ಕೆ.ಎಂ ಚೈತನ್ಯ ಅವರು ವಿಭಿನ್ನ ಸಿನಿಮಾಗಳ ಮೂಲಕ ಗಮನ ಸೆಳೆದವರು. ಅಪರೂದಲ್ಲೊಂದು ಒಳ್ಳೆಯ ಸಿನಿಮಾದ ಜೊತೆಗೆ ಪ್ರತ್ಯಕ್ಷಗೊಳ್ಳುವ ಅವರಿಗೆ ಕಳೆದ ವರ್ಷ ಚೈತನ್ಯ ಉಡುಗಿಸಿದ ಘಟನೆ ನಡೆದಿತ್ತು. ಆತ್ಮೀಯ ಸ್ನೇಹಿತ, ನಟ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ಆಘಾತ ಅವರಿಗಿತ್ತು. ಅವರ ಸ್ನೇಹ ವೈಯಕ್ತಿಕ ಮಟ್ಟದಲ್ಲಿ ಮಾತ್ರವಲ್ಲ, ಪರದೆಯ ಮೇಲೆಯೂ ರಾರಾಜಿಸಿತ್ತು. `ಆಟಗಾರ’ದಂಥ ಜನಪ್ರಿಯ ಚಿತ್ರಗಳನ್ನು ನೀಡಿರುವ ಈ ಜೋಡಿ ಮುಂದೆ ಇನ್ನಷ್ಟು ಪ್ರಾಜೆಕ್ಟ್ ಗಳ ಬಗ್ಗೆ ಗುರಿ ಇಟ್ಟುಕೊಂಡಿದ್ದರು. ಸಿನಿಮಾದೊಂದಿಗೆ ಒಂದು ಟಿ.ವಿ ಶೋ ಬಗ್ಗೆಯೂ ಯೋಜನೆ ಹಾಕಿದ್ದರು. ಇದೀಗ ಅನಿವಾರ್ಯವಾಗಿ ಅವೆಲ್ಲವನ್ನು ಬೇರೊಬ್ಬ ಸ್ಟಾರ್ ಜೊತೆಗೆ ಮುಂದುವರಿಸಲು ತಯಾರಾಗಿದ್ದಾರೆ ಚೈತನ್ಯ. ಆ ಕುರಿತಾದ ಮಾಹಿತಿ ಇಲ್ಲಿದೆ.
ಕಳೆದ ಟಿ.ವಿಗಾಗಿ `ಆಕೃತಿ’ ಎನ್ನುವ ದೆವ್ವದ ಸಬ್ಜೆಕ್ಟ್ ರೆಡಿ ಮಾಡಿದ್ದರಂತೆ ಕೆ.ಎಂ ಚೈತನ್ಯ. ಆದರೆ ವಿಪರ್ಯಾಸ ಏನೆಂದರೆ ನಮ್ಮ ಕಿರುತೆರೆ ಪ್ರೇಕ್ಷಕರು ಆಗ ಟಿವಿ ದೆವ್ವದ ಕತೆ ನೋಡುವ ಯಾವ ಆಸಕ್ತಿಯನ್ನು ಉಳಿಸಿಕೊಂಡಿರಲಿಲ್ಲವಂತೆ. ಆದರೆ ಈಗ ಮತ್ತೆ ಒಂದಷ್ಟು ಹೊಸ ಪ್ರಾಜೆಕ್ಟ್ಸ್ ಜೊತೆಗೆ ತಯಾರಾಗಿದ್ದಾರೆ ಚೈತನ್ಯ. ಅಣ್ಣ ತಂಗಿ ಸೆಂಟಿಮೆಂಟ್ ಇರುವ ಕತೆಯೊಂದನ್ನು ಆರಿಸಿಕೊಂಡು ಟಿ.ವಿ ಶೋ ಮಾಡುವುದಾಗಿ ಅವರು ತಿಳಿಸಿದ್ದಾರೆ. ತಮಿಳಲ್ಲಿ ಯಶಸ್ವಿಯಾಗಿರುವಂಥ ಟಿ.ವಿ ಶೋವನ್ನು ಈ ಮೂಲಕ ಕನ್ನಡಕ್ಕೆ ತರುತ್ತಿರುವುದಾಗಿ ಅವರು ಹೇಳಿದ್ದಾರೆ. ಅದು ಸದ್ಯದಲ್ಲೇ ಪ್ರಸಾರವಾಗುವ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.
ಐದು ನಿರ್ದೇಶಕರ ಸಿನಿಮಾ!
ಇತ್ತೀಚೆಗೆ ಹಲವು ಕಿರುಚಿತ್ರಗಳ ಸಂಗಮವಾದ ಆಂಥಾಲಜಿ ಎನ್ನುವ ಸಿನಿಮಾ ಶೈಲಿ ಮತ್ತೆ ಮರಳುತ್ತಿದೆ. ಆ ನಿಟ್ಟಿನಲ್ಲಿ ಚೈತನ್ಯ ಕೂಡ ಐವರು ನಿರ್ದೇಶಕರೊಂದಿಗೆ ಬರುವ ಸಿದ್ಧತೆಯಲ್ಲಿದ್ದಾರೆ. ಚೈತನ್ಯ ಅವರೊಂದಿಗೆ ಉಳಿದ ನಾಲ್ಕು ಚಿತ್ರಗಳ ನಿರ್ದೇಶಕರಾಗಿ ಯೋಗರಾಜ್ ಭಟ್, ಪವನ್ ಕುಮಾರ್, ಶಶಾಂಕ್ ಮತ್ತು ಜಯತೀರ್ಥ ಇರುವುದು ವಿಶೇಷ. ವಿಚಿತ್ರ ಏನೆಂದರೆ ಈ ಐದು ಕತೆಗಳಿಗೂ ಒಂದು ಆಂತರಿಕ ಸಂಬಂಧ ಇರುತ್ತದೆ! ಹಾಗಾಗಿಯೇ ಇದು ಪ್ರತ್ಯೇಕ ಕಿರುಚಿತ್ರಗಳನ್ನು ನೀಡಿದಷ್ಟು ಸುಲಭವಾಗಿ ತೆರೆಗಿಳಿಸುವುದು ಕಷ್ಟ. ಇದರಲ್ಲಿ ಈಗಾಗಲೇ ಮೂವರು ನಿರ್ದೇಶಕರು ಚಿತ್ರೀಕರಣ ಮುಗಿಸಿಯೂ ಆಗಿದೆ. ಯೋಗರಾಜ್ ಭಟ್ ಮತ್ತು ಪವನ್ ಅವರು ಸದ್ಯಕ್ಕೆ ಕಜಕಿಸ್ತಾನದಲ್ಲಿ ಬೇರೆ ಸಿನಿಮಾದ ಚಿತ್ರೀಕರಣದಲ್ಲಿರುವ ಕಾರಣ, ಅಲ್ಲಿಂದ ವಾಪಾಸಾದ ಬಳಿಕ ಈ ಪ್ರಾಜೆಕ್ಟ್ ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಅದರಲ್ಲಿಯೂ ಪವನ್ ಕುಮಾರ್ ಅವರಿಗೆ ಇದರಲ್ಲಿ ದೊಡ್ಡ ಚಾಲೆಂಜ್ ಇಡಲಾಗಿದ್ದು ಉಳಿದ ನಾಲ್ಕು ಕತೆಗಳಿಗೆ ಒಂದು ತಾರ್ಕಿಕ ಅಂತ್ಯ ನೀಡುವ ಚಿತ್ರ ಅವರದಾಗಿರುತ್ತದೆ ಎನ್ನುತ್ತಾರೆ ನಿರ್ದೇಶಕ ಕೆ.ಎಂ ಚೈತನ್ಯ.