ಕಳೆದ ಒಂದು ವಾರದ ಹಿಂದೆ ಕೋವಿಡ್ 19 ಸೋಂಕಿಗೆ ಒಳಗಾಗಿದ್ದ ಕೋಟಿ ನಿರ್ಮಾಪಕ ರಾಮು ಇಂದು ಸಂಜೆ ನಿಧನರಾಗಿದ್ದಾರೆ. ಅದರೊಂದಿಗೆ ಕಳೆದ ಒಂದು ವರ್ಷದಿಂದ ಕೊರೊನಾ ಸೋಂಕಿನಿಂದ ಸಾವಿಗೊಳಗಾಗುತ್ತಿರುವವರ ಪಟ್ಟಿಗೆ ರಾಮು ಅವರು ಕೂಡ ಸೇರಿದ್ದಾರೆ.
ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರಾಮು ಅವರು ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಕನ್ನಡದ ಜನಪ್ರಿಯ ನಟಿ ಮಾಲಾಶ್ರೀಯವರನ್ನು ವರಿಸಿಯೂ ಕೂಡ ನಿರ್ಮಾಪಕರಾಗಿ ತಮ್ಮದೇ ಸ್ಥಾನದಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಕನ್ನಡ ಚಿತ್ರರಂಗದಲ್ಲಿ ಅಜರಾಮರ ಸ್ಥಾನ ಪಡೆದಿರುವ ಚಿತ್ರಗಳಾದ ಲಾಕಪ್ ಡೆತ್, ಎ.ಕೆ 47 ಸೇರಿದಂತೆ ಸುಪರ್ ಹಿಟ್ ಚಿತ್ರಗಳಾದ ಕಲಾಸಿಪಾಳ್ಯ, ಮಲ್ಲ, ಸಿಂಹದ ಮರಿ, ಕಿಚ್ಚ, ಲೇಡಿ ಕಮಿಷನರ್, ಗೋಲಿಬಾರ್ ಹೀಗೆ ಸಾಕಷ್ಟು ಚಿತ್ರಗಳನ್ನು ನಿರ್ಮಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಹೆಚ್ಚು ಕೋಟಿ ಬಜೆಟ್ ಚಿತ್ರಗಳನ್ನು ನಿರ್ಮಿಸುವ ಮೂಲಕ ಕೋಟಿ ರಾಮು ಎನ್ನುವ ಬಿರುದು ಪಡೆದುಕೊಂಡಿದ್ದ ರಾಮು ಅವರ ಸಾವಿಗೆ ಕನ್ನಡ ಚಿತ್ರರಂಗವೇ ಆಘಾತಗೊಂಡಿದೆ. ರಾಮು ಅವರಿಗೆ 56 ವರ್ಷವಷ್ಟೇ ಆಗಿತ್ತು. ಪತ್ನಿ ಮಾಲಾಶ್ರೀ, ಕಾಲೇಜು ವಿದ್ಯಾರ್ಥಿನಿಯಾಗಿರುವ ಪುತ್ರಿ ಅನನ್ಯ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿರುವ ಪುತ್ರ ಆರ್ಯನ್ ಅವರನ್ನು ಅಗಲಿದ್ದಾರೆ.
ರಾಮು ನಿರ್ಮಾಣದ ಕೊನೆಯ ಚಿತ್ರ ‘ಅರ್ಜುನ್ ಗೌಡ’ದಲ್ಲಿ ಪ್ರಜ್ವಲ್ ನಾಯಕ. ಸಿನಿಮಾ ಇನ್ನಷ್ಟೇ ತೆರೆಕಾಣಬೇಕಿದೆ. ಚಿತ್ರದ ನಾಯಕಿ ಪ್ರಿಯಾಂಕಾ ತಿಮ್ಮೇಶ್ ಪ್ರಸ್ತುತ ಬಿಗ್ ಬಾಸ್ ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಮನೆಯೊಳಗಿದ್ದಾರೆ.