ಸ್ಮರಣಾರ್ಹ ಪ್ರತಿಭೆ ಡಾ.ಕೊಯಿರಾ ನೆನಪುಗಳು

“ಭಾರತ ಹಳ್ಳಿಗಳ ದೇಶ; ಹಳ್ಳಿಗಳಲ್ಲೇ ಅದರ ಜೀವನಾಡಿ ಇದೆ” ಎಂದಿದ್ದರು ಮಹಾತ್ಮಾ ಗಾಂಧಿ. ಗ್ರಾಮೀಣ ಪ್ರದೇಶದ ಅದ್ಭುತ ಸಾಧಕರನ್ನು ಕಂಡಾಗಲೆಲ್ಲ ಈ ಮಾತು ಎಷ್ಟು ನಿಜ ಎಂದು ಅನಿಸುವುದು ಇದೆ. ಅದರಲ್ಲಿಯೂ ಗ್ರಾಮೀಣ ಭಾಗದಲ್ಲಿ ಹುಟ್ಟಿ ಗ್ರಾಮೀಣ ಪ್ರತಿಭೆಗಳ ಬಗ್ಗೆ ಅಧ್ಯಯನ ನಡೆಸಿ ಅವರನ್ನು ಪ್ರೋತ್ಸಾಹಿಸಿದ ಡಾ.ಕೊಯಿರಾ ಎನ್ ಬಾಳೆಪುಣಿಯಂಥವರು ಸ್ಮರಣಾರ್ಹರು. ಕೊಯಿರಾ ಅವರು ನಿಧನರಾಗಿ ಇಂದಿಗೆ ಸರಿಯಾಗಿ ಎಂಟು ವರ್ಷಗಳು ಉರುಳಿವೆ.‌ ಆದರೆ ಎಂದೂ ಉರುಳಿ‌ ಹೋಗದಂಥ ಜನಪದ ಲೋಕದ ಅವರ ನಂಟಿನ‌ ಬಗ್ಗೆ ಇಲ್ಲಿ ಒಂದಷ್ಟು ನೆನಪುಗಳಿವೆ.

ಡಾ.ಕೊಯಿರಾ ಅವರು ಜನಿಸಿದ್ದು 1948ರ ಅಕ್ಟೋಬರ್ 15ರಂದು. ಊರು ದಕ್ಷಿಣ ಕನ್ನಡದ ಬಂಟ್ವಾಳದಲ್ಲಿರುವ ಬಾಳೆಪುಣಿ ಎನ್ನುವ ಹಳ್ಳಿ. ಮೈಸೂರು ವಿಶ್ವವಿದ್ಯಾನಿಲಯದಿಂದ ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ‌ ಪಡೆದ ಬಳಿಕ ಉಪ ತಹಶಿಲ್ದಾರರಾಗಿ ವೃತ್ತಿಯಲ್ಲಿದ್ದರು. ಆದರೆ ಅವರು ವೃತ್ತಿಗಿಂತ ಹೆಚ್ಚು ಗುರುತಿಸಿಕೊಂಡಿದ್ದು ತಮ್ಮ ಪ್ರವೃತ್ತಿ ಮತ್ತು ಹವ್ಯಾಸಗಳಿಂದ. ಉದಾಹರಣೆಗೆ ತುಳು, ಕನ್ನಡ ನಾಟಕಗಳ ರಚನೆ, ನಿರ್ದೇಶನ ಹಾಗೂ ಅಭಿನಯದಲ್ಲಿ ಗಮನಾರ್ಹ ಸಾಧನೆ ಮಾಡಿದವರು ಇವರು. ಒಟ್ಟು ನಾಟಕಗಳಲ್ಲಿ ಕಲಾವಿದರಾಗಿ 399ಕ್ಕೂ ಅಧಿಕ ವೇದಿಕೆಗಳಲ್ಲಿ ಪ್ರದರ್ಶನ ನೀಡಿದ ಪ್ರತಿಭೆ. ನಟನೆಗಾಗಿ ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳು ಇವರಿಗೆ ಲಭಿಸಿವೆ. 1986ರಲ್ಲಿ ಗುಲ್ಬರ್ಗದಲ್ಲಿ ಜರಗಿದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಶ್ರೇಷ್ಠ ನಟ ಪ್ರಶಸ್ತಿ ಪಡೆದಿದ್ದಾರೆ. ಹುಟ್ಟೂರು ಬಾಳೆಪುಣಿಯಲ್ಲಿ “ಬಾಳೆಪುಣಿ ಮಕ್ಕಳು” ಎಂಬುವ 70 ಮಕ್ಕಳ ನಾಟಕ ತಂಡ ರಚಿಸಿ ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ಪ್ರದರ್ಶನ ನೀಡಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜನಪದ ಆರಾಧನೆ, ಆಚರಣೆ ಕುಣಿತಗಳ ಬಗ್ಗೆ ಚಿಕ್ಕಂದಿನಿಂದಲೇ ಆಸಕ್ತಿ ಹೊಂದಿದ್ದ ಕೊಯಿರಾ ಅವರು ಮುಂದೆ ಅದೇ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದರು.

ಬಾಳೆಪುಣಿಯಲ್ಲಿ ‘ನಲಿಪು ಜಾನಪದ ಕೂಟ’ ಎಂಬ ಸಂಘಟನೆಯನ್ನು ಮಾಡಿದವರು‌ ಕೊಯಿರಾ. ಅದು ನಶಿಸಿ ಹೋಗುತ್ತಿರುವ ಅಪರೂಪದ ಜಾನಪದ ಕುಣಿತಗಳ ಮತ್ತು ತುಳು ಸಾಹಿತ್ಯದ ಉಳಿವಿಗಾಗಿ ಶ್ರಮ ವಹಿಸಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ತಮಿಳು ನಾಡು, ಕೇರಳ ಹೀಗೆ ಅನೇಕ ಕಡೆಗಳಲ್ಲಿ ತಂಡವು ಅವರ ನೇತೃತ್ವದಲ್ಲೇ ಐವತ್ತಕ್ಕೂ ಅಧಿಕ ಪ್ರದರ್ಶನಗಳಿಂದ ಗುರುತಿಸಿಕೊಂಡಿತ್ತು. ತುಳು ಭಾಷೆ, ಸಂಸ್ಕೃತಿಗಾಗಿ ಕೆಲಸಮಾಡಿದ ಈ ತಂಡಕ್ಕೆ ಬದಿಯಡ್ಕದಲ್ಲಿ ಜರಗಿದ ‘ಅಖಿಲ ಭಾರತ ತುಳು ಆಯನೋ’ ಸಮಾರಂಭದಲ್ಲಿ ತುಳು ಆಯನೋ 2009 ಪ್ರಶಸ್ತಿ ಲಭಿಸಿತ್ತು. ತಮ್ಮ ಬದುಕಿನ‌ ಕೊನೆಯವರೆಗೂ ಅವರು ಈ ತಂಡದ ನಿರ್ದೇಶಕರಾಗಿ ದುಡಿದಿದ್ದಾರೆ.

1987 ರಲ್ಲಿ ಮಿಜೋರಾಂ ನಲ್ಲಿ ಐಚ್ ವಾಲ್ ನಲ್ಲಿ ಜರಗಿದ ರಾಷ್ಟ್ರೀಯ ಭಾವೈಕ್ಯ ಶಿಬಿರದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧೀಕರಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ತಂದುಕೊಡುವಲ್ಲಿ ಶ್ರಮಿಸಿದ ಕೀರ್ತಿ ಇವರದಾಗಿತ್ತು. ಇವರ ರಚನೆಯ “ಮುಗೇರರ ದುಡಿ ಕುಣಿತಗಳು – ಸ್ವರೂಪ ಮತ್ತು ಸಂಸ್ಕೃತಿ” ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ( ಡಾಕ್ಟರ್ ಆಫ್ ಲಿಟರೇಚರ್) ಈ ಪ್ರಬಂಧ ಪುಸ್ತಕ ರೂಪದಲ್ಲಿ ಪ್ರಕಟಗೊಂಡು ಪ್ರಸ್ತುತ ಓದಲು ಲಭ್ಯವಿದೆ. ಕೇವಲ ಪಿಎಚ್ಡಿ ಮಾಡಲೆಂದು‌ ಒಂದು ವಿಷಯ ತೆಗೆದುಕೊಂಡು ಅಧ್ಯಯನ ‌ನಡೆಸಿ‌ ಪದವಿ ಪಡೆದು ಸುಮ್ಮನಾಗುವ ಎಷ್ಟೋ ಮಂದಿಯನ್ನು ನಾವು ನೋಡಿರುತ್ತೇವೆ. ಆದರೆ ಕೊಯಿರಾ ಅವರು
ತುಳು ಜನಪದ ಕುಣಿತ, ಸಾಹಿತ್ಯ ಮತ್ತು ಆಚರಣೆಗಳ ಬಗ್ಗೆ ಹಲವಾರು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಪನ್ಯಾಸ ಹಾಗೂ ಪ್ರಾತ್ಯಕ್ಷಿತೆಗಳನ್ನು ನೀಡಿರುವಂಥವರು. ಮಂಗಳೂರು ವಿ‌ವಿ ಯ ಕನ್ನಡ ವಿಭಾಗದ ವಿದ್ಯಾರ್ಥಿಗಳಿಗೆ ಅತಿಥಿ ಉಪನ್ಯಾಸಕರಾಗಿ ತುಳು ಜನಪದ ಕುಣಿತಗಳ ಬಗ್ಗೆ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆಗಳನ್ನು ನೀಡಿದವರು.

‘ಕಾಂತಾವರ ಕನ್ನಡ ಸಂಘ’ದ ಆಶ್ರಯದಲ್ಲಿ “ಮರಪ್ಪೆರೆ ಆವಂದಿ ತುಳುವೆರ್” ಎಂಬ ಪ್ರಬಂಧಗಳ ಮಾಲಿಕೆಯಲ್ಲಿ ತುಳುನಾಡಿನ ದೈವಗಳಾದ “ಮುಗೆರ್ಲು” ಎಂಬ ವಿಷಯದ ಮೇಲೆ ಮಂಡಿಸಿದ ಪ್ರಬಂಧಗಳು ಕೂಡ ಪ್ರಕಟಣೆ ಕಂಡಿವೆ. ಅಲ್ಲದೆ ಹಲವಾರು ಕಡೆಗಳಲ್ಲಿ ತುಳು ಜನಪದ ಕುಣಿತ ಆಚರಣೆ, ಆರಾಧನೆಗಳ ಬಗ್ಗೆ ಪ್ರಬಂಧಗಳನ್ನು ಮಂಡಿಸಿದ್ದಾರೆ. ಮೂರು ವರ್ಷಗಳ ಕಾಲ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನಾಮ ನಿರ್ದೇಶಿತ ಸದಸ್ಯನಾಗಿ ದುಡಿದ ಅನುಭವವೂ ಇವರದಾಗಿತ್ತು.

ಕೊಯಿರಾ ಅವರ ರಚನೆಯ “ಮುಡಿಪ್ಪೆರೆ ಆವಂದಿ ಮಲ್ಲಿಗೆ” ಎಂಬ ತುಳು ಕಥಾ ಮಾಲಿಕೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ತುಳು ಭಾಷೆ, ಸಾಹಿತ್ಯ, ಸಂಸ್ಕ್ರತಿಯ ಬಗ್ಗೆ ಮಾಡಿದ ಸಾಧನೆಗಾಗಿ ಪ್ರತಿಷ್ಠಿತ “ಪೊಳಲಿ ಶೀನಪ್ಪ ಹೆಗ್ಗಡೆ ಗೌರವ ಪ್ರಶಸ್ತಿ – 2009” ಇವರಿಗೆ ಲಭಿಸಿದೆ. ಅಲ್ಲದೆ ಜಿಲ್ಲೆ ಹಾಗೂ ಜಿಲ್ಲೆಯ ಹೊರಗೆ ಅನೇಕ ಸಂಘ ಸಂಸ್ಥೆಗಳು ಸ್ಥಾನಮಾನ‌ ನೀಡಿ ಸನ್ಮಾನಿಸಿ, ಗೌರವಿಸಿದೆ.

2012ರಲ್ಲಿ ಕೊಯಿರಾ ಅವರು ಅನಾರೋಗ್ಯದ ಕಾರಣ ತಮ್ಮ 64ನೇ ವಯಸ್ಸಿನಲ್ಲಿಯೇ ನಿಧನರಾದರು. ಅವರು ತಮಗಿರುವ ಜನಪದ ಲೋಕದ ಪ್ರೀತಿಯ ನಿದರ್ಶನವಾಗಿ ತಮ್ಮ ಮನೆಗೆ ‘ದುಡಿ’ ಎಂದು ಹೆಸರಿಟ್ಟಿದ್ದಾರೆ. ಇಂದು ಆ ದುಡಿಯೊಳಗೆ ಅವರ ವಂಶದ ಎರಡು ಗಂಡು ಕುಡಿಗಳಿವೆ. ಹಿರಿಯ ಪುತ್ರ ಸುಧೀರ್ ಬಾಳೇಪುಣಿ ಬಹುಮುಖ ಪ್ರತಿಭಾವಂತರು. ಅವರು ತಮ್ಮ ಗ್ರಾಫಿಕ್ಸ್ ಕಲಾಕೃತಿಗಾಗಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದು, ಮಂಗಳೂರಿನ‌ ಸೈಂಟ್ ಥೆರೆಸಾ ವಿದ್ಯಾಲಯದಲ್ಲಿ ಕಲಾಶಿಕ್ಷಕರು. ಕಿರಿಯವರಾದ ನಿತಿನ್ ಎನ್ ಕೆ ಅವರದು ಕೂಡ ಅಧ್ಯಯನಶೀಲ ವ್ಯಕ್ತಿತ್ವ. ‘ಅಮೃತ ಸೋಮೇಶ್ವರರ ಸಾಹಿತ್ಯದಲ್ಲಿ ಪ್ರಾದೇಶಿಕ ಸಂಸ್ಕೃತಿ ಮತ್ತು ಸಾಮಾಜಿಕ ಚಿಂತನೆಯ ಪ್ರತಿನಿಧೀಕರಣ’ ವಿಚಾರವನ್ನು ಇರಿಸಿಕೊಂಡು ನಡೆಸಿದ ಅಧ್ಯಯನಕ್ಕಾಗಿ ಡಾಕ್ಟರೇಟ್ ಪಡೆದಿದ್ದಾರೆ. ಅವರು ಪ್ರಸ್ತುತ ಮಂಗಳೂರಿನ ‘ಪಿಲಿಕುಳ ಸಂಸ್ಕೃತಿ ಗ್ರಾಮ’ದ ಯೋಜನಾಧಿಕಾರಿಯಾಗಿ ವೃತ್ತಿ‌ನಿರತರು. ಇವರಿಬ್ಬರ ಸಹೋದರಿ ಸುನೀಲ ವಿವಾಹಿತೆಯಾಗಿದ್ದು, ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿ. ಇಂಥ ಪ್ರತಿಭಾವಂತ ಮಕ್ಕಳ‌ ಮೂಲಕ ಮಾತ್ರವಲ್ಲ ತಮ್ಮ ‌ಕೃತಿಗಳ ಮೂಲಕ ಕನ್ನಡದ ಜಾನಪದ ಲೋಕದಲ್ಲಿ ಇಂದಿಗೂ‌ ಎಂದಿಗೂ ಕೊಯಿರಾ ಅವರು ಸ್ಮರಣಾರ್ಹರಾಗಿದ್ದಾರೆ.

ತಮ್ಮ ಸಾಧನೆಯ ಬಗ್ಗೆ ಮಾತನಾಡುವಾಗ ಡಾ. ಕೊಯಿರಾ ಅವರು ಯಾವಾಗಲೂ ಅದಕ್ಕೆ ಪೂರಕವಾಗಿ ನಿಂತ ತಮ್ಮ ಪತ್ನಿಯ ಬಗ್ಗೆ ನೆನಪಿಸುವುದನ್ನು ಮರೆಯುತ್ತಿರಲಿಲ್ಲ. ಅವರದೇ ಮಾತಿನಲ್ಲಿ ಹೇಳುವುದಾದರೆ “ನಾನು ಅಧ್ಯಯನದ ‌ಅವಧಿಯಲ್ಲಿ‌ ದಿನಗಟ್ಟಲೆ ಮನೆಬಿಟ್ಟು ಇರುತ್ತಿದ್ದೆ.‌ ಅಥವಾ ಅನೇಕ ವಾರಗಳು ಮನೆಯಲ್ಲೇ ಇದ್ದು ದಿನದ ಹೆಚ್ಚಿನ‌ ಸಮಯವನ್ನು ಬರವಣಿಗೆಯಲ್ಲೇ ತೊಡಗಿಸಿಕೊಂಡಾಗಲೂ ತಾಳ್ಮೆಗೆಡದೆ ನಗುನಗುತ್ತಲೇ ನನ್ನನ್ನು ಆತ್ಮೀಯವಾಗಿ ಸತ್ಕರಿಸಿದ ಬಾಳ ಸಂಗಾತಿ ಚಂದ್ರಾವತಿಯ ಸಹಕಾರ ಅದ್ಭುತ” ಎನ್ನುತ್ತಿದ್ದರು. ಹಾಗಾಗಿ ನಾವು ಕೂಡ ಡಾ.ಕೊಯಿರಾ ಅವರ ಸ್ಮರಣೆಯೊಂದಿಗೆ ಇಂದಿಗೂ ಕುಟುಂಬವನ್ನು ಚಂದದಿಂದ ಮುನ್ನಡೆಸುತ್ತಿರುವ ಚಂದ್ರಾವತಿಯವರನ್ನು ಅಭಿನಂದಿಸುತ್ತೇವೆ.

(ಡಾ. ಕೊಯಿರಾ ಅವರ ರಚನೆಯ ಪುಸ್ತಕಗಳ ಸಾಕಷ್ಟು ಪ್ರತಿಗಳು ಅವರ ಅಕಾಲ ಅಗಲಿಕೆಯಿಂದಾಗಿ ಇಂದಿಗೂ ಸ್ವಗೃಹದಲ್ಲೇ ಇವೆ. ಆಸಕ್ತರು ಪುಸ್ತಕ ಬೇಕಾದಲ್ಲಿ ಅದರ ಮೂಲ ಬೆಲೆಗಿಂತ ಸ್ವಲ್ಪ ಕಡಿಮೆ ದರಕ್ಕೆ‌ ನೀಡುವುದಾಗಿ ಪುತ್ರ ಸುಧೀರ್ ಸಿನಿಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.)

Recommended For You

Leave a Reply

error: Content is protected !!
%d bloggers like this: