
ಯುವ ನಿರ್ದೇಶಕ ಭರತ್ ನಿಧನರಾಗಿದ್ದಾರೆ. ಹಲವಾರು ದಿನಗಳಿಂದ ಅನಾರೋಗ್ಯದಿಂದ ಚಿಕಿತ್ಸೆಯಲ್ಲಿದ್ದ ಅವರು ಇಂದು ಖಾಸಗಿ ಆಸ್ಪತ್ರೆಯಲ್ಲಿ ಮೃತರಾಗಿರುವುದಾಗಿ ತಿಳಿದುಬಂದಿದೆ. ಶ್ರೀ ಮುರಳಿಯ ವೃತ್ತಿ ಬದುಕಿನಲ್ಲಿ ಗಮನಾರ್ಹ ಚಿತ್ರವಾದ ‘ಕಂಠಿ' ಸೇರಿದಂತೆ ರವಿಚಂದ್ರನ್ ಪುತ್ರ ಮನೋರಂಜನ್ ಅವರ ಪ್ರಥಮ ಚಿತ್ರ
‘ಸಾಹೇಬ’ಕ್ಕೂ ಅವರೇ ನಿರ್ದೇಶಕರಾಗಿದ್ದರು.
ಕಳೆದ ಒಂದು ವಾರದಿಂದ ಚಾಮರಾಜಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಅವರು ಕೋವಿಡ್ ಬಾಧಿತರಾಗಿದ್ದರೆನ್ನಲಾಗಿದೆ. ಜೊತೆಗೆ ಬೇರೆ ಕಾಯಿಲೆಗಳೂ ಇದ್ದವೆನ್ನಲಾಗಿದ್ದು, ಅದೇ ಕಾರಣದಿಂದ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಸುಮಾರು 10.30ರ ವೇಳೆಗೆ ಅವರು ನಿಧನರಾಗಿದ್ದಾರೆ. “ನಿರ್ದೇಶಿಸಿದ್ದು ಎರಡೇ ಚಿತ್ರವಾದರೂ ಕನ್ನಡ ಚಿತ್ರರಂಗದಲ್ಲಿ ಎರಡು ದಶಕಗಳಿಂದ ಸಕ್ರಿಯವಾಗಿದ್ದ ಸೃಜನ ಶೀಲ ವ್ಯಕ್ತಿ ಅವರಾಗಿದ್ದರು. ಯುವ ನಟ ರಾಜವರ್ಧನ್, ರವಿಚಂದ್ರನ್ ಅವರ ಕಿರಿಯಪುತ್ರ ವಿಕ್ರಮ್ ಮತ್ತು ಪ್ರಜ್ವಲ್ ದೇವರಾಜ್ ಅವರಿಗಾಗಿ ಸಿನಿಮಾ ಮಾಡುವ ಬಗ್ಗೆ ಅವರಲ್ಲಿ ಯೋಜನೆಗಳಿದ್ದವು” ಎಂದು ಅವರ ಆತ್ಮೀಯರಾದ ಉಮಾಶಂಕರ್ ಸಿನಿಕನ್ನಡಕ್ಕೆ ತಿಳಿಸಿದ್ದಾರೆ.
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಡೈರೆಕ್ಷನ್ ಟೀಮ್‌ನಲ್ಲಿ ಕೆಲಸ ಮಾಡಿದ್ದವರು ಭರತ್. ಓ ನನ್ನ ನಲ್ಲೆ' ಸೇರಿದಂತೆ ಒಂದಷ್ಟು ಸಿನಿಮಾಗಳಿಗೆ ಕೆಲಸ ಮಾಡಿದ್ದ ಅವರು, ಸ್ವತಂತ್ರವಾಗಿ ನಿರ್ದೇಶಿಸಿದ್ದ ಪ್ರಥಮ ಚಿತ್ರ '
ಕಂಠಿ’ ಆಗಿತ್ತು. ಶ್ರೀ ಮುರಳಿ, ರಮ್ಯಾ ಜೋಡಿಯಾಗಿದ್ದ ಆ ಚಿತ್ರ ವಿಮರ್ಶಕರ ಮನ ಸೆಳೆದಿತ್ತು. ಚಿತ್ರದ `ಜಿನು ಜಿನುಗೋ ಜೇನ ಹನಿ’ ಇಂದಿಗೂ ಗುನುಗೋ ಹಾಡಾಗಿ ಉಳಿದುಕೊಂಡಿದೆ. ಕನ್ನಡದ ಶೋ ಮ್ಯಾನ್ ರವಿಚಂದ್ರನ್ ತಮ್ಮ ಮಗನ ಮೊದಲ ಚಿತ್ರದ ನಿರ್ದೇಶನಕ್ಕೆ ಭರತ್ ಗೆ ಅವಕಾಶ ನೀಡಿದ್ದಾರೆ ಎಂದಾಗಲೇ ಅವರಿಗೆ ಭರತ್ ಮೇಲೆ ಇರುವಂಥ ಭರವಸೆ ಅರ್ಥವಾಗಬಹುದು. ಮೃತರಿಗೆ ಸುಮಾರು 45 ವರ್ಷ ವಯಸ್ಸಾಗಿದ್ದು, ಪತ್ನಿ, ಪುತ್ರಿ, ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ.