ಹಿರಿಯ ನಟಿ ಜಯಾ ಬಿ (75) ನಿಧನರಾಗಿದ್ದಾರೆ. ಇಂದು ಅವರು ಸಾವಿಗೆ ಒಳಗಾಗಿದ್ದಾರೆ. ಎರಡು ತಿಂಗಳ ಹಿಂದೆ ಪಾರ್ಶ್ವವಾಯು ಪೀಡಿತರಾಗಿದ್ದ ಅವರು ಒಂದಷ್ಟು ಕಾಲ ಚಿಕಿತ್ಸೆಯಲ್ಲಿದ್ದರು ಎಂದು ಅವರ ಸಹೋದರನ ಪುತ್ರಿ ಸಿನಿಕನ್ನಡ.ಕಾಮ್ ಗೆ ಮಾಹಿತಿ ನೀಡಿದ್ದಾರೆ.
‘ಕುಳ್ಳಿ ಜಯಮ್ಮ’ ಎಂದೇ ಖ್ಯಾತರಾಗಿರುವ ನಟಿ ಬಿ.ಜಯಾ ಅವರು ಖ್ಯಾತ ನಟ ನರಸಿಂಹರಾಜು ಅವರೊಡನೆ ಸಾಕಷ್ಟು ಚಿತ್ರಗಳಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಹಾಸ್ಯ ಪಾತ್ರಗಳಲ್ಲಿ ಮತ್ತು ನಾಯಕನ ಸಹೋದರಿಯಾಗಿ, ನಾಯಕಿಯ ಗೆಳತಿಯ ಪಾತ್ರಗಳಲ್ಲಿ ಗುರುತಿಸಿಕೊಂಡವರು. ‘ಗೌಡ್ರು’ ಚಿತ್ರದ ಪಾತ್ರಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು.
‘ಗಂಧದ ಗುಡಿ’ ಚಿತ್ರದಲ್ಲಿ ಗಮನಾರ್ಹ ಪಾತ್ರ ನಿಭಾಯಿಸಿದ್ದ ಜಯಾ ಅವರು ಅದರ ಎರಡನೇ ಭಾಗದಲ್ಲಿ ಕೂಡ ನಟಿಸಿ ಗಮನ ಸೆಳೆದಿದ್ದರು. ಜಯಾ ಅವರ ಸಹೋದರ ಮಲ್ಲೇಶ್ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ನಿರ್ದೇಶಕರಾಗಿದ್ದು ಅಂಬರೀಷ್ ಅವರ ಗಿರಿಬಾಲೆ, ಅನಂತನಾಗ್ ಅವರ ನನ್ನ ದೇವರು ದರ್ಶನ್ ನಟನೆಯ ನೀನಂದ್ರೆ ನನಗಿಷ್ಟ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.ತಂದೆಯಂತೆ ತಾವು ಕೂಡ ವೃತ್ತಿರಂಗಭೂಮಿ ಮೂಲಕ ಕಲಾರಂಗ ಪ್ರವೇಶಿಸಿದ ಜಯಾ ಅವಿವಾಹಿತೆ.
ಇತ್ತೀಚೆಗೆ ಕನ್ನಡ ಕಿರುತೆರೆಯ ಧಾರಾವಾಹಿಗಳಾದ ‘ಹೂ ಮಳೆ’, ‘ಸಂಘರ್ಷ’ ಮೊದಲಾದ ಧಾರಾವಾಹಿಗಳಿಂದ ಮನೆಯೊಳಗಿನ ಪ್ರೇಕ್ಷಕರಿಗೂ ಆತ್ಮೀಯರಾಗಿದ್ದರು.