ಸಿನಿಮಾ ಪತ್ರಕರ್ತರಾಗಿ ವೃತ್ತಿ ಬದುಕು ಆರಂಭಿಸಿದ್ದ ಟಿ.ಜಿ ನಂದೀಶ್ ಪ್ರಸ್ತುತ ಚಿತ್ರಕತೆ, ಸಂಭಾಷಣೆಗಳ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡದ ಖ್ಯಾತ ಚಿತ್ರ ಸಾಹಿತಿ ಚಿ. ಉದಯಶಂಕರ್ ಅವರು ತಮಗೆ ಹೇಗೆ ಬಾಲ್ಯದಿಂದಲೇ ಸ್ಫೂರ್ತಿಯಾಗಿದ್ದರು ಎನ್ನುವುದನ್ನು ಅವರು ಇಲ್ಲಿ ಸ್ವಾರಸ್ಯಕರವಾಗಿ ಹಂಚಿಕೊಂಡಿದ್ದಾರೆ. ಅಂದಹಾಗೆ ಇಂದು ಉದಯಶಂಕರ್ ಅವರ ಜನ್ಮದಿನ.
ಸಿನಿಮಾ ಅಂದ್ರೇನು ಅಂತ ತಿಳಿಯುವ ಮೊದಲೇ ಈ ಹೆಸರು ನನ್ನ ಕಿವಿಗೆ ಪದೇ ಪದೇ ಬೀಳುತ್ತಿತ್ತು. ಗೀತಸಾಹಿತ್ಯ, ಚಿತ್ರಸಾಹಿತಿ ಎಂಬ ಪದಗಳ ಅರ್ಥ ಅರಿಯುವ ಮೊದಲೇ ಈ ಹೆಸರು ನನಗೆ ಚಿರಪರಿಚಿತವಾಗಿತ್ತು. ಅದಕ್ಕೆ ಕಾರಣ ಅಮ್ಮ ಮತ್ತು ರೇಡಿಯೋ.
ಅಮ್ಮನ ಪ್ರೀತಿಪಾತ್ರ ಪರಮಾಪ್ತ ರೇಡಿಯೋ. ಮೊದಲಿಂದಲೂ ಅಮ್ಮನಿಗೆ ರೇಡಿಯೋ ಬಗ್ಗೆ ಒಲವು, ಹಳೆಯ ಚಲನಚಿತ್ರ ಗೀತೆಗಳ ಬಗ್ಗೆ ಇನ್ನಿಲ್ಲದ ಪ್ರೀತಿ. ಹಾಗಾಗಿ ದಿನಚರಿ ಆರಂಭವಾಗುತ್ತ ಇದ್ದದ್ದೇ ರೇಡಿಯೋ ಆನ್ ಮಾಡುವ ಮೂಲಕ. ಹಿನ್ನೆಲೆಯಲ್ಲಿ ಆಕಾಶವಾಣಿ ಭದ್ರಾವತಿ ಎಂದು ಆರಂಭಿಸಿ ಮುಂಜಾನೆಯ ವಾರ್ತೆಗಳು ಮುಗಿದ ಬಳಿಕ ಒಂದೆರಡು ಸಾಮಾಜಿಕ ಕಳಕಳಿಯ ಜನಪರ ನಾಟಕಗಳು, ಜಗುಲಿಕಟ್ಟೆಯಂತಹ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಆ ಬಳಿಕ ಚಿತ್ರಗೀತೆಗಳ ಸರದಿ. ಅಮ್ಮ ಹಾಡುಗಳನ್ನು ಕೇಳುತ್ತಲೇ, ಹಾಗೆ ಅವುಗಳನ್ನು ಗುನುಗುತ್ತಲೇ ಅಡುಗೆ, ಪಾತ್ರೆ, ಮನೆ ಕೆಲಸವನ್ನು ಮಾಡುತ್ತಿದ್ರು. ನಮಗೂ ಹೋಗ್ತಾ ಹೋಗ್ತಾ ರೇಡಿಯೋ ಕಾರ್ಯಕ್ರಮ ಕೇಳ್ತಾ ಕೇಳ್ತಾ ಕೆಲಸಗಳನ್ನು ಮಾಡಿಕೊಳ್ಳೋದು ರೂಢಿಯಾಗಿತ್ತು.
ಆಗ ವಿಶೇಷವಾಗಿ ಚಲನಚಿತ್ರ ಗೀತೆಗಳ ಪ್ರಸಾರ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರತಿ ಹಾಡಿನ ಪ್ರಸಾರಕ್ಕೆ ಮೊದಲು ಚಿತ್ರದ ಹೆಸರು, ಗೀತರಚನೆಕಾರರ ಹೆಸರು ಮತ್ತು ಸಂಗೀತ ನಿರ್ದೇಶಕರ ಹೆಸರು ಹೇಳಿದ ನಂತರವು ಹಾಡು ಪ್ರಸಾರವಾಗುತ್ತಿತ್ತು. ಆ ಪರಿಪಾಠ ಇಂದಿಗೂ ಆಕಾಶವಾಣಿ ಕಾರ್ಯಕ್ರಮದಲ್ಲಿ ಹಾಗೆ ಮುಂದುವರೆದಿದೆ. ಆಗೆಲ್ಲಾ ಮತ್ತೆ ಮತ್ತೆ ನನ್ನ ಗಮನ ಸೆಳೆಯುತ್ತಿದ್ದ ಹೆಸರು ಚಿ. ಉದಯಶಂಕರ್. ಮುಕ್ಕಾಲು ಪಾಲು ಹಾಡುಗಳು ಅವರ ಲೇಖನಿಯಿಂದಲೇ ಹೊಮ್ಮಿದ್ದವು. ನಡುವೆ ಆರ್ ಎನ್ ಜಯಗೋಪಾಲ್, ವಿಜಯನಾರಸಿಂಹ, ಕು. ರ ಸೀತಾರಾಮ ಶಾಸ್ತ್ರಿಯವರ ಹೆಸರು ಕೇಳಿ ಬಂದರೂ, ಬಹುತೇಕ ಹಾಡುಗಳನ್ನು ಬರೆದವರು ಚಿ. ಉದಯಶಂಕರ್ ಅವರೇ ಆಗಿದ್ದರು. ಆ ಸಂದರ್ಭದಲ್ಲಿ ನನಗೆ ಉದಯಶಂಕರ್ ಅವರ ಹೆಸರ ಹಿಂದಿನ ಇನಿಶಿಯಲ್ ಚಿ ಏನನ್ನು ಸೂಚಿಸುತ್ತದೆ ಎಂಬುದು ಗೊತ್ತಿರಲಿಲ್ಲ. ಆದರೆ ನಾನು ಚಿ. ಉದಯಶಂಕರ್ ಅಂದ್ರೆ ಚಿರಂಜೀವಿ ಉದಯಶಂಕರ್ ಅಂತಲೇ ಬಹಳ ಕಾಲ ನಂಬಿದ್ದೆ. ಅದಕ್ಕೆ ಮುಖ್ಯ ಕಾರಣ ಮದುವೆ ಪತ್ರಿಕೆಗಳಲ್ಲಿ ವರರ ಹೆಸರಿನ ಚಿ ಎಂದು ಸೇರಿಸುವುದನ್ನು ಗಮನಿಸಿದ್ದೆ. ಅದಕ್ಕೆ ಇದನ್ನು ಲಿಂಕ್ ಮಾಡಿ ನನ್ನ ಮನಸಲ್ಲಿ ಉದಯಶಂಕರ್ ಅವರನ್ನು ಚಿರಂಜೀವಿ ಉದಯಶಂಕರ್ ಅಂತಲೇ ನಂಬಿದ್ದೆ. ಇದೆಲ್ಲಾ ನಾನು 8-10 ವರ್ಷದವನಾಗಿದ್ದಾಗಿನ ಕಥೆ. ಆದರೆ ಅವರ ನಿಜನಾಮ ಚಿಟ್ನಹಳ್ಳಿ ಉದಯಶಂಕರ್.
ಚಿಕ್ಕ ವಯಸ್ಸಿನಲ್ಲಿ ಹಾಡುಗಳು ಇಷ್ಟವಾಗ್ತಾ ಇದ್ದದ್ದು ಟ್ಯೂನ್ ನಿಂದಾಗಿ, ಆಗೆಲ್ಲಾ ಹಾಡಿನ ಭಾವ ಆಶಯ ಅರ್ಥ ಮಾಡಿಕೊಳ್ಳುವ ಮೆಚ್ಯುರಿಟಿ ಇರಲಿಲ್ಲ. ವರ್ಷ ಕಳೆದಂತೆ ಸಾಹಿತ್ಯದ ಅರ್ಥ ನಾನಾರ್ಥ, ಗೂಢಾರ್ಥ ಅರ್ಥವಾಗುತ್ತ ಬಂತು. ಚಿ ಉದಯಶಂಕರ್ ಪದಗಳಲ್ಲಿದ್ದ ವಿಶೇಷತೆ ಎದೆಗೆ ತಾಕಲು ಶುರುವಾಯಿತು. ಹೈಸ್ಕೂಲ್ ಮೆಟ್ಟಿಲೇರುವ ಹೊತ್ತಿಗೆ ಉದಯಶಂಕರ್ ಅಭಿಮಾನಿಯಾಗಿ ಮಾರ್ಪಾಡಾಗಿದ್ದೆ.
ಅಣ್ಣಾವ್ರ ಹಾಡುಗಳ ಯಶಸ್ಸಿನ ಹಿಂದಿನ ಶಕ್ತಿಗಳಲ್ಲಿ ಉದಯಶಂಕರ್ ಒಬ್ಬರು ಎಂಬುದನ್ನು ಮನಗಂಡೆ. ಅವರ ಸಾಹಿತ್ಯದ ಜೊತೆಗೆ ಸಂಭಾಷಣೆಯಲ್ಲಿದ್ದ ನಾವೀನ್ಯತೆ, ಚಾಕಚಕ್ಯತೆ, ಭಾವುಕತೆ, ಮೋಹಕತೆ, ಸಹಜತೆ ಕಂಡು ಮರುಳಾಗಿದ್ದೆ. ಉದಯಶಂಕರ್ ಸಂಭಾಷಣೆ ಅಂದ್ರೆ ಚಿತ್ರದುದ್ದಕ್ಕೂ ಒಂದು ಜೀವಂತಿಕೆ ಇರುತ್ತಿತ್ತು. ಅದರ ಜೊತೆಗೆ ಅವರು ಜನಮಾನಸದಲ್ಲಿ ನೆಲೆನಿಲ್ಲಲು ಮುಖ್ಯ ಕಾರಣವೊಂದಿತ್ತು. ಅದೇನಂದ್ರೆ ಜನರ ಆಡು ಮಾತುಗಳೇ ಉದಯಶಂಕರ್ ಹಾಡು ಸಂಭಾಷಣೆಯಾಗಿ ಮನ ಗೆಲ್ಲುತ್ತಿತ್ತು.
ಇಂದು ಕನ್ನಡ ಚಿತ್ರಸಾಹಿತ್ಯ ಉತ್ಕೃಷ್ಟವಾಗಿದೆ ಎಂದರೆ ಅದರ ಹಿಂದಿನ ದೊಡ್ಡ ಕೈ ಉದಯಶಂಕರ್ ಎಂದರೆ ಅತಿಶಯೋಕ್ತಿಯಾಗಲಾರದು. 1963 ರಿಂದ 1993 ರ ತನಕ ಉದಯಶಂಕರ್ ಅವರ ಲೇಖನಿ ವಿರಮಿಸಲೇ ಇಲ್ಲ. ಬದಲಾಗಿ ಹಾಳೆಯೊಡನೆ ರಮಿಸುತಲೇ ಇತ್ತು, ಶೋತೃಗಳನ್ನು ಕಲಾರಸಿಕರನ್ನು ತಣಿಸುತ್ತಲೇ ಇತ್ತು. ಅಣ್ಣಾವ್ರ ಬದುಕು, ನಟನೆ ನೋಡಿ ಮೆಚ್ಚಿ ಒಳಿತಿನ ಹಾದಿ ಹಿಡಿದವರು ಬಹಳ ಮಂದಿ ಕಾಣಸಿಗುತ್ತಾರೆ. ಅಂತೆಯೇ ಉದಯಶಂಕರ್ ಹಾಡಿನಲ್ಲಿನ ಸತ್ವ, ತತ್ವ, ದೈವತ್ವದ ಪ್ರಭಾವದಿಂದಾಗಿ ಬದಲಾದವರು ಬಹಳ ದೊಡ್ಡ ಸಂಖ್ಯೆಯಲ್ಲಿರಬಹುದು.
ಉದಯಶಂಕರ್ ವಿಶೇಷ ಅನ್ಸೋಕೆ ಮುಖ್ಯ ಕಾರಣ ಅವರು ಸರ್ವಜ್ಞ ಹೇಳಿದ್ದನ್ನು, ಕಡು ಸಂಸ್ಕೃತದಲ್ಲಿರುವುದನ್ನು ಸರಳವಾಗಿಸಿ ಚಿತ್ರಗೀತೆಗಳ ಮೂಲಕ ಶ್ರೀಸಾಮಾನ್ಯನಿಗೆ ತಲುಪಿಸೋರು. ಆ ಕಾರಣಕ್ಕೆ ಇಂದಿಗೂ ಅವರ ಲೇಖನಿಯಿಂದ ಅರಳಿದ ಹಾಡುಗಳು ನಮ್ಮೆದೆಯಲ್ಲಿ ಹಾಗೆ ಉಳಿದಿದೆ. ಈ ಹಾಡುಗಳು ಕನ್ನಡ ಪ್ರೀತಿ, ಕನ್ನಡಾಭಿಮಾನ ಹೆಚ್ಚಿಸುವ ಕೆಲಸ ಮಾಡಿದೆ.
ಡಾ. ರಾಜ್ ಅವರ ಸಿನಿಮಾಗಳ ಯಶಸ್ಸಿನ ಹಿಂದಿನ ಬಹುದೊಡ್ಡ ಶಕ್ತಿ ಉದಯಶಂಕರ್. ಪಾರ್ವತಮ್ಮ, ವರದಪ್ಪನವರು ಒಳ್ಳೆಯ ಕಥೆ ಆಯ್ಕೆ ಮಾಡಿ ಕೊಟ್ಟರೆ, ಉದಯಶಂಕರ್ ಅವರ ಸಾಹಿತ್ಯ ಸಂಭಾಷಣೆ ಅದನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯುತ್ತಿತ್ತು. ಬಹುತೇಕ ಸ್ಟಾರ್ ನಟರಿಗೆ ಹಿಟ್ ಗೀತೆಗಳನ್ನು ಕೊಟ್ಟ ಹಿರಿಮೆ ಉದಯಶಂಕರ್ ಅವರಿಗೆ ಸಲ್ಲುತ್ತದೆ. ಆದರೆ ಡಾ. ರಾಜ್ ಮತ್ತು ಉದಯಶಂಕರ್ ಜೋಡಿ ಕನ್ನಡ ಚಿತ್ರರಂಗದ ಮಹೋನ್ನತ ಜೋಡಿ. ಆ ಬಳಿಕ ನಟ ಮತ್ತು ಸಾಹಿತಿ ಜೋಡಿಯಾಗಿ ಯಾರಾದರೂ ಮೋಡಿ ಮಾಡಿದ್ದರೆ ಅದು ರವಿಚಂದ್ರನ್ ಹಂಸಲೇಖ ಎಂಬುದು ನನ್ನ ಅಭಿಪ್ರಾಯ.
ಚಿಟ್ನಹಳ್ಳಿ ಉದಯಶಂಕರ್ ಕನ್ನಡ ಚಿತ್ರರಂಗದ ನಿಜವಾದ ಸಾಹಿತ್ಯರತ್ನ. ಅವರ ಚಿತ್ರಸಾಹಿತ್ಯಕೃಷಿ ಯಾವ ಹೆಸರಾಂತ ಕವಿಯ ಸಾಧನೆಗೂ ಕಮ್ಮಿಯಿಲ್ಲ. ಹಾಗೆ ನೋಡಿದರೆ ಶ್ರೇಷ್ಠ ಕವಿತೆಗಳೆಂದರೆ ಜನರಿಗೆ ಅರ್ಥವಾಗದಂತೆ ಬರೆಯಬೇಕೆನ್ನುವ ವರ್ಗವೊಂದಿದೆ. ಆದರೆ ಒಂದು ಹಾಡು ಶ್ರೇಷ್ಠವಾಗುವುದು ಎಲ್ಲ ವರ್ಗದವರಿಗೆ ಅರ್ಥವಾದಾಗ, ಹತ್ತಿರವಾದಾಗ ಮಾತ್ರ. ಉದಯಶಂಕರ್ ಹಾಡುಗಳು ಸಹಜವಾಗಿ ಈ ಕೆಲಸ ಮಾಡುತ್ತಿದ್ದವು. ಅದೇ ಅವರನ್ನು ಬೆಳೆಸಿದ್ದು. ಅವರ ಹಾಡುಗಳನ್ನು ಕೇಳದವರಿಲ್ಲ ಎಂಬುದೇ ನನ್ನ ಭಾವನೆ.
ಇಂದು ಚಿ. ಉದಯಶಂಕರ್ ಅವರ ಜನ್ಮದಿನ. ನಾನು ಮೊದಲೇ ಹೇಳಿದಂತೆ ಅವರ ಪೂರ್ಣ ನಾಮ ಚಿಟ್ನಹಳ್ಳಿ ಉದಯಶಂಕರ್ ಆದರೂ ನನ್ನ ಪಾಲಿಗೆ ಅವರು ಚಿರಂಜೀವಿ ಉದಯಶಂಕರ್. ಯಾಕಂದ್ರೆ ಅವರು ತಮ್ಮ ಹಾಡುಗಳ ಮೂಲಕ ನನ್ನೊಳಗೆ ಸದಾ ಜೀವಂತ, ಅವರ ಹಾಡುಗಳು ಚಿರಾಯು.
ಉದಯಶಂಕರ್ ಸಾಹಿತ್ಯಸಾಗರ. ಅವರ ರಚನೆಯ ಚಿತ್ರ ಗೀತೆ, ಭಕ್ತಿಗೀತೆಗಳೆಲ್ಲ ಲೆಕ್ಕಕ್ಕೆ ತೆಗೆದುಕೊಂಡರೆ ಸರಿಸುಮಾರು 3000 ಹಾಡುಗಳನ್ನು ರಚಿಸಿದ್ದಾರೆ. ನ ಭೂತೋ ನ ಭವಿಷ್ಯತಿ ಎನ್ನುವಂತಹ ಸಾಧನೆ.
ನನಗೆ ಉದಯಶಂಕರ್ ಅವರ ರಚನೆಯ ಎಲ್ಲಾ ಹಾಡುಗಳು ಇಷ್ಟ. ಅಣ್ಣಾವ್ರ ನಟನೆ ಉದಯಶಂಕರ್ ಸಾಹಿತ್ಯವಿರುವ ‘ಹುಲಿಯ ಹಾಲಿನ ಮೇವು’ ಚಿತ್ರದ ಚಿನ್ನದ ಮಲ್ಲಿಗೆ ಹೂವೇ ಎಲ್ಲಾ ಕಾಲಕ್ಕೂ ಕಾಡುವ ಹಾಡು.