ಹಿರಿಯ ಕಲಾವಿದರನ್ನು ಸನ್ಮಾನಿಸಿದ ಇಂದ್ರಜಿತ್

ಎಲ್ಲ ವರ್ಷಗಳಲ್ಲಿಯೂ ಸಮಾಜಮುಖಿ ಕೆಲಸದೊಂದಿಗೆ ಜನ್ಮದಿನಾಚರಣೆ ಮಾಡುವ ಪತ್ರಕರ್ತ, ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಈ ಬಾರಿ ಕೂಡ ಅಂಥದೇ ಒಂದು ಕೆಲಸದ ಮೂಲಕ ಗಮನ ಸೆಳೆದಿದ್ದಾರೆ. ಈ ಬಾರಿ ಅವರು ಕನ್ನಡ ಚಿತ್ರರಂಗದ ಐದು ಮಂದಿ ಹಿರಿಯ ಕಲಾವಿದರಿಗೆ ಸನ್ಮಾನ ಮಾಡುವ ಜತೆಗೆ ಒಂದಷ್ಟು ಆರ್ಥಿಕ ನೆರವನ್ನು ಕೂಡ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಸನ್ಮಾನಿತರ ಪರವಾಗಿ ಮಾತನಾಡಿದ ಹಿರಿಯ ನಟ ಉಮೇಶ್ ಅವರು “ಇಂದ್ರಜಿತ್ ಅವರ ತಂದೆ ಲಂಕೇಶ್ ಅವರು ನನ್ನ ತಂದೆಯೊಂದಿಗೆ ನಟಿಸಿದ್ದರು. ಅವರ ಪುತ್ರನ ನಿರ್ದೇಶನದಲ್ಲಿ ನಾನು ನಟಿಸಿದ್ದೇನೆ. ಅವರಿಗೆ ಚಿತ್ರರಂಗದ ಹಿರಿಯ ಕಲಾವಿದರ ಬಗ್ಗೆ ಇರುವ ಕಾಳಜಿಗೆ ಆಭಾರಿಯಾಗಿದ್ದೇನೆ” ಎಂದರು. ಇದೇ ಸಂದರ್ಭದಲ್ಲಿ ಹಿರಿಯ ನಟ ಬೆಂಗಳೂರು ನಾಗೇಶ್, ನಟಿ ಮತ್ತು ಹಿರಿಯ ನಟ ಆರ್ ಎನ್ ಸುದರ್ಶನ್ ಅವರ ಪತ್ನಿಯೂ ಆಗಿರುವ ಶೈಲ ಶ್ರೀ ಮತ್ತು ಇನ್ನಿಬ್ಬರು ಹಿರಿಯ ನಟಿಯರಾದ ಆರ್‌ಟಿ ರಮಾ ಹಾಗೂ ಜಯಲಕ್ಷ್ಮೀ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. “ಇಲ್ಲಿಗೆ ಆಗಮಿಸಿ ಸನ್ಮಾನಿತರಾದವರ ದೊಡ್ಡ ಮನಸ್ಸಿಗೆ ಕೃತಜ್ಞತೆ ಅರ್ಪಿಸುವುದಾಗಿ” ಹೇಳಿದ ಇಂದ್ರಜಿತ್, “ಈ ಹಿರಿಯ ಕಲಾವಿದರೆಲ್ಲರೂ ನಟನೆಗೆ ಸಿದ್ಧರಿದ್ದಾರೆ. ಆದರೆ ಕೊರೊನ ಕಾರಣ ಈ ಹಿರಿಯ ನಟರನ್ನು ಚಿತ್ರೀಕರಣದಲ್ಲಿ ಬಳಸಿಕೊಳ್ಳುವಂತಿಲ್ಲ. ಹಾಗಾಗಿ ಅನಿವಾರ್ಯವಾಗಿ ನಾವು ಸಹಾಯ ಮಾಡುವ ಸಂದರ್ಭ ಬಂದಿದೆ. ಇದನ್ನು ಇತರರು ಕೂಡ ಮಾದರಿಯಾಗಿ ಸ್ವೀಕರಿಸಿದರೆ ಸಂತೋಷ” ಎಂದರು.

ಇಂದ್ರಜಿತ್ ಅವರು ಈ ಹಿಂದೆ ಕೂಡ ತಮ್ಮ ಹುಟ್ಟುಹಬ್ಬವನ್ನು ಅಂಧ ಮಕ್ಕಳ ಶಾಲೆಯಲ್ಲಿ, ತುಮಕೂರಿನ ಶ್ರೀ ಸಿದ್ದಗಂಗ ಮಠದಲ್ಲಿ, ಅನಾಥಾಶ್ರಮ ಹಾಗೂ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಸಾಮಾಜಿಕ ಕಳಕಳಿಯೊಂದಿಗೆ ಆಚರಿಸಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ದೃಶ್ಯಗಳ ಮಾಹಿತಿಯನ್ನು ಇಲ್ಲಿರುವ ಯೂಟ್ಯೂಬ್ ಲಿಂಕ್ ಮೂಲಕ ಪಡೆದುಕೊಳ್ಳಬಹುದು.

Recommended For You

Leave a Reply

error: Content is protected !!
%d bloggers like this: