‘ಕದ್ದ ಚಿತ್ರ’ದಲ್ಲಿ ವಿಜಯರಾಘವೇಂದ್ರ..!

ನಮ್ಮದೇ ಕತೆ ಎಂದು ಚಿತ್ರ ಮಾಡುವ ಎಷ್ಟೋ ಚಿತ್ರತಂಡಗಳು ಸಿನಿಮಾ ತೆರೆಗೆ ಬಂದ ಮೇಲೆ ಇದು ಯಾವುದೋ ಚಿತ್ರದ ರಿಮೇಕ್ ಎಂದೋ, ಸೀನ್ ಟು ಸೀನ್ ಕದ್ದಿದ್ದಾರೆ ಎಂದೋ ಪ್ರೇಕ್ಷಕರೇ ಪತ್ತೆ ಮಾಡಿದ ಹಲವಾರು ಉದಾಹರಣೆಗಳಿವೆ. ಆದರೆ ‘ಕದ್ದ ಚಿತ್ರ’ ಎನ್ನುವ ಹೆಸರನ್ನೇ ಇಟ್ಕೊಂಡು ಒರಿಜಿನಲ್ ಕತೆಯ ಸಿನಿಮಾ ಮಾಡ ಹೊರಟಿದೆ ಹೊಸಬರ ತಂಡ.

ಚಿತ್ರ ಹೊಸಬರದ್ದಾದರೂ ವಿಜಯ ರಾಘವೇಂದ್ರ ಅವರಂಥ ಅನುಭವಿ ನಟ ನಾಯಕರಾಗಿದ್ದಾರೆ. ಮಾತ್ರವಲ್ಲ ತಂಡ ಅವರಿಗೂ ಒಂದು ಹೊಸ ಅನುಭವ ನೀಡಿದೆ. ಅದುವೇ ಸಿಗರೇಟು..!

ತಮ್ಮ 25 ವರ್ಷಗಳ ಚಿತ್ರ ಬದುಕಿನಲ್ಲಿ ಕಾಣಿಸಿರದ ರೀತಿಯಲ್ಲಿ ಕಾಣಿಸಿಕೊಂಡಿದ್ದೇನೆ ಎಂದ ವಿಜಯರಾಘವೇಂದ್ರ ಸಿಗರೇಟು ಸೇದುವ ವಿಡಿಯೋ ಮಾಡಿ ಮನೆಗೆ ಕಳಿಸಿದಾಗ ದೃಶ್ಯದ ನೈಜತೆಗೆ ಅವರೇ ಆತಂಕಗೊಂಡರು ಎಂದಿದ್ದಾರೆ. ಚಿತ್ರದಲ್ಲಿ ತಮ್ಮದು ಒಬ್ಬ ಕತೆಗಾರನ ಪಾತ್ರ. ಒಳ್ಳೆಯ ಕತೆ ಬರೆವಂತೆ ಹೆಚ್ಚು ಸಿಗರೇಟ್ ಸೇದುವುಸು ಕೂಡ ಆತನ ಹವ್ಯಾಸವಾಗಿರುತ್ತದೆ. ಹಾಗಾಗಿ ಚಿತ್ರಕ್ಕಾಗಿ ಸಾಕಷ್ಟು ಸಿಗರೇಟ್ ಸೇದಿದ್ದೇನೆ. ಆದರೆ ಅಭ್ಯಾಸ ಮಾಡಿಕೊಂಡಿಲ್ಲ.. ನನಗೆ ಅದರ ರುಚಿಯೂ ಇಷ್ಟವಿಲ್ಲ. ಅದು ತರುವ ಪರಿಣಾಮವೂ ಇಷ್ಟವಿಲ್ಲ ಎನ್ನುತ್ತಾರೆ ವಿಜಯರಾಘವೇಂದ್ರ.

ನಿರ್ದೇಶಕ ಸುಹಾಸ್ ಕೃಷ್ಣ ಅವರಿಗೆ ಇದು ಎರಡನೇ ಚಿತ್ರ. ಆದರೆ ಈ ಮೊದಲು ಅವರು ನಿರ್ದೇಶಿಸಿದ ‘ಪಿ ಫೈವ್’ ಎನ್ನುವ ಇನ್ನೂ ತೆರೆಕಂಡಿಲ್ಲ. ಆದರೆ ಅವರು ಕತೆ ಹೇಳಿದ ರೀತಿ ಮತ್ತು ಅದನ್ನು ಚಿತ್ರೀಕರಿಸುವಲ್ಲಿನ ಪ್ರಯತ್ನಕ್ಕೆ ಮನಸೋತು ವಿಜಯರಾಘವೇಂದ್ರ ಅವರು ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವಾದರೂ ಪ್ರೇಕ್ಷಕರು ಈ ಹಿಂದೆ ನೋಡಿರುವ ಚಿತ್ರದಂತೆ ಇರುವುದಿಲ್ಲ ಎನ್ನುವ ಭರವಸೆ ನೀಡುತ್ತಾರೆ ನಿರ್ದೇಶಕ ಸುಹಾಸ್ ಕೃಷ್ಣ.

ಒಮ್ಮೆ ಒಬ್ಬ ದೊಡ್ಡ ಕತೆಗಾರನಾಗಿದ್ದುಕೊಂಡು ಬಳಿಕ ಅಧಪಥನಗೊಳ್ಳುವ ಕಥಾನಾಯಕನ ಬಗ್ಗೆಯೂ ಈ ಚಿತ್ರ ಹೇಳಲಿದೆಯಂತೆ. ವಿಜಯರಾಘವೇಂದ್ರ ಅವರಿಗೆ ಜೋಡಿಯಾಗಿರುವವರು ಈ ಹಿಂದೆ ‘ಮಿರ್ಚಿ ಮಂಡಕ್ಕಿ ಕಡಕ್ ಚಾಯ್’ ಚಿತ್ರದಲ್ಲಿ ನಟಿಸಿದ್ದಂಥ ನಮ್ರತಾ. ನಿರ್ದೇಶಕ ಸುಹಾಸ್ ತಮಗೆ ಹಳೆಯ ಪರಿಚಯವಾಗಿದ್ದು, ಅದೇ ವಿಶ್ವಾಸದಿಂದ ಪಾತ್ರ ಒಪ್ಪಿಕೊಂಡಿದ್ದೇನೆ ಎಂದರು. ಈ ಜೋಡಿಯ ಮುದ್ದಿನ ಮಗಳಾಗಿ ನಟಿಸಿರುವ ಬಾಲನಟಿ ಆರಾಧ್ಯ ಈಗಾಗಲೇ 25 ಚಿತ್ರಗಳಲ್ಲಿ ನಟಿಸಿದ್ದು, ಸುದೀಪ್ ನಟನೆಯ ವಿಕ್ರಾಂತ್ ರೋಣದಲ್ಲಿಯೂ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ.

ಕೇರಳ ಮೂಲದ ಕೃಷ್ಣರಾಜ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ ಎಂದು ಅವರು ತಿಳಿಸಿದರು. ವಿಜಯ ರಾಘವೇಂದ್ರ ಅವರು ಕತೆಗಾರರಾದರೆ ಅದರ ಪ್ರಕಾಶಕರಾಗಿ ತಾವು ನಟಿಸಿರುವುದಾಗಿ ರಾಘು ಶಿವಮೊಗ್ಗ ತಿಳಿಸಿದ್ದಾರೆ. ಕೇರಳದ ವಯನಾಡ್, ಬೆಂಗಳೂರಿನ ರುಪ್ಪೀಸ್ ರೆಸಾರ್ಟ್ ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಬಾಲಾಜಿ‌ ಮನೋಹರ್ ಕೂಡ ಒಂದು ಪ್ರಮುಖ ಪಾತ್ರ ಮಾಡಿದ್ದು, ಡಿಫರೆಂಟ್ ಡ್ಯಾನಿ ಸಾಹಸ ಸಂಯೋಜಿಸಿದ್ದಾರೆ.

ನಿರ್ದೇಶಕರ ಬಾಲ್ಯದ ಸ್ನೇಹಿತ ಸಂದೀಪ್ ಎಚ್ ಕೆ ಚಿತ್ರವನ್ನು ನಿರ್ಮಿಸಿದ್ದಾರೆ. ವಿಜಯ ರಾಘವೇಂದ್ರ, ನಮ್ರತಾ ಸುರೇಂದ್ರನಾಥ್, ಸಂದೀಪ್ ಎಚ್ ಕೆ ನಿರ್ಮಾಣ, ಶ್ರೀ ಕ್ರೇಜಿ ಮೈಂಡ್ಸ್ ಚಿತ್ರದ ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಛಾಯಾಗ್ರಾಹಕರಾಗಿ ಗೌತಮ್ ಮನು ಕಾರ್ಯನಿರ್ವಹಿಸಿದ್ದಾರೆ.

Recommended For You

Leave a Reply

error: Content is protected !!
%d bloggers like this: