ಸಿನಿಮಾ ಕಲಾವಿದರ ಮೇಲೆ ಅಭಿಮಾನ ಇರಿಸಿದವರನ್ನು ತಮಾಷೆ ಮಾಡುವವರು ಎಲ್ಲ ಕಾಲದಲ್ಲಿಯೂ ಇದ್ದಾರೆ. ಆದರೆ ನಿಜವಾದ ಅಭಿಮಾನಿಗಳು ಸಮಾಜಕ್ಕೆ ಆದರ್ಶವಾದ ಎಷ್ಟೋ ಉದಾಹರಣೆಗಳಿವೆ. ಅದರಲ್ಲಿಯೂ ಡಾ.ರಾಜ್ ಕುಮಾರ್ ಅಭಿಮಾನಿಗಳು ಹಲವರಿಗೆ ಆದರ್ಶ ಎನ್ನಬಹುದು. ಅವರು ಕಾಲವಾಗಿ ಹದಿನೈದು ವರ್ಷಗಳಾಗಿವೆ. ಆದರೆ ಕಳೆದ ಹತ್ತು ವರ್ಷಗಳಿಂದ ಅಣ್ಣಾವ್ರನ್ನು ಜೀವದಂತೆ ಕಾಣುವ ವಿಶೇಷ ಅಭಿಮಾನಿಯ ಪರಿಚಯ ಇಲ್ಲಿದೆ. ಇದು ಸಿನಿಕನ್ನಡ.ಕಾಮ್ ವಿಶೇಷ.
ಮಂಗಳೂರು ಕರಾವಳಿಯಲ್ಲಿ ಕನ್ನಡ ಸಿನಿಮಾಗಳಿಗೆ ಅಭಿಮಾನಿಗಳಿಲ್ಲ ಎನ್ನುವ ಮಾತಿದೆ. ಅದು ಸುಳ್ಳು ಎನ್ನುವುದಕ್ಕೆ ಬಹುಶಃ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಮಂಗಳೂರು ನಿವಾಸಿಯಾಗಿರುವ ಈ ಹೆಣ್ಣು ಮಗಳ ಹೆಸರು ಶ್ರುತಿ. ವಯಸ್ಸು ಮೂವತ್ತು ವರ್ಷ ದಾಟಿದರೂ ಮೂರು ವರ್ಷದ ಮಗುವಿನ ಬೆಳವಣಿಗೆಯಷ್ಟೇ ಈಕೆಯದು. ಇನ್ನೂ ಸರಿಯಾಗಿ ನಡೆಯಲು ಕಲಿಯದ, ಮಾತು ಬಾರದ ಶ್ರುತಿ ಭಾವನೆ ವ್ಯಕ್ತಪಡಿಸುವುದು ನಗುವಿನಲ್ಲಿ ಮಾತ್ರ. ಅಪಾರ್ಟ್ಮೆಂಟ್‌ನ ಮಕ್ಕಳಿಗೆ ಆತ್ಮೀಯಳಾದ ಈಕೆ ಗುರುತು ಹಿಡಿಯುವುದು ಮೂರು ಮಂದಿಯನ್ನು ಮಾತ್ರ! ಅದು ತಂದೆ, ತಾಯಿ ಮತ್ತು ಡಾ.ರಾಜ್ ಕುಮಾರ್! ಅದರಲ್ಲಿಯೂ ರಾಜ್ ಕುಮಾರ್ ಅವರ ಫೊಟೊ ಕಣ್ಣೆದುರು ಇರದಿದ್ದರೆ ಯಾವ ಕೆಲಸವೂ ಮಾಡಲಾರಳು ಅಷ್ಟೊಂದು ಅಕ್ಕರೆ!!
ಡಾ.ರಾಜ್ ಕುಮಾರ್ ಅವರ ಸಿನಿಮಾಗಳಿಗೆ ಅಭಿಮಾನಿಯಾಗಿರುವ ಈ ದಂಪತಿ ತಮ್ಮ ಮಗಳಿಗೆ ಇಟ್ಟಿರುವ ಹೆಸರು ಶ್ರುತಿ ಎಂದು. ಆದರೆ ಆತ್ಮೀಯರೆಲ್ಲ ಮುದ್ದಿನಿಂದ ಚುಕ್ಕಿ' ಎಂದೇ ಕರೆಯುತ್ತಾರೆ. ಆದರೆ ಯಾರನ್ನೂ ಗುರುತಿಸದ ಈ ಚುಕ್ಕಿ, ಮುಂದೆ
ಧ್ರುವತಾರೆ’ಯ ಅಭಿಮಾನಿಯಾಗುತ್ತಾಳೆ ಎಂದು ಯಾರೂ ಅಂದುಕೊಂಡಿರಲಿಲ್ಲ. ತಂದೆ ತಾಯಿಗೆ ರಾಜ್ ಕುಮಾರ್ ಅವರ ಮೇಲೆ ಅಭಿಮಾನ ಇದ್ದರೂ, ಶ್ರುತಿ ಹುಟ್ಟಿದ ಮೇಲೆ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಿರಲಿಲ್ಲ. ಟಿವಿಯಲ್ಲಿ ಬರುವ ಸಿನಿಮಾಗಳನ್ನಷ್ಟೇ ನೋಡುತ್ತಿದ್ದರು. ಬಿಡುವು ಸಿಕ್ಕಾಗ ಎಲ್ಲ ನಾಯಕರ ಸಿನಿಮಾಗಳನ್ನು ನೋಡುವ ಹವ್ಯಾಸ ಅವರಿಗಿತ್ತು. ಮಗಳು ಶ್ರುತಿ ಕೂಡ ಟಿವಿ ನೋಡುತ್ತಿದ್ದಳು. ಈ ಬಗ್ಗೆ ಶ್ರುತಿಯ ಅಮ್ಮನ ಮಾತುಗಳಲ್ಲೇ ಹೇಳುವುದಾದರೆ, “ನಾವು ಚಾನೆಲ್ ಬದಲಾಯಿಸುವಾಗ ಡಾ.ರಾಜ್ ಕುಮಾರ್ ಸಿನಿಮಾ ಬಂತೆಂದರೆ ಚುಕ್ಕಿ ನಗುತ್ತಿದ್ದಳು. ನಾವು ಕೂಡ ಖುಷಿಯಲ್ಲಿರುತ್ತಿದ್ದ ಕಾರಣ ಅದನ್ನು ಅಷ್ಟಾಗಿ ಗಮನಿಸಿರಲಿಲ್ಲ. ಆದರೆ ಯಾವಾಗ ರಾಜ್ ಕುಮಾರ್ ಹಾಡುಗಳು ಮುಗಿದಾಕ್ಷಣ ಮೂಡ್ ಬದಲಾದಂತೆ, ನಿರಾಶೆಯಿಂದ ಕುಳಿತುಕೊಳ್ಳುವುದನ್ನು ಕಂಡೆವೋ, ಆಗ ಆಕೆ ರಾಜ್ ಕುಮಾರ್ ಅವರನ್ನು ಗುರುತಿಸುತ್ತಿದ್ದಾಳೆ ಎಂದು ಅರ್ಥವಾಯಿತು. ಅವಳ ಈ ಅಭಿಮಾನ ಎಷ್ಟು ಸಮಯದಿಂದ ಇದೆ ಎನ್ನುವುದು ನಮಗೆ ನಿಖರವಾಗಿ ಗೊತ್ತಿಲ್ಲ. ಆದರೆ ನಮಗೆ ಗೊತ್ತಿದ್ದಂತೆ ಕಳೆದ ಹತ್ತು ವರ್ಷಗಳಿಂದ ಅವಳ ಜೀವನದ ಪ್ರಮುಖ ಖುಷಿ ಎಂದರೆ ಅದು ಡಾ.ರಾಜ್ ಕುಮಾರ್ ಮಾತ್ರ..!”
ಅಷ್ಟೊಂದು ಹೀರೋಗಳ ನಡುವೆ ಚುಕ್ಕಿಗೆ ರಾಜ್ ಕುಮಾರ್ ಮಾತ್ರ ಯಾಕೆ ಇಷ್ಟವಾದರೋ ಗೊತ್ತಿಲ್ಲ. ಬಹುಶಃ ಅಭಿಮಾನ ರಕ್ತದಲ್ಲೇ ಅಡಗಿದೆ ಎನ್ನುತ್ತಾರಲ್ಲ? ಹಾಗೆಂದರೆ ಇದೇ ಇರಬಹುದು. ಇಂದು ಮಗಳು ಹಾಸಿಗೆ ಬಿಟ್ಟು ಏಳಬೇಕಾದರೆ ಡಾ.ರಾಜ್ ಕುಮಾರ್ ಅವರ ಫೊಟೊ ಅವಳ ಮುಂದೆ ತೋರಿಸಬೇಕು. ಎದ್ದ ಮೇಲೆ ಸ್ನಾನಗೃಹಕ್ಕೆ ಹೋಗಲು, ಹಲ್ಲು ಬ್ರಶ್ ಮಾಡಲು, ಊಟ, ತಿಂಡಿಗೂ ಕೂಡ ಡಾ.ರಾಜ್ ಫೊಟೊ ತೋರಿಸಿ ಮುಂದಿನಿಂದ ನಡೆದರೇನೇ ಸಾಧ್ಯ! ಆಗ ಮಾತ್ರ ಕರುವಂತೆ ಹಿಂಬಾಲಿಸಿ ಹೆಜ್ಜೆ ಇಡುತ್ತಾಳೆ. ಇಲ್ಲವಾದರೆ ಏನೂ ಮಾಡುವುದಿಲ್ಲ ಎಂದು ಹಠ ಹಿಡಿಯುತ್ತಾಳೆ. ಇಡೀ ದಿನ ಅಣ್ಣಾವ್ರ ಫೊಟೊ ಜೊತೆಗಿದ್ದರೆ ಮಾತ್ರ ಖುಷಿಯಾಗಿರುತ್ತಾಳೆ. ಮಲಗುವಾಗ ಹೇಗಾದರೂ ಆಕೆಯ ಕೈಗಳಿಂದ ಅದನ್ನು ದೂರ ಇರಿಸುತ್ತೇವೆ. ಇಲ್ಲವಾದರೆ ನಿದ್ದೆ ಬಿಟ್ಟು ಫೊಟೋ ನೋಡಿಕೊಂಡಿರುತ್ತಾಳೆ ಎನ್ನುತ್ತಾರೆ ಚುಕ್ಕಿಯ ತಾಯಿ.
ಒಟ್ಟಿನಲ್ಲಿ ಹುಟ್ಟಿನಿಂದಲೇ ಒಂದಷ್ಟು ತೊಂದರೆಗಳನ್ನು ಎದುರಿಸಿರುವಂಥ ಮಗುವನ್ನು ಒಬ್ಬ ನಟ ತನ್ನ ಕಲೆಯ ಮೂಲ ಬದಲಾಯಿಸಿರುವುದು ನಿಜಕ್ಕೂ ಅಚ್ಚರಿಯ ವಿಚಾರ. ನಡೆದಾಡದೆ, ಓಡಾಡದೆ, ಮಾತನಾಡದೆ ಇದ್ದಂಥ ಮಗು ಈಗ ಒಂದಷ್ಟು ಸುಧಾರಣೆ ಕಂಡಿದೆ. ಟ್ರೆಡ್ ಮಿಲ್ ನಲ್ಲಿ ನಡೆಯಬೇಕಾದರೆ ಕೂಡ ಆಕೆಯ ಮುಂದೆ ಡಾ.ರಾಜ್ ಕುಮಾರ್ ಫೊಟೊ ಬೇಕಾಗುತ್ತದೆ. ಅಲ್ಲಿಗೆ ರಾಜ್ ಕುಮಾರ್ ಚುಕ್ಕಿಯ ಪಾಲಿಗೆ ನಿಜವಾದ ಡಾಕ್ಟರ್ ಆಗಿದ್ದಾರೆ. ವಿಚಿತ್ರ ಏನೆಂದರೆ ಇತ್ತೀಚೆಗೆ ಸಲ್ಮಾನ್ ಖಾನ್ ಫೊಟೊ ಕೂಡ ಗುರುತಿಸಿ ಇಷ್ಟಪಡುತ್ತಿದ್ದಾಳಂತೆ. ಒಟ್ಟಿನಲ್ಲಿ ಚುಕ್ಕಿಯ ಗುರುತಿಸುವಿಕೆ, ಜೀವನೋತ್ಸಾಹ ಹೆಚ್ಚುತ್ತಿರುವುದು ರಾಜ್ ಕುಮಾರ್ ಅಭಿಮಾನಿಗಳಿಗೆ ಮಾತ್ರವಲ್ಲ ಎಲ್ಲರಿಗೂ ಸಂಭ್ರಮದ ವಿಚಾರ.