ಪವರ್ ಟಿವಿ ಎನ್ನುವ ಕನ್ನಡ ವಾರ್ತಾವಾಹಿನಿ ಮಾಧ್ಯಮ ಲೋಕವನ್ನು ಪ್ರವೇಶಿಸುವಾಗಲೇ ಅದೊಂದು ಪವರ್‌ಫುಲ್ ಎಂಟ್ರಿಯಾಗಿ ಕಂಡಿತ್ತು. ಆದರೆ ಆಡಳಿತ ಸರ್ಕಾರ ಭಾಗಿಯಾಗಿರುವ ಭ್ರಷ್ಟಾಚಾರದ ಬಗ್ಗೆ ಸತತ ವರದಿ ಮಾಡುತ್ತಿರುವಂತೆ ಅದರ ಪವರ್ ತೆಗೆದು ಕೂರಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಹೇಳಲೇಬೇಕಾಗಿದೆ. ಇಂಥದೊಂದು ಆರೋಪವನ್ನು ವಾಹಿನಿಯ ಪ್ರಿನ್ಸಿಪಲ್ ಎಡಿಟರ್ ಆಗಿ ಗುರುತಿಸಿಕೊಂಡಿರುವ ರೆಹಮಾನ್ ಹಾಸನ್ ವ್ಯಕ್ತಪಡಿಸಿದ್ದಾರೆ. ನಿವರು ನಿನ್ನೆ ಸೋಮವಾರ ತಡರಾತ್ರಿ ಪವರ್ ಕಚೇರಿಯಿಂದ ಫೇಸ್ಬುಕ್ ಲೈವ್ ಮೂಲಕ ಹಂಚಿಕೊಂಡ ಪ್ರಮುಖ ವಿಚಾರಗಳನ್ನು ಇಲ್ಲಿ ಯಥಾವತ್ತಾಗಿ ನೀಡಲಾಗಿದೆ.
“ಇವತ್ತು ಪವರ್ ಟಿವಿ ಸಂಸ್ಥೆಯ ಮೇಲೆ ಪೊಲೀಸ್ ರೈಡ್ ಆಗಿದೆ. ಸಿಸಿಬಿಯವರು ಕೋರ್ಟ್ ಆರ್ಡರ್ ಇಟ್ಟುಕೊಂಡು ಸರ್ಚ್ ಮಾಡಲು ಬಂದಿದ್ದರು. ಎಲ್ಲರೂ ಕೋಆಪರೇಟ್ ಮಾಡಿದ್ದೇವೆ. ಅವರಿಗೆ ಬೇಕಾದಂತೆ ನಮ್ಮ ಸಿಸ್ಟಮ್, ಲ್ಯಾಪ್ಟಾಪ್, ಹಾರ್ಡ್‌ಡಿಸ್ಕ್ ಎಲ್ಲವನ್ನು ತೆಗೆದುಕೊಂಡಿದ್ದಾರೆ. ಅಲ್ಲಿಗೆ ನಿಲ್ಲಿಸದೆ ನಮ್ಮಸರ್ವರ್ ಕೂಡ ತೆಗೆದುಕೊಂಡು ಹೋಗಿದ್ದಾರೆ. ನಮ್ಮ ವಾಹಿನಿಯ ಫೇಸ್ಬುಕ್ ಲೈವ್ ಕೂಡ ನಿಲ್ಲಿಸಿದ್ದಾರೆ. ಬಹುಶಃ ಮಾಧ್ಯಮ ಲೋಕದಲ್ಲಿ ಇದು ಕರಾಳ ದಿನ ಎಂದೇ ಹೇಳಬಹುದು. 250 ಮಂದಿ ಉದ್ಯೋಗಿಗಳು ಇರುವ ವಾಹಿನಿಯನ್ನು ಒಮ್ಮೆಲೆ ಬಂದ್ ಮಾಡಿಸಿದ್ದಾರೆ. ಈಗ ವಾಹಿನಿಯನ್ನೇ ನಂಬಿರುವ ಉದ್ಯೋಗಿಗಳೆಲ್ಲ ಬೀದಿಗೆ ಬಿದ್ದಂತಾಗಿದೆ.
ಮುಖ್ಯಮಂತ್ರಿಗಳಿಗೆ ಪ್ರಶ್ನೆ
ಸರ್ಕಾರದ ವಿರುದ್ಧ ದಾಖಲೆಯೊಂದಿಗೆ ಏನನ್ನಾದರೂ ಮಾಡಲು ಹೊರಟಾಗ ಇದೇನ ನಿಮ್ಮ ಪ್ರತಿಕ್ರಿಯೆ? ವಾಹಿನಿಯ ಎಂಡಿಯನ್ನು ಅರೆಸ್ಟ್ ಮಾಡುವುದು, ಬಿಡುವುದು ನಿಮ್ಮ ತನಿಖೆಗೆ ಸಂಬಂಧಪಟ್ಟಿದ್ದು. ಹಾಗಂತ ಸಂಸ್ಥೆಯ ಆರಂಭದ ದಿನಗಳಿಂದಲೇ ಕೆಲಸ ಮಾಡುತ್ತಿರುವವರನ್ನು ಬೀದಿಗೆ ತರುವುದು ಎಷ್ಟು ಸರಿ? ನೀವು ರಾಜಾಹುಲಿನ? ಒಂದು ರಾತ್ರಿಯಲ್ಲಿ ಬೀದಿಗೆ ತಂದಿರುವುದಕ್ಕೆ ಯಾರು ಹೊಣೆ? ರಾಜಾ ಹುಲಿ ಎನ್ನುವ ಟೈಟಲ್ ಮಾಧ್ಯಮದವರೇ ನಿಮಗೆ ನೀಡಿದ್ದು. ಆದರೆ ರಾಜಾಹುಲಿ ಮಾಡುವ ಕೆಲಸವೇ ಇದು? ಅಧಿಕಾರ, ಪೊಲೀಸರು ನಿಮ್ಮ ಜತೆಗೆ ಇದ್ದಾರೆಂದು ನೀವು ಏನು ಬೇಕಾದರೂ ಮಾಡುತ್ತೀರ?
ನೀವು ಒಳ್ಳೆಯ ಆಡಳಿತಗಾರ ಎಂದೇ ತಿಳಿದುಕೊಂಡಿದ್ದೆವು. ನಿಮ್ಮ ಕುಟುಂಬದವರಿಂದ ನೀವು ಹಾಳಾಗುತ್ತಿದ್ದೀರಿ ಎಂದು ಬೇಸರ ಕೂಡ ಪಟ್ಟಿದ್ದೇವೆ. ಕಳೆದ ಬಾರಿ ಸಿಎಂ ಪಟ್ಟದಿಂದ ಇಳಿಯಬೇಕಾಗಿ ಬಂದಾಗ, ಯಾರೋ ಮಾಡಿದ ತಪ್ಪಿಗೆ ನೀವು ಜೈಲಿಗೆ ಹೋಗಬೇಕಾದಾಗ ಬೇಸರವಾಗಿತ್ತು. ಆದರೆ ಈಗ ಆ ಪರಿಸ್ಥಿತಿ ನಮಗೆ ಬಂದಿದೆ. ಹಾಗಾಗಿ ನಮ್ಮ ನೋವು ನಿಮಗೆ ಅರ್ಥವಾಗಬಹುದು ಎಂದುಕೊಂಡಿದ್ದೇನೆ.
ನಮ್ಮ ಕೆಲಸ ಸತ್ಯಕ್ಕಾಗಿ ಹೋರಾಡುವಂಥದ್ದು, ವಿಜಯೇಂದ್ರ ಅವರ ಭ್ರಷ್ಟಾಚಾರದ ಬಗ್ಗೆ ಮಾಡಿರುವಂಥ ವರದಿ ಖಂಡಿತವಾಗಿ ಮುಂದುವರಿಯುತ್ತದೆ. ಪವರ್ ಟಿವಿ ವಾಹಿನಿಯನ್ನು, ವಾಹಿನಿಯ ಫೇಸ್ಬುಕ್ ಅಕೌಂಟನ್ನು ನೀವು ಮುಚ್ಚಿಸಿರಬಹುದು. ಆದರೆ ನಮ್ಮ ಪರ್ಸನಲ್ ಅಕೌಂಟ್‌ಗಳಿವೆ. ಅದನ್ನೂ ಬ್ಲಾಕ್ ಮಾಡಿದರೆ ಮತ್ತೊಂದು ಅಕವಮಟ್ ಕ್ರಿಯೇಟ್ ಮಾಡುತ್ತೇವೆ. ನಾವು ಸುಮ್ಮನಿರಲ್ಲ. ಸಂಸ್ಥೆಯ ಮಂದಿಯೆಲ್ಲ ಈಗಲೂ ಇಲ್ಲೇ ಬಂದು ನಿಂತಿದ್ದಾರೆ. ಬೆಳಗಿನ ಶಿಫ್ಟ್ ಬಂದವರು ಇನ್ನೂ ಮನೆಗೆ ಹೋಗಿಲ್ಲ. ಆದರೆ ಏನು ಮಾಡಬೇಕು ನಿಜಕ್ಕೂ ಗೊತ್ತಾಗುತ್ತಿಲ್ಲ. ಸಮಾಜದ ಧ್ವನಿಯಾಗಿ ಅದನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡಿದ್ದಕ್ಕೆ ಹೆಮ್ಮೆ ಇದೆ. ಹೊರತು ಯಾಕಾದರೂ ಮಾಡಬೇಕಿತ್ತು ಎನ್ನುವ ಪಶ್ಚಾತ್ತಾಪ ಖಂಡಿತವಾಗಿ ಇಲ್ಲ. ನಾಚಿಕೆ ಪಡಬೇಕಾಗಿರುವುದು ನೀವು ಯಡಿಯೂರಪ್ಪನವರು.
ಘಟನೆಯ ಹಿನ್ನೆಲೆ
ಕಳೆದ ತಿಂಗಳಿಂದ ಸಿಎಂ ಯಡಿಯೂರಪ್ಪನವರ ಪುತ್ರ ಬಿವೈ ರಾಘವೇಂದ್ರ ಅವರ ಬಗ್ಗೆ ಇದ್ದ ವರದಿಯನ್ನು ಸುದ್ದಿ ಮಾಡಿದ್ದೆವು. ಅವರು ಲಂಚ ತೆಗೆದುಕೊಂಡು ಭ್ರಷ್ಟಾಚಾರ ಮಾಡಿರುವ ಬಗ್ಗೆ ಆಡಿಯೋ ಬೈಟ್ಸ್‌ಗಳು, ವಾಟ್ಸ್ಯಾಪ್ ಚ್ಯಾಟ್ ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಕೂಡ ದಾಖಲೆಯಾಗಿ ಇರಿಸಿಕೊಂಡಿದ್ದೆವು. ಆ ಬಗ್ಗೆ ಎಲ್ಲ ಮಾಹಿತಿಗಳು ಪಬ್ಲಿಕ್ ಡೊಮೈನಲ್ಲಿತ್ತು. ಆದರೆ ನಮ್ಮ ಯೂಟ್ಯೂಬ್, ಫೇಸ್ಬುಕ್ ಕ್ಲೋಸ್ ಮಾಡಿಸಿರುವ ಕಾರಣ ಈಗ ಅದು ನಿಮಗೆ ದೊರಕದು.
ಆದರೆ ಈ ಬಗ್ಗೆ ಪವರ್ ಟಿವಿಯ ಮುಖ್ಯಸ್ಥರಾದ ರಾಕೇಶ್ ಶೆಟ್ಟಿಯವರ ಮೇಲೆ ಒಂದು ಕಂಪ್ಲೇಂಟ್ ಆಗಿದೆ. ಅದಕ್ಕೆ ಸಂಬಂಧಿಸಿದ ಹಾಗೆ ತನಿಖೆ ನಡೆಯುತ್ತಿದೆ. ಅವರ ಮನೆಯ ಮೇಲೆ ರೈಡ್ ಆದಾಗ ಮಾಧ್ಯಮದವನಾಗಿ ನಾನು ಕೂಡ ಅಲ್ಲಿದ್ದೆ. ನಮ್ಮ ವರದಿಗಾರರೂ ಇದ್ದರು. ಲೈವ್ ಕೊಡಬೇಕಿತ್ತು. ಅಲ್ಲಿ ಪೊಲೀಸರು ಸಿಕ್ಕಿದ್ದರು. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನನಗೆ ಫೋನ್ ಮಾಡಿ ಠಾಣೆಗೆ ಬರಬೇಕು ಎಂದರು. ಬರಲು ಸಾಧ್ಯವಿಲ್ಲ ಎನ್ನಲಾಗಲಿಲ್ಲ. ಬೆಳಿಗ್ಗೆಯೇ ಹೋಗಿದ್ದ ನಮ್ಮ ತಿಂಡಿ ಆಗಿರಲಿಲ್ಲ . ಅವರೇ ತರಿಸಿಕೊಟ್ಟರು. ಚೆನ್ನಾಗಿಯೇ ನೋಡಿಕೊಂಡರು. ಹಿರಿಯ ಅಧಿಕಾರಿ ತುಂಬ ಮುಕ್ತವಾಗಿ ಮಾತನಾಡಿದರು. ಮಧ್ಯಾಹ್ನದ ಊಟವು ಅಲ್ಲೇ ಆಯಿತು. ಸಂಜೆವೇಳೆ ಸ್ಟೇಟ್ಮೆಂಟ್ ತೆಗೆದುಕೊಂಡು ಕಳಿಸಿದರು. ನಾವು ಆಫೀಸಿಗೆ ಬರುವ ಮೊದಲೇ ಸಿಸಿಬಿಯ ತಂಡವೊಂದು ಸರ್ಚ್ ಆರ,ಭಿಸಿತ್ತು. ಕೋರ್ಟ್ ಆದೇಶವಾಗಿರುವ ಕಾರಣ ನಾವು ಪಾಲಿಸಲೇಬೇಕಿತ್ತು. ಮೊದಲು ಒಂದಷ್ಟು ಡಾಕ್ಯುಮೆಂಟ್ ಪಡೆದುಕೊಂಡರು. ನಮ್ಮ ಸಿಸ್ಟಮ್, ಲ್ಯಾಪ್ಟಾಪ್, ಹಾರ್ಡ್‌ಡಿಸ್ಕ್ ಎಲ್ಲವನ್ನು ತೆಗೆದುಕೊಂಡು ಮುಗಿಸಿ ಮಹಜರು ಮಾಡುತ್ತಿದ್ದರು. ಆದರೆ ಆ ಬಳಿಕ ಸರ್ವರ್ ರೂಮ್‌ಗೂ ಬಂದರು ಸರ್ವರೇ ಬೇಕು, ಸಿಸ್ಟಮ್ಮೇ ಬೇಕು ಎಂದರು. ಅದನ್ನು ಕೊಟ್ಟರೆ ವಾಹಿನಿಯ ಪ್ರಸಾರ ನಿಂತೇ ಹೋಗುತ್ತದೆ ಎಂದು ಗೊತ್ತಿದ್ದೂ ಹಠಕ್ಕೆ ಬಿದ್ದು ತೆಗೆದುಕೊಂಡು ಹೋದರು. ಪೊಲೀಸರು ಸರ್ಕಾರಿ ನೌಕರರು. ಅವರಿಗೆ ಏನು ಆದೇಶ ಇತ್ತೋ ಗೊತ್ತಿಲ್ಲ. ಆದರೆ ಚಾನೆಲ್ ಮುಚ್ಚಿಸಬೇಡಿ ಎಂದು ಎಷ್ಟೇ ರಿಕ್ವೆಸ್ಟ್ ಮಾಡಿದರೂ ಒಪ್ಪಿಕೊಳ್ಳಲಿಲ್ಲ.
ಅವರಿಗೆ ಬೇಕಿದ್ದಿದ್ದು ನಾವು ಪ್ರಸಾರ ಮಾಡಿದ ಫುಟೇಜ್ ಮಾತ್ರ. ಅದೆಲ್ಲವನ್ನೂ ಕೊಟ್ಟಿದ್ದೇವೆ. ಆದರೂ ಅವರಿಗೆ ವಾಹಿನಿಯ ಪ್ರಸಾರ ಸ್ಥಗಿತಗೊಳಿಸವ ಸಂದರ್ಭ ಬಂದಿದ್ದೇಕೆ? ನನಗೆ ತಿಳಿದಿರುವ ಪ್ರಕಾರ ಒಂದು ವಾಹಿನಿಯನ್ನು ಸ್ಥಗಿತಗೊಳಿಸುವ ಅಧಿಕಾರ ನಮ್ಮ ರಾಜ್ಯ ಸರ್ಕಾರ ಅಥವಾ ಪೊಲೀಸರಿಗೆ ಇದೆಯಾ? ಗೊತ್ತಿಲ್ಲ! ನನ್ನ ಪ್ರಕಾರ ಕೇಂದ್ರ ಸರ್ಕಾರದ ಬ್ರಾಡ್‌ಕಾಸ್ಟ್ ಮಿನಿಸ್ಟ್ರಿ ಏನಿದೆ ಅಲ್ಲಿಂದ ಪರವಾನಗಿ ಪಡೆದ ಮೇಲೆ ಮಾತ್ರ ಮುಚ್ಚಬಹುದು. ಹಾಗೆ ಆಗಬೇಕಾದರೆ ನಮ್ಮ ಲೈಸೆನ್ಸ್ ಕ್ಯಾನ್ಸಲ್ ಆಗಿರಬೇಕು ಅಥವಾ ಇಲ್ಲೀಗಲ್ ಆಗಿರುವುದನ್ನು ನಾವು ಪ್ರಸಾರ ಮಾಡಿರಬೇಕು. ಇದು ಪ್ರೊಸೀಜರ್. ಆದರೆ ಇದು ಯಾವುದೂ ಇಲ್ಲದೆ ಏಕಾಏಕಿ ವಾಹಿನಿ ಮುಚ್ಚಲಾಗಿದೆ. ನಾವು ಈ ಮುಂದೆ ಈ ಬಗ್ಗೆ ಕೋರ್ಟಲ್ಲಿ ಫೈಟ್ ಮಾಡಬೇಕಿದೆ. ಯಾಕೆಂದರೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇದೆ.
ಮಾಧ್ಯಮದವರಿಗೆ ಕರೆ
ಈ ಸಂದರ್ಭದಲ್ಲಿ ನಾನು ಈ ಬಗ್ಗೆ ಮೌನವಾಗಿರುವ ಇತರ ಮಾಧ್ಯಮದವರನ್ನು ದೂಷಿಸಲಾರೆ. ನಿಮಗೆ ನಿಮ್ಮದೇ ಕಾರಣಗಳು ಇರಬಹುದು. ಕೋರ್ಟ್‌ನಿಂದ ಇಂಜೆಂಕ್ಷನ್ ಬಂದಿರಲೂಬಹುದು. ನಮಗೂ ತಡೆಯಾಜ್ಞೆ ಇದೆ; ಆದರೆ ಇಲ್ಲಸಲ್ಲದ ಫ್ಯಾಬ್ರಿಕೇಟೆಡ್ ಸುದ್ದಿ ಮಾಡಬಾರದು ಎಂದಷ್ಟೇ ಇದೆ. ನಾವು ಅಂಥ ಆಧಾರ ರಹಿತ ಸುದ್ದಿ ಮಾಡಿಲ್ಲ. ತಪ್ಪಾಗಿದ್ದರೆ ಕೇಸ್ ಹಾಕಿಸಿ ಅಲೆದಾಡುವಂತೆ ಮಾಡಬಹುದಿತ್ತು. ಆದರೆ ಒಂದು ವಾಹಿನಿಯನ್ನೇ ಮುಚ್ಚಿಸುವ ಹಂತಕ್ಕೆ ಸರ್ಕಾರ ಹೋಗಬಾರದಿತ್ತು. ರಾಜ್ಯದಲ್ಲಿ ಬೇಕಾದಷ್ಟು ವಾಹಿನಿಗಳು ಹಲವಾರು ರೀತಿಯಲ್ಲಿ ಮುಚ್ಚಿ ಹೋದವು. ಆದರೆ ಈ ರೀತಿ ಮುಚ್ಚಿರುವುದನ್ನು ಅಧಿಕಾರದ ಮದ ಎಂದೇ ಹೇಳಬೇಕೇನೋ. ಹಾಗಾಗಿ ಬೇರೆ ವಾಹಿನಿಗಳಿಗೂ ಇಂಥ ಪರಿಸ್ಥಿತಿ ಬರಬಹುದು. ಹಾಗಂತ ನಾನು ಅವರಿಗೆ ಶಾಪ ಹಾಕುತ್ತಿಲ್ಲ. ಆದರೆ ಮಾಧ್ಯಮದವರು ಒಂದಾಗಲು ಇದು ಸಕಾಲ.
(ಅಂದಹಾಗೆ ಇದೇ ಸಂದರ್ಭದಲ್ಲಿ ವಾಹಿನಿಯ ಮುಖ್ಯಸ್ಥ ಚಂದನ್ ಶರ್ಮ ಅವರು ಎಲ್ಲಿದ್ದಾರೆ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆದಿದೆ. ಅವರಿಗೆ ಮತ್ತು ಕುಟುಂಬಕ್ಕೆ ಕೊರೊನಾ ಸೋಂಕು ಉಂಟಾಗಿದ್ದು, ಈಗಷ್ಟೇ ಚೇತರಿಸುತ್ತಿರುವುದಾಗಿ ತಿಳಿದು ಬಂದಿದೆ.- ಸಂ)