ಅರವಿಂದ್ ಕೌಶಿಕ್ ಸಿನಿಮಾ ನಿರ್ದೇಶಕರಾಗಿ ಹೆಸರು ಮಾಡಿದವರು. ಕಲಾವಿದೆ ಶಿಲ್ಪಾ ಜತೆಗೆ ಅವರ ವಿವಾಹ ದಶಕದ ಹಿಂದೆಯೇ ನೆರವೇರಿತ್ತು. ಆದರೆ ಇದೀಗ ಬಂದು ಸುದ್ದಿಯ ಪ್ರಕಾರ ಅವರು ಇವತ್ತಿನಿಂದಲೇ ಹೊಸದಾಗಿ ಲಗ್ನ ಪತ್ರಿಕೆ ಹಂಚಲು ಶುರು ಮಾಡಿದ್ದಾರೆ. ವಿಶೇಷ ಅಂದರೆ ಇದಕ್ಕೆ ಅವರ ಪತ್ನಿಯೂ ಕೈ ಜೋಡಿಸಿದ್ದಾರೆ. ಹಾಗಾಗಿ ಇದು ಹಳೆಯ ವಿವಾಹದ ವಿಚಾರವಲ್ಲ; ಇಂದಿನ ವಿವಾಹದ ಕುರಿತಾದ ಕಾನ್ಸೆಪ್ಟ್ ಹೊಂದಿರುವ ವಿನೂತನ ಕಿರುತೆರೆ ಧಾರಾವಾಹಿ.
‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಇಂದು ರಾತ್ರಿ ಹತ್ತು ಗಂಟೆಯಿಂದ ದಿನಂಪ್ರತಿ ಪ್ರಸಾರವಾಗಲಿರುವ ಈ ಧಾರಾವಾಹಿಯಲ್ಲಿ ನೂತನ ಕಲಾವಿದರನ್ನು ನಾಯಕ ನಾಯಕಿಯರನ್ನಾಗಿ ಪರಿಚಯಿಸುತ್ತಿದ್ದಾರೆ ಅರವಿಂದ್. ರಕ್ಷಿತ್ ಶೆಟ್ಟಿಯನ್ನು ಬೆಳ್ಳಿಪರದೆಗೆ ಪರಿಚಯಿಸಿದ ಕೀರ್ತಿ ಇರುವ ಅರವಿಂದ್ ಕೌಶಿಕ್ ಪ್ರತಿಭೆಗಳ ಆಯ್ಕೆಯಲ್ಲಿ ನಿಸ್ಸೀಮರು. ಹಾಗಾಗಿಯೇ ಅವರು ಶಶಾಂಕ್ ಮತ್ತು ಮಯೂರಿ ಎನ್ನುವ ಪ್ರಧಾನ ಪಾತ್ರಗಳಿಗೆ ಸೂರಜ್ ಮತ್ತು ಸಂಜನಾ ಎನ್ನುವ ಇಬ್ಬರು ಹೊಸ ಕಲಾವಿದರನ್ನೇ ಪರಿಚಯಿಸುತ್ತಿದ್ದಾರೆ. ಸಿನಿಕನ್ನಡದ ಜತೆಗೆ ಮಾತನಾಡಿದ ಅವರು “ಈಗಿನ ಜನರೇಶನ್ ಅರೇಂಜ್ ಮ್ಯಾರೇಜ್ ಅಂದರೂ ಭಯ, ಲವ್ ಮಾಡಿದ್ರೂ ಮದುವೆಯಾಗೋಕೆ ಭಯ ಎನ್ನುವ ಪರಿಸ್ಥಿತಿ ಎದುರಿಸುತ್ತಿದೆ. ಅದನ್ನೇ ಧಾರಾವಾಹಿ ಮೂಲಕ ಸ್ವಾರಸ್ಯಕರವಾಗಿ ತೋರಿಸಲಿದ್ದೇವೆ” ಎಂದು ಹೇಳಿದ್ದಾರೆ.
ಈಗಾಗಲೇ ಅರವಿಂದ್ ಕೌಶಿಕ್ ಅವರದೇ ರಚನೆಯಲ್ಲಿ ಶೀರ್ಷಿಕೆ ಗೀತೆ ಗಮನ ಸೆಳೆಯುವಂತೆ ಮೂಡಿಬಂದಿದೆ. ಅದಕ್ಕೆ ಸ್ಪರ್ಶಾ ಆರ್‌ಕೆ ಮತ್ತು ಗಣೇಶ್ ಕಾರಂತ್ ಅವರ ಮಾಧುರ್ಯ ಪೂರ್ಣ ಗಾಯನ ಮತ್ತು ಗಣೇಶ್ ರಾಮು ಅವರ ಮಂಗಳ ವಾದ್ಯಗಳ ಮಧುರ ಸ್ವರಸಂಯೋಜನೆ ಕೂಡ ಕಾರಣ ಎನ್ನಲೇಬೇಕು. ಇವರೆಲ್ಲರ ಜತೆಗೆ ಸಾಮಾಜಿಕ ಜಾಲತಾಣದ ಪನ್ ಬರಹಗಳ ಮೂಲಕ ಗುರುತಿಸಿಕೊಂಡಿರುವ ಸಂಭಾಷಣೆಕಾರ, ನಟ ನವೀನ್ ಸಾಗರ್ ಅವರು ರಚಿಸಿರುವ ಸಂಭಾಷಣೆಗಳು ಕೂಡ ಚಿತ್ರದ ಆಕರ್ಷಕ ಅಂಶವಾಗುವ ನಿರೀಕ್ಷೆ ಮೂಡಿಸಿದೆ. ಹೊಸ ಕಲಾವಿದರೊಂದಿಗೆ ಸಾಕಷ್ಟು ಹಿರಿಯ ಕಲಾವಿದರು ಮತ್ತು ‘ಬಿಗ್ ಬಾಸ್' ಖ್ಯಾತಿಯ ಚೈತ್ರಾ ಕೋಟೂರು ಕೂಡ ಪ್ರಧಾನ ಪಾತ್ರವೊಂದನ್ನು ನಿರ್ವಹಿಸುತ್ತಿರುವುದಾಗಿ ತಿಳಿದು ಬಂದಿದೆ. '
ಲಗ್ನ ಪತ್ರಿಕೆ’ಗೆ ಸಿನಿಕನ್ನಡದ ಶುಭಾಶಯಗಳು.