ಜನಪ್ರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಪುತ್ರ ರಾಮುಕಣಗಾಲ್ ನಿಧನರಾಗಿದ್ದಾರೆ. ಅವರ ಸಾವಿಗೆ ಕೂಡ ಕೊರೊನ ವೈರಸ್ ಕಾರಣವಾಗಿರುವುದು ದುರಂತ ಎಂದೇ ಹೇಳಬಹುದು.
ಸಿನಿಕನ್ನಡ.ಕಾಮ್ ಜೊತೆಗೆ ಮಾತನಾಡಿದ ರಾಮು ಕಣಗಾಲ್ ಅವರ ಅಕ್ಕನ ಮಗ ಕಾರ್ತಿಕ್ “ರಾಮು ಕಣಗಾಲ್ ಅವರು ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 5.15ರ ಹೊತ್ತಿಗೆ ನಿಧನರಾಗಿದ್ದಾರೆ” ಎಂದು ತಿಳಿಸಿದ್ದಾರೆ.
ಭರತನಾಟ್ಯ ಕಲಾವಿದರಾಗಿದ್ದ ವಿದ್ವಾನ್ ರಾಮು ಕಣಗಾಲ್ ಅವರು ಕಳೆದ ಎರಡು ದಶಕಗಳಿಂದ ‘ಕಣಗಾಲ್ ನೃತ್ಯಾಲಯ’ ಎನ್ನುವ ಹೆಸರಿನಲ್ಲಿ ನಾಟ್ಯ ಶಾಲೆ ನಡೆಸುತ್ತಿದ್ದರು. ಮದರಾಸಿನಲ್ಲಿ ಓದಿ ಬೆಳೆದಿದ್ದ ಇವರು ತಂದೆ ಕಲಿಸಿಕೊಟ್ಟ ಶಿಸ್ತನ್ನು ಬಾಳಲ್ಲಿ ಅಳವಡಿಸಿಕೊಂಡಿದ್ದರು. “ಅವರು ಹಾಕಿ ಕೊಟ್ಟ ಗೆರೆಯಲ್ಲೇ ಇಂದು ನಾವು ಬಾಳುತ್ತಿದ್ದೇವೆ” ಎಂದು ಹೇಳುತ್ತಿದ್ದರು.
ಅವರಿಗೆ 54 ವರ್ಷಗಳಷ್ಟೇ ವಯಸ್ಸಾಗಿದ್ದು ಅವಿವಾಹಿತರಾಗಿದ್ದರು. ಕೋವಿಡ್ ನಿಂದಾದ ಸಾವಿನ ಕಾರಣ ಮೃತದೇಹದ ಅಂತ್ಯಕ್ರಿಯೆಯ ಬಗ್ಗೆ ಇದುವರೆಗೂ ಯಾವ ನಿರ್ಧಾರವೂ ಕೈಗೊಳ್ಳಲಾಗಿಲ್ಲ ಎಂದು ತಿಳಿದು ಬಂದಿದೆ.