ಯುವ ನಟ ಆದರ್ಶ್ ಗುಂಡುರಾಜ್ ಮತ್ತು ಸಿಂಧೂ ರಾವ್ ವಿವಾಹದ ದೃಶ್ಯಾವಳಿ ಚಿತ್ರೀಕರಣವಾಗಿದೆ. ಲಾಕ್ಡೌನ್ ಬಳಿಕ ಸದ್ದಿಲ್ಲದೆ ನಡೆಯುತ್ತಿರುವ ವಿವಾಹದ ಪಟ್ಟಿಯಲ್ಲಿ ಈ ಯುವತಾರೆಯರ ಮದುವೆಯೂ ಸೇರಿಕೊಂಡಿದೆ. ಪರಿಸ್ಥಿತಿಗೆ ತಕ್ಕಂತೆ ಯಾವುದೇ ಅದ್ಧೂರಿತನವಿಲ್ಲದೆ ಸರಳವಾಗಿಯೇ ನೆರವೇರಿದೆ. ಅಂದಹಾಗೆ ಇವರಿಬ್ಬರು ಜೋಡಿಯಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಸೆಕೆಂಡ್ ಲೈಫ್ ಎಂದು ಹೆಸರಿಡಲಾಗಿದ್ದು ಚಿತ್ರೀಕರಣ ಅಂತಿಮ ಹಂತ ತಲುಪಿದೆ.
ಸ್ವಾರ್ಥ ರತ್ನ' ಚಿತ್ರದಲ್ಲಿ ನಾಯಕನಾಗಿ ನಟಿಸಿ
ನಿನ್ನಯನಾ..’ ಹಾಡಿನ ಮೂಲಕ ಖ್ಯಾತಿ ಪಡೆದ ಆದರ್ಶ ಗುಂಡುರಾಜ್ ಗೆ ಸಿಂಧೂ ರಾವ್ ಇಲ್ಲಿ ಅಪರೂಪದ ಜೋಡಿ. ಅದಕ್ಕೆ ಕಾರಣ ಆಕೆಯದು ಅಂಧೆಯ ಪಾತ್ರ. ಈಗಾಗಲೇ ಒಂದಷ್ಟು ಚಿತ್ರಗಳಲ್ಲಿ ಸಿಕ್ಕ ಅವಕಾಶದ ಸದ್ಬಳಕೆ ಮಾಡಿಕೊಳ್ಳುತ್ತಿರುವ ನಟಿಯಾಗಿ ಗುರುತಿಸಿಕೊಂಡಿರುವ ಈ ಅಂದಗಾತಿ ಮೊದಲ ಬಾರಿ ಅಂಧೆಯಾಗಿರುವುದರಿಂದ ಅಭಿನಯಕ್ಕೆ ಹೆಚ್ಚು ಪ್ರಾಧಾನ್ಯತೆ ದೊರಕಿದೆ ಎನ್ನಬಹುದು. ಅನಾಥಾಶ್ರಮದಲ್ಲಿರುವ ಅಂಧೆಯನ್ನು ವಿವಾಹವಾಗಿ ಆದರ್ಶ ಮೆರೆಯುವ ನಾಯಕ ಆದರ್ಶ್ ಮುಂದೆ ಸಂಸಾರದಲ್ಲಿ ಎದುರಿಸುವ ತೊಂದರೆಗಳೇನು ಎನ್ನುವುದನ್ನು ಚಿತ್ರ ಸ್ವಾರಸ್ಯ ಮತ್ತು ಕುತೂಹಲಭರಿತವಾಗಿ ನಿಮ್ಮ ಮುಂದೆ ಇಡಲಿದೆ. ಈ ವಿವಾಹದ ದೃಶ್ಯವನ್ನು ಇತ್ತೀಚೆಗೆ ಡಾಲರ್ಸ್ ಕಾಲನಿಯಲ್ಲಿರುವ ಆದರ್ಶ್ ಅವರ ಸ್ಟುಡಿಯೋದಲ್ಲೇ ಚಿತ್ರೀಕರಿಸಲಾಯಿತು.
ಸ್ವಾರ್ಥ ರತ್ನದ ಬಳಿಕ ಕಾದಲ್ ಪೈತ್ಯಂ' ಎನ್ನುವ ತಮಿಳು ಚಿತ್ರ, ಹಿಂದಿಯಲ್ಲಿ
ಹೇ ದಿಲ್ ರಮ್ತಾ ಜೋಗಿ’ ಎನ್ನುವ ಸಿನಿಮಾಗಳಲ್ಲಿ ನಟಿಸಿರುವ ಆದರ್ಶ ಗುಂಡುರಾಜ್ ಸೆಕೆಂಡ್ ಲೈಫ್' ಚಿತ್ರದ ಮೂಲಕ ಮರಳಿ ಕನ್ನಡಕ್ಕೆ ಬಂದಿದ್ದಾರೆ. ಚಿತ್ರದಲ್ಲಿ ಪ್ರಮುಖ ಖಳನಾಗಿ ರುದ್ರ ಎನ್ನುವ ಪಾತ್ರದಲ್ಲಿ ನವೀನ್ ಶಕ್ತಿ ನಟಿಸಲಿದ್ದಾರೆ. ಮೂಲತಃ ರಂಗಭೂಮಿ ಕಲಾವಿದರಾಗಿರುವ ಅವರು
ರಂಗಾಭರಣ’ ತಂಡದಲ್ಲಿ ಕಲಾವಿದರಾಗಿದ್ದವರು. ಇದು ಅವರಿಗೆ ಎರಡನೇ ಚಿತ್ರ. ನಿರ್ದೇಶಕ ರಾಜು ದೇವಸಂದ್ರ ನಿರ್ದೇಶನದ 4ನೇ ಚಿತ್ರ ಇದು. ಅಕ್ಷತೆ, ಗೋಸಿಗ್ಯಾಂಗ್, ಕತ್ತಲೆ ಕಾಡು ಚಿತ್ರಗಳ ಬಳಿಕ ರಾಜು ಅವರು ಕೈಗೆತ್ತಿಕೊಂಡಿರುವ ಈ ಚಿತ್ರಕ್ಕೆ ಆರವ್ ರಿಷಿಕ್ ಅವರ ಸಂಗೀತವಿದೆ.
ಚಿತ್ರವನ್ನು ಕನ್ನಡ, ತಮಿಳು, ತೆಲುಗು ಹೀಗೆ ಮೂರು ಭಾಷೆಗಳಲ್ಲಿ ಏಕಕಕಾಲದಲ್ಲಿ ಚಿತ್ರೀಕರಿಸಿರುವುದು ವಿಶೇಷ. ನಿರ್ದೇಶಕರ ಕನಸಿಗೆ ಕೈ ಜೋಡಿಸಿರುವ ನಿರ್ಮಾಪಕ ರಮೇಶ್ ಕೊಯಿರಾ ಅವರು ಚಿತ್ರದ ಛಾಯಾಗ್ರಾಹಕರು ಕೂಡ ಹೌದು. ಈಗಾಗಲೇ ಪ್ರಮೋದ್ ಬೋಪಣ್ಣ ಎನ್ನುವ ಕಲಾವಿದನನ್ನು ಇರಿಸಿಕೊಂಡು `ಅಂದುಕೊಂಡಂತೆ’ ಎನ್ನುವ ಚಿತ್ರ ನಿರ್ಮಿಸಿರುವ ರಮೇಶ್ ಕೊಯಿರಾ ಸುಮಾರು ಎರಡೂವರೆ ದಶಕಗಳಿಂದ ಚಿತ್ರರಂಗದಲ್ಲಿದ್ದಾರೆ. ಛಾಯಾಗ್ರಾಹಕರಾಗಿ ಅವರಿಗೆ ಇದು 25ನೇ ಚಿತ್ರ. ಡೈರೆಕ್ಷನ್ ತಂಡದಲ್ಲಿ ಲೋಕೇಶ್ ವಿ ಕೋಲಾರ ಇದ್ದಾರೆ. ಕೆಜಿಎಫ್ ಖ್ಯಾತಿಯ ವಿಕ್ರಂ ಮೋರ್ ಸಾಹಸ ಸಂಯೋಜನೆ ಮಾಡಿದ್ದಾರೆ. ಸದ್ಯದಲ್ಲೇ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ ತಯಾರಿ ನಡೆಸಲಾಗಿದೆ.