
‘ಶಂಭೋ ಶಿವ ಶಂಕರ’ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಹೆಸರು ಕೇಳಿದರೆ ಭಕ್ತಿ ಪ್ರಧಾನ ಚಿತ್ರದಂತೆ ಇದ್ದರೂ ಇದು ಸಿನಿಮಾದ ಪ್ರಧಾನ ಪಾತ್ರದಲ್ಲಿರುವ ಮೂವರು ಯುವಕರ ಕತೆ ಹೇಳುವ ಸಿನಿಮಾ. ಮುಹೂರ್ತದ ಬಳಿಕ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಚಿತ್ರತಂಡ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ನೀಡಿದೆ.
“ಇದೊಂದು ಸಸ್ಪೆನ್ಸ್ ಸಂಗತಿಗಳನ್ನು ಹೊಂದಿರುವ ಚಿತ್ರವಾದ ಕಾರಣ ಕತೆಯ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನೀಡುವುದಿಲ್ಲ” ಎಂದೇ ಮಾತು ಶುರು ಮಾಡಿದ ನಿರ್ದೇಶಕ ಕೋನಮಾನಹಳ್ಳಿ ಶಂಕರ್ ಇದು ತಮ್ಮ ಮೊದಲ ಸಿನಿಮಾ ಎಂದು ತಿಳಿಸಿದರು. ಈ ಹಿಂದೆ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಾದ ಅವನು ಮತ್ತೆ ಶ್ರಾವಣಿ',
ಜನುಮದ ಜೋಡಿ’, `ನಾಯಕಿ’ ನಿರ್ದೇಶಿಸಿರುವ ಅನುಭವ ಇರುವುದಾಗಿ ಹೇಳಿದ್ದಾರೆ. ಚಿತ್ರದಲ್ಲಿ ಮೂವರು ನಾಯಕರ ಪಾತ್ರಗಳಲ್ಲಿ ಶಂಭುವಾಗಿ ಅಭಯ್ ಪುನೀತ್ , ಶಿವನಾಗಿ ರಕ್ಷಕ್ ಮತ್ತು ಶಂಕರನಾಗಿ ರೋಹಿತ್ ನಟಿಸುತ್ತಿದ್ದಾರೆ. ತಮ್ಮದು ಖಳನ ಪಾತ್ರ ಎಂದು ಪಟ್ರೆ ನಾಗರಾಜ್ ತಿಳಿಸಿದರು.

ಸಂಗೀತ ನಿರ್ದೇಶಕ ಹಿತನ್ ಹಾಸನ್ ಮಾತನಾಡಿ, “ಇದು ನನ್ನ ಆರನೇ ಸಿನಿಮಾ. ಈ ಹಿಂದಿನ ಎಲ್ಲ ಚಿತ್ರಗಳಿಗಿಂತ ಹೆಚ್ಚು ಸಮಯ ಇದಕ್ಕೆ ಸಂಗೀತ ನೀಡಲು ದೊರಕಿದೆ. ಮೂರು ಬಿಟ್ ಮತ್ತು ಮೂರು ಪೂರ್ತಿ ಹಾಡುಗಳು ಚಿತ್ರದಲ್ಲಿವೆ” ಎಂದರು. ಮೂರು ಹಾಡುಗಳು ಐಟಂ ಸಾಂಗ್, ಪ್ಯಾತೊ, ಮೆಲೊಡಿ ಹೀಗೆ ಮೂರು ವಿಧಗಳಲ್ಲಿದ್ದು ವೈವಿಧ್ಯಮಯ ಸಂಗೀತ ಪ್ರಿಯರಿಗೆ ಹಾಡುಗಳು ಹಬ್ಬವಾಗಲಿದೆ ಎಂದಿದ್ದಾರೆ. ಮಾತ್ರವಲ್ಲ, ಚಿತ್ರದಲ್ಲಿ ಮಂಗಳ ಮುಖಿಯರ ಪಾತ್ರ ಇದ್ದು ಅವರಿಗೆ ಇರುವ ಹಾಡನ್ನು ಸ್ವತಃ ಅವರಿಂದಲೇ ಹಾಡಿಸುವಂಥ ಪ್ರಥಮ ಪ್ರಯೋಗ ನಡೆದಿದೆ ಎಂದರು. ನಾಯಕಿಯಾಗಿ ಪಂಚತಂತ್ರ ಖ್ಯಾತಿಯ ಸೊನಾಲ್ ಮೊಂತೆರೋ ನಟಿಸುತ್ತಿದ್ದು ತಮ್ಮ ಪಾತ್ರಕ್ಕೆ ಕೂಡ ಪ್ರಾಮುಖ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ. ಚಿತ್ರದ ಪೋಸ್ಟರ್‌ನಲ್ಲಿ “ಹುಡುಗರ ಹಣೆ ಬರಹ ಬರೆಯೋರು ಯಾರು? ಬ್ರಹ್ಮನಾ ಇಲ್ಲ ಹೆಣ್ಣಾ?” ಎನ್ನುವ ಪ್ರಶ್ನೆಯನ್ನು ಬರೆಸಿದ್ದಾರೆ. ಹಾಗಾಗಿ ಚಿತ್ರದ ನಾಯಕರ ಹಣೆ ಬರಹವನ್ನು ಇಲ್ಲಿ ನಾಯಕಿಯೇ ನಿರೂಪಿಸಿದರೆ ಅಚ್ಚರಿ ಇಲ್ಲ. ಅದಕ್ಕೆ ತಕ್ಕಂತೆ ರಿವಾಲ್ವರ್ ಕೈಲಿ ಹಿಡಿದ ಸೊನಾಲ್ ಪೋಸ್ಟರ್ ಕೂಡ ಗಮನ ಸೆಳೆಯುವಂತಿದೆ.

ಬನಶಂಕರಿಯ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ಚಿತ್ರತಂಡದಿಂದ ಆರ್.ವಿ ಮಮತಾ ಕ್ಯಾಮೆರಾ ಸ್ವಿಚಾನ್ ಮಾಡಿದರೆ ನಿರ್ಮಾಪಕ ವರ್ತೂರು ಮಂಜು ಕ್ಲ್ಯಾಪ್ ಮಾಡಿದರು. ವರ್ತೂರು ಮಂಜು ಮಾತನಾಡಿ, “ಅಭಯ್ ಪುನೀತ್ ನನ್ನ ಸ್ನೇಹಿತ. ಅವರಿಗೊಂದು ಸಿನಿಮಾ ಮಾಡುವ ಯೋಜನೆ ಹಾಕಿದಾಗ ನಿರ್ದೇಶಕರಾಗಿ ಅವರು ತನ್ನ ಸ್ನೇಹಿತ ಶಂಕರ್ ಕೋನಮಾನಹಳ್ಳಿಯವರನ್ನು ಪರಿಚಯಿಸಿದರು. ನನಗೆ ಅವರು ಹೇಳಿದ ಕತೆ ತುಂಬ ಇಷ್ಟವಾಯಿತು. ಹಾಗಾಗಿ ಚಿತ್ರ ಮಾಡಲು ತಯಾರಾದೆ. ನಾಳಿನಿಂದಲೇ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು ಮತ್ತು ಮಂಗಳೂರಲ್ಲಿ ಶೂಟಿಂಗ್ ಯೋಜನೆ ಹಾಕಲಾಗಿದೆ” ಎಂದರು. ನಟರಾಜ್ ಛಾಯಾಗ್ರಹಣ, ಕಲೈ ಮಾಸ್ಟರ್ ನೃತ್ಯ ನಿರ್ದೇಶನ, ಅಲ್ಟಿಮೇಟ್ ಶಿವು ಸಾಹಸ ಚಿತ್ರದಲ್ಲಿದ್ದು ಅಘನ್ಯ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣಗೊಳ್ಳುತ್ತಿದೆ.
