‘ನೋಡು ಶಿವ’ ನೋಡಿ ಖುಷಿಪಟ್ಟ ಮೇಘಾ ಶೆಟ್ಟಿ

ಚಂದನ್ ಶೆಟ್ಟಿ ಆಲ್ಬಂ ಹಾಡುಗಳೆಂದರೆ ಅದು ಸೂಪರ್ ಹಿಟ್ ಎಂದೇ ಲೆಕ್ಕ. ಈ ಬಾರಿ ಅವರ ಸಂಗೀತ ಮತ್ತು ಗಾಯನದಲ್ಲಿ ಮೂಡಿ ಬಂದಿರುವ ಗೀತೆಗೆ ಕಿರುತೆರೆಯ ತಾರೆ ಮೇಘಾ ಶೆಟ್ಟಿ ಅವರು ಹೆಜ್ಜೆ ಹಾಕಿರುವುದು ವಿಶೇಷ. ಚಿತ್ರೀಕರಣದ ಸಮಯದಿಂದಲೇ ಸುದ್ದಿಯಾಗಿದ್ದ ‘ನೋಡು ಶಿವ’ ಎನ್ನುವ ಈ ಗೀತೆಯನ್ನು ಖ್ಯಾತ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರು ಗುರುವಾರ ಬಿಡುಗಡೆಗೊಳಿಸಿದರು.

“ಇದುವರೆಗೆ ನಾನು ನನ್ನನ್ನು ಕಿರು ಪರದೆಯಲ್ಲಿ ಮಾತ್ರ ನೋಡಿದ್ದೆ. ಆದರೆ ಇವತ್ತು ಮೊದಲ ಬಾರಿ ದೊಡ್ಡ ಪರದೆಯಲ್ಲಿ ನನ್ನನ್ನು ನೋಡಿಕೊಳ್ಳುವ ಅವಕಾಶ ದೊರಕಿದೆ. ಅದಕ್ಕೆ ಖುಷಿಯಿದೆ” ಎಂದರು ಮೇಘಾ ಶೆಟ್ಟಿ. ಅವರು ಕಲಾವಿದರ ಸಂಘದ ಡಾ.ರಾಜ್ ಕುಮಾರ್ ಭವನದಲ್ಲಿ ಪ್ರದರ್ಶನಗೊಂಡ ತಮ್ಮ ಆಲ್ಬಂ ಹಾಡನ್ನು ವೀಕ್ಷಿಸಿದ ಬಳಿಕ ಈ ಮಾತುಗಳನ್ನು ಹೇಳಿದರು. “ಸುಮಿತ್ ಅವರು ಈ ಹಾಡನ್ನು ನೆಕ್ಸ್ಟ್ ಲೆವಲಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆ ಮಾತನ್ನು ಉಳಿಸಿಕೊಂಡಿರುವುದಕ್ಕಾಗಿ ಖುಷಿ ಇದೆ. ಈ ತಂಡ ತುಂಬ ಹಾರ್ಡ್ ವರ್ಕ್ ಮಾಡಿದೆ” ಎಂದ ಮೇಘಾ ಶೆಟ್ಟಿ, ತಾವು ಕೂಡ ಮುಂಜಾನೆ ನಾಲ್ಕು ಗಂಟೆ ತನಕ ಚಿತ್ರೀಕರಣ ನಡೆಸಿ ಬಳಿಕ ಅದೇ ದಿನ ಬೆಳಿಗ್ಗೆ ‘ಜೊತೆ ಜೊತೆಯಲಿ’ ಧಾರಾವಾಹಿ ಚಿತ್ರೀಕರಣಕ್ಕಾಗಿ ಹೋಗಿದ್ದಾಗಿ ತಿಳಿಸಿದರು.

ಹಾರ್ವರ್ಡ್ ಯೂನಿವರ್ಸಿಟಿ ಪದವೀಧರೆ ಮೋನಿಕಾ ಕಲ್ಲೂರಿಯವರ ನಿರ್ಮಾಣದ ‘ನೋಡು ಶಿವ’ ಗೀತೆಯಲ್ಲಿ ಮೇಘಾ ಶೆಟ್ಟಿಗೆ ಜೊತೆಯಾಗಿರುವುದು ಯುವ ನಟ ಸುಮಿತ್. ಅವರನ್ನು ತಾವು ವರ್ಷದ ಹಿಂದೆ ಭೇಟಿಯಾಗಿದ್ದಾಗಿ ನೆನಪಿಸಿಕೊಂಡ ಮೋನಿಕಾ, “‘ಪರಾರಿ’ ಸಿನಿಮಾದಲ್ಲಿ‌ ನಟರಾಗಿದ್ದರೂ ಒಂದು ಅದ್ಭುತವಾದ ಹಾಡು ರಚಿಸಿದ್ದರು. ಅವರ ಸಾಹಿತ್ಯ ನೋಡಿ ನನಗೆ ತುಂಬ ಇಷ್ಟವಾಗಿತ್ತು. ಚಂದನ್ ಶೆಟ್ಟಿ ಅವರೇ ಇದಕ್ಕೆ ನ್ಯಾಯ ಒದಗಿಸುತ್ತಾರೆ ಎಂದು ಅವರನ್ನು ಭೇಟಿಯಾದೆ.
ಆನಂದ್ ಆಡಿಯೋ ಶ್ಯಾಮ್ ಅವರ ಎಂಟ್ರಿಯಾದ ಮೇಲೆ ಇದರ ಬಜೆಟ್ ದೊಡ್ಡದಾಯ್ತು. ಮೇಘಾ ಶೆಟ್ಟಿಯವರಂತೂ ಇದಕ್ಕಾಗಿ ತುಂಬ ಹಾರ್ಡ್ ವರ್ಕ್ ಮಾಡಿದ್ದಾರೆ” ಎಂದರು. ಇದು ನನ್ನ ಹತ್ತು ವರ್ಷದ ಕನಸು. ಹಾಗಾಗಿ ಭಾವುಕಳಾಗಿದ್ದೇನೆ ಎಂದರು. ಸುಮಿತ್ ಅವರು ನನ್ನ ಬೆನ್ನೆಲುಬಾಗಿ ನಿಂತಿದ್ದರು. ನನ್ನ ಪೇರೆಂಟ್ಸ್ ಬೆಂಬಲವನ್ನು ಕೂಡ ಮರೆಯಲಾಗದು ಸ್ಟೀಫನ್, ವೆಂಕಿಯವರ ನೆರವೂ ದೊಡ್ಡದು. ಭಜರಂಗಿ‌ ಮೋಹನ್ ಅವರ ನೃತ್ಯನಿರ್ದೇಶನ ಹಾಡಿನ ಹೈಲೈಟ್ ಎಂದ ಮೋನಿಕಾ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರು ನನ್ನ ಸಂಬಂಧಿ ಕೂಡ ಹೌದು. ಅವರು ಬಂದು ಲಾಂಚ್ ಮಾಡಿಕೊಟ್ಟಿರುವುದು ತುಂಬ ಖುಷಿ ನೀಡಿದೆ” ಎಂದು‌ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಗಾಯಕ‌ ಚಂದನ್ ಶೆಟ್ಟಿ, ಹಾಡಿನ ನಾಯಕ ಸುಮಿತ್, ನಿವೇದಿತಾ ಚಂದನ್ ಮತ್ತು
ವಿಶೇಷ ಅತಿಥಿಯಾಗಿ ಭಗವಾನ್ ಹಾಗೂ ನಿರ್ಮಾಪಕಿ ಮೋನಿಕಾ ಅವರ ತಂದೆ ಡಾ.ಕೆ ಆರ್ ಪರಮಹಂಸ ಪತ್ನಿ ಸಮೇತ ವೇದಿಕೆಯಲ್ಲಿದ್ದರು.

Recommended For You

Leave a Reply

error: Content is protected !!
%d bloggers like this: