ಕಳೆದ ವರ್ಷದಿಂದ ನಟ ಕಿಚ್ಚ ಸುದೀಪ್ ಅಭಿಮಾನಿಗಳು ಅಭಿಮಾನದಿಂದ ನಿರೀಕ್ಷಿಸುತ್ತಿರುವ ಚಿತ್ರ ಫ್ಯಾಂಟಂ'. ಕೊರೊನಾ ಬಳಿಕ ಮೊದಲು ಚಿತ್ರೀಕರಣ ಶುರು ಮಾಡಿದ ಕೀರ್ತಿಗೆ ಪಾತ್ರವಾಗಿದ್ದಂಥ ಸಿನಿಮಾಕ್ಕೆ ಇದೀಗ ಹೊಸ ಹೆಸರಿಡಲಾಗಿದೆ. ಚಿತ್ರದ ನಾಯಕ ಸುದೀಪ್ ಅವರಿಗೆ ಈಗಾಗಲೇ ಚಿತ್ರದಲ್ಲಿ ಇರಿಸಲಾಗಿರುವ ಹೆಸರನ್ನೇ ಚಿತ್ರಕ್ಕೂ ಇಡಲಾಗಿದೆ. ಹೌದು, ಫ್ಯಾಂಟಂ ಈಗ
ವಿಕ್ರಾಂತ್ ರೋಣ’ ಆಗಿ ಬದಲಾಗಿದೆ. ಈ ಹೆಸರಿನ ಅನಾವರಣವನ್ನು ಬುರ್ಜ್ ಖಲೀಫದ ಮೇಲೆ ಮಾಡಲಾಗುತ್ತಿರುವುದು ವಿಶೇಷ.
ಜಗತ್ತಿನ ಅತಿ ಎತ್ತರದ ಕಟ್ಟಡವೆಂದು ಗುರುತಿಸಲ್ಪಡುವ ದುಬೈನ ಬುರ್ಜ್ ಖಲೀಫದ ಮೇಲೆ ಕನ್ನಡದ ಎತ್ತರದ ನಾಯಕ ಎಂದು ಗುರುತಿಸಲ್ಪಡುವ ಸುದೀಪ್ ಅವರ ಚಿತ್ರದ ಹೆಸರು ಲೊಗೋ ಸಹಿತ ಪ್ರದರ್ಶನಗೊಳ್ಳಲಿದೆ. ಅಂದಹಾಗೆ ಬುರ್ಜ್ ಖಲೀಫ ಮೇಲೆ ಸಿನಿಮಾದ ಹೆಸರು ಹೀಗೆ ಲಾಂಚ್ ಮಾಡಲಾಗುತ್ತಿರುವುದು ಪ್ರಥಮ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಇದೇ ತಿಂಗಳಾಂತ್ಯದಲ್ಲಿ ಅಂದರೆ ಜನವರಿ 30ರಂದು ಈ ಕಾರ್ಯಕ್ರಮ ನೆರವೇರಲಿದ್ದು, ಅಂದು ಕಿಚ್ಚಕ್ರಿಯೇಶನ್ಸ್ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್ ಮೂಲಕ ನೇರ ಪ್ರಸಾರ ಮಾಡಲಿದೆ.
ದಾಖಲೆಗೆ ಅರ್ಹವಾಗಲಿರುವ ವಿಶೇಷತೆಗಳು
- ಬುರ್ಜ್ ಖಲೀಫದ ಮೇಲೆ ಶೀರ್ಷಿಕೆ ಹಾಗೂ ಲಾಂಛನ ಬಿಡುಗಡೆಗೊಳಿಸುತ್ತಿರುವ ವಿಶ್ವದ ಪ್ರಥಮ ಚಿತ್ರ.
- ಪ್ರಪಂಚದಲ್ಲೇ 2000 ಅಡಿ ವಿಡಿಯೋ ಕಟೌಟ್ ಹೊಂದಿರುವ ಎರಡನೆಯ ನಟನಾಗಿ ಸುದೀಪ್ ಅವರು ಹೊರಹೊಮ್ಮಲಿದ್ದಾರೆ. ಈಗಾಗಲೇ ಶಾರುಖ್ ಖಾನ್ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ದುಬೈ ಸರ್ಕಾರವೇ ಬುರ್ಜ್ ಖಲೀಫ ಮೇಲೆ ಅವರ ಚಿತ್ರ ಹಾಕಿ ಜಾಹೀರಾತು ನೀಡಿರುವ ಕಾರಣ, ಅಷ್ಟೆತ್ತರದ ವಿಡಿಯೋದಲ್ಲಿ ಕಂಡಂಥ ಮೊದಲ ನಟ ಅವರಾಗಿದ್ದಾರೆ. ಆದರೆ ಸಿನಿಮಾ ಜಾಹೀರಾತಿಗೆ ಸಂಬಂಧಿಸಿದಂತೆ ಸುದೀಪ್ ಪ್ರಥಮ ಸ್ಥಾನ ಪಡೆಯುತ್ತಾರೆ.
- ಅಂದು ಪ್ರಸಾರವಾಗಲಿರುವ ಚಿತ್ರದ ಶೀರ್ಷಿಕೆ ಪ್ರದರ್ಶನವು ಮೂರು ನಿಮಿಷಗಳ ಕಾಲಾವಧಿ ಹೊಂದಿರುತ್ತದೆ.
- ಈ ಸಂದರ್ಭದಲ್ಲಿ ಸುದೀಪ್ ತಮ್ಮ ಚಿತ್ರ ಬದುಕಿನ 25ನೇ ವರ್ಷಕ್ಕೆ ಕಾಲಿಡುತ್ತಿದ್ದು, ಅವರ ಬದುಕಿನ ಮೈಲಿಗಲ್ಲಾಗಿ ಉಳಿಯಲಿರುವುದು ಖಚಿತ.
ಮೂರು ದಿನದ ಹಿಂದೆ ಚಿತ್ರಕ್ಕೆ ಸಂಬಂಧಿಸಿದಂತೆ ಒಂದು ಪ್ರಮುಖ ಬೆಳವಣಿಗೆಯನ್ನು ಇಂದು ಅಂದರೆ ಜನವರಿ 21ರಂದು ಸಂಜೆ ನಾಲ್ಕು ಗಂಟೆ ಮೂರು ನಿಮಿಷಕ್ಕೆ ಹೊರಗೆಡಹುವುದಾಗಿ ತಿಳಿಸಲಾಗಿತ್ತು. ಅದರ ಪ್ರಕಾರ ಚಿತ್ರದ ಹೊಸ ಹೆಸರು ಘೋಷಣೆ ಮಾಡಲಾಗಿದ್ದು, ವಿಕ್ರಾಂತ್ ರೋಣ ಎಂದು ತಿಳಿಸಲಾಗಿದೆ. `ರಂಗಿ ತರಂಗ’ದಂಥ ಸೂಪರ್ ಹಿಟ್ ಚಿತ್ರದ ಮೂಲಕ ಎಂಟ್ರಿ ನೀಡಿದಂಥ ಅನೂಪ್ ಭಂಡಾರಿ ಮತ್ತು ಪೈಲ್ವಾನ್ ಮೂಲಕ ಅಬ್ಬರಿಸಿದ ಕಿಚ್ಚ ಸುದೀಪ್ ಇಬ್ಬರ ಸಮಾಗಮದಲ್ಲಿ ಹೊರ ಬರುತ್ತಿರುವ ಪ್ರಥಮ ಚಿತ್ರ ಎನ್ನುವ ಕಾರಣಕ್ಕೆ ಈಗಾಗಲೇ ಸಿನಿಮಾ ಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿದೆ. ಅಂದಹಾಗೆ ಚಿತ್ರದಲ್ಲಿ ಅನೂಪ್ ಸಹೋದರ ನಿರೂಪ್ ಭಂಡಾರಿ ಕೂಡ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.