ವಿವಾದದ ಬಳಿಕ ‘ಪೊಗರು’ ಚಿತ್ರ ಮತ್ತೆ ಸೆನ್ಸಾರ್ ಆಗಲು ತಯಾರಿ ನಡೆದಿದೆ. ಆದರೆ ಒಂದು ವೇಳೆ ಚಿತ್ರ ಯಾವುದೇ ಜಾತಿಗೆ ನೋವುಂಟು ಮಾಡುವ ಹಾಗಿದ್ದರೆ ಪ್ರತಿಭಟನೆ ನಡೆಯಬೇಕಿದ್ದಿದ್ದು ಈಗಾಗಲೇ ಚಿತ್ರಕ್ಕೆ ಸರ್ಟಿಫಿಕೇಟ್ ನೀಡಿರುವ ಸೆನ್ಸಾರ್ ಬೋರ್ಡ್ ಮಂದಿಯ ವಿರುದ್ಧ. ಆದರೆ ಸೆನ್ಸಾರ್ ಸರ್ಟಿಫಿಕೇಟ್ ಪಡೆದು ಕಾನೂನು ಪ್ರಕಾರ ಚಿತ್ರ ತೆರೆಗೆ ತಂದಿರುವ ಚಿತ್ರತಂಡ ಅನಗತ್ಯ ಕ್ಷಮೆ ಕೇಳುವ ಅಗತ್ಯವೇನಿತ್ತು ಎಂದು ಜನಪ್ರಿಯ ಚಿತ್ರ ನಿರ್ದೇಶಕಿ ಸುಮನಾ ಕಿತ್ತೂರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಅದನ್ನು ಅವರ ಮಾತುಗಳಲ್ಲೇ ಓದಿ.
“ಸಿನಿಮಾ ಒಂದನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಯೋಗ್ಯವೆಂದು ಪ್ರಮಾಣಪತ್ರ ನೀಡಿದ ಮೇಲೆ, ಆನಂತರ ಆ ಸಿನಿಮಾಗೆ ಸಂಬಂಧಪಟ್ಟಂತೆ ಬರುವ ಯಾವುದೇ ಪ್ರಶ್ನಾರ್ಹ-ವಿವಾದಾತ್ಮಕ ವಿಚಾರಗಳ ಕುರಿತಾಗಿ ಅದರ ಸಂಪೂರ್ಣ ಜವಾಬ್ದಾರಿಯನ್ನು ಸೆನ್ಸಾರ್ ಮಂಡಳಿಯೇ ಹೊರಬೇಕಿತ್ತಲ್ಲವೇ??
ಹಾಗಾಗಿ ಈ ಸಮುದಾಯ ಪ್ರಶ್ನಿಸಬೇಕಿದ್ದುದು, ಪ್ರತಿಭಟಿಸಬೇಕಿದ್ದುದು ಸೆನ್ಸಾರ್ ಮಂಡಳಿ ವಿರುದ್ಧವೇ ಹೊರತು ನಟ, ನಿರ್ದೇಶಕ, ನಿರ್ಮಾಪಕ ಹಾಗು ವಾಣಿಜ್ಯ ಮಂಡಳಿ ವಿರುದ್ಧವಲ್ಲ!!
ಯಾರ್ಯಾರೊ ಸಿನಿಮಾದಲ್ಲಿ ಏನಿರಬೇಕು? ಏನಿರಬಾರದು? ಎಂದು ನಿರ್ಧರಿಸಿ, ನಿರ್ದೇಶಕ ನಿರ್ಮಾಪಕರಿಂದ ಕ್ಷಮೆ ಕೇಳುವಂತೆ ಮಾಡಿ, ಸಿನಿಮಾಗೆ ಕತ್ತರಿ ಪ್ರಯೋಗವನ್ನೂ ಮಾಡಿದರು ಎಂದರೇ……
ಸೆನ್ಸಾರ್ ಮಂಡಳಿಯ ಅವಶ್ಯಕತೆಯಾದರೂ ಯಾಕೆ ನಮಗೆ ??!!??”