ನವರಾತ್ರಿಗೆ ನವವಿಧ ವಸ್ತ್ರ ವೈವಿಧ್ಯ, ಪೂಜೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ಅರಿತಿದ್ದೇವೆ. ಆದರೆ ನವದುರ್ಗೆಯ ರೂಪದಲ್ಲೇ ದೇವತೆ ಪ್ರತ್ಯಕ್ಷವಾದರೆ ಹೇಗಿರಬಹುದು? ಅಂಥದೊಂದು ಕಲ್ಪನೆಗೆ ಸಾಕಾರ ನೀಡಿರುವುದು ವಿಷ್ಣುಪ್ರಿಯಾ ಎನ್ನುವ ಬಾಲಕಿ ಮತ್ತು ಪುನೀಕ್ ಶೆಟ್ಟಿ ಎನ್ನುವ ಛಾಯಾಗ್ರಾಹಕ! ಈ ಕುರಿತಾದ ವಿಶೇಷ ಮಾಹಿತಿ ನಿಮ್ಮ ಸಿನಿಕನ್ನಡದಲ್ಲಿ ಮಾತ್ರ.
ವಿಷ್ಣುಪ್ರಿಯಾ ಎನ್ನುವ ಹೆಸರು ಕೇಳಿದೊಡನೆ ಈ ಮಗು ಭಗವಾನ್ ವಿಷ್ಣು ಆರಾಧಕರ ಕುಟುಂಬದಿಂದಲೇ ಬಂದಿರಬೇಕು ಎನ್ನುವ ಕಲ್ಪನೆ ಸಹಜ. ಆದರೆ ಈ ಮಗುವಿಗೆ ವಿಷ್ಣುಪ್ರಿಯ ಎನ್ನುವ ಹೆಸರು ಬರಲು ಕಾರಣ ಕನ್ನಡ ಚಿತ್ರರಂಗದ ‘ಸಾಹಸ ಸಿಂಹ ವಿಷ್ಣುವರ್ಧನ್' ಎನ್ನುವುದು ಸತ್ಯ. ವಿಷ್ಣುವರ್ಧನ್ ಅವರ '
ಯಜಮಾನ’ ಸಿನಿಮಾ ನೋಡಿ ಅದೇ ಹೆಸರಲ್ಲಿ ಉಪ್ಪಿನಕಾಯಿ ಸಂಸ್ಥೆ ಮಾಡಿ ಹೆಸರಾದ ಬಂಟ್ವಾಳದ ವರದರಾಜ ಪೈಯವರ ಕತೆ ಬಹುಶಃ ನಿಮಗೆಲ್ಲ ತಿಳಿದಿರಬಹುದು. ಅವರ ಪುತ್ರಿಯೇ ಈ ವಿಷ್ಣುಪ್ರಿಯ! ಸಿನಿಕನ್ನಡದ ಜೊತೆ ಮಾತನಾಡಿದ ವಿಷ್ಣುಪ್ರಿಯಾಳ ತಾಯಿ ಸಂಧ್ಯಾ ಪೈಯವರು ” ಈ ಹೆಸರನ್ನು ನಾವು ತಿರುಪತಿ ದೇವರ ಸನ್ನಿಧಾನದಲ್ಲಿ ನಿರ್ಧರಿಸಿದರೂ ಕೂಡ ಮೊದಲ ಬಾರಿ ಮಗುವನ್ನು ಆ ಹೆಸರಿನಿಂದ ಭಾರತಿಯಮ್ಮನವರಿಂದಲೇ (ಭಾರತೀ ವಿಷ್ಣುವರ್ಧನ್) ಕರೆಸುವ ಮೂಲಕ ಧನ್ಯರಾದೆವು. ಇಂದು ನಮ್ಮ ಮಗಳು ಆ ಹೆಸರನ್ನು ಉಳಿಸುವಂತೆ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವುದಕ್ಕೆ ಖುಷಿ ಇದೆ” ಎಂದರು.
ಸಂಧ್ಯಾ ಪೈಯವರು ಹೇಳಿದಂತೆ ದಂಪತಿಗೆ ಇಬ್ಬರು ಮಕ್ಕಳು. ಚಿಕ್ಕವನು ಬಾಲಾಜಿ ಎರಡನೇ ತರಗತಿ ವಿದ್ಯಾರ್ಥಿ. ಅಕ್ಕ ವಿಷ್ಣುಪ್ರಿಯಾ ಈಗಾಗಲೇ ಶಾಲೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಹೆಸರಾಗಿದ್ದಾಳೆ. ಮೂಡುಬಿದ್ರೆಯ ರೋಟರಿ ಇಂಗ್ಲಿಷ್ ಮೀಡಿಯಂ ಸೆಂಟ್ರಲ್ ಸ್ಕೂಲ್‌ನಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿನಿಯಗಿರುವ ಈಕೆ ಕೊಯಂಬತ್ತೂರಿನಲ್ಲಿ ನಡೆದ `ಸ್ಪೆಲ್ ಬಿ’ ಎನ್ನುವ ರಾಷ್ಟ್ರ ಮಟ್ಟದ ಮಕ್ಕಳ ಸ್ಪರ್ಧೆಯಲ್ಲಿ 47ನೇ ರ್ಯಾಂಕ್ ಪಡೆದಿದ್ದಾಳೆ! ವೆಂಕಟಕೃಷ್ಣ ಭಟ್ ಅವರ ಬಳಿ ಕರ್ನಾಟಕ ಸಂಗೀತ ಮತ್ತು ಬಾಲಕೃಷ್ಣ ಮಂಜೇಶ್ವರ ಅವರಿಂದ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿರುವ ವಿಷ್ಣುಪ್ರಿಯಾ ತಂದೆಯ ಬಳಿಯಲ್ಲೇ ಇಲೆಕ್ಟ್ರಿಕ್ ಆರ್ಗನ್ ಕಲಿಯುತ್ತಿದ್ದಾಳೆ.
ಇಂಥ ಮುದ್ದು ಕಂದನನ್ನು ಇರಿಸಿಕೊಂಡು ನವದುರ್ಗೆಯರ ರೂಪ ನೀಡಿ ನೋಡುವ ಆಕಾಂಕ್ಷೆ ಮಾತಾಪಿತರಲ್ಲಿ ಮೂಡಿದೆ. ಶ್ರದ್ಧಾ ಅಶ್ವಿನ್ ಪ್ರಭು ಅವರ ನಡೆಸಿದ ಮೇಕೋವರ್ ಗೆ ಸ್ಥಿರಚಿತ್ರ ರೂಪ ನೀಡಲು ಮಂಗಳೂರಿನ ಖ್ಯಾತ ಛಾಯಾಗ್ರಾಹಕ ಪುನೀಕ್ ಶೆಟ್ಟಿ ಕೈ ಜೋಡಿಸಿದ್ದಾರೆ. ಸಿನಿಮಾ ನಿರ್ದೇಶಕರು ಕೂಡ ಆಗಿರುವ ಪುನೀಕ್ ಶೆಟ್ಟಿಯವರಿಗೆ ಮಕ್ಕಳಿಗೆ ಇಂಥ ಭವ್ಯ, ದಿವ್ಯ ಕಳೆ ನೀಡಬಲ್ಲ ಛಾಯಾಗ್ರಹಣದ ಕಲೆ ಸಿದ್ಧಿಸಿದೆ. ಹಾಗಾಗಿ ಎರಡೇ ದಿನದಲ್ಲಿ ನವದುರ್ಗೆಯರ ರೂಪದ ಛಾಯಾಗ್ರಹಣ ಪೂರ್ತಿಯಾಗಿದೆ. ಅದರ ವೈಭವ ಹೇಗಿತ್ತು ಎನ್ನುವುದನ್ನು ಇಲ್ಲಿನ ಫೊಟೊಗಳ ಮೂಲಕ ಗಮನಿಸಬಹುದು. ಅಂದಹಾಗೆ ವಿಷ್ಣುಪ್ರಿಯ ಸದ್ಯಕ್ಕೆ ಶಾಲಾ ವಿದ್ಯಾರ್ಥಿನಿಯಾದರೂ ಬಾಲನಟಿಯಾಗಬಹುದಾದ ಎಲ್ಲ ಸಾಧ್ಯತೆಗಳನ್ನು ಹೊಂದಿದ್ದಾಳೆ. ಕನ್ನಡ ಚಿತ್ರರಂಗದಲ್ಲಿ ಅಂಥದೊಂದು ಅವಕಾಶ ದೊರೆತರೆ ಅದು ವಿಷ್ಣುವರ್ಧನ್ ಅವರ ಆಶೀರ್ವಾದದ ಫಲ ಎಂದು ನಂಬುವ ಕುಟುಂಬ ಇವರದ್ದಾಗಿದೆ. ಎಲ್ಲ ಕಲಾ ಆರಾಧಕರ ಜೊತೆಗೆ, ದೇವಿಭಕ್ತರ, ವಿಷ್ಣುವರ್ಧನ್ ಅಭಿಮಾನಿಗಳ ಹಾರೈಕೆ ಈ ಕಂದನಿಗಿರಲಿ.