ಇತ್ತೀಚೆಗಷ್ಟೇ ಕಲರ್ಸ್ ಕನ್ನಡ ವಾಹಿನಿಯ ‘ಅನುಬಂಧ’ ಕಾರ್ಯಕ್ರಮದಲ್ಲಿ ಶ್ರೇಷ್ಠ ಖಳನಟ ಪ್ರಶಸ್ತಿಗೆ ಭಾಜನರಾದವರು ನಟ ಶೋಭರಾಜ್ ಪಾವೂರು. ಆದರೆ ಪೆಟ್ರೋಲ್ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯ ವಿರುದ್ಧ ಅವರು ಫೇಸ್‌ಬುಕ್ ಮೂಲಕ ಹಂಚಿಕೊಂಡ ಒಂದೇ ಒಂದು ಸ್ಟೇಟಸ್ ಅವರನ್ನಿಂದು ಬಿಜೆಪಿ ‘ಭಕ್ತ’ರ ಮುಂದೆ ನಿಜವಾದ ಖಳನಟನಾಗಿಸಿದೆ. ಈ ಬಗ್ಗೆ ಮಂಗಳೂರಿನ ಖ್ಯಾತ ಸಮಾಜಿಕ ಕಾರ್ಯಕರ್ತ ಮುನೀರ್ ಕಾಟಿಪಳ್ಳ ಅವರ ಬರಹ ಇಲ್ಲಿದೆ.
ಶೋಭರಾಜ್ ಪಾವೂರು ತುಳುರಂಗ ಭೂಮಿಯ ಪ್ರತಿಭಾವಂತ ನಟ. ಇತ್ತೀಚೆಗೆ ತುಳು ಸಿನೆಮಾಗಳಲ್ಲೂ ನಟ, ನಿರ್ದೇಶಕರಾಗಿ ಮಿಂಚುತ್ತಿದ್ದಾರೆ. ರಾಜಕೀಯವಾಗಿ ನರೇಂದ್ರ ಮೋದಿಯವರನ್ಜು ಬೆಂಬಲಿಸುತ್ತಾ ಬಂದಿದ್ದಾರೆ. ಮತ ಹಾಕಿದ್ದಾರೆ. ಅಚ್ಚರಿಯ ಸಂಗತಿಯೆಂದರೆ , ಪೆಟ್ರೋಲ್ ದರ ಏರಿಕೆಯನ್ನು ವಿರೋಧಿಸಿ ಮೋದಿ ವಿರುದ್ಧ ಒಂದು ಪೋಸ್ಟ್ ಹಾಕಿದ್ದಕ್ಕೆ ರಾತ್ರೋರಾತ್ರಿ ಅವರು ದ್ರೋಹಿ ಆಗಿಬಿಟ್ಟಿದ್ದಾರೆ. ಫೇಸ್ ಬುಕ್ ನಲ್ಲಿ ಅಕ್ಷರಶ ಅವರನ್ನು ಮೋದಿ ಬೆಂಬಲಿಗರು ಬೇಟೆಯಾಡುತ್ತಿದ್ದಾರೆ. ಅಸಹ್ಯ ನಿಂದನೆ, ಬೆದರಿಕೆಯ ಜೊತೆಗೆ, ಬಿಡುಗಡೆಗೆ ಸಿದ್ದಗೊಂಡಿರುವ ಶೋಭರಾಜ್ ಪಾವೂರು ಅವರ ಹೊಸ ಸಿನೆಮಾ ಬಿಡುಗಡೆಯಾಗದಂತೆ ತಡೆಯುವ, ಬಹಿಷ್ಕರಿಸುವ ಗಂಭೀರ ಬೆದರಿಕೆ ಹಾಕಲಾಗಿದೆ.
ಇದರಿಂದ ಕಂಗೆಟ್ಟ ಶೋಭರಾಜ್ ತನ್ನ ಮೊದಲ ಪೋಸ್ಟ್ ಡಿಲೀಟ್ ಮಾಡಿ ತುಳುವಿನಲ್ಲಿ ಕ್ಷಮಾಪಣೆಯ, ಸ್ಪಷ್ಟೀಕರಣದ ಮತ್ತೊಂದು ಪೋಸ್ಟ್ ಹಾಕಿದರು. ಆದರೂ ಸಮಾಧಾನಗೊಳ್ಳದ ಮೋದಿ ಬೆಂಬಲಿಗರು ಇಡೀ ರಾತ್ರಿ ಅಲ್ಲಿಯೂ ಬೆನ್ನಟ್ಟಿ ನೂರಾರು ಎಕೌಂಟುಗಳ ಮೂಲಕ ಧಮಕಿ ಮುಂದುವರಿಸಿದರು. ಈಗ ಶೋಭರಾಜ್ ತಮ್ಮ ಕ್ಷಮಾಪಣೆಯ ಪೋಸ್ಟನ್ನೂ ಡಿಲೀಟ್ ಮಾಡಿ ಮೌನಕ್ಕೆ ಶರಣಾಗಿದ್ದಾರೆ. ತಿಂಗಳುಗಳ ಹಿಂದೆ ತುಳುನಾಡಿನ ಅತ್ಯಂತ ಜನಪ್ರಿಯ ನಟ ಅರವಿಂದ ಬೋಳಾರ್ ನಕಲಿ ಜ್ಯೋತಿಷಿಗಳನ್ನು ವಿಡಂಬನೆ ಮಾಡಿದಾಗಲೂ ಮೋದಿ ಅನುಯಾಯಿಗಳು ಹೀಗೆಯ ದಾಳಿ ನಡೆಸಿ ಶರಣಾಗುವಂತೆ ಮಾಡಿದ್ದರು.
ಇದು ಅತಿರೇಕ. ಬಿಜೆಪಿ, ಅದರ ಸರಕಾರ, ಪರಿವಾರದ ವಿರುದ್ದ ಸಕಾರಣಕ್ಕೆ ತುಳುನಾಡಿನ ಕಲಾವಿದರು, ಬರಹಗಾರರು, ಸಾಂಸ್ಕೃತಿಕ ರಂಗದವರು ಧ್ವನಿ ಎತ್ತಬಾರದು ಎಂಬ ಈ ರೀತಿಯ ದಬ್ಬಾಳಿಕೆ ತೀರಾ ಅಪಾಯಕಾರಿ. ಇಡೀ ದೇಶದ ಇಂದಿನ ಸ್ಥಿತಿಯ ಪ್ರತಿಬಿಂಬ.
ಇಂತಹ ಗಂಭೀರ ಸಂದರ್ಭದಲ್ಲಿ ತುಳು ರಂಗಭೂಮಿ, ಸಿನೆಮಾ ರಂಗ, ಬರಹಗಾರರು, ಕಲಾವಿದರು ಶೋಭರಾಜ್ ಪಾವೂರು ಪರ ನಿಲ್ಲಬೇಕು, ಪ್ರಜ್ಞಾವಂತ ನಾಗರಿಕರು ಧ್ವನಿ ಎತ್ತಬೇಕು. ಇಲ್ಲದಿದ್ದಲ್ಲಿ ಬದುಕು ಅಸಹನೀಯವಾದೀತು.
ಮುನೀರ್ ಕಾಟಿಪಳ್ಳ