ನಟ, ಬರಹಗಾರ ಕೃಷ್ಣನಾಡಿಗ್ ನಿಧನ

ಹಿರಿಯ ನಟ ಕೃಷ್ಣ ನಾಡಿಗ್ ಅವರು ಶನಿವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸುಮಾರು ನಾಲ್ಕು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು ಸಾಕಷ್ಟು ಸಿನಿಮಾಗಳಿಗೆ ಬರಹಗಾರರಾಗಿ ಕೆಲಸ ಮಾಡಿದ್ದರೂ ಕೂಡ ಕಲಾವಿದರಾಗಿ ಹೆಚ್ಚು ಜನಪ್ರಿಯರಾಗಿದ್ದರು. ನಿರ್ದೇಶಕರಾಗಬೇಕು ಎನ್ನುವ ಕನಸಿನಿಂದ ಚಿತ್ರರಂಗ ಪ್ರವೇಶ ಮಾಡಿದ್ದ ಅವರ ಕನಸು ಕೊನೆಯವರೆಗೂ ಈಡೇರಲೇ ಇಲ್ಲ.

ಸಿನಿಕನ್ನಡದ ಜೊತೆಗೆ ಮಾತನಾಡಿದ ನಾಡಿಗ್ ಅವರ ಹಿರಿಯ ಪುತ್ರಿ ರಶ್ಮಿ , ಸಣ್ಣ ಮಟ್ಟಿನ ಅಸೌಖ್ಯದ ನಡುವೆಯೂ ತಂದೆ ತಮ್ಮಲ್ಲಿ ಹೇಳದೇ ಶೂಟಿಂಗ್ ಗೆ ಹೋಗಿರುವುದನ್ನು ದುಃಖದಲ್ಲೇ ಹೇಳಿಕೊಂಡರು. ಅರವಿಂದ್ ಕೌಶಿಕ್ ನಿರ್ದೇಶನದ ಹೊಸ ಧಾರಾವಾಹಿ ‘ಲಗ್ನ ಪತ್ರಿಕೆ’ಯಲ್ಲಿ ನಟಿಸುತ್ತಿದ್ದ ಕೃಷ್ಣ ನಾಡಿಗ್ ಅವರಿಗೆ ಮೂರು ದಿನಗಳಿಂದ ಎದೆ ನೋವು ಕಾಡಿತ್ತು. ಅದನ್ನು ಗ್ಯಾಸ್ಟಿಕ್ ಎಂದು ಲಘುವಾಗಿ ಪರಿಗಣಿಸಿದ ನಾಡಿಗ್ ಅವರು ಶೂಟಿಂಗ್ ಕಮಿಟ್ಮೆಂಟ್ ಮುಗಿಸಿಕೊಂಡು ಇವತ್ತು ಭಾನುವಾರ ವೈದ್ಯರ ಬಳಿಗೆ ಹೋಗುವ ಯೋಜನೆ ಹಾಕಿದ್ದರಂತೆ. ಆದರೆ ವಿಪರ್ಯಾಸ ಎನ್ನುವಂತೆ ನಾಡಿಗರನ್ನು ವಿಧಿ ನಿನ್ನೆಯೇ ಇನ್ನಿಲ್ಲವಾಗಿಸಿದೆ. ಎದೆ ನೋವಿನ‌ ಬಗ್ಗೆ ಅಳಿಯನಲ್ಲಿ ಹೇಳಿ ಶೂಟಿಂಗ್ ನಡೆಯುತ್ತಿದ್ದ ರಾಜರಾಜೇಶ್ವರಿ ನಗರದ ಸ್ಥಳೀಯ ಆಸ್ಪತ್ರೆಯಲ್ಲಿ ಇಸಿಜಿ ಮಾಡಿಸಿಕೊಂಡಿದ್ದ ಕೃಷ್ಣ ನಾಡಿಗರು ಹೆಚ್ಚಿನ ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಯ ಹಾದಿಯಲ್ಲಿದ್ದರು. ಆದರೆ ಮಾರ್ಗ ಮಧ್ಯದಲ್ಲೇ ಮತ್ತೊಮ್ಮೆ ಹೃದಯಾಘಾತವಾಗುವ ಮೂಲಕ ಪ್ರಾಣ ಕಳೆದುಕೊಂಡಿರುವುದಾಗಿ ಅವರ ಪುತ್ರಿ ತಿಳಿಸಿದ್ದಾರೆ.

ಕೃಷ್ಣ ನಾಡಿಗ್ ಅವರು ಮೂಲತಃ ಚಿಕ್ಕ ಮಗಳೂರಿನ ಕಡೂರಿನವರು. ವೀಣಾ ವಾದಕಿಯಾದ ತಾಯಿ ಮತ್ತು ಕೊಳಲು ನುಡಿಸಿ, ಸಾಹಿತ್ಯ ಬರೆದು ಸಂಗೀತ ನಿರ್ದೇಶನವನ್ನೂ ಮಾಡುತ್ತಿದ್ದ ತಂದೆಯಿಂದ ಸಾಂಸ್ಕೃತಿಕ ಕ್ಷೇತ್ರದ ಆಸಕ್ತಿಯನ್ನು ಬಳುವಳಿಯಾಗಿ ಪಡೆದಿದ್ದರು. ಊರಿನಲ್ಲಿ ನಡೆಯುತ್ತಿದ್ದ ನಾಟಕಗಳತ್ತ ಅವರಿಗೆ ಆಕರ್ಷಣೆಯಿತ್ತು. ರೇಡಿಯೋದಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಒಲವಿತ್ತು. ಕಾಲೇಜು ದಿನಗಳಲ್ಲಿ ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳನ್ನು ನೋಡಿ ತಾವು ಕೂಡ ನಿರ್ದೇಶನದ ಕನಸು ಕಂಡಿದ್ದರು ನಾಡಿಗ್. ಹಿಂದಿಯ ರಾಜ್ ಕಪೂರ್, ವಿಮಲ್ ರಾಯ್, ಹೃಷಿಕೇಶ್ ಮುಖರ್ಜಿ ಮೊದಲಾದವರ ಚಿತ್ರಗಳ ಪ್ರಭಾವವೂ ಇವರ ಮೇಲಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ತಾಯಿಯಿಂದ ಸಿಕ್ಕ ಓದಿನ ಹಸಿವು ತಮ್ಮನ್ನು ಬರಹಗಾರನಾಗಿಸಿತು ಎಂದೇ ನಾಡಿಗ್ ಸದಾ ನೆನಪಿಸಿಕೊಳ್ಳುತ್ತಿದ್ದರು. ಯಾಕೆಂದರೆ ಅಮ್ಮ ಕೊಟ್ಟ ತ್ರಿವೇಣಿಯವರ ಕಾದಂಬರಿಯವರ ಮೂಲಕ ಓದಿನ ರುಚಿ ಹತ್ತಿಸಿಕೊಂಡಿದ್ದರು.

ಆರಂಭದ ದಿನಗಳಲ್ಲಿ ಸಾಕಷ್ಟು ಬಡತನವನ್ನು ಕಂಡವರು ಕೃಷ್ಣ ನಾಡಿಗ್. ಪಿಯುಸಿ ಮುಗಿಸಿ ಬೆಂಗಳೂರಿಗೆ ಬಂದು ಕಿರ್ಲೋಸ್ಕರ್ ಫ್ಯಾಕ್ಟರಿಯಲ್ಲಿ ಕ್ಯಾಶುಯಲ್ ಲೇಬರ್ ವೃತ್ತಿಯಲ್ಲಿದ್ದುಕೊಂಡು ದಿನಕ್ಕೆ ಎರಡು ರೂಪಾಯಿ ದುಡಿಯುತ್ತಿದ್ದರು. ಕ್ಯಾಂಟೀನಲ್ಲಿ ಕಾರ್ಮಿಕರ ತಟ್ಟೆ, ಲೋಟ ತೊಳೆದೇ ವೃತ್ತಿ ಬದುಕು ಆರಂಭಿಸಿದ್ದರು. ಅಲ್ಲೇ ಕಣಗಾಲ್ ಪ್ರಭಾಕರ ಶಾಸ್ತ್ರಿಯವರ ಶಿಷ್ಯ ಕಲಾವಿದ ಭದ್ರಾಚಲಂ ಎನ್ನುವ ಕಲಾವಿದರ ಪರಿಚಯವಾಯಿತು. ಅವರ ಮೂಲಕ ನಾಟಕದ ಚಟುಚಟಿಕೆಗಳನ್ನು ಆರಂಭಿಸಿದರು.
ವಾಚಕರ ವಾಣಿಗೆ ಬರೆಯುವುದರಿಂದ ಆರಂಭಿಸಿ ಸಿನಿಮಾ ಪತ್ರಿಕೆಗಳಿಗೂ ಬರೆಯಲು ಶುರು ಮಾಡಿದರು. ತಾಯಿನಾಡು' ಪತ್ರಿಕೆಗೆ ಸಿನಿಮಾ ವರದಿಗಾರರಾದರು. ಅದರ ಸಂಪಾದಕ ಶ್ರೀಕೃಪ ಅವರ ಮೂಲಕ ಸಿನಿಮಾ ಕ್ಷೇತ್ರದ ಸಂಪರ್ಕ ಪಡೆದುಕೊಂಡರು. ಕೆ.ವಿ ರಾಜು ಅವರಿಗೆ ಸಹಾಯಕರಾಗಿ ಕೆಲಸ ಮಾಡಿದ್ದರು.ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವ ಮಾತಿನಂತೆ ಒಂದು ಮಟ್ಟಿಗೆ ಎಲ್ಲ ರೀತಿಯ ಕೆಲಸವನ್ನೂ ಮಾಡಿದ್ದಂಥ ಕೃಷ್ಣ ನಾಡಿಗ್ ಕನ್ನಡ ಚಿತ್ರರಂಗದಲ್ಲಿ ಮೊದಮೊದಲ ಪಿಆರ್‌ಒ ಆಗಿ ತಾವೇ ಕೆಲಸ ಮಾಡಿದ್ದಾಗಿಯೂ ಹೇಳಿಕೊಂಡಿದ್ದರು.

ನಿರ್ದೇಶನದ ಕನಸು ಕೊನೆಗೂ ನನಸಾಯಿತು ಎನ್ನುವ ಹಂತದಲ್ಲಿ ದಿಗಂತ್ ಅವರನ್ನು ನಾಯಕರನ್ನಾಗಿಸಿ ‘ಕರೆಯೇ ಕೋಗಿಲೆ ಮಾಧವನ' ಎನ್ನುವ ಚಿತ್ರ ಶುರು ಮಾಡಿದ್ದರು. ಆದರೆ ಅದು ಅರ್ಧದಲ್ಲೇ ನಿಂತು ಹೋಗಿತ್ತು. ಇದರಿಂದ ಒಂದಷ್ಟು ಡಿಪ್ರೆಶನ್‌ಗೆ ಒಳಗಾಗಿದ್ದ ಕೃಷ್ಣ ನಾಡಿಗ್ ಆ ಬಳಿಕ ನಟನೆಯ ಮೂಲಕ ಹೆಚ್ಚು ಗುರುತಿಸಿಕೊಳ್ಳತೊಡಗಿದರು. ಪಿ ಶೇಷಾದ್ರಿಯವರ ಧಾರಾವಾಹಿಯ ಚಿತ್ರಕತೆಗಳಿಗೆ ತಾವು ಸಹಾಯಕರಾಗಿದ್ದಾಗ ಅವರಿಂದಲೇ ಒಂದು ಪಾತ್ರವನ್ನು ಮಾಡುವ ಅವಕಾಶ ನಾಡಿಗ್ ಪಡೆದಿದ್ದರು. ಹಾಗೆಚಕ್ರತೀರ್ಥ’ ಧಾರಾವಾಹಿಯ ಮೂಲಕ ನಟರಾದವರು ಮತ್ತೆ ನಟರಾಗಿಯೇ ಗುರುತಿಸಲ್ಪಟ್ಟರು. ಇದರ ನಡುವೆ ಖಾಸಗಿ ವಾಹಿನಿಯಲ್ಲಿ ಒಂದು ಸತ್ಯ ಕತೆ' ಎನ್ನುವ ಮಾಲಿಕೆಯಲ್ಲಿ ತಮ್ಮ ಸಿನಿಮಾ ಜೀವನದ ಹಲವಾರು ವಿಭಿನ್ನ, ಆಸಕ್ತಿಕರವಾದ ಘಟನೆಗಳನ್ನು ಹಂಚಿಕೊಂಡಿದ್ದರು.ಪಲ್ಲವಿ ಅನುಪಲ್ಲವಿ’, ಮಹಾದೇವಿ' ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದರು.ಮಾಂಗಲ್ಯಂ ತಂತುನಾನೇನ’, ಪೈಲ್ವಾನ್' ಮತ್ತುಆದಿ ಲಕ್ಷ್ಮಿ ಪುರಾಣ’ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಪೋಷಕ ನಟರಾಗಿ ಗುರುತಿಸಿಕೊಂಡಿದ್ದರು. ನಟ ಸಂಚಾರಿ ವಿಜಯ್, ಅಶ್ವಿನ್ ಹಾಸನ್ ನಿರ್ದೇಶಕ ಟಿಎನ್ ಸೀತಾರಾಮ್ ಸೇರಿದಂತೆ ಚಿತ್ರರಂಗದ ಗಣ್ಯರ ದಂಡೇ ನಾಡಿಗ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದೆ.

ಮೃತರು ಪತ್ನಿ ಗೀತಾ ಮತ್ತು ಮೂವರು ಪುತ್ರಿಯರಾದ ರಶ್ಮಿ, ಶುಭಾ ಮತ್ತು ಶ್ರುತಿಯವರನ್ನು ಅಗಲಿದ್ದಾರೆ. ಶ್ರುತಿಯವರು ವಿದೇಶದಲ್ಲಿರುವ ಕಾರಣ ಇಂದು ನಡೆಯುವ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿಲ್ಲ.‌ ಬೆಳಿಗ್ಗೆ 10.30ರ ವರೆಗೆ ನಾಡಿಗರ ಗಿರಿನಗರದ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

Recommended For You

Leave a Reply

error: Content is protected !!
%d bloggers like this: