ಹಲವು ಕೃಷ್ಣ ಸೀರೀಸ್ ಚಿತ್ರಗಳಲ್ಲಿ ನಟಿಸಿ ವಿಜಯ ಪತಾಕೆ ಹಾರಿಸಿರುವವರು ಅಜಯ್ ರಾವ್. ಅವರ ಬಹು ನಿರೀಕ್ಷಿತ, 25ನೇ ಚಿತ್ರ `ಕೃಷ್ಣ ಟಾಕೀಸ್’ನ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಸೋಮವಾರ ಸಂಜೆ ಕಲಾವಿದರ ಸಂಘದ ರಾಜ್ ಭವನದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ವಿಜಯ್ ಆನಂದ್ ಚಿತ್ರವನ್ನು ಏಪ್ರಿಲ್ 9ರಂದು ತೆರೆಕಾಣಿಸಲಿರುವುದಾಗಿ ತಿಳಿಸಿದರು.
“ನಾಲ್ಕು ವರ್ಷಗಳ ಹಿಂದೆ ಚಿತ್ರಮಂದಿರದಲ್ಲಿ ನಡೆದ ಘಟನೆಯೊಂದನ್ನು ಆಧಾರವಾಗಿಸಿ ಮಾಡಿರುವ ಚಿತ್ರ ಇದು. ಅದು ಸಾಕಾರಗೊಳಿಸುವಲ್ಲಿ ಪೂರ್ತಿ ಚಿತ್ರತಂಡದ ಪಾತ್ರ ದೊಡ್ಡದು” ಎಂದರು ಕೃಷ್ಣ ಟಾಕೀಸ್' ಚಿತ್ರದ ನಿರ್ದೇಶಕ ವಿಜಯ್ ಆನಂದ್. ಅವರು ಈ ಹಿಂದೆ
ಆನಂದ ಪ್ರಿಯ’ ಎನ್ನುವ ಹೆಸರಲ್ಲಿ `ಓಳ್ ಮುನ್ಸಾಮಿ’ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದರು. “ನನಗೆ ಚಿತ್ರರಂಗದಲ್ಲಿ 20 ವರ್ಷಗಳ ಅನುಭವ ಇದೆ. ಆದರೆ ‘ಕೃಷ್ಣ ಟಾಕೀಸ್’ ಚಿತ್ರ ನನ್ನ ವೃತ್ತಿ ಬದುಕಿಗೆ ಒಂದು ಒಳ್ಳೆಯ ತಿರುವು ನೀಡಬಹುದೆನ್ನುವ ನಿರೀಕ್ಷೆ ಇದೆ” ಎಂದು ಅವರು ಹೇಳಿದರು.
ಚಿತ್ರದ ನಾಯಕ ಅಜಯ್ ರಾವ್ ಮಾತನಾಡಿ, “ನಿರ್ಮಾಪಕರು ತುಂಬ ಪ್ಯಾಷನೇಟ್ ಆಗಿ ಚಿತ್ರ ಮಾಡಿದ್ದಾರೆ. ಚಿತ್ರರಂಗದಲ್ಲಿ ನಾಯಕನಾಗಿ ಇದು ನನ್ನ 20ನೆಯ ವರ್ಷ. ಇದುವರೆಗಿನ 24 ಸಿನಿಮಾಗಳಲ್ಲಿ ಇಂಥ ಸಸ್ಪೆನ್ಸ್, ಥ್ರಿಲ್ಲರ್ ಸಬ್ಜೆಕ್ಟ್ ಸಿಕ್ಕಿರಲಿಲ್ಲ. `ಕೃಷ್ಣ ಟಾಕೀಸ್’ ಚಿತ್ರದಲ್ಲಿ ನನ್ನದು ಪತ್ರಕರ್ತನ ಪಾತ್ರ. ನನ್ನ ಜೋಡಿಯಾಗಿ ಅಪೂರ್ವ ಅವರದೂ ಒಳ್ಳೆಯ ಪಾತ್ರ. ಚಿತ್ರದಲ್ಲಿ ಚಿಕ್ಕಣ್ಣ ಅವರಿಗೆ ಹಾಸ್ಯದ ಜೊತೆಗೆ ಎಮೋಶನಲ್ ದೃಶ್ಯಗಳು ಕೂಡ ಇವೆ” ಎಂದರು. ಬಳಿಕ ಮಾತನಾಡಿದ ಚಿಕ್ಕಣ್ಣ, “ಇವತ್ತು ಮಹಿಳಾ ದಿನಾಚರಣೆ. ಸಾಮಾನ್ಯವಾಗಿ ಮಹಿಳೆಯರ ಇಷ್ಟದೇವರು ಕೃಷ್ಣ. ಹಾಗಾಗಿ ಕೃಷ್ಣ ಟಾಕೀಸ್ ಟ್ರೇಲರ್ ಲಾಂಚ್ ಮಾಡಲು ಇಂದು ಸೂಕ್ತವಾದ ದಿನವೇ ಸರಿ. ನನಗೆ ಅಜಯ್ ರಾವ್ ಅವರೊಂದಿಗೆ ಇದು ಮೊದಲ ಚಿತ್ರ” ಎಂದರು. ಚಿತ್ರದ ನಾಯಕಿ ಅಪೂರ್ವ, “ಇದು ನನಗೆ ಮೂರನೇ ಚಿತ್ರ. ಕತೆಯಲ್ಲಿ ನಾನು ನಗರದಿಂದ ಬಂದು ಹಳ್ಳಿಯಲ್ಲಿರುವ ಹುಡುಗಿ. ಆಕೆಯ ಒಂದು ಮಾತಿನಿಂದ ನಾಯಕ ತೆಗೆದುಕೊಳ್ಳುವ ನಿರ್ಧಾರವೇ ಚಿತ್ರದ ಪ್ರಮುಖ ಅಂಶ” ಎಂದರು.
ಚಿತ್ರ ನಿರ್ಮಾಣಕ್ಕೆ ಶ್ರೀಧರ್ ಸಂಭ್ರಮ್ ಕಾರಣ!
ಸಿನಿಮಾರಂಗದಲ್ಲಿ ಅವಕಾಶ ಸಿಗುವ ಮೊದಲು, ನಿರ್ದೇಶಕ ರಾಮ್ ನಾರಾಯಣ್ ಅವರೊಂದಿಗೆ ಸೇರಿ ಭಕ್ತಿಗೀತೆಗಳಿಗೆ ರಾಗ ಸಂಯೋಜನೆ ಮಾಡುತ್ತಿದ್ದೆ. ಹಾಗಾಗಿ ಆ ಸ್ನೇಹ ನಮ್ಮಿಬ್ಬರಲ್ಲಿ ಇಂದಿಗೂ ಹಾಗೆಯೇ ಇದೆ. ಹಾಗಾಗಿಯೇ ವಿಜಯ್ ಆನಂದ್ ಅವರಿಂದ ಚಿತ್ರದ ಕತೆ ಆಲಿಸಿದ ರಾಮ್ ನಾರಾಯಣ್ ಅವರು, “ಶ್ರೀಧರ್ ಸಂಭ್ರಮ್ ಅವರಿಗೆ ಕತೆ ಇಷ್ಟವಾದರೆ ಅವರೇ ನಿರ್ಮಾಪಕರ ವ್ಯವಸ್ಥೆಯನ್ನು ಕೂಡ ಮಾಡಿಕೊಡುತ್ತಾರೆ” ಎಂದರಂತೆ. ನಿಜಕ್ಕೂ ಕತೆಯನ್ನು ಮೆಚ್ಚಿಕೊಂಡ ಶ್ರೀಧರ್ ಸಂಭ್ರಮ್ ಯುವನಟ ನಿರಂತ್ ಅವರನ್ನು ಕೊಂಡಿಯಾಗಿ ಬಳಸಿಕೊಂಡು ಗೋಕುಲ್ ಎಂಟರ್ಟೇನ್ಮೆಂಟ್ ಮೂಲಕ ಗೋವಿಂದ್ ರಾಜ್ ಅವರನ್ನು ನಿರ್ಮಾಪಕರಾಗಿ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀಧರ್ ಅವರು,”ನನ್ನ ಪ್ರತಿ ಚಿತ್ರದಲ್ಲಿಯೂ ಕನ್ನಡದ ಯುವ ಪ್ರತಿಭೆಗಳಿಗೆ ಅವಕಾಶ ಕೊಡಿಸುವ ಪ್ರಯತ್ನ ಮಾಡಿದ್ದೇನೆ. ಅದೇ ರೀತಿ ಈ ಬಾರಿ ವಿಹಾನ್ ಆರ್ಯನ್ ಮತ್ತು ಸುನೇಹಾ ಬಹಳ ಚೆನ್ನಾಗಿ ಹಾಡಿದ್ದಾರೆ” ಎಂದರು. ಅವರಿಬ್ಬರೂ ತಾವು ಚಿತ್ರದಲ್ಲಿ ಧ್ವನಿಯಾದಂಥ ಗೀತೆಯ ಎರಡು ಸಾಲು ಹಾಡಿದರು. ಚಿತ್ರದ ಜನಪ್ರಿಯ ಗೀತೆ “ನೈಟಿ ಮಾತ್ರ ಹಾಕ್ಕೋಬೇಡ ಮೇನಕಾ..”ದ ರಚನೆಕಾರ ಪ್ರಮೋದ್ ಮರವಂತೆ ಮಾತನಾಡಿ, “ಶ್ರೀಧರ್ ಸರ್ ಅವರು ಗೀತೆ ಬರೆಯಲು ಪೆನ್ ಮಾತ್ರವಲ್ಲ, ವೇದಿಕೆ ಬಂದಾಗ ಮೈಕ್ ಕೂಡ ಕೊಟ್ಟು ಪರಿಚಯಿಸುತ್ತಾರೆ” ಎಂದು ಕೃತಜ್ಞತೆ ವ್ಯಕ್ತಪಡಿಸಿದರು. ಚಿತ್ರದಲ್ಲಿ ಒಂದು ಸಸ್ಪೆನ್ಸ್ ಆಗಿರುವ ಪಾತ್ರ ನಿಭಾಯಿಸುತ್ತಿರುವ ಯಶ್ ಶೆಟ್ಟಿ, ತಮ್ಮ ಪಾತ್ರದ ಬಗ್ಗೆ ರಿವೀಲ್ ಮಾಡುವಂತಿಲ್ಲ, ಆದರೆ ಸಿನಿಮಾಗೆ ಎಂಟ್ರಿ ದೊರಕಿದ್ದು ಮಾತ್ರ ಶ್ರಿಧರ್ ಸಂಭ್ರಮ್ ಅವರ ಮೂಲಕ ಎಂದರು. ಚಿತ್ರದ ಹಾಡು ಮತ್ತು ಟ್ರೇಲರ್‌ನಲ್ಲಿ ಕಂಡ ದೃಶ್ಯಕಾವ್ಯಕ್ಕೆ ಕಾರಣೀಭೂತರಾದ ಛಾಯಾಗ್ರಾಹಕ ಅಭಿಷೇಕ್ ಕಾಸರಗೋಡು ಅವರು, ಚಿತ್ರಕತೆ ತುಂಬ ಇಷ್ಟವಾಗಿದ್ದಾಗಿ ಹೇಳಿಕೊಂಡರು. ನಿರ್ಮಾಪಕರ ಪತ್ನಿ ಉಷಾ ಗೋವಿಂದರಾಜ್ ಅವರು ಟ್ರೇಲರ್ ಬಿಡುಗಡೆಗೊಳಿಸಿದರು.