ನಿಘಂಟು ತಜ್ಞ, ಭಾಷಾ ಪಂಡಿತ ಪ್ರೊ. ಜಿ ವೆಂಕಟ ಸುಬ್ಬಯ್ಯನವರು ಇಂದು ಮಧ್ಯರಾತ್ರಿ ನಿಧನರಾಗಿದ್ದಾರೆ. ಅವರಿಗೆ 107 ವರ್ಷ ವಯಸ್ಸಾಗಿತ್ತು. ಅವರು ಮೈಸೂರಿನ ತಮ್ಮ ಸ್ವಗೃಹದಲ್ಲಿ ವಯೋಸಹಜ ಸಾವು ಕಂಡಿರುವುದಾಗಿ ಅವರ ಪುತ್ರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ನಾಡಿನ ಖ್ಯಾತ ಪತ್ರಿಕೆ ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿದ್ದ `ಇಗೋ ಕನ್ನಡ’ ಎನ್ನುವ ಅಂಕಣದ ಮೂಲಕ ಕನ್ನಡ ಪ್ರಿಯರೆಲ್ಲರಿಗೆ ಪರಿಚಿತರಾಗಿದ್ದರು. ಮುಂದೆ ಅದೇ ಅಂಕಣ ಪುಸ್ತಕ ರೂಪದಲ್ಲಿಯೂ ಪ್ರಕಟವಾಗಿತ್ತು. ಆಕಾಶವಾಣಿಯಲ್ಲಿಯೂ ಪ್ರಸಾರವಾಗುತ್ತಿತ್ತು. ಕನ್ನಡ ಸಾಹಿತ್ಯ ರಚನೆಗೆ ಅಥವಾ ಯಾವುದೇ ಅಧಿಕೃತ ಮಾಹಿತಿಗಳ ಪ್ರಸಾರಕ್ಕೆ ಪದಗಳ ಸರಿಯಾದ ಅರ್ಥ ತಿಳಿದುಕೊಳ್ಳಲು ಕನ್ನಡ ನಿಘಂಟು ಬಳಸದವರೇ ಇಲ್ಲ ಎನ್ನಬಹುದು. ಒಟ್ಟು ಎಂಟು ಸಾವಿರ ಪುಟಗಳನ್ನು ಮೀರಿದ ಏಳು ಸಂಪುಟಗಳ ನಿಘಂಟು ರಚನೆಯ ಕೀರ್ತಿ ವೆಂಕಟ ಸುಬ್ಬಯ್ಯನವರದ್ದಾಗಿದೆ.
ಶಿಕ್ಷಕರಾಗಿ ಪ್ರಾಂಶುಪಾಲರಾಗಿ ಸುಮಾರು ನಾಲ್ಕು ದಶಕಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ಬೆಂಗಳುರಿನಲ್ಲಿ ನಡೆದ 77ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
1894ರಲ್ಲಿ ಫರ್ಡಿನಾಂಡ್ ಕಿಟ್ಟೆಲ್ ಅವರು ಇಂಗ್ಲಿಷ್ ಕನ್ನಡ ಡಿಕ್ಷನರಿ ತಯಾರಿಸಿದ ಬಳಿಕ ಕನ್ನಡದ್ದೇ ಆದ ಒಂದು ನಿಘಂಟು ತಯಾರು ಮಾಡಿದ ಶ್ರೇಯ ಪ್ರೊ. ಜಿ ವೆಂಕಟ ಸುಬ್ಬಯ್ಯನವರಿಗೆ ಸಲ್ಲುತ್ತದೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರೂ ಆಗಿದ್ದಂಥ ವೆಂಕಟ ಸುಬ್ಬಯ್ಯನವರಂಥ ನಿಘಂಟು ತಜ್ಞರು ಭಾರತದ ಯಾವ ಭಾಷೆಯಲ್ಲಿಯೂ ಇಲ್ಲ ಎಂದು ದಲಿತ ಕವಿ ಸಿದ್ಧಲಿಂಗಯ್ಯನರು ಅಭಿಪ್ರಾಯ ಪಟ್ಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸ್ಪಷ್ಟ ಭಾಷಾ ಪ್ರಯೋಗಕ್ಕೆ ಹೆಸರಾದ ನಟ ಸುಚೇಂದ್ರ ಪ್ರಸಾದ್ ಅವರು ಕೂಡ ಈ ಸಂದರ್ಭದಲ್ಲಿ ಮೃತರ ಸೇವೆಗಳನ್ನು ನೆನಪಿಸಿಕೊಂಡು ಆದರಾಂಜಲಿ ಸಮರ್ಪಿಸಿದ್ದಾರೆ.
ಶಬ್ದರ್ಷಿ ಬಿರುದಾಂಕಿತ ವೆಂಕಟ ಸುಬ್ಬಯ್ಯನವರ ಕುರಿತಾದ ಡಾಕ್ಯುಮೆಂಟರಿಯೊಂದನ್ನು ಧರ್ಮಸ್ಥಳದ ರಾಜರ್ಷಿ ವಿರೇಂದ್ರ ಹೆಗ್ಗಡೆಯವರು ಹೊರತಂದಿದ್ದು, ಸುಚೇಂದ್ರ ಪ್ರಸಾದ್ ಅವರ ದೃಶ್ಯ ನಿರೂಪಣೆಯಲ್ಲಿರುವ ಆ ವಿಡಿಯೋನ ಯೂಟ್ಯೂಬ್ ಲಿಂಕ್ ಇಲ್ಲಿ ನೀಡಲಾಗಿದೆ.