ಜಿಮ್ ರವಿ ನಾಯಕರಾಗಿ ನಟಿಸುತ್ತಿರುವ ಚಿತ್ರದ ಮುಹೂರ್ತ ಇಂದು ಬೆಳಿಗ್ಗೆ ನಾಗರಬಾವಿಯ ‘ರವೀಸ್ ಜಿಮ್’ನಲ್ಲಿ ನೆರವೇರಿತು. ಇದುವರೆಗೆ ನೂರಾರು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಿದ್ದ ರವಿಗೆ ಶುಭ ಕೋರಲು ಸಾಕಷ್ಟು ಜನರ ದಂಡೇ ಅಲ್ಲಿ ನೆರೆದಿತ್ತು.
‘ಪುರುಷೋತ್ತಮ’ ಹೆಸರಿನ ಈ ಚಿತ್ರದ ನಿರ್ದೇಶಕ ಅಮರನಾಥ್ ಎಸ್.ವಿಯವರು ತಾವು ಈ ಹಿಂದೆ ‘ದಿಲ್ದಾರ’ ಸಿನಿಮಾ ಮಾಡಿದ್ದಾಗಿ ಹೇಳಿದರು. ಕೌಟುಂಬಿಕ ಕತೆಯನ್ನು ಹೊಂದಿರುವ ಈ ಚಿತ್ರಕ್ಕೆ ಚಿತ್ರಕತೆ, ಸಂಭಾಷಣೆ ಮತ್ತು ಹಾಡುಗಳನ್ನು ಸ್ವತಃ ಅಮರನಾಥ ಅವರೇ ರಚಿಸಿದ್ದಾರೆ. “ನನ್ನನ್ನು ರವಿಯವರು ಪ್ರೀತಿಯಿಂದ ತಮ್ಮ ಎಂದು ಕರೆಯುತ್ತಾರೆ. ನಾನು ಅವರ ಜಿಮ್‌ನಲ್ಲೇ ವರ್ಕೌಟ್ ಮಾಡುತ್ತೇನೆ. ಅವರು ಬಾಡಿ ಬಿಲ್ಡಿಂಗ್ ಮೂಲಕ ದೇಶದಲ್ಲಿ ಗುರುತಿಸಿಕೊಂಡವರು. ಅಂಥವರನ್ನು ಸಿನಿಮಾದ ಮೂಲಕ ನಾಯಕನಾಗಿ ಗುರುತಿಸುವಂತಾಗಲಿ ಎಂದು ಈ ಚಿತ್ರ ಮಾಡುತ್ತಿದ್ದೇನೆ” ಎಂದು ನಿರ್ದೇಶಕರು ಹೇಳಿದರು. ಇದೊಂದು ಕೌಟುಂಬಿಕ ಕತೆ. ಪ್ರಪಂಚ ದಿನವೂ ಪ್ರಶ್ನೆ ಕೇಳುತ್ತದೆ. ಅದರಲ್ಲೊಂದು ಪ್ರಶ್ನೆಗೆ ನಾಯಕ ನೀಡುವ ಉತ್ತರವೇ ಚಿತ್ರ ಎಂದು ನಿರ್ದೇಶಕರು ವಿಷಯ ಬಿಟ್ಟು ಕೊಡದೆ ಹೇಳಿದರು.
ನಾನು ಡಾ.ರಾಜ್ ಅಭಿಮಾನಿ ಎಂದರು ರವಿ
ನಾನು ಇನ್ ಕಮ್ ಟ್ಯಾಕ್ಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ ಡಾ.ರಾಜ್ ಕುಮಾರ್ ಅವರನ್ನು ಭೇಟಿಯಾಗುವ ಅವಕಾಶ ದೊರಕಿತ್ತು. ನಾನು ಅವರ ಸಿನಿಮಾಗಳನ್ನು ನೋಡಿಯೇ ನಟನೆಯ ಮೇಲೆ ಆಸಕ್ತಿ ಮೂಡಿಸಿಕೊಂಡವನು. ನನ್ನ ದೇಹದಾರ್ಢ್ಯತೆಯನ್ನು ನೋಡಿದ ಅವರು. “ಇದು ದೇಹವಲ್ಲ, ದೇಗುಲ. ಇದನ್ನು ಬದುಕಿನ ಕೊನೆಯತನಕ ಹೀಗೆಯೇ ಕಾಪಾಡಿಕೊಳ್ಳಬೇಕು” ಎಂದರು. ನಾನು ಅವರ ಕಾಲಿಗೆ ಎರಗಿ “ಅಪ್ಪಾಜಿ, ನಾನು ನಿಮ್ಮ ಅಭಿಮಾನಿ” ಎಂದೆ. ಅದಕ್ಕೆ ಅವರು “ಇವತ್ತಿನಿಂದ ನಾನು ನಿಮ್ಮ ಅಭಿಮಾನಿ” ಎಂದರು. ಆಗಲೇ ನಾನು ನನ್ನ ಉಸಿರಿರುವ ತನಕ ಬಾಡಿಬಿಲ್ಡಿಂಗ್ ಮಾಡುವುದಾಗಿ ನಿರ್ಧರಿಸಿದೆ. ಅದನ್ನು ಇಲ್ಲಿಯವರಗೆ ಅನುಸರಿಸಿಕೊಂಡೇ ಬಂದಿದ್ದೇನೆ. ಇದೀಗ ಪೂರ್ಣಪ್ರಮಾಣದ ಕಲಾವಿದನಾಗುವ ಅವಕಾಶ ನನಗೆ ದೊರಕಿದೆ. ಎಲ್ಲವೂ ಅವರ ಅಶೀರ್ವಾದ ಎಂದುಕೊಳ್ಳುತ್ತೇನೆ” ಎಂದರು ರವಿ.
“ನನ್ನ ಅಸಂಖ್ಯಾತ ಸ್ನೇಹಿತರಿದ್ದಾರೆ. ಅವರಿಗೆಲ್ಲ ನನ್ನ ಬಾಡಿ ಬಿಲ್ಡಿಂಗ್ ಸಾಧನೆಯ ಬಗ್ಗೆ ಚೆನ್ನಾಗಿ ಗೊತ್ತು. ಹಾಗಾಗಿಯೇ ಅವರೆಲ್ಲರು ಸಿನಿಮಾದಲ್ಲಿ ಕೂಡ ನಾನು ನಾಯಕನಾಗಬೇಕು ಎಂದು ಬಯಸಿದ್ದಾರೆ. ಅವೆಲ್ಲವೂ ಈಡೇರುವ ಸಮಯ ಇದೀಗ ಬಂದಿದೆ. ಹತ್ತು ವರ್ಷಗಳಿಂದ ನಾಯಕರಾಗಲು ಹೇಳಿದ್ದಾರೆ. ನಟನೆಯ ಆಸಕ್ತಿಯಿಂದಾಗಿ ಇದುವರೆಗೆ ದುಡ್ಡೇ ಪಡೆಯದೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದೂ ಇದೆ. ಈ ಚಿತ್ರದಲ್ಲಿ ಸಂಸಾರದಲ್ಲಿ ಪತ್ನಿಯನ್ನು ಗೌರವಿಸುವ, ಮಗುವನ್ನು, ಕುಟುಂಬವನ್ನು ಪ್ರೀತಿಸುವ ಪಾತ್ರ. 95ಕೆ.ಜಿ ಇದ್ದ ನಾನು ಪಾತ್ರಕ್ಕಾಗಿ 18 ಕೆ.ಜಿ ಕಡಿಮೆ ಮಾಡಿಕೊಂಡಿದ್ದೇನೆ. ಕತೆಗೆ ಪೂರಕವಾಗಿ ಒಳ್ಳೆಯ ಸಂಗೀತವನ್ನು ನಮ್ಮ ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಅವರು ನೀಡಿದ್ದಾರೆ” ಎಂದು ರವಿ ವಿವರಿಸಿದರು.
ಹಾಡಿನಲ್ಲೇ ಬಾಡಿ ಪ್ರದರ್ಶನ ನಿರೀಕ್ಷಿಸಬಹುದು!
ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಮಾತನಾಡಿ, “ನಿರ್ದೇಶಕರ ಪ್ರಕಾರ ಕತೆಯಲ್ಲಿ ರವಿಯವರು ಎಲ್ಲಿಯೂ ಹೊಡೆದಾಡುವ ದೃಶ್ಯಗಳಿಲ್ಲ. ಹಾಗಾಗಿ ದೇಹದಾರ್ಢ್ಯ ಪ್ರದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದಿದ್ದಾರೆ. ಆದರೆ ಒಂದು ಶೃಂಗಾರ ಗೀತೆ ಇರಲಿದೆ. ಅದರಲ್ಲಿ ಬಹುಶಃ ರವಿಯವರ ಮೈ ಪ್ರದರ್ಶನ ಕಾಣುವ ಸಾಧ್ಯತೆ ಇದೆ ಎಂದರು. ಅಂದಹಾಗೆ ಚಿತ್ರದ ಬಹುತೇಕ ಹಾಡುಗಳು ಸಿದ್ಧವಾಗಿದ್ದು, ಆನಂದ ಪ್ರಿಯ, ಪ್ರಮೋದ್ ಮರವಂತೆ ಮತ್ತು ನಿರ್ದೇಶಕ ಅಮರನಾಥ ಎಸ್ ವಿಯವರು ರಚಿಸಿದ್ದಾರೆ. “ನಾನು ರವಿಯವರನ್ನು ಬಿಗ್ ಬಾಸ್ ನಲ್ಲಿ ನೋಡಿದ್ದೆ. ಅವರು ಪವನ್ ಕಲ್ಯಾಣ್, ಚಿರಂಜೀವಿ ಅವರೊಂದಿಗೆ ನಟಿಸಿರುವ ದೃಶ್ಯಗಳನ್ನು ಕೂಡ ನೋಡಿದ್ದೇನೆ. ಒಟ್ಟಿನಲ್ಲಿ ನಟನೆಯನ್ನು ಕೂಡ ಲೀಲಾಜಾಲವಾಗಿ ಮಾಡುತ್ತಾರೆ ಎಂದು ಅರ್ಥ ಮಾಡಿಕೊಂಡಿದ್ದೇನೆ. ಸಾಮಾನ್ಯವಾಗಿ ನನಗೆ ಪುರುಷೋತ್ತಮ ಎನ್ನುವ ಹೆಸರು ಕೇಳಿದಾಗ ವೆಂಕಟೇಶ್ವರ ಸ್ವಾಮಿಯ ನೆನಪಾಗುತ್ತದೆ. ಆಮೇಲೆ ನೆನಪಾಗುವುದೇ ಹ್ಯಾಟ್ರಿಕ್ ಹೀರೋ ಶಿವಣ್ಣ. ಈಗಂತೂ ಪುರುಷೋತ್ತಮ ಅಂದರೆ ಜಿಮ್ ರವಿಯವರೇ ಎನ್ನುವಂತಾಗಿದೆ ಎಂದರು. ಅದೇ ವೇಳೆ ಚಿತ್ರದ ನಿರ್ದೇಶಕರ ಬಗ್ಗೆ ಮಾತನಾಡಿದ ಶ್ರೀಧರ್, “ನನಗೆ ನಿರ್ದೇಶಕರ ಜೊತೆಗಿನ ಒಡನಾಟ ದಲ್ಲಿ ತಿಳಿದಿರುವುದು ಅವರು ಆತ್ಮವಿಶ್ವಾಸ ಇರುವವರು” ಎನ್ನುವುದು ಅರ್ಥವಾಗಿದೆ. ಜೊತೆಗೆ ಚಿತ್ರಕ್ಕೆ ಎರಡು ಆಕರ್ಷಕ ಹಾಡುಗಳನ್ನು ಕೂಡ ಬರೆದಿದ್ದಾರೆ ಎಂದರು.
ಮುಹೂರ್ತ ಸಮಾರಂಭದಲ್ಲಿ ಪಾಲ್ಗೊಂಡ ಹಿರಿಯ ನಿರ್ದೇಶಕ ಎಸ್. ನಾರಾಯಣ್ ಅವರು, ಕ್ಲ್ಯಾಪ್ ಮಾಡಿ ಶುಭ ಕೋರಿದರು. ಹಿರಿಯ ನಟ ಜೈಜಗದೀಶ್, ವಿಜಯಲಕ್ಷ್ಮೀ ಸಿಂಗ್ ದಂಪತಿ ಸೇರಿದಂತೆ ಐಎಫ್ ಎಂಎನ ಮೂರ್ತಿ, ಶಾಸಕ ಮಸಾಲೆ ಜಯರಾಮ್, ಬಿಗ್ ಬಾಸ್ ಖ್ಯಾತಿಯ ಮುರಳಿ ಸೇರಿದಂತೆ ಹಲವಾರು ಗಣ್ಯರು ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಪುರುಷೋತ್ತಮ ಚಿತ್ರತಂಡದ ತಾರಾಬಳಗ ಇನ್ನಷ್ಟೇ ಆಯ್ಕೆ ಆಗಬೇಕಿದೆ. ಸದ್ಯದಲ್ಲೇ ನಾಯಕಿ ಸೇರಿದಂತೆ ಪಾತ್ರಧಾರಿಗಳನ್ನೆಲ್ಲ ಫೈನಲ್ ಮಾಡಿ ಮುಂದಿನವಾರದಿಂದಲೇ ಚಿತ್ರೀಕರಣ ಶುರುಮಾಡಲಾಗುತ್ತಿದೆ.