ಬಂಡಿಯಪ್ಪನವರ ‘ದೇವರ ಕಾಲೋನಿ’

ಸಿನಿಮಾ ಪತ್ರಕರ್ತ, ಚಿತ್ರಕಥೆ, ಸಂಭಾಷಣೆಗಳ ರಚನೆಯ ಮೂಲಕ‌ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿರುವ ಯುವ ಬರಹಗಾರ ಟಿ.ಜಿ ನಂದೀಶ್ ಅವರು ತಾವು ಮೆಚ್ಚಿದ ಪುಸ್ತಕದ ಬಗ್ಗೆ ಇಲ್ಲಿ ಬರೆದಿದ್ದಾರೆ. ಅಂದಹಾಗೆ ‘ದೇವರ ಕಾಲೋನಿ’ ಎನ್ನುವ ಈ ಪುಸ್ತಕವನ್ನು ‘ರಥಾವರ’ ಖ್ಯಾತಿಯ ಚಿತ್ರನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ರಚಿಸಿದ್ದಾರೆ.

‘ದೇವರ ಕಾಲೋನಿ’ಯಲ್ಲಿ ಒಂದು ಸುತ್ತು..

ನಾನು ಕಥಾ ಸಂಕಲನಗಳನ್ನು ಓದುವುದು ತೀರಾ ಕಡಿಮೆ. ಓದುವಿಕೆಗಿಂತ ಬರವಣಿಗೆಯೇ ಪ್ರಿಯವಾದ ಕಾರಣ ಅದರಲ್ಲೇ ಹೆಚ್ಚು ಸಮಯ ಕಳೆಯುತ್ತೇನೆ.

ಆದರೆ ಕಳೆದ ಕೆಲವು ದಿನಗಳಿಂದ ನನ್ನ ಓದಿನಲ್ಲಿ ಮುಳುಗುವಂತೆ ಮಾಡಿದ, ನನ್ನ ಮನಸನ್ನು ಆವರಿಸಿದ ಪುಸ್ತಕ ‘ದೇವರ ಕಾಲೋನಿ’.

‘ರಥಾವರ’ ಖ್ಯಾತಿಯ ಚಲನಚಿತ್ರ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಅವರ ಲೇಖನಿಯಿಂದ ಅರಳಿದ ಮೂರು ವಿಭಿನ್ನ ಕಥೆಗಳ ಸಂಕಲನವೇ ಈ ದೇವರ ಕಾಲೋನಿ.

ಸಾಮಾನ್ಯವಾಗಿ ಬರಹಗಾರರು, ತಮ್ಮೊಳಗಿನ ಕಥೆ ಹೇಳಲು ಸಿನಿಮಾ ಆಯ್ದುಕೊಳ್ಳುವುದು ಲೋಕಾರೂಢಿ. ಆದರೆ ಇಲ್ಲಿ ಅದಾಗಲೇ ಯಶಸ್ವಿ ನಿರ್ದೇಶಕರಾಗಿ ಗುರುತಿಸಿಕೊಂಡ ಚಂದ್ರಶೇಖರ್ ಬಂಡಿಯಪ್ಪ ಸಿನಿಮಾದಲ್ಲಿ ನೇರ ಮತ್ತು ನಿಖರವಾಗಿ ಹೇಳಬೇಕೆನಿಸಿದರೂ ಹೇಳಲಾಗದ ಅಂಶಗಳನ್ನು ಹಿನ್ನೆಲೆಯಾಗಿಸಿ ಮೂರು ಅದ್ಭುತ ಕಥೆಗಳನ್ನು ಬರೆದಿದ್ದಾರೆ. ಅದರಲ್ಲಿಯು ದೇವರ ಕಾಲೋನಿ ಮಾನವೀಯತೆ ಮತ್ತು ಅವಕಾಶವಾದಿಗಳ ನಡುವಿನ ಸತ್ಯಾಸತ್ಯತೆ ಬಟಾಬಯಸಲಾಗಿಸುತ್ತೆ. ಸಿಕ್ಕಂತೆ ಭಾಸವಾಗಿ,‌ ಮರುಕ್ಷಣವೇ ಮಾಯಾವಾಗೋ ಬಂಧ, ಸಂಬಂಧಗಳ ಮೇಲೆ ಬೆಳಕು ಚೆಲ್ಲುತ್ತೆ.

ಎರಡನೇ ಕಥೆ ‘ಚೈನಾಸೆಟ್’ ನವಿರು ಪ್ರೀತಿಯ ಜೊತೆಗೆ ಊಹಿಸಿಲಾಗದಂಥ ಕಟುಸತ್ಯವನು ಬೆರೆಸಿ ಮತ್ತೊಂದು ವಿಭಿನ್ನ ಅನುಭವ ಕೊಡುತ್ತದೆ. ಬೆಳೆದ ಜಾಗ, ಅನುಸರಿಸುವ ಸಂಸ್ಕೃತಿ, ಅಭ್ಯಾಸವಾದ ಜೀವನಶೈಲಿ ಎಂತಹ ಸಂದಿಗ್ಧಗಳನ್ನು ಸೃಷ್ಟಿಸುತ್ತದೆ ಎಂಬುದನ್ನು ಪ್ರತಿಬಿಂಬಿಸುತ್ತದೆ.

ಮೂರನೇ ಕಥೆ ಉಯಿಲು’. ಮೊದಲರಡು ಕಥೆಗಿಂತ ಭಿನ್ನ. ಆಧುನಿಕ ಯುಗದಲ್ಲೂ ಕೊನೆಯಾಗದ ಗೊಡ್ಡು ಸಂಪ್ರದಾಯವನ್ನು ವಿರೋಧಿಸುವ ಮತ್ತು ಹೊಸ ಆಶಯಗಳಿಗೆ ಹುಟ್ಟು ನೀಡುವ ಹೆಣ್ಣೊಬ್ಬಳ ನಿರ್ಧಾರ ಮತ್ತು ಅದರ ಸುತ್ತ ಮುತ್ತಲಿನ ಘಟನಾವಳಿಗಳನ್ನು ಲೇಖಕರು ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ.

ಚಂದ್ರಶೇಖರ್ ಬಂಡಿಯಪ್ಪನವರ ಬರವಣಿಗೆಯಲ್ಲಿ ನಾವೀನ್ಯತೆ ಇದೆ, ಸಲೀಸಾಗಿ ಓದಿಸಿಕೊಳ್ಳುತ್ತದೆ. ಕಥೆಯಲ್ಲಿನ ವೇಗ ಸಿನಿಮಾವೊಂದರಲ್ಲಿ ಕಾಣಬಹುದಾದ ರೋಚಕತೆಯನ್ನು ಹೊಂದಿದೆ. ಪುಸ್ತಕ ಪ್ರಕಟಿಸುವ ಅವರ ಹಲವು ವರ್ಷಗಳ ಕನಸು ಸಾಕಾರಾಗೊಳ್ಳಲು ಪರೋಕ್ಷವಾಗಿ ಕಾರಣವಾಗಿದ್ದು ಲಾಕ್ ಡೌನ್ ಮತ್ತು ಲಾಕ್ ಡೌನ್ ಸಂದರ್ಭದಲ್ಲಿ ಸಿಕ್ಕ ಅಮೂಲ್ಯ ಬಿಡುವಿನ ಸಮಯ. ಒಂದು ಅದ್ಭುತ ಕಥಾಸಂಕಲನ ಬರೆಯುವ ಮೂಲಕ ಆ ಸಮಯವನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ.

ಪುಸ್ತಕ ಪ್ರಿಯರ ಜೊತೆಗೆ ಸಿನಿಪ್ರಿಯರು ಕೂಡ ಓದಲೇಬೇಕಾದ ಚೆಂದದ ಪುಸ್ತಕ ದೇವರ ಕಾಲೋನಿ.

ಒಂದೊಳ್ಳೆ ಪುಸ್ತಕ ಓದಿದ ಖುಷಿಗೆ ಕಾರಣರಾದ ಚಂದ್ರಶೇಖರ್ ಬಂಡಿಯಪ್ಪನವರಿಗೆ ಧನ್ಯವಾದ.

Recommended For You

Leave a Reply

error: Content is protected !!
%d bloggers like this: