲ್ಲ ಸಮಾಜದಲ್ಲಿನ ತಾರತಮ್ಯದ ಬಗ್ಗೆ ಮಾತ್ರ.
`ಭರತ್ ಅನೆ ನೇನು’ ಸಿನಿಮಾ ಸಮಾರಂಭದಲ್ಲಿ ಮೋದಿಗೆ ಜೈ ಎಂದಾಗ ನೀವು ವೇದಿಕೆ ಬಿಟ್ಟಿದ್ದೇಕೆ?
ನಿಮ್ಮ ಪ್ರಶ್ನೆಯಲ್ಲೇ ಅದರ ಉತ್ತರವಿದೆ. ಅದೊಂದು ಸಿನಿಮಾ ಸಮಾರಂಭ. ಅಲ್ಲಿ ನಾನು ಆ ಚಿತ್ರದ ಪಾತ್ರಧಾರಿಯಾಗಿ, ನಿರೂಪಕಿಯ ಕರೆಯ ಮೇರೆಗೆ ವೇದಿಕೆ ಮೇಲೆ ಹೋಗಿದ್ದೆ. ಆದರೆ ನನ್ನ ಮಾತಿಗೆ ತಡೆಯಾಗುವ ರೀತಿಯಲ್ಲಿ ಮೋದಿ ಪರವಾದ ಘೋಷಣೆ ಕೇಳಿಸಿತು. ಹಾಗೆ ಕೂಗಿದವರನ್ನು ಮೀರಿಸುವಷ್ಟು ಮಂದಿ ಆಸಕ್ತಿಯಿಂದ ಮಾತುಗಳನ್ನು ಆಲಿಸುವವರಿದ್ದರು. ಇಷ್ಟಕ್ಕೂ ನಾನು ಮಾತನಾಡಿದ್ದು ಸಿನಿಮಾ ಬಗ್ಗೆ ಮಾತ್ರ. ನಾನು ಮಾತು ಮುಂದುವರಿಸಿದರೆ ಘೋಷಣೆ ಕೂಗಿದವರನ್ನು ಬಾಯ್ಮುಚ್ಚಿಸುವ ಕೆಲಸ ಮಾಡಬೇಕಾಗುತ್ತದೆ. ಅದು ಅಲ್ಲಿ ಒಂದು ಗೊಂದಲದ ವಾತಾವರಣ ಮೂಡಿಸಬಹುದು. ನನ್ನಿಂದಾಗಿ ಅಂಥ ಘಟನೆ ನಡೆಯಬಾರದು ಎನ್ನುವ ಕಾರಣಕ್ಕೆ ನಾನು ತಕ್ಷಣ ವೇದಿಕೆಯಿಂದ ಇಳಿದೆ.