ಧನಂಜಯ ಮತ್ತು ಖುಷಿಗೆ ಶ್ರೇಷ್ಠ ನಟ-ನಟಿ ಪ್ರಶಸ್ತಿ

ಕಳೆದ ವರ್ಷ ಎಂದರೆ ಕೊರೊನಾ ಮತ್ತು ಸಾವನ್ನು ಬಿಟ್ಟು ಬೇರೇನೂ ನೆನಪಾಗದ ಸಂದರ್ಭದಲ್ಲಿ ನಾವಿದ್ದೇವೆ! ಆದರೆ ಜನವರಿಯಿಂದ ಮಾರ್ಚ್ ತನಕ ಮತ್ತು ಡಿಸೆಂಬರ್ ಸೇರಿದಂತೆ ನಾಲ್ಕು ತಿಂಗಳಲ್ಲಿ ಎಪ್ಪತ್ತರಷ್ಟು ಸಿನಿಮಾಗಳು ತೆರೆ ಕಂಡಿವೆ ಎನ್ನುವುದು ವಾಸ್ತವ ವಿಚಾರ! ಸಿನಿಮಾ ಪತ್ರಕರ್ತರಾಗಿ ಆ ಎಲ್ಲ ಸಿನಿಮಾಗಳ ಬಗ್ಗೆ ಅರಿವು ಹೊಂದಿರುವ `ಚಂದನವನ ಕ್ರಿಟಿಕ್ಸ್ ಅಕಾಡೆಮಿ’ಯ ಪತ್ರಕರ್ತರು ಅವುಗಳಲ್ಲಿ ತಮ್ಮ ಮೆಚ್ಚಿನ ಚಿತ್ರಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. 21 ವಿಭಾಗಗಳಲ್ಲಿ ನಡೆದ ಈ ಪ್ರಶಸ್ತಿ ಪ್ರದಾನದಲ್ಲಿ ಶ್ರೇಷ್ಠ ನಟನಾಗಿ ಡಾಲಿ ಧನಂಜಯ ಮತ್ತು ಶ್ರೇಷ್ಠನಟಿಯಾಗಿ ದಿಯಾ ಖುಷಿ ಪುರಸ್ಕೃತರಾಗಿದ್ದಾರೆ.

“ಕ್ರಿಟಿಕ್ಸ್ ಅವಾರ್ಡ್ ಎನ್ನುವುದು ಸಿನಿಮಾದವರು ಮತ್ತು ವಿಮರ್ಶಕರ ನಡುವಿನ ಆರೋಗ್ಯಕಾರಿ ಸಂಬಂಧಕ್ಕೆ ಸೇತುವೆಯಾಗಬಹುದು ಎಂದುಕೊಂಡಿದ್ದೇನೆ. ಯಾಕೆಂದರೆ ಕೆಲವೊಮ್ಮೆ ವಿಮರ್ಶೆ ನೋಡಿ ನಾನೇ ವಿಮರ್ಶಕರ ಜೊತೆಗೆ ಜಗಳವಾಡಿದ ಉದಾಹರಣೆಗಳು ಇವೆ. ಸಿನಿಮಾಗಳನ್ನು ಒಂದೇ ಒಂದು ಸಾಲು ಬರೆದು ಹೊಡೆದು ಹಾಕುವುದು ತುಂಬ ಸುಲಭ. ಅದನ್ನು ರಿವ್ಯೂ ಎಂದು ಪರಿಗಣಿಸಲಾರೆ. ಸಿನಿಮಾ ನೋಡುವಾಗಲೇ ಟ್ವೀಟ್ ಮಾಡುವುದಕ್ಕಿಂತ, ಸಿನಿಮಾ ನೋಡಿ ತಲೆ ಕೆಟ್ಟೇ ಹೋದರೂ ಸುಧಾರಿಸಿಕೊಂಡು ಒಂದು ಕಾಫಿ ಕುಡಿದು ಮತ್ತೊಮ್ಮೆ ಸಿನಿಮಾದ ಪಾಸಿಟಿವ್ ನೆಗೆಟಿವ್ ಬಗ್ಗೆ ಯೋಚಿಸಿ ಬರೆದರೆ ಅದು ನಮಗೂ ಖುಷಿ ನೀಡಬಹುದು. ಹೆಚ್ಚು ಆಪಾದನೆ ಮಾಡದೆ, ಸರಿ ತಪ್ಪುಗಳನ್ನು ವಿವರಿಸಿದರೆ ಚೆನ್ನಾಗಿರುತ್ತದೆ” ಎಂದು ವಿಮರ್ಶಕರ ಬಗ್ಗೆ ತಮ್ಮ ವಿಮರ್ಶೆಯ ನುಡಿಗಳನ್ನು ವ್ಯಕ್ತಪಡಿಸಿದರು. ಸಾಮಾನ್ಯವಾಗಿ ಪ್ರಶಸ್ತಿ ನೀಡಿದವರೆನ್ನುವ ಕಾರಣಕ್ಕೆ ಆ ಕ್ಷಣಕ್ಕೆ ಬಾಯಿಗೆ ಸಿಕ್ಕ ದೊಡ್ಡ ಪದಗಳನ್ನು ಬಳಸಿ ವಿಮರ್ಶಕರನ್ನು ಅಟ್ಟಕ್ಕೇರಿಸುವವರ ನಡುವೆ, ಅಲ್ಲಿಯೇ ತಮ್ಮ ಸಲಹೆ ನೀಡುವ ಮೂಲಕ ನಟ ಧನಂಜಯ್ ವೇದಿಕೆಯಲ್ಲಿಯೂ ನಾಯಕರಾದರು. ಪ್ರಶಸ್ತಿಯನ್ನು ಅವರು ಪೂರ್ತಿ `ಪಾಪ್‌ಕಾರ್ನ್ ಮಂಕಿ ಟೈಗರ್’ ಚಿತ್ರತಂಡಕ್ಕೆ ಸಮರ್ಪಿಸಿದರು.

‘ದಿಯಾ’ ಚಿತ್ರದ ನಾಯಕಿ ಖುಷಿ ಒಂದೇ ಒಂದು ಚಿತ್ರದ ಮೂಲಕ ದೇಶಾದ್ಯಂತ ಸುದ್ದಿ ಮಾಡಿದವರು. ಆದರೆ ಅದೊಂದು ಚಿತ್ರದ ಗೆಲುವು ಅವರಿಗೆ ಸಾಕಷ್ಟು ಹೊಸ ಅವಕಾಶಗಳನ್ನು ತಂದುಕೊಟ್ಟಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕ್ರಿಟಿಕ್ಸ್ ಅಕಾಡೆಮಿ ಖುಷಿಯವರನ್ನು ಶ್ರೇಷ್ಠನಟಿಯಾಗಿ ಪರಿಗಣಿಸಿದೆ. ಅವರು ತಮ್ಮ ವೃತ್ತಿ ಬದುಕಿನ ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡ ಸಂಭ್ರಮವನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು. ಅವರ ಖುಷಿಗೆ ಅದೊಂದೇ ಕಾರಣವಲ್ಲ, ಅವರು ಟೈಟಲ್ ರೋಲ್ ನಲ್ಲಿ ಕಾಣಿಸಿಕೊಂಡಂಥ ದಿಯಾ' ಕಳೆದ ವರ್ಷದ ಶ್ರೇಷ್ಠ ಚಿತ್ರವೆಂದು ಪ್ರಶಸ್ತಿ ಪಡೆದುಕೊಂಡಿದ್ದು ಮತ್ತೊಂದು ಸಂಭ್ರಮವಾಗಿತ್ತು. ಈ ಸಂದರ್ಭದಲ್ಲಿ ದಿಯಾ ನಿರ್ದೇಶಕ ಅಶೋಕ್ ಉಪಸ್ಥಿತಿ ಇರದೇ ಹೋದರೂ, ನಿರ್ಮಾಪಕರು ತಮ್ಮೊಂದಿಗೆ ಸ್ಪರ್ಧೆಯಲ್ಲಿದ್ದಲವ್ ಮಾಕ್ಟೇಲ್’ ಚಿತ್ರತಂಡವನ್ನು ಕೂಡ ವೇದಿಕೆಗೆ ಆಹ್ವಾನಿಸಿ ಪ್ರಶಸ್ತಿಯ ಮೆರುಗು ಹೆಚ್ಚಿಸಿದರು.

ವರ್ಷಾಂತ್ಯದಲ್ಲಿ ತೆರೆಕಂಡು ಇನ್ನಿಲ್ಲದಂತೆ ಸದ್ದು ಮಾಡಿದ ಚಿತ್ರ ಆಕ್ಟ್ 1978 . ಅದರ ನಿರ್ದೇಶನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಂ ಸೋ ರೆಯವರು ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಪಡೆದರು. ಪ್ರಶಸ್ತಿಗಳ ಜೊತೆಗೆ ಅವುಗಳನ್ನು ನೀಡಲು ಕಾರಣವಾದಂಥ ಅಂಶಗಳ ಬಗ್ಗೆ ಕೂಡ ವಿಮರ್ಶಕರು ಉಲ್ಲೇಖಿಸಿದರೆ ಅದು ಇತಿಹಾಸದಲ್ಲಿ ಸದಾ ಉಳಿದುಕೊಳ್ಳಬಹುದು ಎನ್ನುವ ಸಲಹೆಯನ್ನು ಅವರು ಅಕಾಡೆಮಿಗೆ ನೀಡಿದರು. ಸಮಾರಂಭದಲ್ಲಿ ಹಿರಿಯ ನಿರ್ದೇಶಕ ಭಗವಾನ್, ದಿನೇಶ್ ಬಾಬು, ಹಿರಿಯ ನಟಿ ಜಯಮಾಲ, ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ಸೇರಿದಂತೆ ಸಾಕಷ್ಟು ಮಂದಿ ಉದ್ಯಮದ ಗಣ್ಯರು ಆಗಮಿಸಿದ್ದರು. ಇದು ಈ ವರ್ಷದ ಮೊದಲ ಸಿನಿಮಾ ಪ್ರಶಸ್ತಿ ಸಮಾರಂಭವಾಗಿದ್ದು, ಕಳೆದ ಸಲ ನೀಡಲಾಗಿದ್ದ, ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ಆ ವರ್ಷದ ಏಕೈಕ ಸಿನೆಮಾ ಪ್ರಶಸ್ತಿಯಾಗಿತ್ತು. ಆದರೆ ರಾಜ್ಯ ಸರ್ಕಾರ ನೀಡಬೇಕಾದ ಪ್ರಶಸ್ತಿಗಳು ಎರಡು ವರ್ಷಗಳಿಂದ ಇನ್ನೂ ಬಾಕಿ ಉಳಿದಿವೆ. ಈ ಬಗ್ಗೆ ಮಾತನಾಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್, “ಸದ್ಯದಲ್ಲೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದ್ದು, ಅದು ಮುಗಿದಾಕ್ಷಣ ರಾಜ್ಯ ಪ್ರಶಸ್ತಿ‌ ಘೋಷಣೆಗೆ ಒತ್ತಡ ಹೇರಲಿದ್ದೇವೆ” ಎಂದರು.
ಚಿತ್ರರಂಗದ ಏಳಿಗೆಗೆ ವಿಮರ್ಶಕರು ಕೂಡ ಕಾರಣ. ಕರ್ನಾಟಕ ಚಲನಚಿತ್ರ ಅಕಾಡೆಮಿಯು ಸದಾ ನಿಮ್ಮ ಅಕಾಡೆಮಿಯ ಜೊತೆಗೆ ಇರುವುದಾಗಿ ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಭಾನುವಾರ ಸಂಜೆ ಕಲಾವಿದರ ಸಂಘದ ಡಾ.ರಾಜ್ ಕುಮಾರ್ ಭವನದಲ್ಲಿರುವ `ರೆಬಲ್ ಸ್ಟಾರ್’ ಅಂಬರೀಷ್ ವೇದಿಕೆಯಲ್ಲಿ ಪ್ರಶಸ್ತಿ ಸಮಾರಂಭ ನೆರವೇರಿತು. ಹಿರಿಯ ನಿರ್ದೇಶಕ ಭಗವಾನ್ ಅವರು ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಸಮ್ಮುಖದಲ್ಲಿ ಕ್ಲ್ಯಾಪ್ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಆಗಮಿಸಿ ವಿಶೇಷ ಕಳೆ ನೀಡಿದ ಚಂದನವನದ ನೂತನ ದಂಪತಿ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರಿಗೆ ‘ವಿಶೇಷ ಜೋಡಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ದಿಯಾ ಸಿನಿಮಾಗೆ ಒಟ್ಟು ಐದು ಪ್ರಶಸ್ತಿ, ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ನಾಲ್ಕು, ಹಾಗೂ ಜಂಟಲ್‌ಮನ್‌ ಚಿತ್ರಕ್ಕೆ ಮೂರು ಪ್ರಶಸ್ತಿಗಳು ಲಭ್ಯವಾಗಿದ್ದು, ಪ್ರಶಸ್ತಿ ಪುರಸ್ಕೃತರ ಪೂರ್ತಿ ಪಟ್ಟಿ ಹೀಗಿದೆ:

  1. ದಿಯಾ ಶ್ರೇಷ್ಠ ಸಿನಿಮಾ
  2. ಮಂ ಸೋ ರೆ ಶ್ರೇಷ್ಠ ನಿರ್ದೇಶಕ (ಆಕ್ಟ್ 1978)
  3. ಧನಂಜಯ ಶ್ರೇಷ್ಠ ನಟ (ಪಾಪ್ ಕಾರ್ನ್‌ ಮಂಕಿ ಟೈಗರ್)
  4. ಖುಷಿ ಶ್ರೇಷ್ಠ ನಟಿ (ದಿಯಾ)
  5. ಅಚ್ಯುತ್ ಕುಮಾರ್ ಶ್ರೇಷ್ಠ ಪೋಷಕ ನಟ (ಮಾಯಾ ಬಜಾರ್)
  6. ತಾರಾ ಅನುರಾಧಾ ಶ್ರೇಷ್ಠ ಪೋಷಕ ನಟಿ (ಶಿವಾರ್ಜುನ)
  7. ಶ್ರೇಷ್ಠ ಚಿತ್ರಕಥೆ ಅಭಿಜಿತ್ ವೈ.ಆರ್ ಮತ್ತು ಆಕಾಶ್ ಶ್ರೀವತ್ಸ (ಶಿವಾಜಿ ಸುರತ್ಕಲ್)
  8. ಆರಾಧ್ಯ ಎನ್. ಚಂದ್ರ ಶ್ರೇಷ್ಠ ಬಾಲತಾರೆ (ಜಂಟಲ್ ಮನ್)
  9. ರಘು ದೀಕ್ಷಿತ್ ಶ್ರೇಷ್ಠ ಸಂಗೀತ ನಿರ್ದೇಶಕ (ಲವ್ ಮಾಕ್ಟೇಲ್)
  10. ಅಜನೀಶ್ ಲೋಕನಾಥ್ ಶ್ರೇಷ್ಠ ಹಿನ್ನೆಲೆ ಸಂಗೀತ (ದಿಯಾ)
  11. ನಾಗಾರ್ಜುನ ಶರ್ಮ ಮತ್ತು ಕಿನ್ನಾಳ್ ರಾಜ್ ಶ್ರೇಷ್ಠ ಗೀತ ರಚನೆ (ಜಂಟಲ್ ಮನ್) ಮರಳಿ ಮನಸಾಗಿದೆ
  12. ಸಂಚಿತ್ ಹೆಗ್ಡೆ ಶ್ರೇಷ್ಠ ಗಾಯಕ (ಜಂಟಲ್ ಮನ್) ಮರಳಿ ಮನಸಾಗಿದೆ
  13. ಚಿನ್ಮಯಿ ಶ್ರೀಪಾದ ಶ್ರೇಷ್ಠ ಗಾಯಕಿ (ದಿಯಾ) ಸೋಲ್ ಆಫ್ ದಿಯಾ
  14. ಶೇಖರ್ ಎಸ್‍ ಶ್ರೇಷ್ಠ ಛಾಯಾಗ್ರಾಹಕ ( ಪಾಪ್ ಕಾರ್ನ ಮಂಕಿ ಟೈಗರ್)
  15. ಅಶೋಕ್ ಕೆ.ಎಸ್ ಶ್ರೇಷ್ಠ ಸಂಭಾಷಣೆಕಾರ (ದಿಯಾ)
  16. ದೀಪು ಎಸ್ ಕುಮಾರ್ ಶ್ರೇಷ್ಠ ಸಂಕಲನಕಾರ (ಪಾಪ್ ಕಾರ್ನ ಮಂಕಿ ಟೈಗರ್)
  17. ಎ.ಹರ್ಷ ಶ್ರೇಷ್ಠ ನೃತ್ಯ ಸಂಯೋಜಕ (ಮಾಯಾ ಬಜಾರ್) ಲೋಕ ಮಾಯಾ ಬಜಾರ
  18. ಜಾಲಿ ಬಾಸ್ಟಿನ್ ಶ್ರೇಷ್ಠ ಸಾಹಸ ಸಂಯೋಜಕ (ಪಾಪ್ ಕಾರ್ನ್ ಮಂಕಿ ಟೈಗರ್)
  19. ಗುಣ ಶ್ರೇಷ್ಠ ಕಲಾ ನಿರ್ದೇಶಕ (ಬಿಚ್ಚುಗತ್ತಿ)
  20. ಶ್ರೇಷ್ಠ ವಿಎಫ್ ಎಕ್ಸ್ (ಕಾಣದಂತೆ ಮಾಯವಾದನು)
  21. ವಿಶೇಷ ವಿಭಾಗದಲ್ಲಿ ಮಾನವೇತರ ಶ್ರೇಷ್ಠ ನಟ ಸಿಂಬಾ ಎಂಬ ನಾಯಿ (ನಾನು ಮತ್ತು ಗುಂಡ)

Recommended For You

Leave a Reply

error: Content is protected !!