
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆಯವರು ಮಾಧ್ಯಮದ ಮೂಲಕ ಚಲನಚಿತ್ರ ಅಕಾಡೆಮಿ ಮತ್ತು ಮುಖ್ಯಮಂತ್ರಿಗಳಿಗೆ ಒಂದು ವಿಶೇಷ ಮನವಿ ಸಲ್ಲಿಸಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಬದಲಾಗಿ ಅದಕ್ಕೆ ಕಾಯ್ದಿರಿಸಿದ ಹಣವನ್ನು ದುಸ್ಥಿತಿಯಲ್ಲಿರುವ ಚಿತ್ರರಂಗದ ಕಾರ್ಮಿಕರ, ಕಲಾವಿದರಿಗಾಗಿ ವಿನಿಯೋಗಿಸಲು ವಿನಂತಿಸಿದ್ದಾರೆ. ಸಿನಿಕನ್ನಡ.ಕಾಮ್ ಗೆ ದೊರಕಿರುವ ಅವರ ಪತ್ರ ಈ ರೀತಿಯಲ್ಲಿದೆ.
ದಯವಿಟ್ಟು ನನ್ನ ಈ ಮನವಿಯನ್ನು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರ ಗಮನಕ್ಕೆ ತರಬೇಕಾಗಿ ನಿಮ್ಮಲ್ಲಿ ವಿನಂತಿ.
ಕೋವಿಡ್‌ನಿಂದಾಗಿ ಇಡೀ ರಾಜ್ಯ ದೇಶ ತತ್ತರಿಸಿದೆ. ಪ್ರತಿಯೊಬ್ಬ ಪ್ರಜೆಯೂ ಆತಂಕದಿಂದ ಜೀವನ ನಡೆಸುತ್ತಿದ್ದಾರೆ. ಸರ್ಕಾರ ಕೋವಿಡ್ ತಡೆಯಲು ಲಾಕ್‌ಡೌನ್ ಹೇರಿದೆ. ಇದೇ ಸಂದರ್ಭದಲ್ಲಿ ಚಿತ್ರರಂಗದ ಸಾವಿರಾರು ಕಾರ್ಮಿಕರು, ಕಲಾವಿದರು ಕೆಲಸವಿಲ್ಲದೆ ಆರ್ಥಿಕ ಭದ್ರತೆ ಇಲ್ಲದೆ ನರಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅಕಾಡೆಮಿ ಅಧ್ಯಕ್ಷರು ಸರ್ಕಾರಕ್ಕೆ ವಿಶೇಷ ಪ್ಯಾಕೇಜ್ ಒದಗಿಸುವಂತೆ ಮನವಿ ಮಾಡಿದ್ದಾರೆ. ಈಗಾಗಲೇ ಸರ್ಕಾರ ಆರ್ಥಿಕವಾಗಿ ಸಮಸ್ಯೆಗಳನ್ನು ಎದುರಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಈ ಸಂದರ್ಭದಲ್ಲಿ ಸರ್ಕಾರದ ವಿಶೇಷ ಪ್ಯಾಕೇಜ್‌ಗಾಗಿ ಕಾಯದೇ, ಈ ಬಾರಿಯ ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಅದಕ್ಕಾಗಿ ಮೀಸಲಿಟ್ಟಿದ್ದ ಹಣವನ್ನು ಕಾರ್ಮಿಕರಿಗೆ ವಿತರಿಸುವುದು ಹೆಚ್ಚು ಅರ್ಥಪೂರ್ಣ ಎನ್ನುವುದು ನನ್ನ ಭಾವನೆ. ಕೋವಿಡ್ ಕಾರಣದಿಂದ ಈಗಾಗಲೇ ಸಾಕಷ್ಟು ಜನ ತೀರಿಕೊಂಡಿದ್ದಾರೆ. ಮುಂದೆ ಜೀವನ ಹೇಗೋ ಎಂದು ನೂರಾರು ಕುಟುಂಬಗಳು ಕಂಗಾಲಾಗಿವೆ. ಇಂತಹ ಸಂದರ್ಭಗದಲ್ಲಿ ಚಿತ್ರೋತ್ಸವಕ್ಕಿಂತ ಜೀವಗಳನ್ನು ಕಾಪಾಡಿಕೊಳ್ಳುವುದು ಆದ್ಯತೆಯಾಗಲಿ ಎಂಬುದು ನನ್ನ ಕೋರಿಕೆ.
ಈ ಬಾರಿಯ ಅಂತಾರ್ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಮ್ಮ ಆಕ್ಟ್-1978 ಸಿನೆಮಾವನ್ನು ಕೂಡ ಸ್ಪರ್ಧೆಗೆ ಕಳುಹಿಸಲಾಗಿದೆ. ಹಾಗಿದ್ದರೂ ಕೂಡ ನನಗೆ ಚಿತ್ರೋತ್ಸವ ರದ್ದಾಗುವುದರ ಬಗ್ಗೆ ಯಾವ ಬೇಸರವೂ ಇಲ್ಲ.
ಈಗ ಎಲ್ಲದಕ್ಕಿಂತ ಜೀವ-ಜೀವನ ಮುಖ್ಯ. ದಯವಿಟ್ಟು ಈ ಮನವಿಯನ್ನು ಸಂಬಂಧಪಟ್ಟವರ ತಲುಪಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ.
ನಿಮ್ಮ ವಿಶ್ವಾಸಿ.
ಮಂಸೋರೆ.
ಸಿನೆಮಾ ನಿರ್ದೇಶಕ.
