ಪ್ರೀತು ಪೂಜಾ ಎನ್ನುವ ಹೆಸರೇ ವಿಭಿನ್ನವಾಗಿದೆ. ಆದರೆ ಈ ಚೆಲುವೆಯ ಮುಖ ನೋಡುತ್ತಿದ್ದರೆ ಮಾತ್ರ ಆತ್ಮೀಯ ಪರಿಚಯ ಇರುವಂತೆ ಕಂಡರೆ ಅಚ್ಚರಿ ಇಲ್ಲ. ಒಂದೆರಡು ಸೀರಿಯಲ್ ಮತ್ತು ಈಗ ಸಿನಿಮಾ ಸಿನಿಮಾ ಮೂಲಕ ಹೆಸರು ಮಾಡುತ್ತಿರುವ ಹುಡುಗಿ. ಇಂಡಸ್ಟ್ರಿಯಲ್ಲಿ ಜ್ಯೂನಿಯರ್ ರಚಿತಾ ರಾಮ್ ಎನ್ನುವ ಹೆಸರೂ ಇದೆ. ನೋಟದಲ್ಲಿ ಮಾತ್ರವಲ್ಲ; ಟ್ಯಾಲೆಂಟಲ್ಲಿ ಕೂಡ ಕಡಿಮೆಯೇನಿಲ್ಲ ಎಂದು ಸಾಬೀತು ಮಾಡಲು ನಾಲ್ಕೈದು ಚಿತ್ರಗಳ ಮೂಲಕ ಒಮ್ಮೆಲೆ ತಯಾರಾಗುತ್ತಿದ್ದಾರೆ. ನಾಯಕಿಯಾಗಿ ನಟಿಸಿದ ಪ್ರಥಮ ಚಿತ್ರ ಅಡಚಣೆಗಾಗಿ ಕ್ಷಮಿಸಿ' ಬಂದಮೇಲೆ ನಿಜಕ್ಕೂ ಒಂದಷ್ಟು ಕಾಲ ಬೇರೆ ಚಿತ್ರಗಳ ಬಿಡುಗಡೆಗೆ ಅಡಚಣೆಯಾಗಿದ್ದು ನಿಜ! ಅದಕ್ಕೆ ಲಾಕ್ಡೌನ್ ಕೂಡ ಕಾರಣ. ಮಾರ್ಚಲ್ಲೇ ಬಿಡುಗಡೆಯಾಗಬೇಕಿದ್ದ
ದಿ ಚೆಕ್ಮೇಟ್’ ಚಿತ್ರಕ್ಕೆ ಚೆಕ್ ನೀಡಿದ್ದ ಕೊರೊನಾ ಭಯ ಈಗ ದೂರಾಗಿದೆ. ಹಾಗಾಗಿ ಪ್ರೀತು ಪೂಜಾ ಅಭಿನಯದ ಒಂದೊಂದೇ ಚಿತ್ರಗಳು ತೆರೆಗೆ ಸಿದ್ಧವಾಗುತ್ತಿವೆ. ಆ ಬಗ್ಗೆ ಸಿನಿಕನ್ನಡ.ಕಾಮ್ ಜತೆಗೆ ಪ್ರೀತಿಯಿಂದ ಮಾತನಾಡಿದ್ದಾರೆ ಪ್ರೀತು ಪೂಜಾ.
ನಿಮ್ಮ ನಿಜವಾದ ಹೆಸರೇ `ಪ್ರೀತು ಪೂಜಾ’ ಎಂದೇ?
ನನ್ನ ಹೆಸರು ಪೂಜಾ. ಆದರೆ ಸಿನಿಮಾರಂಗಕ್ಕೆ ಬರುವಾಗ ಪ್ರೀತು ಪೂಜಾ ಎನ್ನುವ ಹೆಸರಲ್ಲೇ ಪರಿಚಿತಳಾದೆ. ಹಾಗೆ ಹೆಸರು ಬದಲಾಯಿಸಲು ಕಾರಣರಾದವರು ನಮ್ಮ ಮೇಕಪ್ ಆರ್ಟಿಸ್ಟ್! ನಾನು ಯಾವಾಗಲೂ ಎಲ್ಲರೊಂದಿಗೆ ಪ್ರೀತಿಯಿಂದ ವರ್ತಿಸುತ್ತೇನೆ ಎನ್ನುವ ಕಾರಣಕ್ಕೆ ಅವರು ನನಗೆ ಆ ಹೆಸರು ಕೊಟ್ಟಿದ್ದರು. ಮಾತ್ರವಲ್ಲ ಅದೊಂಥರ ಯೂನಿಕ್ ಆಗಿ ಇರುತ್ತೆ; ಗುರುತಿಸಿಕೊಳ್ಳೋಕೆ ಸಹಾಯವಾಗುತ್ತೆ ಎನ್ನುವ ಕಾರಣಕ್ಕೆ ಆ ಹೆಸರು ಇಡಲು ಹೇಳಿದರು. ನನಗೂ ಅದು ಸರಿ ಎನಿಸಿತು. ಹಾಗಾಗಿ ಅವರ ನೆನಪಲ್ಲಿ ಈಗಲೂ ಪ್ರೀತು ಪೂಜಾ ಎನ್ನುವ ಹೆಸರನ್ನೇ ಉಳಿಸಿಕೊಂಡಿದ್ದೇನೆ.
ಮೊದಲ ಚಿತ್ರದಲ್ಲಿ ನಟಿಸಿದಾಗಿನ ಅನುಭವ ಹೇಗಿತ್ತು?
ನನ್ನ ಫ್ಯಾಮಿಲಿಗೆ ಚಿತ್ರರಂಗದ ಜತೆಗೆ ಯಾವುದೇ ಸಂಬಂಧ ಇರಲಿಲ್ಲ. ಹಾಗಾಗಿ ಮೊದಲ ಸಿನಿಮಾದ ವೇಳೆ ನನಗೆ ಸಿನಿಮಾರಂಗವೇ ಹೊಸದಾಗಿತ್ತು. ಎಲ್‌ಎಲ್‌ಬಿ ಮಾಡಿದ್ದ ನನಗೆ ಕಾಕಾತಾಳೀಯ ಎನ್ನುವಂತೆ ನಾಯಕಿಯಾದ ಮೊದಲ ಚಿತ್ರದಲ್ಲೇ ಲಾಯರ್ ಪಾತ್ರವೇ ಸಿಕ್ಕಿತ್ತು. ಉಳಿದಂತೆ ಫ್ಯಾಷನ್ ಶೋಸ್, ಮಾಡೆಲಿಂಗ್, ರ್ಯಾಂಪ್ ವಾಕ್ ಮಾಡುತ್ತಿದ್ದ ಅನುಭವ ಇತ್ತು. ಅಡಚಣೆಗಾಗಿ ಕ್ಷಮಿಸಿ' ಚಿತ್ರದಲ್ಲಿನ ಪಾತ್ರ ನನಗೆ ಆಡಿಶನ್ಸ್ ಅಟೆಂಡ್ ಮಾಡಿದ ಮೇಲೆಯೇ ದೊರಕಿತ್ತು. ಆದರೆ
ತನಿಷ್ಕ’ ಮೊದಲಾದ ಜ್ಯುವೆಲ್ಲರಿ ಜಾಹೀರಾತುಗಳಲ್ಲಿ ನಟಿಸಿದ್ದ ಕಾರಣ ಕ್ಯಾಮೆರಾ ಎದುರಿಸುವುದು ಕಷ್ಟವಾಗಿರಲಿಲ್ಲ. ಚಿತ್ರ ತೆರೆಕಂಡ ಮೇಲೆ ನೋಡುಗರು ಮತ್ತು ಮಾಧ್ಯಮದವರು ನನ್ನ ನಟನೆಯ ಬಗ್ಗೆ ಮೆಚ್ಚುಗೆಯ ಮಾತನಾಡಿದಾಗ ಚಿತ್ರರಂಗದಲ್ಲಿ ಮುಂದುವರಿಯುವ ಧೈರ್ಯ ಬಂತು.
ನಿಮ್ಮ ಹೊಸ ಪ್ರಾಜೆಕ್ಟ್‌ಗಳು ಯಾವುವು?
ಸದ್ಯಕ್ಕೆ ದಿ ಚೆಕ್ಮೇಟ್' ಬಿಡುಗಡೆಗೆ ತಯಾರಾಗಿದೆ. ಚಿತ್ರದಲ್ಲಿ ನಾನು ನಾಯಕ ರಂಜನ್ ಹಾಸನ್‌ಗೆ ಜೋಡಿಯಾಗಿದ್ದೇನೆ. ಅದರ ಬಳಿಕ ಮೂರು ಪ್ರಾಜೆಕ್ಟ್ ಏಕಕಾಲದಲ್ಲಿ ನಡೆಯುತ್ತಿದೆ. ಅದರಲ್ಲೊಂದು
ಅನಂತನ ಅವತಾರ.’ ಆ ಸಿನಿಮಾದಲ್ಲಿ ನಾನು ವಿಚ್ಛೇದಿತ ಮಹಿಳೆಯ ಪಾತ್ರ ಮಾಡುತ್ತಿದ್ದೇನೆ. ಆಕೆಗೆ ಮತ್ತೆ ಹೇಗೆ ಪ್ರೀತಿಯಾಗುತ್ತದೆ ಎನ್ನುವುದು ಚಿತ್ರದ ಕತೆ. ಚಿತ್ರಕ್ಕೆ ಸಂದೀಪ್ ನಿರ್ದೇಶಕರು. ಅವರದೇ ಟೀಮ್ ಜತೆಗೆ ಮತ್ತೊಂದು ಚಿತ್ರ ಪನೋರಮ' ಕೂಡ ಮಾಡುತ್ತಿದ್ದೇನೆ. ಅದರಲ್ಲಿ ನನ್ನದು ವೇಶ್ಯೆಯ ಪಾತ್ರ. ಇವುಗಳಲ್ಲದೆ
ಕ್ಯಾಂಪಸ್ ಕ್ರಾಂತಿ’ ಮತ್ತು `ನೈಂಟಿ ಹೊಡಿ ಮನೆಗೆ ನಡಿ’ ಎನ್ನುವ ಚಿತ್ರಗಳ ಚಿತ್ರೀಕರಣ ಈಗ ನಡೆಯುತ್ತಿದೆ.
ವಿಭಿನ್ನವಾದ ಪಾತ್ರಗಳ ಆಯ್ಕೆ ಚಾಲೆಂಜಿಂಗ್ ಅನಿಸಿದೆಯೇ?
ಹೌದು; ಆದಷ್ಟು ಬೇಗ ನನ್ನನ್ನು ಚಿತ್ರರಂಗ ಉತ್ತಮ ನಟಿಯಾಗಿ ಗುರುತಿಸಬೇಕು ಎನ್ನುವ ಉತ್ಸಾಹದಲ್ಲಿ ಸಾಧ್ಯವಾದಷ್ಟು ವಿಭಿನ್ನವಾದ ಹಾಗೂ ನಾಯಕಿಗೆ ಪ್ರಾಧಾನ್ಯತೆ ಇರುವ ಪಾತ್ರಗಳನ್ನೇ ಆಯ್ದುಕೊಳ್ಳುತ್ತೇನೆ. ಸಹಜವಾಗಿ ಪನೋರಮ'ದಂಥ ಚಿತ್ರದಲ್ಲಿ ವೇಶ್ಯೆಯ ಪಾತ್ರ ನಿಭಾಯಿಸುವಾಗ ಚಾಲೆಂಜಿಂಗ್ ಅನಿಸಿತ್ತು. ಅದು ಬೇರೆ ನೈಜ ಘಟನೆಯನ್ನು ಆಧಾರಿಸಿರುವಂಥ ಚಿತ್ರ. ಅಸ್ಸಾಮಲ್ಲಿ ನಡೆದ ಘಟನೆಯೇ ಚಿತ್ರಕ್ಕೆ ಸ್ಫೂರ್ತಿ. ಕ್ಲೈಮ್ಯಾಕ್ಸ್ ಅಂತೂ ತುಂಬ ಡಿಫರೆಂಟ್ ಆಗಿದೆ. ಅದನ್ನು ನೀವು ಥಿಯೇಟರಲ್ಲೇ ನೋಡಬೇಕು. ಆದರೆ ವೇಶ್ಯೆಯ ಪಾತ್ರ ಎನ್ನುವ ಕಾರಣಕ್ಕೆ ಅದರಲ್ಲಿ ಅಂಥ ವಲ್ಗಾರಿಟಿ ಅನ್ನೋದು ಏನಿಲ್ಲ.
ನೈಂಟಿ ಹೊಡಿ ಮನೀಗ್ ನಡಿ’ ಚಿತ್ರದ ಹೆಸರು ಫ್ಯಾಮಿಲಿ ಸಿನಿಮಾದಂತೆ ಇರದೇ ಇರಬಹುದು. ಆದರೆ ಅದು ಪಕ್ಕಾ ಫ್ಯಾಮಿಲಿ ಸ್ಟೋರಿಯೇ. ಚಿತ್ರದಲ್ಲಿ ನಾನು ಒಂದು ಸಸ್ಪೆನ್ಸ್ ಪಾತ್ರ ಮಾಡುತ್ತಿದ್ದೇನೆ. ನನಗೆ ಜೋಡಿಯಾಗಿ ಅಭಯ್ ನಟಿಸಿದ್ದಾರೆ.
ನಿಮ್ಮ ಹಿನ್ನೆಲೆ ಬಗ್ಗೆ ಹೇಳಿ
ನಾನು ಮೂಲತಃ ಮೈಸೂರಿನ ಹುಡುಗಿ. ಈಗ ಬೆಂಗಳೂರಲ್ಲೇ ಸೆಟಲಾಗಿದ್ದೀನಿ. ಅಪ್ಪ ಜಯಪ್ರಕಾಶ್ ಎಪಿಎಂಸಿ ಡೈರೆಕ್ಟರ್ ಆಗಿದ್ದವರು ಪ್ರಸ್ತುತ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಅಮ್ಮ ಲತಾ ಗೃಹಿಣಿ. ಅಕ್ಕ ಜಯಶ್ರೀ ಐಎಎಸ್ ಮಾಡ್ತಿದ್ದಾಳೆ. ತಮ್ಮ ಇವೆಂಟ್ ಮ್ಯಾನೇಜ್ಮೆಂಟ್ ನಲ್ಲಿ ತೊಡಗಿಸಿಕೊಂಡಿದ್ದಾನೆ. ನಾನು ನಟಿಯಾಗಿದ್ದೇನೆ. ಇಂಥ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ನನಗೆ ಗೊತ್ತಿಲ್ಲದಂತೆ ಬೆಳೆದ ಬಣ್ಣದ ಲೋಕದ ಆಸಕ್ತಿ ಇಂದು ನನ್ನನ್ನು ಚಿತ್ರ ನಟಿಯಾಗಿ ಬದಲಾಯಿಸಿದೆ. ಅದನ್ನು ಚೆನ್ನಾಗಿ ಬಳಸಿಕೊಂಡು ಕನ್ನಡದ ಶ್ರೇಷ್ಠ ನಟಿಯರಲ್ಲಿ ಒಬ್ಬಳೆಂದು ಜನ ಗುರುತಿಸುವಂತಾಗುವ ಆಸೆ ಇದೆ. ಹಾಗಾಗಿಯೇ ನಾನು ಲಾ ಪ್ರ್ಯಾಕ್ಟೀಸ್‌ಗಿಂತ ಸಿನಿಮಾಗಳಿಗೆ ಹೆಚ್ಚು ಒತ್ತು ನೀಡಿದ್ದೇನೆ. ಎಲ್ಲಿಯವರೆಗೆ ಈ ಪಯಣ ಸಾಗುವುದೋ ಅಲ್ಲಿಯವರೆಗೆ ಚಿತ್ರರಂಗದಲ್ಲೇ ಸಮರ್ಪಣಾಭಾವದಿಂದ ಕೆಲಸ ಮಾಡಬೇಕು ಅಂತ ಇದ್ದೀನಿ.