ಸಮುದಾಯ ಬೆಂಗಳೂರು ಇದರ ನೂತನ ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಕಾವ್ಯಾ ಅಚ್ಯುತ್ ಆಯ್ಕೆಯಾಗಿದ್ದಾರೆ.
‘ಸಮುದಾಯ’ ಬೆಂಗಳೂರು ಇದರ ನೂತನ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಕಾರ್ಯದರ್ಶಿಯಾಗಿ ಖ್ಯಾತ ಸಾಮಾಜಿಕ ಕಾರ್ಯಕರ್ತೆ, ರಂಗನಟಿ ಕಾವ್ಯ ಅಚ್ಯುತ್ ಆಯ್ಕೆಯಾಗಿದ್ದಾರೆ.
ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ಬಹುಮುಖ್ಯ ಪಾತ್ರ ವಹಿಸಿದ ಮತ್ತು ವಹಿಸುತ್ತಿರುವ ಸಮುದಾಯ ಬೆಂಗಳೂರು ಇದರ ಸರ್ವಸದಸ್ಯರ ಸಭೆ ಇಂದು ಬೆಂಗಳೂರಿನ ಕೆಂಪೇಗೌಡ ನಗರ ಬಡಾವಣೆಯಲ್ಲಿರುವ ಉದಯಭಾನು ಕಲಾಸಂಘದಲ್ಲಿ ನೆರವೇರಿತು.
ಸಭೆಯಲ್ಲಿ ಪ್ರಸಕ್ತ ಸಾಂಸ್ಕೃತಿಕ ರಾಜಕಾರಣ ಮತ್ತು ಕರ್ನಾಟಕದಾದ್ಯಂತ ನಡೆದ “ಒಳಿತು ಮಾಡು ಮನುಸ” ಬೀದಿ ರಂಗ ನಮನ ಕಾರ್ಯಕ್ರಮದ ವಿಮರ್ಶೆ ನಡೆಯಿತು. ಜೊತೆಗೆ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಸಮುದಾಯ ಬೆಂಗಳೂರು ಇದರ ಅಧ್ಯಕ್ಷರಾಗಿ ಆಯ್ಕೆಯಾದ ಅಗ್ರಹಾರ ಕೃಷ್ಣ ಮೂರ್ತಿ ಮಾತನಾಡಿ, ಬೆಂಗಳೂರು ಸಮುದಾಯ ಪ್ರಸಕ್ತ ಸಮಕಾಲೀನ ರೈತರ ಹೋರಾಟದಲ್ಲಿ ಭಾಗಿಯಾಗಿದೆ. ಅವರ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದು ನಿರ್ಣಯ ಮಂಡಿಸಿದರು. ಇದನ್ನು ಕಾರ್ಯಾಧ್ಯಕ್ಷರಾದ ಜೆ.ಸಿ ಶಶಿಧರ ಅನುಮೋದನೆ ಮಾಡಿದರು. ಸಮುದಾಯ ಬೆಂಗಳೂರು ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.
ಸಮುದಾಯ ಬೆಂಗಳೂರು ಅಧ್ಯಕ್ಷರಾಗಿ ಶ್ರೀಯುತ ಅಗ್ರಹಾರ ಕೃಷ್ಣ ಮೂರ್ತಿ, ಉಪಾಧ್ಯಕ್ಷರಾಗಿ ನಟಿ, ಪತ್ರಕರ್ತೆ ಪದ್ಮಾ ಶಿವಮೊಗ್ಗ ಹಾಗೂ ಕೀರ್ತಿ ತೊಂಡಗೆರೆ, ಕಾರ್ಯಾಧ್ಯಕ್ಷರಾಗಿ ಜೆ.ಸಿ.ಶಶಿಧರ, ಕಾರ್ಯದರ್ಶಿಯಾಗಿ ಕಾವ್ಯಾ ಅಚ್ಯುತ್, ಜಂಟಿ ಕಾರ್ಯದರ್ಶಿಗಳಾಗಿ ಗಣೇಶ ಶೆಟ್ಟಿ ಹಾಗೂ ನಾಗಲಕ್ಷ್ಮೀ, ಖಜಾಂಚಿಯಾಗಿ ಲವನಿಕ ವಿ ಯವರನ್ನು ಆಯ್ಕೆ ಮಾಡಲಾಯಿತು. ಸಮುದಾಯ ಬೆಂಗಳೂರು ಇದರ 45 ವರ್ಷದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಕಾರ್ಯದರ್ಶಿಯೋರ್ವರ ಆಯ್ಕೆ ನಡೆದಿದೆ. ಕಾವ್ಯ ಅಚ್ಯುತ್ ಅವರು ನಟಿ, ಹೋರಾಟಗಾರ್ತಿ ಮಾತ್ರವಲ್ಲ ಬಹುಮುಖ ಪ್ರತಿಭೆ ಹೊಂದಿರುವ ರಂಗ ಸಂಘಟಕಿಯೂ ಹೌದು. ಇವರ ಪತಿ ನವೀನ್ ಸೂರಿಂಜೆ ನಾಡಿನ ಜನಪ್ರಿಯ ಪತ್ರಕರ್ತರು. ಕಾವ್ಯಾ ಅವರಿಗೆ ಸಮುದಾಯದ ರಂಗಕರ್ಮಿಗಳು, ಸಾಹಿತಿಗಳು, ಸಂಘಟಕರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಟಿ. ವೆಂಕಟೇಶ್ ಮೂರ್ತಿ, ರವೀಂದ್ರನಾಥ ಸಿರಿವರ, ನಾಚೇಗೌಡ ಬಿ.ಹೆಚ್., ದೀಲಿಪ್ ಎಸ್.ಪಿ, ಪೈರೋಜ್ ಕೆ, ಎಂ.ಎಸ್ ಇಂದಿರಾ, ರಾಜು ಡಿ.ವಿ, ಪ್ರಣವ್ ಭಾರದ್ವಾಜ್, ಕಿಶನ್ ರಾಮಮೂರ್ತಿ, ಎಂ.ವಿ ಸುರೇಶ್, ಮದನ್ ಶೆಟ್ಟಿ, ಶರತ್ ಕುಮಾರ್, ದೀಪಕ್ ರಾಜ್ ಆಯ್ಕೆಯಾಗಿದ್ದಾರೆ. ಈ ಬಾರಿಯ ಸಮುದಾಯ ಕಾರ್ಯಕಾರಿ ಸಮಿತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮುದಾಯವಿರುವುದು ಗಮನಾರ್ಹ. ಸಮುದಾಯ ಬೆಂಗಳೂರು ಸರ್ವ ಸದಸ್ಯರು ಹಾಗೂ ಸಮುದಾಯ ಕರ್ನಾಟಕ ಅಧ್ಯಕ್ಷರಾದ ಅಚ್ಯುತ ಮತ್ತು ಸಮುದಾಯ ಕರ್ನಾಟಕ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಗೌಡ ಉಪಸ್ಥಿತರಿದ್ದರು.