ರಾಕ್ಲೈನ್ ಸುಧಾಕರ್ ನಿಧನ

ಹಾಸ್ಯ ಮತ್ತು ಖಳ ಪಾತ್ರದ ಮೂಲಕ ಗುರುತಿಸಿಕೊಂಡಿರುವ ಹಿರಿಯನಟ ರಾಕ್ಲೈನ್ ಸುಧಾಕರ್ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಹಿಂದೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಕಚೇರಿಯಲ್ಲಿ ವೃತ್ತಿಯಲ್ಲಿದ್ದ ಸುಧಾಕರ್ ಅವರನ್ನು ಅದೇ ಕಾರಣದಿಂದಲೇ `ರಾಕ್ಲೈನ್ ಸುಧಾಕರ್’ ಎಂದೇ ಗುರುತಿಸಲಾಗುತ್ತಿತ್ತು.

ಪೃಥ್ವಿ ಅಂಬಾರ್ ನಾಯಕತ್ವದ `ಶುಗರ್‌ಲೆಸ್‌’ ಚಿತ್ರದಲ್ಲಿ ಪಾತ್ರ ಮಾಡುತ್ತಿದ್ದ ಸುಧಾಕರ್ ಇಂದು ಬೆಳಿಗ್ಗೆ ಶೂಟಿಂಗ್‌ಗೆ ಎಂದು ಬಂದವರು ಮೇಕಪ್ ಹಾಕುವ ನಡುವೆ ಕುಸಿದು ಬಿದ್ದಿದ್ದರು. ಬನ್ನೇರುಘಟ್ಟದಲ್ಲಿ ಚಿತ್ರೀಕರಣ ನಡೆದಿದ್ದು ಅಲ್ಲಿಂದ ಅವರನ್ನು ಫೋರ್ಟಿಸ್ ಆಸ್ಪತ್ರಗೆ ಕರೆದೊಯ್ಯಲಾಯಿತು. ಆದರೆ ಅದಾಗಲೇ ಅವರು ಹೃದಯಾಘಾತದಲ್ಲಿ ನಿಧನರಾಗಿದ್ದರೆಂದು ವೈದ್ಯರು ತಿಳಿಸಿರುವುದಾಗಿ ಚಿತ್ರದ ಪ್ರೊಡಕ್ಷನ್ ಕಂಟ್ರೋಲರ್ ನರೇಶ್ ಸಿನಿಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.

ಬಡ ಕುಟುಂಬದಲ್ಲಿ ಹುಟ್ಟಿದ ಸುಧಾಕರ್ ಎಂಟು ಜನ ಮಕ್ಕಳಲ್ಲಿ ಒಬ್ಬರು. ಎಸ್‌ಎಸ್‌ಎಲ್‌ಸಿ ಫೇಲಾದ ಬಳಿಕ ಊರು ಬಿಟ್ಟು ಬೆಂಗಳೂರು ಸೇರಿದ ಅವರಿಗೆ ಆಟೋ ತೊಳೆದು, ಡ್ರೈವರಾಗಿ, ಚಿಪ್ಸು ಮಾರಿ ಬಂದ ದುಡ್ಡಿನಲ್ಲಿ ದಿನದೂಡಿದ ಸಂದರ್ಭಗಳಿದ್ದವು. ಆ ಸಂಧರ್ಭದಲ್ಲಿ ರಾಕ್ಲೈನ್‌ ವೆಂಕಟೇಶ್‌ ಅವರ ತಂದೆ ತಮ್ಮನ್ನು ಅವರ ಬಳಿ ಕೆಲಸಕ್ಕೆ ಸೇರಿಸಿಕೊಂಡಿದ್ದರು. ರಾಕ್ಲೈನ್ ವೆಂಕಟೇಶ್ ಅವರು ಮಾಡಿದ ಆಶಾವಾದಿಗಳು ಎನ್ನುವ ಧಾರಾವಾಹಿಗೆ ವಾಹನ ಚಾಲಕರಾಗುವ ಮೂಲಕ ಬಣ್ಣದ ಲೋಕದ ಸಂಪರ್ಕ ಪಡೆದುಕೊಂಡರು. ಅದರ ಬಳಿಕ ಸಿಹಿಕಹಿ ಚಂದ್ರು ಅವರ ಮೈಲಿಗಲ್ಲು' ಧಾರಾವಾಹಿ ಮಾಡಿದೆ. ಮಾಲಾಶ್ರೀಯವರಬೆಳ್ಳಿ ಮೋಡಗಳು’ ಚಿತ್ರದ ಮೂಲಕ ಸಿನಿಮಾರಂಗದ ಸಂಪರ್ಕವೂ ದೊರಕಿತು. ರಾಕ್ಲೈನ್ ವೆಂಕಟೇಶ್ ನಿರ್ಮಾಣದ ರಸಿಕ',ಆಯುಧ’, ಅಗ್ನಿ ಐಪಿ ಎಸ್',ಹಿಮಪಾತ’ ಮೊದಲಾದ ಚಿತ್ರಗಳು ಸೇರಿದಂತೆ ಸುಮಾರು 36 ಸಿನಿಮಾಗಳಿಗೆ ಪ್ರೊಡಕ್ಷನ್ ಕಂಟ್ರೋಲರ್ ಆಗಿ ಕೆಲಸ ಮಾಡಿದ್ದರು. ಯೋಗರಾಜ್ ಭಟ್ ಅವರ ನಿರ್ದೇಶನದ ಮನಸಾರೆ' ಚಿತ್ರದಲ್ಲಿ ಒಂದು ಪಾತ್ರ ನೀಡುವುದಾಗಿ ಹೇಳಿದರು. ಆಗ ರಾಕ್ಲೈನ್ ವೆಂಕಟೇಶ್ ಅವರೇ ಒಪ್ಪಿಕೊಳ್ಳಲು ಹೇಳಿ ಪ್ರೋತ್ಸಾಹ ನೀಡಿದರು. ಬಳಿಕ ಉಪೇಂದ್ರ ಅವರ ನಟನೆಯಸೂಪರ್’ ಸೇರಿದಂತೆ ಇದುವರೆಗೆ ಸುಮಾರು 200 ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ `ಅಧ್ಯಕ್ಷ’ ಚಿತ್ರದಲ್ಲಿನ ಇವರ ಪಾತ್ರ ಇವರಿಗೆ ದೊಡ್ಡ ಬ್ರೇಕ್ ನೀಡಿತು ಎಂದೇ ಹೇಳಬಹುದು.

`ಶುಗರ್‌ಲೆಸ್‌’ ಸುಧಾಕರ್ ಅವರ 200ನೇ ಚಿತ್ರವಾಗಿದ್ದು, ಬಹುಬೇಡಿಕೆಯ ಪೋಷಕ ನಟರಾಗಿದ್ದ ಅವರಿಗೆ ಎರಡು ಡಜನ್ ಸಿನಿಮಾಗಳು ವೆಯ್ಟಿಂಗಲ್ಲಿದ್ದವು. ಶುಗರ್‌ಲೆಸ್‌ ಚಿತ್ರದಲ್ಲಿ ಒಂದಷ್ಟು ಸಕ್ಕರೆ ಕಾಯಿಲೆ ಇರುವ ಹಿರಿಯರ ಸ್ನೇಹದ ಬಗ್ಗೆ ಕತೆ ಇದ್ದು ಅದರಲ್ಲಿ ಹಿರಿಯ ನಟ ದತ್ತಣ್ಣನ ಸ್ನೇಹಿತನಾಗಿ ಚಿತ್ರದ ಉದ್ದಕ್ಕೂ ಕಾಣಿಸಿಕೊಳ್ಳುವ ಪಾತ್ರವಾಗಿತ್ತೆಂದು ತಿಳಿದು ಬಂದಿದೆ. ಇದೀಗ ಮೃತರ ಪಾರ್ಥಿವ ಶರೀರವನ್ನು ಬಸವೇಶ್ವರ ನಗರದ ಅವರ ಸ್ವಗೃಹಕ್ಕೆ ತರಲಾಗಿದೆ.

Recommended For You

Leave a Reply

error: Content is protected !!
%d bloggers like this: