ದುರ್ಗಾಂಬಿಕೆಗೆ ಸಾಂಪ್ರದಾಯಿಕ ರೂಪ ನೀಡಿದ ಸುಧೀರ್ ಬಾಳೆಪುಣಿ

ದೇವರ ಸೃಷ್ಟಿ ಎಷ್ಟು ಆಕರ್ಷಕವೋ ಮನುಷ್ಯನ ಕಲ್ಪನೆಯ ದೇವರು ಕೂಡ ಅಷ್ಟೇ ಆಕರ್ಷಕ. ಈ ಮಾತು ಹೆಚ್ಚು ಅರ್ಥಪೂರ್ಣವೆನಿಸುವುದು ಹಿಂದೂ ಸಂಪ್ರದಾಯದಲ್ಲಿರುವ ಆರಾಧ್ಯ ದೈವಗಳಿಗೆ ಕುಂಚದಲ್ಲಿ ರೂಪ ಸಿಕ್ಕಾಗ. ಅಂಥದೊಂದು ಅಪರೂಪದ ಅವಕಾಶದಲ್ಲಿ ದುರ್ಗಾಂಬಿಕಾ ದೇವಿಗೆ ಸಾಂಪ್ರದಾಯಿಕ ಮೈಸೂರು ಶೈಲಿಯ ಕಳೆ ನೀಡಿದ ಕಲೆಗಾರ ಸುಧೀರ್ ಬಾಳೆಪುಣಿಯವರ ಕುರಿತಾದ ಮಾಹಿತಿ ಇಲ್ಲಿದೆ.

ಸಾಮಾನ್ಯವಾಗಿ ದುರ್ಗಾದೇವಿಯನ್ನು ಹುಲಿಯ ಮೇಲೆ ಕುಳಿತ ಭಂಗಿಯಲ್ಲಿ ನೋಡಿರುವವರೇ ಹೆಚ್ಚು. ಆದರೆ ಇದು ಪದ್ಮಾಸನ ಹಾಕಿರುವ ದೇವಿಯ ರೂಪ. ನಾಲ್ಕು ಹಸ್ತಗಳ ದೇವಿಯ ಒಂದು ಕೈಯ್ಯಲ್ಲಿ ತ್ರಿಶೂಲ, ಮತ್ತೊಂದರಲ್ಲಿ ಚಕ್ರ ಇದ್ದರೆ ಇನ್ನೊಂದು ಹಸ್ತದಿಂದ ಐಶ್ವರ್ಯದ ಸಂಕೇತವಾಗಿ ಚಿನ್ನದ ನಾಣ್ಯಗಳು ಸುರಿದಿವೆ. ಮತ್ತೊಂದು ಕೈ ಅಭಯವನ್ನು ಸಾರಿದೆ. ಅಂದಹಾಗೆ ಇದು ಸುಧೀರ್ ಅವರ ಇಷ್ಟದಂತೆ ಮಾಡಿರುವ ಚಿತ್ರವಲ್ಲ. ಪಯ್ಯಗಟ್ಟಿ ಕೊಜ್ಜರಣಾಯ ಕುಟುಂಬಕ್ಕಾಗಿ ಅವರ ಆರಾಧ್ಯ ದೇವತೆಯ ಈ ಚಿತ್ರವನ್ನು ಬಿಡಿಸಿ ನೀಡಿದ್ದಾರೆ. ಮೈಸೂರು ಶೈಲಿಯ ಈ ಚಿತ್ರದ ರಚನೆಗೆ ಅವರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕಲಾಶಿಕ್ಷಕರಾಗಿದ್ದ ಮೋಹನ್‌ ಕುಮಾರ್‌ ಬಿ.ಪಿಯವರ ಸಲಹೆಯನ್ನು ಕೂಡ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ. 16 ಇನ್ ಟು12 ಸೈಝ್‌ನ ಈ ಚಿತ್ರವನ್ನು ಬಿಡಿಸಲು ಸುಧೀರ್ ಅವರು ನಿರಂತರ ಆರು ದಿನಗಳ ಕಾಲ ಪರಿಶ್ರಮ ಪಟ್ಟಿದ್ದಾರೆ. ಕೊಜ್ಜರಣಾಯ ಕುಟುಂಬದ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಡಾ.ಹರಿಕಿರಣ್ ಗಟ್ಟಿ ಕೂಟತಾಜೆಯವರು ಚಿತ್ರದಲ್ಲಿ ಸುಧೀರ್ ಅವರಿಂದ ಕಲಾಕೃತಿಯನ್ನು ಪಡೆದುಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ.

ಸುಧೀರ್ ಬಾಳೆಪುಣಿ ಅವರು ಮಂಗಳೂರಿನ ಸಂತ ಥೆರೆಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಳೆದ ಹದಿನೆಂಟು ವರ್ಷಗಳಿಂದ ಶಿಕ್ಷಕರಾಗಿದ್ದಾರೆ. ಮಂಗಳೂರಿನ ಮಹಾಲಸಾ ಚಿತ್ರಕಲಾ ಶಾಲೆಯಲ್ಲಿ ಆರ್ಟ್ ಮಾಸ್ಟರ್ ಡಿಪ್ಲೊಮಾ ಮತ್ತು ಡಿಪ್ಲೊಮಾ ಡ್ರಾಯಿಂಗ್ ಆಂಡ್ ಪೈಂಟಿಂಗ್ ವಿದ್ಯಾರ್ಹತೆ ಇವರದ್ದು. ವಿದ್ಯಾರ್ಥಿ ಜೀವನದಲ್ಲಿದ್ದಾಗ ದ.ಕ.ಜಿಲ್ಲೆಯ ಮಂಗಳೂರಿನಲ್ಲಿ ಪ್ರಪ್ರಥಮ ಬಾರಿ ಚಿತ್ರಕಲಾ ಪ್ರದರ್ಶನ ನೀಡಿದ್ದರು. ಅಲ್ಲಿಂದ ಇದುವರೆಗೆ ದೇಶದ ಹಲವಾರು ಕಡೆಗಳ ಚಿತ್ರ ಪ್ರದರ್ಶನದಲ್ಲಿ ಇವರ ಕಲಾಕೃತಿಗಳು ಭಾಗಿಯಾಗಿವೆ. ಇವರ ಮೆಚ್ಚಿನ ಶೈಲಿ ಸಾಂಪ್ರದಾಯಿಕ ಮೈಸೂರು ಶೈಲಿಯ ಚಿತ್ರಕಲೆ. ಅದರಲ್ಲಿಯೂ ಸಾಂಪ್ರದಾಯಿಕ ಮೈಸೂರು ಶೈಲಿಯ ಚಿತ್ರಕಲೆಗೆ ಹೆಚ್ಚಿನ ಪ್ರೋತ್ಸಾಹ, ಸಲಹೆ ಸೂಚನೆ ನೀಡಿದ ಮಹಾಲಸಾ ಶಾಲೆಯ ಗುರುಗಳಾದ ಮೋಹನ್ ಕುಮಾರ್ ಬಿ.ಪಿಯವರನ್ನು ಇವರು ಸದಾ ಸ್ಮರಿಸುತ್ತಿರುತ್ತಾರೆ.

ಇವರಿಗೆ ದೊರಕಿರುವ ಪ್ರಶಸ್ತಿ ಪುರಸ್ಕಾರಗಳು ಹಲವು. 31ನೇ ಲಲಿತಾಕಲಾ ಅಕಾಡೆಮಿ ವಾರ್ಷಿಕ ಪುರಸ್ಕಾರಕ್ಕೆ ಭಾಜನರಾದವರು. ಮೈಸೂರು ದಸರಾ ಪುರಸ್ಕಾರ, ಧರ್ಮಸ್ಥಳದ ರಾಜ್ಯಮಟ್ಟದ ‘ಅಂಚೆಕುಂಚ’ ಸ್ಪರ್ಧೆಯಲ್ಲಿ ದ್ವಿತೀಯ ಪುರಸ್ಕಾರ, ನಾಡಿನ ಹಲವಾರು ಸಂಘ ಸಂಸ್ಥೆಯಲ್ಲಿ ಭಾಗವಹಿಸಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಬಾಲ್ಯದಿಂದಲೇ ಸುಧೀರ್ ಅವರಿಗಿದ್ದ ಚಿತ್ರಕಲಾ ಆಸಕ್ತಿಯನ್ನು ಗುರುತಿಸಿದ ತಂದೆ ಡಾ.ಎನ್ ಕೊಯಿರಾ ಬಾಳೆಪುಣಿ ಮತ್ತು ತಾಯಿ ಚಂದ್ರಾವತಿ ಸರಿಯಾದ ಪ್ರೋತ್ಸಾಹ ನೀಡಿದ್ದಾರೆ. ಮಕ್ಕಳ ನಾಟಕತಜ್ಞ ಮೂರ್ತಿ ದೇರಾಜೆ ವಿಟ್ಲ ಮತ್ತು ದಿ.ಸುರೇಶ್ ಹಂದಾಡಿಯವರಿಂದ ಪ್ರೇರಣೆ ಪಡೆದು ಚಿತ್ರಕಲೆಯಲ್ಲಿ ಇನ್ನಷ್ಟು ಆಳವಾಗಿ ತೊಡಗಿಸಿಕೊಳ್ಳಲು ಮಂಗಳೂರಿನ ಮಹಾಲಸಾ ಶಾಲೆ ಉಪನ್ಯಾಸಕರು ಕಾರಣವಾಗಿದ್ದಾರೆ ಎಂದು ಹೇಳಲು ಸುಧೀರ್ ಮರೆಯುವುದಿಲ್ಲ. ಚಿತ್ರಕಲೆ ಮಾತ್ರವಲ್ಲದೆ ಸುಧೀರ್ ಅವರಿಗೆ ಹತ್ತು ಹಲವಾರು ಆಕರ್ಷಕ ಹವ್ಯಾಸಗಳಿವೆ. ನಾಟಕ, ಜನಪದ ನೃತ್ಯ, ಮಿಮಿಕ್ರಿ, ರಂಗಾಲಂಕಾರ, ರಂಗ ಶಿಬಿರ, ಛಾಯಾಚಿತ್ರ.. ಹೀಗೆ ಹಲವಾರು ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅಪರೂಪದ ಪ್ರತಿಭೆ.

ನಾಗಪುರ ಚಿತ್ರಕಲಾ ಪ್ರದರ್ಶನದಲ್ಲಿ ಪ್ರದರ್ಶಿತಗೊಂಡ ಕಲಾಕೃತಿ

Recommended For You

Leave a Reply

error: Content is protected !!
%d bloggers like this: