`ಶಂಕ್ರಿ’ಯಾಗಿ ರಮಿತ್ ಎಂಟ್ರಿ..!

ಶಂಕರನಾಗ್ ಎನ್ನುವ ಹೆಸರು ಕನ್ನಡ ಚಿತ್ರರಂಗ ಇವರುತನಕ ಒಂದು ಪ್ರೇರಣಾ ಶಕ್ತಿಯಾಗಿ ಇರುತ್ತದೆ. ಇದೀಗ ಅದೇ ಶಂಕರನಾಗ್ ಸ್ಫೂರ್ತಿಯಲ್ಲಿ ಕಿರುಚಿತ್ರವೊಂದು ಬಿಡುಗಡೆಗೆ ತಯಾರಾಗುತ್ತಿದ್ದು, ಅದರಲ್ಲಿ ಶಂಕರನಾಗ್ ಅಭಿಮಾನಿಯಾಗಿ ನವನಟ ರಮಿತ್ ಅಭಿನಯಿಸುತ್ತಿದ್ದಾರೆ. `ಆಟೋ ಶಂಕ್ರಿ’ ಎನ್ನುವ ಈ ಶಾರ್ಟ್‌ಫಿಲ್ಮ್ ಪೋಸ್ಟರ್ ಬಿಡುಗಡೆಗೆ ತಯಾರಿ ನಡೆದಿದೆ. ಶಂಕರನಾಗ್‌ ಆಶೀರ್ವಾದದೊಂದಿಗೆ ನಟನಾಗಿ ಪ್ರವೇಶ ಬಯಸಿರುವ ರಮಿತ್ ಹಂಚಿಕೊಂಡ ಒಂದಷ್ಟು ಅನುಭವಗಳ ವಿವರ ಇಲ್ಲಿದೆ..

ಮೂಲತಃ ಸಕಲೇಶಪುರದ ಹೆಬ್ಬನಹಳ್ಳಿಯವರಾದ ರಮಿತ್ ಬಾಲ್ಯದಿಂದಲೇ ಸಿನಿಮಾಸಕ್ತಿ ಬೆಳೆಸಿಕೊಂಡವರು. ಮೈಸೂರಲ್ಲಿ ಬಿಕಾಮ್ ವಿದ್ಯಾರ್ಥಿಯಾಗಿದ್ದಾಗ ರಂಗಾಯಣ' ಸೇರಿಕೊಂಡು ನಾಟಕ ಮಾಡುತ್ತಿದ್ದರು. ಕಾಲೇಜ್ ಮುಗಿದೊಡನೆ ಸ್ನೇಹಿತರೊಬ್ಬರ ಮೂಲಕ ಯುವ ನಿರ್ದೇಶಕರೊಬ್ಬರ ಪರಿಚಯ ಮಾಡಿಕೊಂಡು ಬೆಂಗಳೂರು ಸೇರಿದರು. ಹಾಗೆ ಮೂರು ವರ್ಷಗಳ ಹಿಂದೆ ನಿರ್ಮಾಪಕರೊಬ್ಬರ ಕಚೇರಿಯಲ್ಲಿ ಆಫೀಸ್ ಬಾಯ್‌ ಕೆಲಸಕ್ಕೆ ಸೇರಿಕೊಂಡ ರಮಿತ್ ಅವರಿಗೆ ನಟನೆಗೆ ಅವಕಾಶಗಳು ಬರಲೇ ಇಲ್ಲ. ಹಾಗಾಗಿ ಆರು ತಿಂಗಳ ಬಳಿಕ ಬೇರೆ ಪಾರ್ಟೈಮ್ ಕೆಲಸಕ್ಕೆ ಸೇರಿಕೊಂಡು ಉಳಿದ ಸಮಯವನ್ನು ಸಿನಿಮಾಗೆ ಆಡಿಶನ್‌ ನೀಡುವುದರಲ್ಲಿ ಕಳೆಯತೊಡಗಿದರು. ಇದೇ ಸಂದರ್ಭದಲ್ಲಿ ಬೆಂಗಳೂರು ಕಲಾಕ್ಷೇತ್ರದಲ್ಲಿರಂಗ ಸುಗ್ಗಿ’ ತಂಡದ ಪರಿಚಯವಾಯಿತು. ಅಲ್ಲಿಯೂ ನಾಟಕಕ್ಕೆ ಸೇರಿಕೊಂಡರು. ಕಿರುತೆರೆಯ ಹೊಸ ಧಾರಾವಾಹಿಗಳಾದ ಸಿಲ್ಲಿಲಲ್ಲಿ',ಪಾಪ ಪಾಂಡು’, `ಭೂಮಿ ತಾಯಾಣೆ’ ಹೀಗೆ ಒಂದಷ್ಟು ಸೀರಿಯಲ್‌ಗಳ ಕೆಲವಷ್ಟು ಸಂಚಿಕೆಗಳಲ್ಲಿ ನಟಿಸಿದರು. ರಂಗಭೂಮಿ ಮತ್ತು ಕಿರುತೆರೆ ಇವರಲ್ಲಿನ ಕಲಾವಿದನನ್ನು ಗುರುತಿಸಿದ್ದೇನೋ ನಿಜ. ಆದರೆ ಸಿನಿಮಾ ಆಡಿಶನ್ಸ್‌ ಕೈ ಕೊಟ್ಟಿದ್ದೇ ಹೆಚ್ಚು. ಮಾತ್ರವಲ್ಲ, ಆಡಿಶನ್‌ಗೆ ಹೋದಾಗ ಪಾತ್ರಕ್ಕೆ ಆಯ್ಕೆ ಮಾಡಿದ ನಿರ್ದೇಶಕರು ವೆಯ್ಟ್ ಲಾಸ್ ಮಾಡುವಂತೆ ಹೇಳಿದ್ದು, ಹಾಗಾಗಿ ಒಂಬತ್ತು ಕೆ.ಜಿಯಷ್ಟು ತೂಕ ಇಳಿಸಿಕೊಂಡರೆ ಅವರು ಪಾತ್ರ ನೀಡದೇ ಹೋಗಿದ್ದು, ಹೀಗೆ ಇದುವರೆಗೆ ನೂರೈವತ್ತರಷ್ಟು ಆಡಿಶನ್ಸ್‌ ನೀಡಿ ಸಾಕಷ್ಟು ಕಹಿ ಅನುಭವಗಳನ್ನು ರಮಿತ್ ಪಡೆದಿದ್ದಾರೆ.

ಆದರೆ ವಿಶೇಷ ಎನ್ನುವಂತೆ ಆಡಿಶನ್ ಮೂಲಕ ಪುನೀತ್ ರಾಜ್ ಕುಮಾರ್ ಅವರಯುವರತ್ನ' ಚಿತ್ರದಲ್ಲೊಂದು ಪುಟ್ಟ ಪಾತ್ರ ದೊರಕಿತು. ಅದೇ ಸಂದರ್ಭದಲ್ಲಿ ಇವರಿಗೆ ಯುವನಟಿ ದಕ್ಷತಾ ಬಿಲ್ಲಾನ ಪರಿಚಯವಾಗಿದ್ದರು. ಇಬ್ಬರು ಕೂಡ ಒಂದೊಳ್ಳೆಯ ಪಾತ್ರದ ಅವಕಾಶಕ್ಕಾಗಿ ನಡೆಸುತ್ತಿರುವ ಪ್ರಯತ್ನದ ಬಗ್ಗೆ ಮಾತನಾಡಿಕೊಂಡರು. ಹಾಗಾಗಿ ಜೊತೆಯಾಗಿಯೇ ಒಂದು ಕಿರುಚಿತ್ರ ಮಾಡುವ ಯೋಚನೆ ಮಾಡಿದರು. ಕೌಶಿಕ್ ಕೂಡುರಸ್ತೆ ಎನ್ನುವ ಯುವಪ್ರತಿಭೆ ತಂದ ಕತೆ ಇಬ್ಬರಿಗೂ ಇಷ್ಟವಾಯಿತು. ಅದು ಶಂಕರನಾಗ್ ಅಭಿಮಾನಿಯೊಬ್ಬನ ಕತೆ. ಈ ಕಿರುಚಿತ್ರದ ಹೆಸರುಆಟೋ ಶಂಕ್ರಿ’. ರಮಿತ್ ಸ್ನೇಹಿತರ ಜೊತೆಗೂಡಿ ನಿರ್ಮಿಸುತ್ತಿರುವ `ಎನ್ ಆರ್ ಕೆ ಪ್ರೊಡಕ್ಷನ್ಸ್‌’ನ ಕಿರುಚಿತ್ರದಲ್ಲಿ ದಕ್ಷತಾ ಕೂಡ ಸಹ ನಿರ್ಮಾಪಕಿಯಾಗಿ ಸೇರಿಕೊಂಡರು. ಇನ್ನೇನು ಮುಂದಿನ ತಿಂಗಳು ಶಂಕರನಾಗ್ ಜನ್ಮದಿನಕ್ಕೆ ಈ ಶಾರ್ಟ್‌ಫಿಲ್ಮ್ ತೆರೆಗೆ ಬರಲಿದೆ. ಅದಕ್ಕೂ ಮೊದಲು ಚಿತ್ರದ ಪೋಸ್ಟರ್ ಬಿಡುಗಡೆಯಾಗಲಿದೆ. ಕೌಶಿಕ್ ಅವರು ತಾವೇ ಬರೆದ ಕತೆಯನ್ನು ಸ್ವತಃ ನಿರ್ದೇಶಿಸಿರುವ ಈ ಕಿರುಚಿತ್ರದಲ್ಲಿ ರಮಿತ್, ದಕ್ಷತಾ ಅವರಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕ ಜನಪ್ರಿಯರಾಗಿರುವ ಕಲಾವಿದ ಚೇತನ್ ದುರ್ಗ ಅವರು ಕೂಡ ಒಂದು ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದಾರೆ. ನವನೀತ್ ಪಿಸಿ ಛಾಯಾಗ್ರಹಣ, ನಾಗೇಶ್ ಸಿ ಸಂಕಲನ, ಯತಿರಾಜ್ ಅವರ ಶಬ್ದವಿನ್ಯಾಸವಿದೆ.

Recommended For You

Leave a Reply

error: Content is protected !!
%d bloggers like this: