ರಾಘವೇಂದ್ರ ರಾಜ್ ಕುಮಾರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ಅವರಿಗೆ ಯಾವುದೇ ಗಂಭೀರವಾದ ಸಮಸ್ಯೆ ಗಳಿಲ್ಲ. ಒಂದೇ ದಿನದಲ್ಲಿ ಡಿಸ್ಟಾರ್ಜ್ ಮಾಡಿ ಮನೆಗೆ ಹೋಗಬಹುದೆಂದು ಅಭಯ ನೀಡಿದ್ದಾರೆ.
ನಟ ರಾಘವೇಂದ್ರ ರಾಜ್ ಕುಮಾರ್ ಅವರನ್ನು ಮಂಗಳವಾರ ಸಂಜೆ ಯಶವಂತಪುರದ ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಕ್ಕೂ ಮೊದಲು ಅವರು ಮಲ್ಲೇಶ್ವರದ ‘ಮಧು ಮನೆ’ಯಲ್ಲಿ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಬಿ.ಎನ್.ಗಂಗಾಧರ್ ನಿರ್ಮಾಣದ ‘ಬೆಳಕು’ ಸಿನಿಮಾ ದಲ್ಲಿ ನಟಿಸುತ್ತಿದ್ದ ಅವರು ಮಧ್ಯಾಹ್ನ ನಡೆದ ಮಾಧ್ಯಮ ಗೋಷ್ಠಿಯಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆದರೆ ಸಂಜೆ 6 ರ ಸುಮಾರಿಗೆ ಆರೋಗ್ಯ ದಲ್ಲಿ ಕಂಡ ಏರುಪೇರಿನಿಂದಾಗಿ ತಕ್ಷಣ ಅವರನ್ನು ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆಗೆ ಧಾವಿಸಿದ ಸಹೋದರರಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಶ್ರೀ ಮುರಳಿ ಮೊದಲಾದವರು ರಾಘಣ್ಣನನ್ನು ಭೇಟಿಯಾಗಿ ವೈದ್ಯರೊಂದಿಗೆ ಚರ್ಚಿಸಿದ್ದಾರೆ. ಮಾಧ್ಯಮದ ಜೊತೆಗೆ ಮಾತನಾಡಿದ ವಿನಯರಾಜ್ ಕುಮಾರ್ ರಾಘವೇಂದ್ರ ರಾಜ್ ಕುಮಾರ್ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು ಇಂದೇ ಮನೆಗೆ ಕರೆದೊಯ್ಯುವ ಸಾಧ್ಯತೆ ಇದೆ ಎಂದಿದ್ದಾರೆ.