
ಈ ವರ್ಷದ ಐಪಿಎಲ್ ಪಂದ್ಯಾವಳಿ ಇಂದಿನಿಂದ ಶುರುವಾಗುತ್ತಿದೆ. ಕೋವಿಡ್ ನಿಂದ ಮುಂದೂಡಲ್ಪಟ್ಟಿದ್ದ ದೇಶದ ಪ್ರತಿಷ್ಠಿತ ಕ್ರೀಡಾ ಚಟುವಟಿಕೆ ತಡವಾಗಿಯಾದರೂ ಆರಂಭವಾಗಿರುವುದು ಕ್ರಿಕೆಟ್ ಪ್ರೇಮಿಗಳ ಕುಂದುತ್ತಿರುವ ಉತ್ಸಾಹಕ್ಕೆ ಮರುಜೀವ ಕೊಟ್ಟಂತಾಗಿದೆ. ಐಪಿಎಲ್ ಶುರುವಾದಾಗಿನಿಂದಲೂ ಬೇರೆ ಬೇರೆ ಕಾರಣಗಳಿಗೆ ಆರ್ ಸಿ ಬಿ ತಂಡದ ಮ್ಯಾನೇಜ್ಮೆಂಟ್ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ ಈ ಬಾರಿ ಕನ್ನಡ ಪದಗಳೇ ಇಲ್ಲದ ಅಧಿಕೃತ ಅಂಥೆಮ್ ಬಿಡುಗಡೆ ಮಾಡುವ ಮೂಲಕ ಕೆಟ್ಟ ಕಾರಣಕ್ಕೆ ಪುನಃ ಸುದ್ದಿಯಾಗಿದೆ. ಕನ್ನಡ ಪದ ಹಾಗೂ ಕನ್ನಡತನವೇ ಇಲ್ಲದ ಹೊಸ RCB ಅಂಥೆಮ್ ಗೆ ಈಗ ನೆಟ್ಟಿಗರು ಮತ್ತು ತಂಡದ ಕಟ್ಟಾ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇರುವ ಅಭಿಮಾನ ಬಳಗ ಐಪಿಎಲ್ ಪಂದ್ಯಾವಳಿಯ ಉಳಿದೆಲ್ಲ ತಂಡಗಳಿಗಿಂತ ಒಂದು ಕೈ ಮೇಲು ಎಂಬ ಮಾತಿದೆ. ಇದು ನಿಜವೂ ಹೌದು. ಯಾಕೆಂದರೆ ಆರ್ ಸಿ ಬಿ ತಂಡದ ಕುರಿತಾಗಿ ಬಂದಿರುವ ಫ್ಯಾನ್ ಮ್ಯಾಡ್ ಹಾಡುಗಳು ಉಳಿದ್ಯಾವ ತಂಡಗಳ ಮೇಲೂ ಮಾಡಿದ್ದು ಕಡಿಮೆ ಎಂದೇ ಹೇಳಬಹುದು.

ಅದು ಅಲ್ಲದೇ ಐಪಿಎಲ್ ನ ಮೊದಲ ಅವತರಿಣಿಕೆ ಯಿಂದಲೂ ಸೋಲು ಗೆಲುವಿನ ಆಧಾರದ ಮೇಲೆ ಸಹಕಾರ ನೀಡದೆ ಕೇವಲ ನಮ್ಮ ತಂಡ ಎಂದು ಹುರಿದುಂಬಿಸುವ ಮನೋಭಾವ ಉಳ್ಳ ನಿಷ್ಠಾವಂತ ಅಭಿಮಾನಿಗಳಿರುವ ಏಕೈಕ ತಂಡ ಆರ್ ಸಿ ಬಿ ಎಂದರೆ ತಪ್ಪಾಗಲಾರದು.
ಆರ್ ಸಿ ಬಿ ತಂಡಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಇರುವುದು ಕರ್ನಾಟಕದಲ್ಲಿ. ಅದಕ್ಕೆ ಇರುವ ಏಕೈಕ ಕಾರಣ ತಂಡದ ಜೊತೆಗೆ ಸೇರಿರುವ ‘ಬೆಂಗಳೂರು’ ಎಂಬ ಹೆಸರು ಎಂಬುದು ಅಷ್ಟೇ ಸತ್ಯ. ಆದರೆ ಈ ಸರಳ ವಿಷಯವನ್ನು ತಂಡದ ಮ್ಯಾನೆಜ್ಮೆಂಟ್ ಮೊದಲಿನಿಂದಲೂ ಮರೆತಂತಿದೆ.
ಐಪಿಎಲ್ ಪಂದ್ಯಾವಳಿಯ ಮೊದಲ ಅವತರಿಣಿಕೆ ಇಂದಲೂ ತಮ್ಮ ಪ್ರಮೋಶನಲ್ ಸ್ಟ್ರಾಟಜಿಯಲ್ಲಿ ಕನ್ನಡತನಕ್ಕೆ ಒತ್ತು ಕೊಡದೆ ಕನ್ನಡ ವಿರೋಧಿ ಧೋರಣೆ ಅನುಸರಿಸುತ್ತಿರುವುದು ನಿಷ್ಠಾವಂತ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಆಗಿದೆ. ಕಳೆದ ವರ್ಷವಷ್ಟೇ ‘ರಾಯಲ್ ಚಾಲೆಂಜರ್ಸ್ bangalore’ ಅನ್ನು ‘ ಬೆಂಗಳೂರು ‘ ಆಗಿ ಬದಲಾಯಿಸಬೇಕೆಂದು ಅಭಿಮಾನಿಗಳು ಎಷ್ಟೇ ಹರಸಾಹಸ ಪಟ್ಟರೂ ಸಹ ಮ್ಯಾನೇಜ್ಮೆಂಟ್ ಅದನ್ನು ತಲೆಗೆ ಹಾಕಿಕೊಂಡಿರಲಿಲ್ಲ.

ಮೊನ್ನೆಯಷ್ಟೇ ಹಿಂದಿ ದಿವಸ್ ಆಚರಣೆಯ ವಿರುದ್ಧವಾಗಿ ದಕ್ಷಿಣ ಭಾರತದ ತಾರೆಯರು, ರಾಜಕಾರಣಿಗಳು ಸೇರಿದಂತೆ ಹಲವಾರು ಜನರು ತಮ್ಮದೇ ರೀತಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದು ಹಸಿ ಹಸಿಯಾಗಿರುವಾಗಲೇ ಆರ್ ಸಿ ಬಿ ಇಂದ ಮತ್ತೊಂದು ಎಡವಟ್ಟಾಗಿದೆ. ಐಪಿಎಲ್ ನ ತಂಡಗಳು ಆಯಾ ತಂಡಗಳ ಪರವಾಗಿ ಅಧಿಕೃತ ಅಂಥೆಮ್ ಹಾಡುಗಳನ್ನು ಬಿಡುಗಡೆ ಮಾಡುವ ವಾಡಿಕೆ ಇಟ್ಟುಕೊಂಡಿದೆ. ಚೆನ್ನೈ, ಪಂಜಾಬ್, ಕೋಲ್ಕತಾ ಸೇರಿದಂತೆ ಬೇರೆ ಬೇರೆ ತಂಡಗಳು ಬಿಡುಗಡೆ ಮಾಡಿರುವ ಅಂಥೆಮ್ ಹಾಡುಗಳಲ್ಲಿ ಆಯಾ ರಾಜ್ಯಗಳ ನೇಟಿವಿಟಿಗೆ ಅನುಗುಣವಾಗಿ ರಾಜ್ಯದ ಅಧಿಕೃತ ಭಾಷೆಯನ್ನೇ ಸಂಪೂರ್ಣವಾಗಿ ಬಳಸಿಕೊಳ್ಳಲಾಗಿದೆ. ಆದರೆ ಆರ್ ಸಿ ಬಿ ವಿಚಾರದಲ್ಲಿ ಇದು ಸುಳ್ಳಾಗಿದೆ. ಕೇವಲ ಎರಡೇ ಎರಡು ಪದಗಳನ್ನು ಹಾಡಿನ ಶುರುವಿನಲ್ಲಿ ಕಾಟಾಚಾರಕ್ಕೆ ಬಳಸಿಕೊಂಡು ಸಂಪೂರ್ಣ ಹಿಂದಿ ಮತ್ತು ಇಂಗ್ಲಿಷ್ ಮಿಶ್ರಿತ ಅಂಥೆಮ್ ಹಾಡು ಬಿಡುಗಡೆ
ಮಾಡಿರುವುದು ಇದೀಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಇದುವರೆಗೂ ಕಪ್ ಗೆಲ್ಲದೇ ವರ್ಷದಿಂದ ವರ್ಷಕ್ಕೆ ಕಳಪೆ ಪ್ರದರ್ಶನ ನೀಡಿ ಪಂದ್ಯಾವಳಿಯ ಮಧ್ಯದಲ್ಲೇ ಹೊರಬರುತ್ತಿರುವ ತಂಡವಾದರೂ ಇದ್ಯಾವುದನ್ನೂ ತಲೆಗೆ ಹಾಕಿಕೊಳ್ಳದೆ ಕೇವಲ ನಮ್ಮ ಬೆಂಗಳೂರು ತಂಡ ಎಂಬ ಉದ್ದೇಶದಿಂದ ಪ್ರೋತ್ಸಾಹ ತುಂಬುತ್ತಿರುವ ಅಭಿಮಾನಿಗಳು ಆರ್ ಸಿ ಬಿ ಮ್ಯಾನೇಜ್ಮೆಂಟ್ ನ ಈ ಧೋರಣೆ ಇಂದ ಬೇಸತ್ತುಕೆಂಡಮಂಡಲರಾಗಿದ್ದಾರೆ. ಈ ಕೂಡಲೇ ಅಂಥೆಮ್ ಹಾಡನ್ನು ಸಂಪೂರ್ಣವಾಗಿ ಕನ್ನಡ ಭಾಷೆಗೆ ಬದಲಿಸಬೇಕು ಎಂಬ ಬೇಡಿಕೆಯನ್ನು ಆರ್ ಸಿ ಬಿಯ ಅಧಿಕೃತ ಟ್ವೀಟರ್ ಹ್ಯಾಂಡಲ್ ಗೆ ಟಾಗ್ ಮಾಡುವ ಮೂಲಕ ಹಲವಾರು ಜನರು ಆಗ್ರಹಿಸಿದ್ದಾರೆ. ಬದಲಿಸದೆ ಇದ್ದರೆ ತಂಡಕ್ಕೆ ನೀಡುವ ಬೆಂಬಲವನ್ನು ಹಿಂಪಡೆಯುವ ಬೆದರಿಕೆಯನ್ನು ಸಹ ಹೊರಹಾಕಿದ್ದಾರೆ. ಇದಲ್ಲದೇ ನಿರ್ದೇಶಕ ಸುನಿ, ಛಾಯಾಗ್ರಾಹಕ ಮಹೇಂದ್ರ ಸಿಂಹ ಅವರು ಸಹ ಇದರ ಕುರಿತು ತಮ್ಮ ಫೇಸ್ಬುಕ್ ಮತ್ತು ಟ್ವೀಟರ್ ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವರ್ಷಗಳು ಕಳೆದರೂ ತಮ್ಮ ಕನ್ನಡ ವಿರೋಧಿ ಧೋರಣೆಯಿಂದ ಅಪ ಖ್ಯಾತಿಗೆ ಒಳಗಾಗಿರುವ ಅರ್ ಸಿ ಬಿ ಮ್ಯಾನೇಜ್ಮೆಂಟ್ ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ
ನಿಷ್ಠಾವಂತ ಅಭಿಮಾನಿ ಬಳಗವನ್ನು ಕಳೆದುಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.



ಲೇಖನ: ಸುಜಯ್ ಬೆದ್ರ