ವಿಜಯಲಕ್ಷ್ಮಿಯವರು ಬೆಳ್ಳಿಪರದೆಯಲ್ಲಿ ನಿರ್ದೇಶಕಿಯಾಗಿ ಹೆಸರು ಮಾಡಿದವರು. ಆದರೆ `ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅನಿರುದ್ಧ್ ಅವರ ತಾಯಿಯ ಪಾತ್ರ ಮಾಡುತ್ತಿರುವ ಅವರು ಒಂದಷ್ಟು ವಿಶೇಷಗಳ ಬಗ್ಗೆ ಮಾತನಾಡಿದ್ದಾರೆ. ವಿಷ್ಣುವರ್ಧನ್ ಬಗ್ಗೆ ಮಾತನಾಡಿದ ಅವರು, “ವಿಷ್ಣು ಅವರ ಬದುಕಿನ ಬೇರೆ ಬೇರೆ ಮಜಲುಗಳನ್ನು ನಾನು ನೋಡಿದ್ದೇನೆ. ನನ್ನ ಕಾಲೇಜ್ ದಿನಗಳಲ್ಲಿ ನಾನು ಸುಮ್ಮನೇ ನಿಂತಿದ್ದರೂ ಅವರು ಕೂದಲೆಳೆದು ಅಳವಂತೆ ಮಾಡುತ್ತಿದ್ದರು. ಅವರು ನಮ್ಮನೆಗೆ ಬರ್ತಾರೆ ಅಂದಾಗಲೇ ಭಯ ಪಟ್ಕೊಂಡು ಅಳುವಷ್ಟು ಕಾಡುತ್ತಿದ್ದರು. ಆದರೆ ಅಂಥಾ ಮನುಷ್ಯ ಕೊನೆಯ ದಿನಗಳಲ್ಲಿ ಸಂತನಂತೆ ಬಿಹೇವ್ ಮಾಡುತ್ತಿದ್ದರು. ಇಂದು ಅವರ ಹಲವಾರು ಮ್ಯಾನರಿಸಮ್‌ಗಳನ್ನು ನಾನು ಅನಿರುದ್ಧ್ ಅವರಲ್ಲಿ ಕಾಣುತ್ತಿದ್ದೇನೆ” ಎಂದಿದ್ದಾರೆ. ಸಾಹಸ ಸಿಂಹ ವಿಷ್ಣುವರ್ಧನ್ ಅವರ ಜನ್ಮದಿನದ ಪ್ರಯುಕ್ತ ಸಿನಿಕನ್ನಡ.ಕಾಮ್ ನಡೆಸಿದರುವ ವಿಶೇಷ ಮಾತುಕತೆ ಇದು.
ವಿಷ್ಣುವರ್ಧನ್ ಅವರ ಜತೆಗಿನ ನಿಮ್ಮ ನೆನಪುಗಳನ್ನು ಹಂಚಿಕೊಳ್ಳುತ್ತೀರ?
ನಾನು ವಿಷ್ಣು ಅವರ ತುಂಬ ಮಜಲುಗಳನ್ನು ನೋಡಿದ್ದೇನೆ ಎಂದರೆ, ಮೊದಮೊದಲು ಅವರು ನಮ್ಮ ಮನೆಗೆ ಬರುವಾಗ ನಾಗರಹೊಳೆ',
ನಾಗಕನ್ಯೆ’, ಕಿಲಾಡಿ ಜೋಡಿ' ಚಿತ್ರಗಳ ಶೂಟಿಂಗ್ ಸಂದರ್ಭದಲ್ಲಿ ಬರುತ್ತಿದ್ದರು. ಆವಾಗೆಲ್ಲ ನಾನು ಕಾಲೇಜ್ ಹುಡುಗಿಯಾಗಿದ್ದೆ. ತುಂಬ ಚೇಷ್ಟೆಯ ಹುಡುಗನಾಗಿದ್ದ ಅವರನ್ನು ನೋಡಿದ್ದೆ. ತೀ ಟೆ ಅಂದರೆ ತುಂಬ ತೀಟೆ! ಅದರ ಬಳಿಕ
ಬಂಧನ’, ಮುತ್ತಿನ ಹಾರ' ಮೊದಲಾದ ಚಿತ್ರಗಳಿಗೆ ನಾನು ಕಾಸ್ಟ್ಯೂಮ್ ಡಿಸೈನರಾಗಿದ್ದಾಗ ವೃತ್ತಿಪರವಾದ ಆತ್ಮೀಯತೆ ಇತ್ತು.
ಕೃಷ್ಣ ನೀ ಬೇಗನೇ ಬಾರೋ’, ಕರ್ಣ' ಸಿನಿಮಾಗಳ ಹೊತ್ತಿಗೆ ಅವರು ಬೇರೆ ರೀತಿಯೇ ಬದಲಾಗಿದ್ದರು. ಜತೆಗೆ ನಾನೂ
‘ಹುಲಿಹೆಜ್ಜೆ’ಯಲ್ಲಿ ಅವರ ಜೋಡಿಯಾಗಿ ನಟನೆಯನ್ನೂ ಮಾಡಿದೆ. ಈ ಸಂದರ್ಭದಲ್ಲೆಲ್ಲ ಅವರು ಡಿಫರೆಂಟಾಗಿದ್ದರು. ಮಹಾ ಕ್ಷತ್ರಿಯ' ಬಳಿಕ ಒಂದು ಗ್ಯಾಪ್ ಆಗಿ ಅವರನ್ನು ಭೇಟಿಯಾದಾಗ ಅವರು ಒಂದು ರೀತಿ
ಬಾಬ’ ರೀತಿ ಆಗಿದ್ದರು! ವಿಷ್ಣು ವಿಷ್ಣು ಎಂದು ಕರೆಯುತ್ತಿದ್ದ ನಾನು ವಿಷ್ಣು ಸರ್, ವಿಷ್ಣು ಜಿ ಎಂದು ಹೇಳಲು ಶುರು ಮಾಡಿದೆ. ಆಗಿನ ಅವರ ಮಾತುಕತೆಗಳನ್ನು ಕೇಳಿದಾಗ, ಇದೆಲ್ಲವೂ ಇವರೇನಾ ಎನ್ನುವಷ್ಟು ಬದಲಾಗಿದ್ದರು. ಈ ಬಂಧನ' ಚಿತ್ರವನ್ನು ``ನೀನೇ ನಿರ್ದೇಶಿಸು..'' ಎಂದು ಅವರು ಹೇಳಿದಾಗ ನನಗೆ ಗುರುವಂತಾಗಿದ್ದರು. ಆ ಸಂದರ್ಭದಲ್ಲಿ ಕಳೆದ ಅಷ್ಟುದಿನಗಳು ತುಂಬ ಆತ್ಮೀಯವಾಗಿದ್ದವು. ಮುಖ್ಯವಾಗಿ ಅವರಿಗೆ
ವರ್ಕಿಂಗ್ ವುಮನ್’ ಅಂದರೆ ತುಂಬ ಖುಷಿಯಿತ್ತು. ಮೆಚ್ಚುಗೆ ಹೇಳುತ್ತಿದ್ದರು.
ವಿಷ್ಣು ಅವರ ಜತೆಗಿನ ಒಂದು ಮರೆಯಲಾರದ ಘಟನೆ ಯಾವುದು?
ಅವರು ಪಾತ್ರ ಮತ್ತು ಚಿತ್ರಕ್ಕೆ ನೀಡುತ್ತಿದ್ದ ಮರ್ಯಾದೆಯ ಬಗ್ಗೆ ಹೇಳಲೇಬೇಕು. ಬಹುಶಃ ನೀವು ನಂಬಲಿಕ್ಕಿಲ್ಲ; ಇನ್ನೂರರಷ್ಟು ಸಿನಿಮಾ ಮಾಡಿದ್ದರೂ ಡಬ್ಬಿಂಗ್ ಗೆ ಬರುವಾಗ ತುಂಬ ಆತಂಕ, ಭಯ ಭಕ್ತಿಯಲ್ಲೇ ಬರುತ್ತಿದ್ದರು. “ನೀವು ಇಷ್ಟೊಂದು ಸಿನಿಮಾ ಮಾಡಿದ ಮೇಲೆ ಕೂಡ ಯಾಕೆ ಇಷ್ಟೊಂದು ಹೆದರುತ್ತಿದ್ದೀರ?” ಎಂದು ನಾನು ಕೇಳಿದ್ದೆ. “ಇಲ್ಲಮ್ಮ ಪಾತ್ರಕ್ಕೆ ನಾವು ಗೌರವ ಕೊಡಬೇಕು, ಸರಿಯಾಗಿರಬೇಕು” ಎನ್ನೋರು. ಅಯ್ಯೋ ದೇವ್ರೆ ಇಷ್ಟು ವರ್ಷಗಳಿಂದ ಗೌರವ ಕೊಟ್ಟೇ ಬಂದಿದ್ದಾರಲ್ಲ? ಅಂತ ಅನಿಸುತ್ತಿತ್ತು! ಅಂದರೆ ಆ ಕಲೆಯ ಮೇಲಿನ ಭಯಭಕ್ತಿಯೇ ಅವರನ್ನು ಆ ಮಟ್ಟಕ್ಕೆ ಬೆಳೆಯುವಂತೆ ಮಾಡಿತು ಎನ್ನಬಹುದೇನೋ.
ಪ್ರಸ್ತುತ ವಿಷ್ಣುವರ್ಧನ್ ಅವರ ಅಳಿಯನಿಗೆ ತಾಯಿಯಾಗಿ ನಟಿಸುವಾಗಿನ ಅನುಭವ ಹೇಗಿದೆ?
ಆ ಬಗ್ಗೆ ಹೇಳಲೇಬೇಕು. ಈ ಬಂಧನ' ಟೈಮಲ್ಲಿ ನಾನು ವಿಷ್ಣುವರ್ಧನ್ ಅವರಿಗೆ ಒಂದು ಬಿಳಿ ಕುರ್ತಾ ಧರಿಸುವಂತೆ ಹೇಳಿ ಹಾಕಿಸಿದ್ದೆ. ಈಗ
ಜೊತೆ ಜೊತೆಯಲಿ’ ಸೆಟ್ ನಲ್ಲಿ ಅಂಥದೇ ಬಿಳಿ ಕುರ್ತಾ ಹಾಕಿಕೊಂಡು ಅನಿ ಬಂದು ಕುಳಿತರೆ, ಒಂದೊಂದು ಬಾರಿ “ಮೈ ಗಾಡ್, ವಿಷ್ಣು ತರಹಾನೇ ಅನಿಸುತ್ತಲ್ಲ” ಎಂದು ನನ್ನ ನಾನೇ ಕೇಳಿಕೊಳ್ಳುತ್ತಿದ್ದೆ! ಅವರು ಕುಳಿತುಕೊಂಡು ಮಾತನಾಡುತ್ತಿರಬೇಕಾದರೆ ಎಷ್ಟೋ ಸಾರಿ ಅವರ ಮ್ಯಾನರಿಸಮ್ಸ್ ನೋಡಿ ನಾನೇ ಅನಿಗೆ ಹೇಳಿದ್ದೇನೆ; “ವಿಷ್ಣುಜೀಯನ್ನೇ ನೆನಪು ಮಾಡ್ತಿದ್ದೀರ” ಎಂದು. “ನನಗೇ ಗೊತ್ತಿಲ್ಲಮ್ಮ ತುಂಬ ಇಷ್ಟಪಟ್ಟಿರೋದರಿಂದ ನನ್ನೊಳಗೆ ಆವಾಹಿಸಿದಂತಾಗಿದೆ” ಎನ್ನುತ್ತಾರೆ ಅನಿ. ವಿಷ್ಣು ಅವರನ್ನು ಮಿಮಿಕ್ರಿ ಮಾಡೋರು ವೇದಿಕೆಯ ಒಂದಷ್ಟು ಸಮಯ ಮಾತ್ರ ಹಾಗಿರುತ್ತಾರೆ. ಆದರೆ ಅದೇ ರೀತಿಯಲ್ಲಿ ಬದುಕು ಪೂರ್ತಿ ಇರುವುದು ಕಷ್ಟ. ಹಾಗೆ ನಟಿಸಲು ಹೋದರೂ, ಒಂದಲ್ಲ ಒಂದು ಸಂದರ್ಭದಲ್ಲಿ ಅವರ ತನ ಹೊರಗೆ ಬರಲೇಬೇಕು. ಆದರೆ ಅನಿ ಅವರಲ್ಲಿ ನನಗೆ ಸ್ವತಃ ವಿಷ್ಣು ಸರ್ ಮೈಗೂಡಿದಂತೆ ಕಂಡಿದ್ದಾರೆ. ಮೊನ್ನೆಯಂತೂ ತೀರ ಸಣ್ಣದೊಂದು ಮ್ಯಾರಿಸಮ್ , ವಿಷ್ ಮಾಡುವ ಶೈಲಿಯಲ್ಲೇ ಪರ್ಫೆಕ್ಟಾಗಿ ವಿಷ್ಣು ನೆನಪಾಗಿಬಿಟ್ಟಿದ್ದರು.
ಒಬ್ಬ ಕಲಾವಿದನಾಗಿ ನೀವು ಅನಿರುದ್ಧ್ ಅವರನ್ನು ಹೇಗೆ ಕಾಣುತ್ತೀರಿ?
ಅನಿರುದ್ಧ್ ಈಗ ನಟನಾಗಿ ಉಳಿದಿಲ್ಲ. ಅವರೊಬ್ಬ ಸ್ಟಾರ್ ಆಗಿದ್ದಾರೆ. ಆದರೂ ಕೂಡ ಅನಿರುದ್ಧ್ ತಮ್ಮ ಪಾತ್ರದ ಬಗ್ಗೆ ತುಂಬ ತಲೆಕೆಡಿಸಿಕೊಳ್ಳುವಂಥ ಪರಿಶ್ರಮದ ಹುಡುಗ. ಪ್ರಸ್ತುತ ಅವರಿಗೆ ಇರುವ ಫ್ಯಾನ್ ಫಾಲೋವಿಂಗ್ ಕಿರುತೆರೆಯಲ್ಲಿ ಯಾರಿಗೂ ಕಲ್ಪನೆ ಮಾಡೋಕೂ ಸಾಧ್ಯವಿಲ್ಲ. ಅದರಲ್ಲಿ ಅವರು ಕೂಡ ಒಪ್ಪಿಕೊಳ್ಳುವಂತೆ ವಿಷ್ಣು ಅಭಿಮಾನಿಗಳು ಕೂಡ ಸಾಕಷ್ಟು ಇದ್ದಾರೆ. ಅದಕ್ಕೆ ಒಂದು ಉದಾಹರಣೆ ಹೇಳ್ತೇನೆ ಕೇಳಿ; ಇದರ ಮರಾಠೀ ಮೂಲದಲ್ಲಿ ನಾಯಕ ಖಳನಾಗಿ ಬದಲಾಗುತ್ತಾನೆ. ಇವರನ್ನು ಹಾಗೆ ಬದಲಾಯಿಸುವುದು ಬೇಡ ಎಂದು ನಮ್ಮ ನಿರ್ದೇಶಕರು ಮೊದಲೇ ತೀರ್ಮಾನಿಸಿದ್ದರು. ಆದರೆ ಮೂಲಕತೆ ಗೊತ್ತಿದ್ದ ಒಂದಷ್ಟು ಮಂದಿ ಇಂದಿಗೂ ಇವರ ಪಾತ್ರ ವಿಲನ್ ಆಗಬಾರದು ಎಂದು ಒತ್ತಡ ಹೇರುತ್ತಲೇ ಇದ್ದಾರೆ. ಕನ್ನಡದಲ್ಲಿ ಮೂಲಕ್ಕಿಂತಲೂ ಒಳ್ಳೆಯ ರೀತಿಯ ಬದಲಾವಣೆಯೇ ಆಗಿದೆ. ಮುಖ್ಯವಾಗಿ ಅನಿರುದ್ಧ್ ಅವರಿಗಂತೂ ಖಳಛಾಯೆ ಕೊಡಲು ಸಾಧ್ಯವೇ ಇಲ್ಲ. ಯಾಕೆಂದರೆ ಮುಖ್ಯವಾಗಿ ಇವರಲ್ಲಿ ನಾವೆಲ್ಲ ವಿಷ್ಣುವರ್ಧನ್ ಅವರನ್ನು ನೋಡುತ್ತಿದ್ದೇವೆ. ಹಾಗಾಗಿ ಅದು ತಪ್ಪಾಗುತ್ತೆ ಎಂದು ನನ್ನದೂ ಅನಿಸಿಕೆ. ಅಲ್ಲಿ ಇಮೇಜ್ ಇರದ ನಟ ಆಗಿದ್ದರು. ಇಲ್ಲಿ ವಿಷ್ಣು ಅವರ ಛಾಯೆ ಇರುವುದರಿಂದ ಏನೇ ಮಾಡುವುದಿದ್ದರೂ ನಿರ್ದೇಶಕರು ಕೇರ್ ಫುಲ್ಲಾಗಿಯೇ ಮಾಡುತ್ತಿದ್ದಾರೆ.
ಸೂಪರ್ ಮೇಡಂ ವಿಷ್ಣು ದಾದಾ ಅವರು ಅದ್ಭುತ ನಟ ಮರೆಯದ ಮಾಣಿಕ್ಯ.