
ಹೊಸದಾಗಿ ಬಿಡುಗಡೆಯಾಗಲಿರುವ ಚಿತ್ರಗಳಿಗೆ ವರ್ಚುಯಲ್ ಪ್ರಿಂಟ್ ಫೀ(ವಿಪಿಎಫ್)ಯಲ್ಲಿ ಐವತ್ತು ಪರ್ಸೆಂಟ್ ಕಡಿಮೆ ಮಾಡುವುದಾಗಿ ಕ್ಯೂಬ್ ಸಿನಿಮಾಸ್ ಘೋಷಿಸಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಅವರ ಇಂಥ ನಿರ್ಧಾರದ ಹಿಂದೆ ಐಎಫ್‌ಎಂಎಯ ಕಾರ್ಯವೈಖರಿ ಇದೆ ಎನ್ನುವುದನ್ನು ಪ್ರಧಾನ ಕಾರ್ಯದರ್ಶಿ ದಿಲೀಪ್ ಅವರು ಸಿನಿಕನ್ನಡ.ಕಾಮ್‌ಗೆ ತಿಳಿಸಿದ್ದಾರೆ.
ಕೊವಿಡ್ 19 ಕಾರಣದಿಂದ ಮಾಡಲಾದ ಲಾಕ್ಡೌನ್ ಪರಿಣಾಮ ಸಿನೆಮಾ ಉತ್ಪಾದನೆ ಮತ್ತು ವಿತರಣೆಯನ್ನು 7 ತಿಂಗಳಿಗೂ ಹೆಚ್ಚು ಕಾಲ ಸ್ಥಗಿತಗೊಳಿಸಿದೆ. ವಿಭಿನ್ನ ಕೈಗಾರಿಕೆಗಳು ನಿಧಾನವಾಗಿ ವ್ಯವಹಾರವನ್ನು ಪುನರಾರಂಭಿಸುತ್ತಿರುವುದರಿಂದ, ಸಿನೆಮಾ ವ್ಯವಹಾರ ಕೂಡ ಆರಂಭಿಸಲಾಗಿದೆ. ಪುನರುಜ್ಜೀವನದ ಸಮಯದಲ್ಲಿ ಉದ್ಯಮದ ಎಲ್ಲಾ ಪಾಲುದಾರರು ಪರಸ್ಪರ ಬೆಂಬಲಿಸುವುದು ಅನಿವಾರ್ಯವಾಗಿದೆ ಎಂದು ನಂಬಿರುವ ಕ್ಯೂಬ್, “ಸಾಂಕ್ರಾಮಿಕದಿಂದ ಉಂಟಾಗುವ ವ್ಯತಿರಿಕ್ತ ಆರ್ಥಿಕ ಪರಿಣಾಮವನ್ನು ಸ್ವಲ್ಪಮಟ್ಟಿಗಾದರೂ ನಿವಾರಿಸಲು ನಿರ್ಮಾಪಕರು ಮತ್ತು ವಿತರಕರಿಗೆ ಸಹಾಯ ಮಾಡುವುದಕ್ಕಾಗಿ ಈ ಕೊವಿಡ್ ಪ್ಯಾಕೇಜ್ ಘೋಷಿಸುವುದಾಗಿ ಎರಡು ದಿನಗಳ ಹಿಂದೆ ಮಾಧ್ಯಮ ಪ್ರಕಟಣೆಯ ಮೂಲಕ ಹೇಳಿಕೊಂಡಿತ್ತು. ಆ ಪ್ರಕಾರ ಚಲನಚಿತ್ರ ನಿರ್ಮಾಪಕರು ತಮ್ಮ ಚಲನಚಿತ್ರಗಳನ್ನು ಸುಲಭವಾಗಿ ಬಿಡುಗಡೆ ಮಾಡಲು ಸಹಾಯ ಮಾಡಲು, ಎಲ್ಲಾ ಹೊಸ ಚಲನಚಿತ್ರಗಳಿಗೆ ವರ್ಚುವಲ್ ಪ್ರಿಂಟ್ ಶುಲ್ಕವನ್ನು (ವಿಪಿಎಫ್) ಡಿಸಿಐ ಮತ್ತು ಇ-ಸಿನೆಮಾ ಎರಡಕ್ಕೂ ಪ್ರಸ್ತುತ ಬೆಲೆ ಪಟ್ಟಿಯಿಂದ 50% ಗೆ ರಿಯಾಯಿತಿ ನೀಡಲಾಗುವುದು ಎಂದು ಕ್ಯೂಬ್ ಘೋಷಿಸಿದೆ. ಆಯಾ ರಾಜ್ಯಗಳಲ್ಲಿ ಚಿತ್ರಮಂದಿರಗಳ ಪ್ರಾರಂಭದ ದಿನಾಂಕದಿಂದ 2020 ರ ಡಿಸೆಂಬರ್ 31 ರವರೆಗೆ ರಿಯಾಯಿತಿ ಅನ್ವಯವಾಗುತ್ತದೆ. ವಿಪಿಎಫ್ ಉಚಿತವಾಗಿರುತ್ತದೆ; ವಿತರಣಾ ಶುಲ್ಕಗಳು ಮಾತ್ರ ಅನ್ವಯವಾಗುತ್ತವೆ.
ಚಿತ್ರೋದ್ಯಮಿಗಳ ಪಾಲಿಗೆ ಈ ಘೋಷಣೆ ತುಂಬ ಸಮಾಧಾನವನ್ನು ತಂದಿದೆ. ಆದರೆ ಇಂಥದೊಂದು ಘೋಷಣೆ ಮಾಡುವಂತೆ ತಿಂಗಳ ಹಿಂದೆಯೇ ಐಎಫ್‌ಎಂಎ ಮನವಿ ಮಾಡಿತ್ತೆಂಬ ಸತ್ಯವನ್ನು ಸಂಘಟನೆಯ ಪ್ರಧಾನ ಕಾರ್ಯದರ್ಶಿಗಳಾದ ದಿಲೀಪ್ ತಿಳಿಸಿದ್ದಾರೆ. ಈಗಾಗಲೇ ಈ ಕುರಿತಾದ ಮನವಿಯೊಂದನ್ನು ಇಂಡಿಯನ್ ಫಿಲಂ ಮೇಕರ್ಸ್ ಪರವಾಗಿ ಅಧ್ಯಕ್ಷ ಮೂರ್ತಿಯವರ ಮೂಲಕ ಕಳಿಸಿರುವುದನ್ನು ಅವರು ದಾಖಲೆ ಸಮೇತ ನಿರೂಪಿಸಿದ್ದಾರೆ. ಮನವಿಯಲ್ಲಿ ಕ್ಯೂಬ್ ಚಾರ್ಜ್ ಅನ್ನು ಐವತ್ತರಷ್ಟು ಕಡಿಮೆ ಮಾಡುವಂತೆ ಸ್ಪಷ್ಟವಾಗಿ ಹೇಳಲಾಗಿತ್ತು. ಹೀಗಾಗಿ ಇದು ತಮ್ಮ ಪ್ರಯತ್ನಕ್ಕೆ ಸಂದ ಫಲಶ್ರುತಿ ಎಂದು ಐಫ್‌ಎಂಎ ಸಂಭ್ರಮ ವ್ಯಕ್ತಪಡಿಸಿದೆ.

