
ದಶಕದಿಂದ ಕನ್ನಡ ಸಿನಿಮಾಗಳ ಜನಪ್ರಿಯ ಗೀತೆಗಳಿಗೆ ದನಿಯಾದವರು ಅನುರಾಧಾ ಭಟ್. ಆ ಕಾರಣಕ್ಕಾಗಿ ಅವರು ಕನ್ನಡಿಗರಿಂದ ವಿಶೇಷ ಅಭಿಮಾನವನ್ನು ಪಡೆದಿದ್ದಾರೆ. ತಮ್ಮನ್ನು ಕನ್ನಡದ ಸಂಪತ್ತಾಗಿ ಕಾಣುವ ಅಭಿಮಾನಿಗಳಿಗೆ ‘ಕನ್ನಡವೇ ತಮ್ಮ ಸಿರಿವಂತಿಕೆ’ ಎಂದು ತೋರಿಸುವಂಥ ವಿಡಿಯೋ ಹಾಡೊಂದನ್ನು ನೀಡಿದ್ದಾರೆ ಅನುರಾಧಾ. ವಿಶೇಷ ಏನೆಂದರೆ ಈ ಹಾಡನ್ನು ಹಾಡಿರುವುದು ಮಾತ್ರವಲ್ಲ, ಅದರಲ್ಲಿ ಅಭಿನಯಿಸಿ ತಮ್ಮ ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದಾರೆ.

‘ಕರುನಾಡ ನೆಲದಲ್ಲಿ..’ ಎಂದು ಆರಂಭವಾಗುವ ಆತ್ಮೀಯ ಪಲ್ಲವಿ ನಾ ಹಾಡುವೇ.. ನಿನಗಾಗಿಯೇ..' ಎಂದು ಕೊನೆಯಾಗುತ್ತದೆ. ಗಿರಿಧರ ದಿವಾನ್ ಅವರ ಸಂಗೀತ ನಿರ್ದೇಶನದಲ್ಲಿ ಅನುರಾಧಾ ಅವರ ಕಂಠಸಿರಿಗೆ ಪದಗಳನ್ನು ಒದಗಿಸಿರುವವರು ಹರಿಪರಾಕ್. ಗೀತೆಯ ಭಾವಕ್ಕೆ
ಅನು-ಗುಣ’ವಾಗಿ ಛಾಯಾಗ್ರಹಣ ಮಾಡಿರುವ ಕೀರ್ತಿ ಕೂಡ ಗಿರಿಧರ ದಿವಾನ್ ಅವರಿಗೇ ಸಲ್ಲುತ್ತದೆ. ಸ್ವತಃ ಗಾಯಕರು ಆಗಿರುವ ಗಿರಿಧರ ದಿವಾನ್ ಅವರ ಬಹುಮುಖ ಪ್ರತಿಭೆಯಲ್ಲಿ ಯಾವುದನ್ನು ಕೂಡ ಕನ್ನಡ ಚಿತ್ರರಂಗ ಇದುವರೆಗೆ ಸರಿಯಾಗಿ ಬಳಸಿಕೊಂಡಿರಲಿಲ್ಲವೇನೋ ಎನ್ನುವ ಸಂದೇಹ ಈ ಆಲ್ಬಮ್ ಸಾಂಗ್ ಮೂಡಿಸಿದರೆ ಅಚ್ಚರಿ ಇಲ್ಲ. ಯಾಕೆಂದರೆ ಇಳಯರಾಜಾ
ಹಾಡುಗಳ ಅನುಭವ ನೀಡುವಂಥ ಮಾಧುರ್ಯತೆ ಈ ಗೀತೆಯಲ್ಲಿದೆ. ಅದೇ ರೀತಿ ಲಿರಿಕಲ್ ವಿಡಿಯೋಗಳಲ್ಲಿ ಮಾತ್ರ ಅಲ್ಲೊಮ್ಮೆ ಇಲ್ಲೊಮ್ಮೆ ಕಾಣಿಸಿಕೊಂಡಿದ್ದ ಅನುರಾಧಾ ಭಟ್ ತಮ್ಮ ಗೀತೆಗೆ ತಾವು ಕೂಡ ಭಾವಪೂರ್ಣವಾದ ಅಭಿನಯ ನೀಡಬಲ್ಲೆನೆಂದು ಸಾಬೀತು ಮಾಡಿದ್ದಾರೆ.

ಮೇಲ್ನೋಟಕ್ಕೆ ಕೇರಳದಂತೆ ಕಾಣಿಸುವ ಕರಾವಳಿಯ ಕಡಲ ತೀರದಲ್ಲಿ, ಉಡುಪಿಯ ಕೋಡಿ ಬೆಂಗ್ರೆ ಬೀಚ್ ಮತ್ತು ಕಳಸದ ಪ್ರೇಕ್ಷಣೀಯ ತಾಣದಲ್ಲಿ ಚಿತ್ರೀಕರಿಸಲಾಗಿರುವ ಈ ಹಾಡು ಕಿವಿಗಳಿಗಷ್ಟೇ ಅಲ್ಲ ಕಣ್ಣಿಗೂ ಹಬ್ಬವೇ. ಸಂಗೀತಕ್ಕೆ ಲೈವ್ ಆಗಿ ವಾದ್ಯೋಪಕರಣಗಳನ್ನು ಬಳಸಲಾಗಿದೆ. ಕೇರಳದ ಜೋಸಿಯ ಕೊಳಲು, ಕೊಲ್ಕೊತ್ತಾದ ಜಾನ್ ಗಿಟಾರ್ ನುಡಿಸಿದ್ದಾರೆ. ಅನುರಾಧಾ ಭಟ್ ಅವರು ಇದುವರೆಗೆ 15 ಭಾಷೆಗಳಲ್ಲಿ ಐದು ಸಾವಿರಕ್ಕೂ ಅಧಿಕ ಹಾಡುಗಳನ್ನು ಆಲಾಪಿಸಿದ್ದು, ಮೊದಲ ಬಾರಿಗೆ ಆಲ್ಬಮ್ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿಯೂ ರೆಕಾರ್ಡಿಂಗ್, ವರ್ಚುಯಲ್ ಲೈವ್ ಕನ್ಸರ್ಟ್ ಎಂದು ಬ್ಯುಸಿಯಾಗಿದ್ದ ಅನುರಾಧಾ ಅವರು ಸಿಕ್ಕ ಬಿಡುವಿನಲ್ಲೇ ಇಂಥದೊಂದು ಕಲ್ಪನೆ ಮಾಡಿಕೊಂಡು ರಾಜ್ಯೋತ್ಸವಕ್ಕೊಂದು ಅರ್ಥಪೂರ್ಣ ಕನ್ನಡದ ಹಾಡು ನೀಡಿದ್ದಾರೆ. ಒಟ್ಟಿನಲ್ಲಿ ‘ನಾ ಹಾಡುವೇ ನಿಮಗಾಗಿಯೇ..’ ಆಲಿಸಿದಾಗ ಖಂಡಿತವಾಗಿ ನಮಗಾಗಿಯೇ ಹಾಡಿದ್ದಾರೆ ಎಂದು ಅನಿಸದಿರದು.

