ಜನಪ್ರಿಯ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ನಿಧನರಾಗಿ ಐದು ದಿನಗಳಾಗಿವೆ. ಐದನೆಯ ದಿನದಂದು ಚೆನ್ನೈನಲ್ಲಿ ನೆರವೇರಿದ ಸಂತಾಪ ಸಭೆಯಲ್ಲಿ ಎಸ್ಪಿಬಿಯವರ ಕುಟುಂಬ ಮತ್ತು ಚಿತ್ರರಂಗದ ಗಣ್ಯರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಗಾಯಕ ಬಾಲಸುಬ್ರಹ್ಮಣ್ಯಂ ಅವರು ದಾಖಲಾಗಿದ್ದ ಚೆನ್ನೈನ ಎಂಜಿಎಂ ಆಸ್ಪತ್ರೆಯ ವೈದ್ಯರಾದ ದೀಪಕ್ ಸುಬ್ರಹ್ಮಣ್ಯಂ ಒಂದು ಕುತೂಹಲಕಾರಿ ವಿಚಾರವನ್ನು ಹಂಚಿಕೊಂಡಿದ್ದಾರೆ.
ಎಸ್ಪಿಬಿಯವರು ಆಸ್ಪತ್ರೆಯಲ್ಲಿದ್ದ ಅಷ್ಟು ದಿನಗಳಲ್ಲಿ ಅವರೊಂದಿಗೆ ದಿನಕ್ಕೆ ಐದು ಗಂಟೆಯಂತೆ ಕಳೆದವರು ಡಾಕ್ಟರ್ ದೀಪಕ್ ಸುಬ್ರಹ್ಮಣ್ಯಂ. ಈ ಸಂದರ್ಭದಲ್ಲಿ ಅವರಿಗೆ ಅನುಭವವಾದ ಒಂದು ವಿಚಾರವನ್ನು ಅವರು ತಿಳಿಸಿದ ರೀತಿ ಹೀಗೆ; ಒಬ್ಬ ವೈದ್ಯನಾಗಿ ರೋಗಿಗಳ ಸಾವನ್ನು ಕಂಡಿದ್ದೇನೆ. ಗುಣಮುಖರಾಗಿ ತೆರಳಿರುವುದನ್ನೂ ಕಂಡಿದ್ದೇನೆ. ಗುಣಮುಖರಾದಾಗ ಖುಷಿಯಾಗಿದ್ದೇನೆ, ತೀರಿಹೋದಾಗ ಅಪ್ಸೆಟ್ ಆಗಿದ್ದೇನೆ. ಆದರೆ ಎಸ್ಪಿಬಿಯವರ ಅಗಲಿಕೆ ನನ್ನೊಳಗೆ ದೊಡ್ಡದೊಂದು ಶೂನ್ಯತೆಯನ್ನು ಸೃಷ್ಟಿಸಿದೆ. ಆ ಶೂನ್ಯ ಭಾವ ಯಾವಾಗ ಹೋದೀತು ಎನ್ನುವುದು ನನಗೂ ಗೊತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ನನಗೆ ಐದಾರು ವರ್ಷಗಳಿಂದ ಅವರು ನಮ್ಮ ಫ್ಯಾಮಿಲಿಯಂತೆ ಆತ್ಮೀಯವಾಗಿದ್ದವರು. ಚರಣ್, ಪಲ್ಲವಿ ಕೂಡ ನನಗೆ ಸ್ನೇಹಿತರಂತೆ ಇದ್ದವರು. ನಾವು ವೈದ್ಯರು ವಿಜ್ಞಾನವನ್ನು ನಂಬುವವರು. ಆದರೆ ಈ ಕ್ಷಣಕ್ಕೂ ನನ್ನಿಂದ ನಂಬಲಾಗದ ಒಂದು ಘಟನೆ ಆಸ್ಪತ್ರೆಯಲ್ಲಿ ನಡೆದಿದೆ. ಅದನ್ನು ಮಾತ್ರ ಹೇಳಿ ನನ್ನ ಮಾತು ಮುಗಿಸುತ್ತೇನೆ. ಅವರು ದಾಖಲಾಗಿದ್ದ ಆರಂಭದ ಎರಡು ವಾರಗಳಲ್ಲಿ ರೋಗದ ತೀವ್ರತೆ ಜಾಸ್ತಿಯಾಗಿತ್ತು. ಒಂದು ಪರ್ಟಿಕ್ಯುಲರ್ ಸ್ಕ್ಯಾನಿಂಗ್‌ಗಾಗಿ ಅವರನ್ನು ಶಿಫ್ಟ್ ಮಾಡಿದ್ದೆವು. ಆ ಗುರುವಾರದ ದಿನವೇ ಸಂಜೆ ಜಗತ್ತು ಅವರಿಗಾಗಿ ಪ್ರಾರ್ಥಿಸಿತ್ತು. ಇಂದಿಗೂ ನನಗೆ ನಂಬಿಕೆ ಮೂಡದಂಥ ಒಂದು ವಿಚಾರ, ಹಾಗೆ ಶಿಫ್ಟ್ ಮಾಡಬೇಕಾದಾಗ ಅವರ ಆರೋಗ್ಯ ತುಂಬ ಅನ್‌ಸ್ಟೇಬಲ್ ಆಗಿತ್ತು. ಆದರೆ ಆ ಪ್ರಾರ್ಥನೆಯ ಹದಿನೈದು ನಿಮಿಷಗಳ ಕಾಲ ಅವರ ಆರೋಗ್ಯದಲ್ಲಿ ತುಂಬ ಸ್ಥಿರತೆ ಮೂಡಿತ್ತು. ನನಗೆ ಅನಿಸಿದ್ದೇನೆಂದರೆ ಅದೊಂದು ದಿನದ ಪ್ರಾರ್ಥನೆಯೇ ಅವರನ್ನು ಆನಂತರದ ಅಷ್ಟು ದಿನಗಳ ಕಾಲ ಉಳಿಸಿತು ಎಂದು.. ದುರಂತವೇನೆಂದರೆ ಅವರನ್ನು ಉಳಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗಲಿಲ್ಲ. ಆದರೆ ಅವರು ಇಂದಿಗೂ ನಮ್ಮೊಂದಿಗೆ ಇದ್ದಾರೆ ಎಂದು ನಾನು ನಂಬುತ್ತೇನೆ. ಅದರಲ್ಲಿಯೂ ಚರಣ್ ಅವರನ್ನು ನೋಡುವಾಗಲೆಲ್ಲ ಎಸ್ಪಿಬಿಯವರು ಅವರಲ್ಲೇ ಇರುವುದಾಗಿ ಅಂದುಕೊಳ್ಳುತ್ತೇನೆ. ಇದು ಡಾ ದೀಪಕ್ ಸುಬ್ರಹ್ಮಣ್ಯಂ ಅವರ ಮಾತು.
ಬಹುಶಃ ವೈದ್ಯರು ಈ ಮಾತನ್ನು ಆ ದಿನವೇ ಹೇಳಿದ್ದರೆ ಅವರಿಗಾಗಿ ನಿರಂತರ ಪ್ರಾರ್ಥಿಸಲು ಜಗತ್ತಿನ ತುಂಬ ಅಭಿಮಾನಿಗಳಿದ್ದರು ಎನ್ನುವುದು ಸತ್ಯ. ಇನ್ನು ಪಶ್ಚಾತಾಪ ಪಟ್ಟು ಪ್ರಯೋಜನವಿಲ್ಲ. ಎಲ್ಲರಿಗೂ ಎಸ್ಪಿಬಿಯವರಂಥ ಗಾಯಕರಾಗಲು ಸಾಧ್ಯವಿಲ್ಲ. ಆದರೆ ಅವರಲ್ಲಿನ ಒಳ್ಳೆಯತನವನ್ನು ಬದುಕಲ್ಲಿ ಅಳವಡಿಸಲು ಯತ್ನಿಸುವುದೇ ನಿಜಕ್ಕೂ ಅವರಿಗೆ ನಾವು ನೀಡುವ ಸಾರ್ಥಕ ಶ್ರದ್ದಾಂಜಲಿ ಆಗಬಹುದು.